ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ದೊಡ್ಡ ವಿವಾದ; ಮಹಿಳಾ ಸ್ಪರ್ಧಿಯೊಂದಿಗೆ ಕಣಕ್ಕಿಳಿದ ಜೈವಿಕ ಪುರುಷ! ಹೀಗೆಂದರೇನು?
Aug 02, 2024 11:27 AM IST
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ದೊಡ್ಡ ವಿವಾದ; ಮಹಿಳಾ ಸ್ಪರ್ಧಿಯೊಂದಿಗೆ ಕಣಕ್ಕಿಳಿದ ಜೈವಿಕ ಪುರುಷ
- Imane Khelif: ಪ್ಯಾರಿಸ್ ಒಲಿಂಪಿಕ್ಸ್ 2024 ಮಹಿಳೆಯರ 66 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಇಟಲಿಯ ಏಂಜೆಲಾ ಕ್ಯಾರಿನಿ ಅವರ ವಿರುದ್ಧ ಜೈವಿಕ ಪುರುಷ ಅಲ್ಜೇರಿಯಾದ ಇಮಾನೆ ಖೇಲಿಫ್ ಗೆದ್ದು ಬೀಗಿದರು. ಜೈವಿಕ ಪುರುಷ ಎಂದರೇನು?
ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ವಿವಾದವೊಂದು ಸೃಷ್ಟಿಯಾಗಿದೆ. ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪುರುಷರೊಬ್ಬರು (ಜೈವಿಕ ಪುರುಷ) ಕಣಕ್ಕಿಳಿದು 46 ಸೆಕೆಂಡ್ಗಳಲ್ಲೇ ಎದುರಾಳಿಯನ್ನು ಮಣಿಸಿದ್ದಾರೆ. ಇದು ವಿಶ್ವ ಮಟ್ಟದಲ್ಲಿ ಆಕ್ರೋಶಕ್ಕೆ ಗುರಿಯಾಗಿಸಿದೆ. ಒಲಿಂಪಿಕ್ಸ್ ಆಯೋಜಕರ ವಿರುದ್ಧ ಟೀಕೆ ವ್ಯಕ್ತವಾಗಿದೆ. ಜೈವಿಕ ಪುರುಷ ಸ್ಪರ್ಧಿ ಕೊಟ್ಟ ಪಂಚ್ಗೆ ಇಟಲಿಯ ಸ್ಪರ್ಧಿ ರಿಂಗ್ನಲ್ಲೇ ಕಣ್ಣೀರಿಟ್ಟರು.
ಪ್ರಸ್ತುತ ವಿವಾದ ಸೃಷ್ಟಿಸಿರುವ ಬಾಕ್ಸರ್ ಹೆಸರು ಅಲ್ಜೇರಿಯಾದ ಇಮಾನೆ ಖೇಲಿಫ್. 2023ರ ಚಾಂಪಿಯನ್ಶಿಪ್ಗೆ ಅನಿರ್ದಿಷ್ಟ ಲಿಂಗ ಅರ್ಹತಾ ಪರೀಕ್ಷೆಯಲ್ಲಿ ವಿಫಲವಾದ ಕಾರಣ ಅನರ್ಹಗೊಂಡಿದ್ದ ಇಮಾನೆ ಅವರು ಇಟಲಿಯ ಏಂಜೆಲಾ ಕ್ಯಾರಿನಿ ಅವರನ್ನು ಸೋಲಿಸಿದ್ದಾರೆ. ಒಲಿಂಪಿಕ್ಸ್ನಲ್ಲಿ ಖೇಲಿಫ್ ಸ್ಪರ್ಧಿಸಲು ಅವಕಾಶ ನೀಡಿದ್ದಕ್ಕೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
46 ಸೆಕೆಂಡ್ಗಳಲ್ಲೇ ಮುಕ್ತಾಯಗೊಂಡ ಮಹಿಳೆಯರ 66 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಖೇಲಿಫ್ ಅವರು ಪಂಚ್ ಕೊಡುತ್ತಿದ್ದಂತೆ ಕ್ಯಾರಿನಿ, ಮತ್ತೆ ಆಡಲು ಹಿಂದೇಟು ಹಾಕಿದರು. ಮೂಗಿಗೆ ಗಾಯಗೊಂಡು ರಕ್ತಸ್ರಾವವಾಗಿತ್ತು. ತೀರ್ಪುಗಾರರು ಖೇಲಿಫ್ ಅವರನ್ನು ವಿಜೇತರೆಂದು ಘೋಷಿಸಿದ ನಂತರ ಇಟಾಲಿಯನ್ ಸ್ಪರ್ಧಿ ಹ್ಯಾಂಡ್ ಶೇಕ್ ಮಾಡಲೂ ನಿರಾಕರಿಸಿದರು. ಏಂಜೆಲಾ ಕ್ಯಾರಿನಿ ಸೋತ ನಂತರ ರಿಂಗ್ನಲ್ಲೇ ಗಳಗಳನೆ ಅತ್ತರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಳೆದ ವರ್ಷ ಲಿಂಗ ಪರೀಕ್ಷೆಯಲ್ಲಿ ಫೇಲ್ ಆಗಿದ್ದರೂ ಖೇಲಿಫ್ಗೆ ಅವಕಾಶ ಕೊಟ್ಟಿದ್ದು ವಿವಾದ ಸೃಷ್ಟಿಸಿದೆ. ಆದರೆ ಖೇಲಿಫ್ಗೆ ಅವಕಾಶ ನೀಡಲು ಕಾರಣ ಇದೆ. ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಾಗಿತ್ತು (ಟೆಸ್ಟೋಸ್ಟೆರಾನ್ ಲಿಂಗ ವ್ಯತ್ಯಾಸ ನಿಯಂತ್ರಿಸುವ ಪ್ರಾಥಮಿಕ ಪುರುಷ ಹಾರ್ಮೋನ್). ಹಾಗಾದರೆ ಜೈವಿಕ ಪುರುಷ (ಬಯೋಲಾಜಿಕಲ್ ಮೇಲ್) ಎಂದರೇನು?
ಜೈವಿಕ ಪುರುಷ ಎಂದರೇನು?
ಖೇಲಿಫ್ ಜೊತೆ ಲಿನ್ ಯು-ಟಿಂಗ್ ಎಂಬವರಿಗೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಐಒಸಿಯ ನಿಯಮಗಳು ಲಿಂಗ ವೈವಿಧ್ಯತೆ ಮತ್ತು ಡಿಎಸ್ಡಿಎಸ್ (ಲೈಂಗಿಕ ಬೆಳವಣಿಗೆ ವ್ಯತ್ಯಾಸಗಳು) ಹೊಂದಿರುವ ಕ್ರೀಡಾಪಟುಗಳಿಗೆ ಪ್ರವೇಶ ಅನುಮತಿಸುತ್ತವೆ. ಡಿಎಸ್‌ಡಿ ಎಂಬ ಪದವು ವ್ಯಕ್ತಿಯ ಈಸ್ಟ್ರೋಜೆನ್‌ಗಳು, ಜೀನ್‌ಗಳು ಮತ್ತು ಸಂತಾನೋತ್ಪತ್ತಿ ಅಂಗಗಳಿಗೆ ಸಂಪರ್ಕ ಹೊಂದಿದ ಗುಂಪನ್ನು ಸೂಚಿಸುತ್ತದೆ.
ಡಿಎಸ್‌ಡಿ ಹೊಂದಿರುವ ಕೆಲವು ಜನರನ್ನು ಸ್ತ್ರೀಲಿಂಗ ರೀತಿಯಲ್ಲಿ ಬೆಳೆಸಲಾಗುತ್ತದೆ. ಇದಲ್ಲದೆ, ಅವರು ಪುರುಷ-ರೀತಿಯ ರಕ್ತ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೊಂದಿದ್ದಾರೆ. ಟೆಸ್ಟೋಸ್ಟೆರಾನ್ ಮತ್ತು XY ಕ್ರೋಮೋಸೋಮ್‌ಗಳನ್ನು ಬಳಸುವ ಅವರ ದೇಹದ ಸಾಮರ್ಥ್ಯ, ಇದು ಸಾಮಾನ್ಯವಾಗಿ ಸಿಸ್ಜೆಂಡರ್ ಪುರುಷ (ಹುಟ್ಟಿನಿಂದ ಪುರುಷ ಎಂದು ಘೋಷಿಸಲಾದ ವ್ಯಕ್ತಿ) ವ್ಯಕ್ತಿಗಳಲ್ಲಿ ಕಂಡುಬರುತ್ತದೆ.
ಇದಕ್ಕೆ ವಿರುದ್ಧವಾಗಿ ಸಿಸ್ಜೆಂಡರ್ ಹೆಣ್ಣು (ಅಂದರೆ ಜನನದ ವೇಳೆ ನಿಯೋಜಿಸಲಾದ ಹೆಣ್ಣು) XX ಕ್ರೋಮೋಸೋಮ್‌ಗಳನ್ನು ಹೊಂದಿರುತ್ತದೆ. ಸಿಸ್ಜೆಂಡರ್ ಮಹಿಳೆಯರಿಗೆ ಹೋಲಿಸಿದರೆ, ಸಿಸ್ಜೆಂಡರ್ ಪುರುಷರು, ಪುರುಷ ಪ್ರೌಢಾವಸ್ಥೆ ಮೂಲಕ ಹೋಗುತ್ತಾರೆ. ಸ್ನಾಯು ಸೆಳೆತ ಮತ್ತು ಅಸ್ಥಿಪಂಜರದ ರಚನೆಯ ಸಂದರ್ಭದಲ್ಲಿ ದೇಹದಲ್ಲಿ ಬದಲಾವಣೆ ತರುತ್ತದೆ.
ಸೋಲಿನ ಬಳಿಕ ಕ್ಯಾರಿನಿ ಹೇಳಿದ್ದೇನು?
ನಿರ್ಗಮನದ ನಂತರ ಕ್ಯಾರಿನಿ ಕಣ್ಣೀರು ಹಾಕಿದ್ದು, ಮೂಗಿಗೆ ಪಂಚ್ ಕೊಟ್ಟ ಕಾರಣ ರಕ್ತ ಸ್ರಾವವಾಯಿತು. ಅಲ್ಲದೆ, ಅಪಾರ ನೋವಿನ ಕಾರಣ ರಿಂಗ್ ತ್ಯಜಿಸಬೇಕಾಯಿತು ಎಂದು ಹೇಳಿದ್ದಾರೆ. ಆಕೆಯ ಬಲಕ್ಕೆ ಹೊಡೆತ ಜೋರಾಗಿ ಬಿತ್ತು. ಹಾಗಾಗಿ ‘ನಾನು ಸಾಕು’ ಎಂದು ಹೇಳಿದೆ. ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಖೇಲಿಫ್ ಅವರ ಅರ್ಹತೆ ನಿರ್ಧರಿಸಲು ತನಗೆ ಯಾವುದೇ ಅಧಿಕಾರವಿಲ್ಲ. ಅವರೊಂದಿಗೆ ಹೋರಾಡಲು ಯಾವುದೇ ಸಮಸ್ಯೆಗಳಿಲ್ಲ. ನಾನು ಹೋರಾಟ ನಡೆಸಿದೆ ಎಂದು ಕ್ಯಾರಿನಿ ಹೇಳಿದ್ದಾರೆ. ಇಟಲಿಯ ಪ್ರಧಾನಿ ಜಿಯೋರ್ಜಿಯಾ ಮೆಲೋನಿ ಅವರು, ‘ಅನುವಂಶಿಕವಾಗಿ ಪುರುಷ ಗುಣಲಕ್ಷಣಗಳನ್ನು ಹೊಂದಿರುವ ಕ್ರೀಡಾಪಟುಗಳಿಗೆ 2021 ರಿಂದ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದು ಸರಿಯಲ್ಲ' ಎಂದು ಹೇಳಿದ್ದಾರೆ.
ಲಿಂಗ ಅರ್ಹತಾ ಪರೀಕ್ಷೆಯಲ್ಲಿ ಖೇಲಿಫ್ ವಿಫಲ
2022ರ ಐಬಿಎ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರಸಿದ್ಧ ಬಾಕ್ಸರ್ ಖೇಲಿಫ್ ಅವರು ಅತಿಯಾದ ಟೆಸ್ಟೋಸ್ಟೆರಾನ್ ಮಟ್ಟದ ಕಾರಣ ಇದೇ ಸಂಸ್ಥೆಯು ಕಳೆದ ವರ್ಷ ಭಾರತದ ನವದೆಹಲಿಯಲ್ಲಿ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಿಂದ ನಿಷೇಧಿಸಲಾಗಿತ್ತು. ಚೀನಾದ ಯಾಂಗ್ ಲಿಯು ವಿರುದ್ಧದ ಚಿನ್ನದ ಪದಕದ ಹೋರಾಟಕ್ಕೆ ಕೆಲವೇ ಗಂಟೆಗಳಿಗೂ ಮುನ್ನ ಅಚ್ಚರಿಯಂತೆ ನಿಷೇಧಿಸಲಾಗಿತ್ತು.
ಇದೀಗ ಖೇಲಿಫಾ ಪರ ಬ್ಯಾಟ್ ಬೀಸಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್, ತಮ್ಮ ಕ್ರೀಡಾಪಟುವಿನ ವಿರುದ್ಧದ ಆಕ್ರೋಶವನ್ನು ಖಂಡಿಸಿದೆ. ಕೆಲವು ವಿದೇಶಿ ಮಾಧ್ಯಮಗಳು ಖೇಲಿಫ್ ಅವರ ವಿರುದ್ಧ ಸುಳ್ಳು ಮತ್ತು ಅನೈತಿಕ ಗುರಿ ಮತ್ತು ಅಪಪ್ರಚಾರ ಹರಡುತ್ತಿವೆ ಎಂದು ದೂಷಿಸಿದೆ.