logo
ಕನ್ನಡ ಸುದ್ದಿ  /  ಕ್ರೀಡೆ  /  ನೀರಜ್ ಚೋಪ್ರಾ, ಹಾಕಿ ಮತ್ತು ಕ್ರಿಕೆಟ್ ತಂಡ; ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಈ 10 ಪದಕ ಖಚಿತ

ನೀರಜ್ ಚೋಪ್ರಾ, ಹಾಕಿ ಮತ್ತು ಕ್ರಿಕೆಟ್ ತಂಡ; ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಈ 10 ಪದಕ ಖಚಿತ

Jayaraj HT Kannada

Sep 20, 2023 03:22 PM IST

google News

ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲಬಲ್ಲ ಭಾರತದ ಕ್ರೀಡಾಪಟುಗಳು

    • Asian Games 2023: ಚೀನಾದ ಹ್ಯಾಂಗ್‌ಝೌನಲ್ಲಿ ಏಷ್ಯನ್ ಗೇಮ್ಸ್ ಆರಂಭವಾಗಿದ್ದು, ಭಾರತವು ಅಭಿಯಾನ ಆರಂಭಿಸಿದೆ. ದೇಶದ ಟಾಪ್ 10 ಪದಕ ನಿರೀಕ್ಷೆಗಳು ಇವರ ಮೇಲಿದೆ.
ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲಬಲ್ಲ ಭಾರತದ ಕ್ರೀಡಾಪಟುಗಳು
ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲಬಲ್ಲ ಭಾರತದ ಕ್ರೀಡಾಪಟುಗಳು (File)

ಐದು ವರ್ಷಗಳ ಹಿಂದೆ 2018ರಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ, ಭಾರತವು ಒಟ್ಟು 70 ಪದಕಗಳನ್ನು ಗೆದ್ದಿತ್ತು. 16 ಚಿನ್ನದ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿತ್ತು. ಈ ವರ್ಷ ನಡೆಯುತ್ತಿರುವ 19ನೇ ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸಲು ಬರೋಬ್ಬರಿ 653 ಸ್ಪರ್ಧಿಗಳನ್ನು ಚೀನಾಗೆ ಕಳುಹಿಸಿರುವ ಭಾರತ, ಮತ್ತಷ್ಟು ಯಶಸ್ಸು ಗಳಿಸುವ ವಿಶ್ವಾಸದಲ್ಲಿದೆ. ಭಾರತವು ಹ್ಯಾಂಗ್‌ಝೌನಲ್ಲಿ ಏಷ್ಯನ್ ಗೇಮ್ಸ್ ಅಭಿಯಾನವನ್ನು ಈಗಾಗಲೇ ಪ್ರಾರಂಭಿಸಿದೆ. ಭಾರತೀಯರು ಅತಿ ಹೆಚ್ಚು ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಭಾರತದ ಅಗ್ರ ಹತ್ತು 10 ಪದಕ ನಿರೀಕ್ಷೆ ಇವರ ಮೇಲಿದೆ.

ನೀರಜ್ ಚೋಪ್ರಾ (ಜಾವೆಲಿನ್ ಎಸೆತ)

ಜಕಾರ್ತಾದಲ್ಲಿ ನಡೆದ 2018ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದು ಹಾಲಿ ಚಾಂಪಿಯನ್ ಆಗಿರುವ ಚೋಪ್ರಾ, ತಮ್ಮ ಚಿನ್ನದ ಪದಕ ಪರಂಪರೆಯನ್ನು ಮುಂದುವರೆಸಲು ಸಜ್ಜಾಗಿದ್ದಾರೆ. ಈ ಹಿಂದಿನ ಏಷ್ಯಾಡ್ ವಿಜಯೋತ್ಸವದ ನಂತರ ಅವರು ಒಲಿಂಪಿಕ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಆ ಬಳಿಕ ಡೈಮಂಡ್ ಲೀಗ್ ಮತ್ತು ಅಂತಿಮವಾಗಿ ಈ ವರ್ಷ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದರು. ಸದ್ಯ ಪ್ರಸಕ್ತ ಪಂದ್ಯಾವಳಿಯಲ್ಲಿ ಮತ್ತೆ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಿದ್ಧರಾಗಿದ್ದಾರೆ.

ಮೀರಾಬಾಯಿ ಚಾನು (ವೇಟ್‌ಲಿಫ್ಟಿಂಗ್, 49 ಕೆಜಿ)

ಟೋಕಿಯೊ ಒಲಿಂಪಿಕ್ ಬೆಳ್ಳಿ ಪದಕ ಗೆದ್ದಿರುವ ಚಾನು, ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಸಂಪೂರ್ಣ ವಿಶ್ವಾಸ ಭಾರತೀಯರಿಗಿದೆ. ತಮ್ಮ ಬತ್ತಳಿಕೆಯಲ್ಲಿ ಇಲ್ಲದ ಏಷ್ಯನ್ ಗೇಮ್ಸ್ ಪದಕವನ್ನು ಭದ್ರಪಡಿಸಿಕೊಳ್ಳುವತ್ತ ತನ್ನ ದೃಷ್ಟಿ ಹರಿಸಿದ್ದಾರೆ. 90 ಕೆಜಿ ಸ್ನ್ಯಾಚ್ ಲಿಫ್ಟ್ ಸಾಧಿಸಲು ಶ್ರದ್ಧೆಯಿಂದ ಶ್ರಮಿಸುತ್ತಿದ್ದಾರೆ.

ಭಾರತ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳು

ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ ಭಾರತ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳು ಏಷ್ಯನ್‌ ಗೇಮ್ಸ್‌ಗೆ ಪದಾರ್ಪಣೆ ಮಾಡುತ್ತಿವೆ. ನಿಸ್ಸಂದೇಹವಾಗಿ, ಭಾರತ ತಂಡವು ಚಿನ್ನದ ಪದಕದ ಪ್ರಬಲ ಸ್ಪರ್ಧಿಗಳು. ಪುರುಷರ ತಂಡವನ್ನು ರುತುರಾಜ್ ಗಾಯಕ್ವಾಡ್ ಮುನ್ನಡೆಸುತ್ತಿದ್ದಾರೆ. ಇತ್ತ ಏಕದಿನ ವಿಶ್ವಕಪ್‌ಗೆ ಸಿದ್ಧತೆ ನಡೆಯುತ್ತಿರುವುದರಿಂದ, ಭಾರತದ ಮೊದಲ ದರ್ಜೆಯ ತಂಡ ಭಾರತದಲ್ಲೇ ಉಳಿದುಕೊಂಡಿದೆ. ಆದರೂ, ಭಾರತೀಯ ಪುರುಷರ ತಂಡವು ಪದಕ ಗೆಲ್ಲುವ ನೆಚ್ಚಿನ ತಂಡವಾಗಿ ಉಳಿದಿದೆ.

ಅತ್ತ, ಸ್ಟೈಲಿಶ್‌ ಆಟಗಾರ್ತಿ ಸ್ಮೃತಿ ಮಂಧಾನ ಆರಂಭಿಕ ಸುತ್ತಿನಲ್ಲಿ ಭಾರತ ಮಹಿಳಾ ತಂಡದ ಸಾರಥ್ಯ ವಹಿಸಲಿದ್ದಾರೆ. ಕಾಯಂ ನಾಯಕಿ ಹರ್ಮನ್‌ಪ್ರೀತ್ ಕೌರ್, ಐಸಿಸಿಯಿಂದ ಎರಡು ಪಂದ್ಯಗಳಿಗೆ ಅಮಾನತುಗೊಂಡಿದ್ದಾರೆ. ಹೀಗಾಗಿ ಫೈನಲ್‌ ಪಂದ್ಯಕ್ಕೆ ಹರ್ಮನ್‌ಪ್ರೀತ್ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಭಾರತದ ಪುರುಷ ಮತ್ತು ಮಹಿಳಾ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ನಿಂದ ತಮ್ಮ ಅಭಿಯಾನವನ್ನು ಪ್ರಾರಂಭಿಸುತ್ತವೆ.

ಭಾರತೀಯ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳು

ಭಾರತೀಯ ಪುರುಷರ ಹಾಕಿ ತಂಡವು ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ಬಲಶಾಲಿ ತಂಡವಾಗಿದೆ. ವಿಶ್ವದ 3ನೇ ಶ್ರೇಯಾಂಕದ ತಂಡವು ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡವು ಪೋಡಿಯಂ ಫಿನಿಶ್ ಮಾಡುವ ನಿರೀಕ್ಷೆ ಇದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತವು ತುಲನಾತ್ಮಕವಾಗಿ ಸಾಧಾರಣ ಪ್ರದರ್ಶನ ನೀಡಿದೆ. ಪಾಕಿಸ್ತಾನ ಎಂಟು, ದಕ್ಷಿಣ ಕೊರಿಯಾ ನಾಲ್ಕು ಪ್ರಶಸ್ತಿ ಗೆದ್ದರೆ, ಭಾರತ ಮೂರು ಬಾರಿ ಮಾತ್ರ ಚಿನ್ನ ಗೆದ್ದಿದೆ.

ಅತ್ತ ಸವಿತಾ ಪುನಿಯಾ ನೇತೃತ್ವದ ಭಾರತೀಯ ಮಹಿಳಾ ತಂಡ ಕೂಡಾ ಪೋಡಿಯಂ ಫಿನಿಶ್‌ ಮಾಡುವ ವಿಶ್ವಾಸದಲ್ಲಿದೆ. ಪ್ರಸ್ತುತ ಜಾಗತಿಕವಾಗಿ 7ನೇ ಸ್ಥಾನದಲ್ಲಿರುವ ತಂಡವು, ಅಗ್ರ ಶ್ರೇಯಾಂಕದ ಏಷ್ಯನ್ ತಂಡವಾಗಿದೆ. ಕೊನೆಯ ಬಾರಿ 1982ರ ಏಷ್ಯನ್ ಗೇಮ್ಸ್ ಕೂಟದಲ್ಲಿ ಭಾರತ ಚಿನ್ನ ಗೆದ್ದಿತ್ತು.

ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ (ಬ್ಯಾಡ್ಮಿಂಟನ್ ಪುರುಷರ ಡಬಲ್ಸ್)

ಭಾರತದ ಬ್ಯಾಡ್ಮಿಂಟನ್‌ನ ಪ್ರಾಬಲ ಜೋಡಿಯಾದ ಸಾತ್ವಿಕ್ ಮತ್ತು ಚಿರಾಗ್, ಈ ವರ್ಷ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಈ ಜೋಡಿಯು 2023ರಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನವನ್ನು ಗಳಿಸಿದ ಭಾರತದ ಮೊದಲ ಜೋಡಿಯಾಗುವ ಮೂಲಕ ಐತಿಹಾಸಿಕ ಸಾಧನೆ ಮಾಡಿತ್ತು. ಇದರೊಂದಿಗೆ ಇಂಡಿಯನ್ ಓಪನ್ ಸೂಪರ್ 500 ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. ಟೋಕಿಯೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದರು.

ಎಚ್ ಎಸ್ ಪ್ರಣಯ್ (ಬ್ಯಾಡ್ಮಿಂಟನ್ - ಪುರುಷರ ಸಿಂಗಲ್ಸ್)

ಕಳೆದ 12 ತಿಂಗಳುಗಳಲ್ಲಿ ಪ್ರಣಯ್ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಮೇ ತಿಂಗಳಲ್ಲಿ ಮಲೇಷ್ಯಾ ಮಾಸ್ಟರ್ಸ್‌ನಲ್ಲಿ ಗೆಲುವು, ಆಸ್ಟ್ರೇಲಿಯನ್ ಓಪನ್‌ನಲ್ಲಿ ರನ್ನರ್-ಅಪ್, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಸೇರಿದಂತೆ ಗಮನಾರ್ಹ ಸಾಧನೆ ಮಾಡಿದ್ದಾರೆ. ಆ ಮೂಲಕ ಭಾರತದ ಪ್ರಮುಖ ಸಿಂಗಲ್ಸ್ ಆಟಗಾರರಾಗಿದ್ದಾರೆ.

ಅವಿನಾಶ್ ಸೇಬಲ್ (ಪುರುಷರ 3000ಮೀ ಸ್ಟೀಪಲ್‌ಚೇಸ್)

ಅವಿನಾಶ್ ನಿಸ್ಸಂದೇಹವಾಗಿ ಪದಕ ಗೆಲ್ಲುವ ಪ್ರಬಲ ಅಭ್ಯರ್ಥಿ. ಕಳೆದ ತಿಂಗಳು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸೇಬಲ್ ವಿಫಲವಾಗಿದ್ದರು. ಆದರೆ ಏಷ್ಯನ್ ಗೇಮ್ಸ್‌ಗೆ ವಿಶೇಷ ತಯಾರಿ ನಡೆಸುವ ಉದ್ದೇಶದಿಂದ ಅವರು ಡೈಮಂಡ್ ಲೀಗ್ ಫೈನಲ್ ಆಡಿರಲಿಲ್ಲ. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಪ್ರಸ್ತುತ 8 ನಿಮಿಷ 11.20 ಸೆಕೆಂಡುಗಳಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ. ಏಷ್ಯಾದ ಅಥ್ಲೀಟ್‌ಗಳ ಪೈಕಿ ಇವರಿಗೆ ಎರಡನೇ ಶ್ರೇಯಾಂಕವಿದೆ. ಜಪಾನ್‌ನ ಮಿಯುರಾ ರ್ಯುಜಿ ಅಗ್ರಸ್ಥಾನದಲ್ಲಿದ್ದಾರೆ.

ಆಂತಿಮ್ ಪಂಗಲ್ (ಕುಸ್ತಿ, 57 ಕೆಜಿ)

ಕುಸ್ತಿಯಲ್ಲಿ ಆಂತಿಮ್ ಪಂಗಲ್ ಪೋಡಿಯಂ ಫಿನಿಶ್‌ ಮಾಡಬಲ್ಲ ಪ್ರಬಲ ಸ್ಪರ್ಧಿಯಾಗಿದ್ದಾರೆ. ಸತತ ಜೂನಿಯರ್ ವಿಶ್ವ ಪ್ರಶಸ್ತಿಗಳನ್ನು ಗಳಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಇತಿಹಾಸ ಇವರದ್ದು. ಕ್ರೀಡೆಯ ತಾಂತ್ರಿಕ ಮತ್ತು ಮಾನಸಿಕ ಅಂಶಗಳೆರಡರಲ್ಲೂ ತಮ್ಮ ಪರಾಕ್ರಮವನ್ನು ಪ್ರದರ್ಶಿಸಿದ್ದಾರೆ.

ಜ್ಯೋತಿ ಸುರೇಖಾ ವೆನ್ನಂ (ಬಿಲ್ಲುಗಾರಿಕೆ)

ವಿಶ್ವದ ನಾಲ್ಕನೇ ಶ್ರೇಯಾಂಕದ ಮಹಿಳಾ ಕಂಪೌಂಡ್ ಬಿಲ್ಲುಗಾರ್ತಿಯಾಗಿರುವ ಜ್ಯೋತಿ, ಬಿಲ್ಲುಗಾರಿಕೆಯಲ್ಲಿ ವೈಯಕ್ತಿಕ ಚಿನ್ನದ ಪದಕ ಗೆಲ್ಲಬಲ್ಲ ಆಕಾಂಕ್ಷೆಯೊಂದಿಗೆ ಚೀನಾಗೆ ಹಾರಿದ್ದಾರೆ. ವಿಶ್ವಕಪ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಅವರು ಈವರೆಗೆ ಆರು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಜ್ಯೋತಿ ಯರ್ರಾಜಿ (ಅಥ್ಲೆಟಿಕ್ಸ್ - 100 ಮೀಟರ್ ಹರ್ಡಲ್ಸ್)

100 ಮೀಟರ್ ಹರ್ಡಲ್ಸ್‌ನಲ್ಲಿ ಭಾರತದ ಮೊದಲ ಏಷ್ಯನ್ ಚಾಂಪಿಯನ್ ಆಗಿರುವ ಯರ್ರಾಜಿ‌, ಮಹಿಳಾ ವಿಭಾಗದಲ್ಲಿ ಪದಕ ಗೆಲ್ಲಬಲ್ಲ ಖಚಿತ ಸ್ಪರ್ಧಿಯಾಗಿದ್ದಾರೆ. ಜುಲೈನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 13.09 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಕೇವಲ 24 ವರ್ಷ ವಯಸ್ಸಿನಲ್ಲಿ ಅವರು 12.78 ಸೆಕೆಂಡ್‌ಗಳೊಂದಿಗೆ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಪ್ರಸಕ್ತ ಋತುವಿನಲ್ಲಿ ಅವರು ಏಷ್ಯಾದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ