ಪ್ಯಾರಿಸ್ನಲ್ಲಿ ಭಾರತದ ಅಭಿಯಾನ ಅಂತ್ಯ; ಕೊನೆಯ ಸ್ಪರ್ಧೆಯಲ್ಲೂ ಬರಲಿಲ್ಲ ಪದಕ, ವಿನೇಶ್ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ
Aug 11, 2024 08:03 AM IST
ಪ್ಯಾರಿಸ್ನಲ್ಲಿ ಭಾರತದ ಅಭಿಯಾನ ಅಂತ್ಯ, ಕೊನೆಯ ಸ್ಪರ್ಧೆಯಲ್ಲೂ ಬರಲಿಲ್ಲ ಪದಕ, ವಿನೇಶ್ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ
- Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ 6 ಪದಕಗಳೊಂದಿಗೆ ಭಾರತದ ಅಭಿಯಾನ ಮುಕ್ತಾಯಗೊಂಡಿದೆ. ವಿನೇಶ್ ಫೋಗಾಟ್ ಭವಿಷ್ಯ ನಿರ್ಧಾರ ಕ್ಷಣಗಣನೆ ಶುರುವಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಅಭಿಯಾನ ಅಂತ್ಯಗೊಂಡಿದೆ. ಕ್ರೀಡಾಪಟುಗಳು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ವಿಫಲರಾಗಿದ್ದು, ಭಾರತದ ಪರ ಸ್ಪರ್ಧಿಸಿದ್ದ ಕೊನೆಯ ಈವೆಂಟ್ನಲ್ಲೂ ಪದಕ ಗೆಲ್ಲದೆ ನಿರಾಸೆ ಮೂಡಿಸಿದ್ದಾರೆ. ಆಗಸ್ಟ್ 10ರ ಶನಿವಾರ ನಡೆದ ಮಹಿಳೆಯರ 76 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ರಿತಿಕಾ ಹೂಡಾ, ಕ್ವಾರ್ಟರ್ಫೈನಲ್ನಲ್ಲಿ ಸೋತು ನಿರೀಕ್ಷೆ ಹುಸಿಗೊಳಿಸಿದರು.
ಕ್ವಾರ್ಟರ್ ಫೈನಲ್ನಲ್ಲಿ ಸೋತರೂ ರೆಪಚೇಜ್ಗೆ ಅರ್ಹತೆ ಪಡೆಯಲು ಅವಕಾಶ ಇತ್ತು. ಆದರೆ, ಕ್ವಾರ್ಟರ್ನಲ್ಲಿ ತನ್ನೆದುರು ಗೆದ್ದಿದ್ದ ಕಿರ್ಗಿಸ್ತಾನ ಕುಸ್ತಿಪಟು ಐಪೆರಿ ಮೈಡೆಟ್ ಕಿಜಿ ಸೆಮಿಫೈನಲ್ನಲ್ಲಿ ಮುಗ್ಗರಿಸಿದ ಕಾರಣ, ಕಂಚಿನ ಪದಕದ ಸುತ್ತಿಗೇರಲು ಇದ್ದ ಅವಕಾಶ ಕಳೆದುಕೊಂಡರು ರಿತಿಕಾ. ಈ ಸ್ಪರ್ಧೆ ಭಾರತದ ಪಾಲಿಗೆ ಕೊನೆಯದಾಗಿತ್ತು. ಇದೀಗ ಭಾರತ 6 ಮೆಡಲ್ಗಳೊಂದಿಗೆ ಪ್ಯಾರಿಸ್ ಪ್ರಯಾಣ ಮುಗಿಸಿದೆ.
ವಿನೇಶ್ ಭವಿಷ್ಯ ಭವಿಷ್ಯ ನಿರ್ಧಾರಕ್ಕೆ ಕೌಂಟ್ಡೌನ್
ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದ ಫೈನಲ್ ಸ್ಪರ್ಧೆಗೂ ಮುನ್ನ ವಿನೇಶ್ ಫೋಗಾಟ್, ನಿಗದಿಗಿಂತ 100 ಗ್ರಾಂ ತೂಕ ಹೆಚ್ಚಿದ್ದ ಕಾರಣ ಅವರನ್ನು ಅನರ್ಹಗೊಳಿಸಲಾಯಿತು. ಹೀಗಾಗಿ ಈ ನಿರ್ಧಾರ ಪ್ರಶ್ನಿಸಿ ವಿನೇಶ್, ಕ್ರೀಡಾ ನ್ಯಾಯ ಮಂಡಳಿಗೆ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಯುತವಾಗಿ ಬಂದ ನನಗೆ ಬೆಳ್ಳಿ ಪದಕ ನೀಡಬೇಕೆಂದು ಮನವಿ ಮಾಡಿದ್ದಾರೆ. ಇದರ ತೀರ್ಪು ಇಂದು ಸಂಜೆ 6ಕ್ಕೆ ಹೊರ ಬೀಳಲಿದೆ.
ಆರೇ ಪದಕ್ಕೆ ಭಾರತ ಸುಸ್ತು...
17 ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಭಾರತ ಗೆದ್ದಿದ್ದು ಆರೇ ಪದಕ. ಈ ಬಾರಿ ಪದಕಗಳ ಸಂಖ್ಯೆಯನ್ನು ಎರಡಂಕಿ ದಾಟಿಸಬೇಕು ಎಂಬ ಗುರಿಯೊಂದಿಗೆ ಕಣಕ್ಕಿಳಿದ ಭಾರತ, ನಿರೀಕ್ಷೆಗೆ ತಕ್ಕಂತೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಬಾರಿ ಬೆಳ್ಳಿ ಪದಕ ಗೆದ್ದಿರುವುದೇ ದೊಡ್ಡ ಸಾಧನೆಯಾಗಿದೆ. ಟೊಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಚಿನ್ನದ ಜೊತೆಗೆ 7 ಪದಕಕ್ಕೆ ಮುತ್ತಿಕ್ಕಿತ್ತು. ಈ ಸಲ ಚಿನ್ನವೇ ಇಲ್ಲದಂತಾಗಿದೆ.
ಮೆಡಲ್ ಪಟ್ಟಿಯಲ್ಲಿ ಭಾರತಕ್ಕೆ 71ನೇ ಸ್ಥಾನ
ಪ್ಯಾರಿಸ್ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಭಾರತಕ್ಕೆ 71ನೇ ಸ್ಥಾನ ಪಡೆದಿದೆ. 1 ಬೆಳ್ಳಿ, 6 ಕಂಚಿನ ಪದಕಗೊಂದಿಗೆ ಹೋರಾಟ ಮುಗಿಸಿದ ಟೀಮ್ ಇಂಡಿಯಾ, ಕಳೆದ ಬಾರಿ 7 ಪದಕಗಳೊಂದಿಗೆ 48ನೇ ಸ್ಥಾನ ಪಡೆದಿತ್ತು. ಆದರೆ, ಈ ಸಲ ಅಗ್ರ 50ರಿಂದ ಹೊರಗುಳಿದಿದೆ. ಆದರೆ ಕೊನೆಯ ದಿನವಾದ ಒಲಿಂಪಿಕ್ಸ್ನಲ್ಲಿ 13 ಚಿನ್ನದ ಪದಕಗಳು ಕಣಕ್ಕಿರುವ ಕಾರಣ ಭಾರತ ಮತ್ತಷ್ಟು ಕುಸಿದರೂ ಅಚ್ಚರಿ ಇಲ್ಲ.
ಭಾರತದ ಪದಕ ಸಾಧನೆ
1. ಮನು ಭಾಕರ್ (ಶೂಟಿಂಗ್) : ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ - ಕಂಚು
2. ಮನು ಭಾಕರ್-ಸರಬ್ಜೋತ್ ಸಿಂಗ್ (ಶೂಟಿಂಗ್) : 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಸ್ಪರ್ಧೆ - ಕಂಚು
3. ಸ್ವಪ್ನಿಲ್ ಕುಸಾಲೆ (ಶೂಟಿಂಗ್) : ಪುರುಷರ 50 ಮೀಟರ್ ರೈಫಲ್ - ಕಂಚು
4. ಹಾಕಿ : ಸ್ಪೇನ್ ವಿರುದ್ಧ ಗೆಲುವು - ಕಂಚು
5. ನೀರಜ್ ಚೋಪ್ರಾ (ಜಾವೆಲಿನ್) : ಬೆಳ್ಳಿ ಪದಕ
6. ಅಮನ್ ಸೆಹ್ರಾವತ್ (ಕುಸ್ತಿ) : 57 ಕೆಜಿ ವಿಭಾಗ - ಕಂಚಿನ ಪದಕ