ಏಷ್ಯನ್ ಗೇಮ್ಸ್ ಫೈನಲ್ ಪ್ರವೇಶಿಸಿದ ಭಾರತ ಪುರುಷರ ಮತ್ತು ವನಿತೆಯರ ಕಬಡ್ಡಿ ತಂಡ; ಬೆಳ್ಳಿ ಖಚಿತ
Oct 06, 2023 03:47 PM IST
ಏಷ್ಯನ್ ಗೇಮ್ಸ್ ಫೈನಲ್ ಪ್ರವೇಶಿಸಿದ ಭಾರತ ಪುರುಷರ ಮತ್ತು ಮಹಿಳೆಯರ ಕಬಡ್ಡಿ ತಂಡ
- Asian Games 2023 Kabaddi: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ಕಬಡ್ಡಿ ತಂಡಗಳು ಫೈನಲ್ ಪ್ರವೇಶಿಸಿವೆ. ಹೀಗಾಗಿ ಕನಿಷ್ಠ ಎರಡು ಬೆಳ್ಳಿ ಪದಕಗಳು ಭಾರತಕ್ಕೆ ಖಚಿತವಾಗಿವೆ.
ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ (Asian Games 2023) ಭಾರತ ಪುರುಷರ ಮತ್ತು ಮಹಿಳೆಯರ ಕಬಡ್ಡಿ ತಂಡಗಳು ಫೈನಲ್‌ಗೆ ಲಗ್ಗೆ ಇಟ್ಟಿವೆ. ಹೀಗಾಗಿ ಭಾರತಕ್ಕೆ ಕನಿಷ್ಠ ಎರಡು ಬೆಳ್ಳಿ ಪದಕಗಳು ಖಚಿತವಾಗಿದ್ದು, ಚಿನ್ನ ಗೆಲ್ಲುವ ವಿಶ್ವಾಸ ಹೆಚ್ಚಿದೆ.
ಜಕಾರ್ತಾದಲ್ಲಿ ನಡೆದ 2018ರ ಆವೃತ್ತಿಯ ಏಷ್ಯನ್‌ಗೇಮ್ಸ್‌ನಲ್ಲಿ ಭಾರತ ಪುರುಷರ ಕಬಡ್ಡಿ ತಂಡವು ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿತ್ತು. ಆದರೆ, ಈ ಬಾರಿ ಭಾರತವು ಸೆಮಿ ಕದನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 61-14 ಅಂಕಗಳಿಂದ ಪಾಕ್ ತಂಡವನ್ನು ಸೋಲಿಸಿ ಫೈನಲ್ ಟಿಕೆಟ್ ಪಡೆದುಕೊಂಡಿದೆ. ಆ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ತನ್ನ ಪ್ರಾಬಲ್ಯ ಮುಂದುವರೆಸಿದೆ.
ವನಿತೆಯರ ತಂಡಕ್ಕೆ ಭರ್ಜರಿ ಜಯ
ಮತ್ತೊಂದೆಡೆ ಎರಡು ಬಾರಿಯ ಮಾಜಿ ಚಾಂಪಿಯನ್ ಆಗಿರುವ ಭಾರತ ವನಿತೆಯರ ತಂಡವು, ನೇಪಾಳ ವಿರುದ್ಧ ಭರ್ಜರಿ 61-17 ಅಂಕಗಳ ಅಂತರದಿಂದ ಜಯಗಳಿಸಿದ್ದಾರೆ. ಆ ಮೂಲಕ ಸತತ ನಾಲ್ಕನೇ ಬಾರಿ ಏಷ್ಯನ್ ಗೇಮ್ಸ್ ಫೈನಲ್ ಪ್ರವೇಶಿಸಿದ್ದಾರೆ.
ಏಷ್ಯನ್ ಗೇಮ್ಸ್‌ನ ಸತತ ಏಳು ಆವೃತ್ತಿಗಳಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತೀಯ ಪುರುಷರ ತಂಡವು, ಜಕಾರ್ತದಲ್ಲಿ ನಡೆದಿದ್ದ ಕಳೆದ ಆವೃತ್ತಿಯಲ್ಲಿ ಅಚ್ಚರಿಯ ಫಲಿತಾಂಶ ಪಡೆದಿತ್ತು. ಇರಾನ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋಲಭವಿಸಿತ್ತು. ಏಷ್ಯನ್ ಗೇಮ್ಸ್‌ನಲ್ಲಿ ಕಬಡ್ಡಿ ಸೇರ್ಪಡೆಗೊಂಡ ಬಳಿಕ, ಅದೇ ಮೊದಲ ಬಾರಿಗೆ ಭಾರತ ಫೈನಲ್‌ಗೆ ಪ್ರವೇಶಿಸಲು ವಿಫಲವಾಗಿತ್ತು. ಆದರೆ, ಈ ಬಾರಿ ಮತ್ತೆ ಅಂತಿಮ ಸುತ್ತಿಗೆ ಲಗ್ಗೆ ಇಟ್ಟಿದೆ.
ಏಷ್ಯನ್ ಗೇಮ್ಸ್ 13ನೇ ದಿನ ಭಾರತದ ಪ್ರಮುಖ ಫಲಿತಾಂಶಗಳು
- ಸೆಪಕ್ಟಕ್ರಾ (Sepaktakraw): ಭಾರತಕ್ಕೆ ಕಂಚಿನ ಪದಕ, ಮಹಿಳೆಯರ ರೆಗು ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ಗೆ ಸೋಲು.
- ಆರ್ಚರಿ: ಮಹಿಳೆಯರ ರಿಕರ್ವ್ ಟೀಮ್ ಈವೆಂಟ್‌ನಲ್ಲಿ ಭಾರತವು ವಿಯೆಟ್ನಾಂ ಅನ್ನು ಸೋಲಿಸಿ ಕಂಚು ಗೆದ್ದಿತು.
- ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸೋತ ಎಚ್‌ಎಸ್ ಪ್ರಣಯ್ ಕಂಚಿನ ಪದಕ ಪಡೆದರು.
- ಕುಸ್ತಿ: ಮಹಿಳೆಯರ 76 ಕೆಜಿ ಫ್ರೀಸ್ಟೈಲ್ ಸೆಮಿಫೈನಲ್‌ನಲ್ಲಿ ಕಜಕಿಸ್ತಾನ್‌ನ ಝಮಿಲಾ ಬಕ್ಬರ್ಗೆನೋವಾ ವಿರುದ್ಧ ಭಾರತದ ಕಿರಣ್ 2-4 ರಿಂದ ಸೋತರು.
- ಮಹಿಳೆಯರ 62 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸೋನಂ ಅವರು ಚೀನಾದ ಜಿಯಾ ಲಾಂಗ್ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದರು.
Asian Games: ಆರ್ಚರಿಯಲ್ಲಿ 2 ಚಿನ್ನ; ಸ್ಕ್ವಾಷ್ ಮಿಶ್ರ ಡಬಲ್ಸ್‌ನಲ್ಲಿ ಐತಿಹಾಸಿಕ ಬಂಗಾರ ಗೆದ್ದ ಭಾರತ
ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಸಂಧು ಅವರು ಸ್ಕ್ವಾಷ್ ಏಷ್ಯನ್ ಗೇಮ್ಸ್ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಜೋಡಿ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸ್ಕ್ವಾಷ್ ಕ್ರೀಡೆಯಲ್ಲಿ ಇದು ಮೊದಲ ಮಿಶ್ರ ಡಬಲ್ಸ್ ಸ್ಪರ್ಧೆಯಾಗಿದೆ. ಇದರಲ್ಲಿ ಭಾರತವೇ ಬಂಗಾರ ಗೆದ್ದ ಸಾಧನೆ ಮಾಡಿದೆ.