ವಾಲಿಬಾಲ್ ಕ್ರೀಡಾಪಟುಗಳ ಮಗಳು ಬ್ಯಾಡ್ಮಿಂಟನ್ ಕಡೆ ಒಲವು ತೋರಿದ್ದೇಕೆ; ಇದು ಪಿವಿ ಸಿಂಧು ಬೆಳೆದು ಬಂದ ಹಾದಿ-pv sindhu profile shuttlers parents are also athletes india at paris olympics 2024 know your athlete sindhu prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ವಾಲಿಬಾಲ್ ಕ್ರೀಡಾಪಟುಗಳ ಮಗಳು ಬ್ಯಾಡ್ಮಿಂಟನ್ ಕಡೆ ಒಲವು ತೋರಿದ್ದೇಕೆ; ಇದು ಪಿವಿ ಸಿಂಧು ಬೆಳೆದು ಬಂದ ಹಾದಿ

ವಾಲಿಬಾಲ್ ಕ್ರೀಡಾಪಟುಗಳ ಮಗಳು ಬ್ಯಾಡ್ಮಿಂಟನ್ ಕಡೆ ಒಲವು ತೋರಿದ್ದೇಕೆ; ಇದು ಪಿವಿ ಸಿಂಧು ಬೆಳೆದು ಬಂದ ಹಾದಿ

PV Sindhu: ಪ್ಯಾರಿಸ್ ಒಲಿಂಪಿಕ್ಸ್​​-2024 ನಲ್ಲಿ ಭಾರತದ ಧ್ವಜಧಾರಿಯಾಗಿರುವ ಸ್ಟಾರ್​ ಷಟ್ಲರ್​ ಪಿವಿ ಸಿಂಧು ಅವರು ಸತತ ಮೂರನೇ ಬಾರಿಗೆ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ.

ವಾಲಿಬಾಲ್ ಕ್ರೀಡಾಪಟುಗಳ ಮಗಳು, ಬ್ಯಾಡ್ಮಿಂಟನ್ ಕಡೆ ಒಲವು ತೋರಿದ್ದೇಕೆ; ಇದು ಪಿವಿ ಸಿಂಧು ಬೆಳೆದು ಬಂದ ಹಾದಿ
ವಾಲಿಬಾಲ್ ಕ್ರೀಡಾಪಟುಗಳ ಮಗಳು, ಬ್ಯಾಡ್ಮಿಂಟನ್ ಕಡೆ ಒಲವು ತೋರಿದ್ದೇಕೆ; ಇದು ಪಿವಿ ಸಿಂಧು ಬೆಳೆದು ಬಂದ ಹಾದಿ

ತನ್ನ ವಿಭಿನ್ನ ಆಟದ ಮೂಲಕವೇ ಜಾಗತಿಕ ಮನ್ನಣೆ ಗಳಿಸಿರುವ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪುಸರ್ಲಾ ವೆಂಕಟ ಸಿಂಧು (Pusarla Venkata Sindhu) ಅವರು ಪ್ಯಾರಿಸ್ ಒಲಿಂಪಿಕ್ಸ್​ (Paris Olympics 2024) 2024ರಲ್ಲಿ ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಿದ್ದು, ಪದಕದ ಭರವಸೆ ಹುಟ್ಟುಹಾಕಿದ್ದಾರೆ. ಈಗಾಗಲೇ ಎರಡು ಬಾರಿ ಒಲಿಂಪಿಕ್ಸ್​​ನಲ್ಲಿ ಪದಕ ಗೆದ್ದ ದಾಖಲೆ ಹೊಂದಿದ್ದಾರೆ.

1995ರ ಜುಲೈ 5ರಂದು ಹೈದರಾಬಾದ್​​ನಲ್ಲಿ ಜನಿಸಿದ ಸಿಂಧು, ಪುಲ್ಲೇಲ ಗೋಪಿಚಂದ್ ಅವರಿಂದ ಸ್ಫೂರ್ತಿ ಪಡೆದು ಬ್ಯಾಡ್ಮಿಂಟನ್ ಕಡೆಗೆ ಆಕರ್ಷಿತರಾದರು. ಅಂತಿಮವಾಗಿ ಚಿಕ್ಕ ವಯಸ್ಸಿನಲ್ಲಿಯೇ ಅವರ ಅಕಾಡೆಮಿಗೆ ಸೇರಿದರು. ಆದರೆ ಸಿಂಧು ಪೋಷಕರು ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರರಾಗಿದ್ದರು.

ಜೂನಿಯರ್​​ ಆಗಿದ್ದಾಗಿನಿಂದಲೂ ಪದಕ ಬೇಟೆ

ಅಖಿಲ ಭಾರತ ಶ್ರೇಯಾಂಕ ಚಾಂಪಿಯನ್​ಶಿಪ್,​ ಸಬ್-ಜೂನಿಯರ್ ನ್ಯಾಷನಲ್ಸ್, ಜೂನಿಯರ್ ಬ್ಯಾಡ್ಮಿಂಟನ್​ ಸೇರಿದಂತೆ ಹಲವು ಟೂರ್ನಿಗಳಲ್ಲಿ ಸತತ ಗೆಲುವು ಸಾಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದರು. ಅಲ್ಲಿಂದ ಪ್ರಾರಂಭವಾದ ಆಕೆಯ ಪ್ರಯಾಣ ಇಂದಿಗೂ ಯಶಸ್ವಿಯಾಗಿ ಸಾಗುತ್ತಿದೆ.

2009ರ ಹೊತ್ತಿಗೆ ಅವರು ಸಬ್-ಜೂನಿಯರ್ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನಲ್ಲಿ ಕಂಚು ಗೆದ್ದರು. ನಂತರ 2010ರಲ್ಲಿ ಇರಾನ್​​ನಲ್ಲಿ ಜರುಗಿದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಲೆಂಜ್​​ನಲ್ಲಿ ಬೆಳ್ಳಿ ಗೆದಿದ್ದರು. 2012ರ ಏಷ್ಯನ್ ಜೂನಿಯರ್ ಚಾಂಪಿಯನ್​ಶಿಪ್​​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.

ಸಿಂಧು ವೃತ್ತಿಜೀವನದ ಪಥವು ಪ್ರಮುಖ ಸ್ಪರ್ಧೆಗಳಲ್ಲಿ ಸ್ಥಿರವಾದ ಸುಧಾರಣೆಯಿಂದ ಗುರುತಿಸಲ್ಪಟ್ಟಿದೆ. 2014ರಲ್ಲಿ ಕಾಮನ್​​ವೆಲ್ತ್​ ಕ್ರೀಡಾಕೂಟಕ್ಕೆ ಪದಾರ್ಪಣೆಗೈದ ಅವರು ಮಹಿಳಾ ಸಿಂಗಲ್​​​ನಲ್ಲಿ ಕಂಚು ಗೆದ್ದರು. ನಂತರ 2018ರಲ್ಲಿ ಸಿಂಗಲ್ಸ್ ಮತ್ತು ಮಿಶ್ರ ತಂಡ ಸ್ಪರ್ಧೆಗಳು ಸೇರಿದಂತೆ ಬೆಳ್ಳಿ ಮತ್ತು ಚಿನ್ನದ ಪದಕಗಳನ್ನೂ ಗೆದ್ದು ಮಿಂಚಿದರು.

ಒಲಿಂಪಿಕ್ಸ್​​ನಲ್ಲಿ ಎರಡು ಪದಕ ಗೆದ್ದ ಮೊದಲ ಮಹಿಳೆ

2016ರ ರಿಯೋ ಒಲಿಂಪಿಕ್ಸ್​​ನಲ್ಲಿ ಸಿಂಧು ಹೊಸ ಎತ್ತರಕ್ಕೆ ತಲುಪಿದರು. ಅಗ್ರ ಪ್ರತಿಸ್ಪರ್ಧಿಗಳಾದ ವಾಂಗ್ ಯಿಹಾನ್ ಮತ್ತು ನೊಜೊಮಿ ಒಕುಹರಾ ಅವರನ್ನೇ ಸೋಲಿಸಿ ಬೆಳ್ಳಿ ಪದಕ ಗೆದ್ದಿದ್ದರು. ಇದರೊಂದಿಗೆ ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದರು. ಘಟಾನುಘಟಿ ಆಟಗಾರ್ತಿಯರನ್ನೇ ಸೋಲಿಸಿ ತಾನೂ ದೊಡ್ಡ ಸ್ಪರ್ಧಿಯಾಗಿ ಬೆಳೆದರು.

ಸಿಂಧು ಆರ್ಭಟ ವಿಶ್ವ ಚಾಂಪಿಯನ್​​​ನಲ್ಲೂ ಮುಂದುವರಿಯಿತು. 2019ರಲ್ಲಿ ನಡೆದ ಈ ಟೂರ್ನಿಯಲ್ಲಿ ಜಯಿಸಿ ಚಿನ್ನಕ್ಕೆ ಮುತ್ತಿಕ್ಕಿದ್ದರು. ಅಲ್ಲಿ ಅವರು ಸ್ವಿಟ್ಜರ್ಲೆಂಡ್​ನ ಬಾಸೆಲ್​ನಲ್ಲಿ ಜಪಾನ್​​ನ ನೊಜೊಮಿ ಒಕುಹರಾ ಅವರನ್ನು ಸೋಲಿಸುವ ಮೂಲಕ ಚಿನ್ನ ಗೆದ್ದರು. ಅಷ್ಟೇ ಅಲ್ಲ ಮುಂದಿನ ಕ್ರೀಡಾಕೂಟದಲ್ಲೂ ವಿಜಯಶಾಲಿಯಾಗಿದ್ದರು.

2022ರಲ್ಲಿ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ಕಾಮನ್​ವೆಲ್ತ್ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಪದಕ ಗೆದ್ದರು. ಟೊಕಿಯೊ-2020 ಒಲಿಂಪಿಕ್ಸ್​​ನಲ್ಲಿ ಕಂಚಿನ ಪದಕ ಗೆದ್ದ ಸಿಂಧು, 2 ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೀನಾದ ಹಿ ಬಿಂಗ್ ಜಿಯಾವೊ ಸೋಲಿಸಿದ್ದರು.

2023ರಲ್ಲಿ ಫಾರ್ಮ್​​ ಸಮಸ್ಯೆ

ಬರ್ಮಿಂಗ್​ಹ್ಯಾಮ್​​ನಲ್ಲಿ ನಡೆದ ಕಾಮನ್​​ವೆಲ್ತ್​ ಕ್ರೀಡಾಕೂಟದಲ್ಲಿ ಮಹಿಳಾ ಸಿಂಗಲ್ಸ್​​ನಲ್ಲಿ ಚಿನ್ನ ಗೆಲ್ಲುವುದಕ್ಕೂ ಮೊದಲು ಸಿಂಧು, ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್​ಶಿಪ್​ನಲ್ಲಿ ಕಂಚಿಗೆ ಮುತ್ತಿಕ್ಕಿದ್ದರು. 2023ರಲ್ಲಿ ಫಾರ್ಮ್​ ಸಮಸ್ಯೆಯ ಹೊರತಾಗಿ ದುಬೈನಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್​ಶಿಪ್​ನಲ್ಲಿ ಭಾರತ ತಂಡವನ್ನು ಕಂಚಿನ ಪದಕಕ್ಕೆ ಮುನ್ನಡೆಸಿದರು. ಇದು ದೇಶಕ್ಕೆ ಐತಿಹಾಸಿಕ ಸಾಧನೆಯಾಗಿದೆ. ಆದರೆ ಸಿಂಗಲ್ಸ್ ವಿಭಾಗದಲ್ಲಿ ಹಲವು ಟೂರ್ನಿ ಸೋತಿದ್ದರು.

ತನ್ನ ಅಂತಾರಾಷ್ಟ್ರೀಯ ವಿಜಯಗಳ ಹೊರತಾಗಿ ಸಿಂಧು ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್​ನ ಅವಿಭಾಜ್ಯ ಅಂಗವಾಗಿದ್ದಾರೆ. ಹೈದರಾಬಾದ್ ಹಂಟರ್ಸ್ ಪರ ಆಡುತ್ತಿದ್ದಾರೆ, ದೇಶೀಯ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆ ಮತ್ತು ನಾಯಕತ್ವವನ್ನು ಪ್ರದರ್ಶಿಸಿದ್ದಾರೆ. ಇದೀಗ ಜುಲೈ 26ರಿಂದ ಪ್ರಾರಂಭವಾಗುವ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಚಿನ್ನ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.