ITF Open 2023: ನಾಳೆಯಿಂದ ಕಲಬುರಗಿಯಲ್ಲಿ ವಿಶ್ವ ಮುಕ್ತ ಟೆನಿಸ್ ಪಂದ್ಯಾವಳಿ, 9 ದೇಶಗಳ ಟೆನ್ನಿಸ್ ಆಟಗಾರರು ಭಾಗಿ
Nov 25, 2023 12:15 PM IST
ಐಟಿಎಫ್ ಪುರುಷರ ಮುಕ್ತ ಟೆನಿಸ್ ಪಂದ್ಯಾವಳಿಯ ಪೂರ್ವ ಸಿದ್ಧತೆ ಪರಿಶೀಲಿಸಿದ ಅಧಿಕಾರಿಗಳು.
ಸೂರ್ಯನಗರಿ ಕಲಬುರಗಿಯಲ್ಲಿ 8 ವರ್ಷದ ಬಳಿಕ ವಿಶ್ವ ಟೆನಿಸ್ ಪಂದ್ಯಾವಳಿ ನಡೆಯುತ್ತಿದೆ. ಐಟಿಎಫ್ ಪುರುಷರ ಮುಕ್ತ ಟೆನಿಸ್ ಪಂದ್ಯಾವಳಿ ನವೆಂಬರ್ 26 ರಿಂದ ಶುರುವಾಗುತ್ತಿದ್ದು, ವಿಶ್ವದ 9 ದೇಶಗಳ ಕ್ರೀಡಾಪಟಗಳು ಭಾಗಿಯಾಗುತ್ತಿದ್ದಾರೆ.
ಕಲಬುರಗಿ: ಸೂರ್ಯ ನಗರಿ ಕಲಬುರಗಿಯ ಚಂದ್ರಶೇಖರ್ ಪಾಟೀಲ ಕ್ರೀಡಾಂಗಣದಲ್ಲಿ 8 ವರ್ಷದ ನಂತರ ಇದೇ ನವೆಂಬರ್ 26 ರಿಂದ ಡಿಸೆಂಬರ್ 3ರವರೆಗೆ ವಿಶ್ವ ಟೆನಿಸ್ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿಯ ಲಾಂಛನ ಮತ್ತು ಟೀಸರ್ ಅನ್ನು ಶುಕ್ರವಾರ ಬಿಡುಗಡೆಗೊಳಿಸಲಾಯಿತು.
ಕಲಬುರಗಿ ನಗರದ ಜಿಲ್ಲಾಧಿಕಾರಿಗಳಲ್ಲಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಮುನ್ನ ವಿಧಾನ ಪರಿಷತ್ ಶಾಸಕ ಶಶೀಲ ಜಿ. ನಮೋಶಿ, ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಮತ್ತು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಲೋಗೊ ಮತ್ತು ಪ್ರೊಮೋಷನ್ ಟೀಸರ್ ಬಿಡುಗಡೆಗೊಳಿಸಿದರು.
ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು, ನವೆಂಬರ್ 26 ರಿಂದ ಡಿಸೆಂಬರ್ 3ರ ವರೆಗೆ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಟೆನಿಸ್ ಪಂದ್ಯಾವಳಿಗೆ ಮತ್ತೆ ಕಲಬುರಗಿ ಆತಿಥ್ಯ ವಹಿಸುತ್ತಿರುವುದು ಸಂತಸ ತಂದಿದೆ. ನವೆಂಬರ್ 28 ರಂದು ಉದ್ಘಾಟನೆ ಮತ್ತು ಡಿಸೆಂಬರ್ 3 ರಂದು ಸಮಾರೋಪ ನಡೆಯಲಿದೆ. ಶ್ರೀಲಂಕಾದ ಧಾರಕಾ ಎಲ್ಲಾವಾಲಾ ಈ ಪಂದ್ಯಾವಳಿಯ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಗಮವಾಗಿ ಪಂದ್ಯಾವಳಿ ನಡೆಯಲು ಜಿಲ್ಲಾಡಳಿತ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಭಾಗದ ಟೆನಿಸ್ ಕ್ರೀಡಾಪಟುಗಳಿಗೆ ಈ ಕ್ರೀಡಾಕೂಟ ಹೊಸ ಹುರುಪು, ಚೈತನ್ಯ ತುಂಬಲಿದೆ ಎಂದು ಭಾವಿಸಿದ್ದೇನೆ ಎಂದರು.
ಐ.ಟಿ.ಎಫ್. ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ನಡೆಯುವ ಈ ಟೂರ್ನಿಗೆ ವಿಶ್ವದ 9 ದೇಶಗಳ ಕ್ರೀಡಾಪಟಗಳು ಭಾಗವಹಿಸುತ್ತಿದ್ದಾರೆ. ಈ ಪೈಕಿ 65ನೇ ವಿಶ್ವ ಶ್ರೇಯಾಂಕಿತ ಆಟಗಾರ ಎವ್ಜೆನಿ ಡಾನ್‍ಸ್ಕಾಯ್, ಜರ್ಮನಿಯ ಲೂಯಿಸ್ ವೆಸೆಲ್ಸ್, ಉಕ್ರೇನ್‍ನ ವ್ಲಾಡಸ್ಲ್ಯಾವ್ ಒರ್ಲೋವ್ ಮತ್ತು ಭಾರತದ ದಿಗ್ವಿಜಯಸಿಂಗ್ ಹಾಗೂ ಇತ್ತೀಚಿಗೆ ಧಾರವಾಡದಲ್ಲಿ ನಡೆದ ಐಟಿಎಪ್ ಓಪನ್ ಪಂದ್ಯಾವಳಿಯ ವಿಜೇತ ರಾಮಕುಮಾರ ರಾಮನಾಥನ್ ಪ್ರಮುಖರಾಗಿದ್ದಾರೆ. ಹಲವಾರು ಖಾಸಗಿ ಮತು ಸಾರ್ವಜನಿಕ ಸಂಸ್ಥೆಗಳು ಟೆನಿಸ್ ಟೂರ್ನಿಗೆ ಪ್ರಾಯೋಜಕತ್ವ ನೀಡಲು ಮುಂದೆ ಬಂದಿದ್ದು, ಒಟ್ಟಾರೆಯಾಗಿ ಒಂದು ವಾರಗಳ ಕಾಲ ಕಲಬುರಗಿಯಲ್ಲಿ ಟೆನಿಸ್ ಹಬ್ಬ ಕಣ್ತುಂಬಿಕೊಳ್ಳಬಹುದಾಗಿದೆ ಎಂದರು.
25000 ಅಮೆರಿಕನ್ ಡಾಲರ್ ಬಹುಮಾನದ ಟೂರ್ನಿ
ಪಂದ್ಯಾವಳಿಯ ಲಾಂಛನ ಬಿಡುಗಡೆಗೊಳಿಸಿದ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ಮಾತನಾಡಿ, 25000 ಅಮೆರಿಕನ್ ಡಾಲರ್ ಬಹುಮಾನದ ಟೂರ್ನಿ ಇದಾಗಿದೆ. ಇಂಥದೊಂದು ಪಂದ್ಯಾವಳಿಯನ್ನು ಆಯೋಜಿಸುವ ಅವಕಾಶ ಕಲಬುರಗಿಗೆ ದೊರೆತಿರುವುದು ಹೆಮ್ಮೆಯ ವಿಷಯ. ಪಂದ್ಯ ವೀಕ್ಷಣೆ ಉಚಿತವಾಗಿದ್ದು, ಕಲಬುರಗಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ಕ್ರೀಡಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇಶ-ವಿದೇಶದ ಪ್ರಖ್ಯಾತ ಕ್ರೀಡಾಪಟುಗಳ ಆಟದ ಸವಿಯನ್ನು ಆನಂದಿಸಬೇಕು ಎಂದು ಮನವಿ ಮಾಡಿದರು.
2002ರಲ್ಲಿ ಮೊದಲ ಟೂರ್ನಿ
ವಿಧಾನ ಪರಿಷತ್ ಶಾಸಕ ಶಶೀಲ ಜಿ. ನಮೋಶಿ ಮಾತನಾಡಿ, ಹಿಂದೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ 2002ರಲ್ಲಿ ಕಲಬುರಗಿಯ ಇದೇ ಚಂಪಾ ಕ್ರೀಡಾಂಗಣದಲ್ಲಿ ಐ.ಟಿ.ಎಫ್. ಟೆನಿಸ್ ಟೂರ್ನಿ ಆಯೋಜಿಸಲಾಗಿತ್ತು. ತದನಂತರ 2017 ರಲ್ಲಿ ಆಯೋಜಿಸಿದೆ. ಇದು ಅಂತಾರಾಷ್ಟ್ರೀಯ ಮಟ್ಟದ ಮೂರನೇ ಟೂರ್ನಿ ಇದಾಗಿದೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಮತುವರ್ಜಿಯಿಂದ ಇಂದಿಲ್ಲಿ ಅಂತಾರಾಷ್ಟ್ರೀಯ ಮಟ್ಟದ ಟೆನಿಸ್ ಟೂರ್ನಿ ಆಯೋಜನೆಗೊಳ್ಳುತ್ತಿದೆ. ಎಲ್ಲರೂ ಇದರ ಯಶಸ್ಸಿಗೆ ಶ್ರಮಿಸೋಣ ಎಂದರು.
ರಾಜ್ಯದ ನಾಲ್ವರಿಗೆ ವೈಲ್ಡ್ ಕಾರ್ಡ್
ಅರ್ಹತಾ ಸುತ್ತಿನ ಡ್ರಾ ನವೆಂಬರ್ 25 ರಂದು ನಡೆಯಲಿದ್ದು, ಅರ್ಹತಾ ಸುತ್ತಿನ ಪಂದ್ಯಗಳು ನವೆಂಬರ್ 26 ಮತ್ತು 27 ರಂದು ನಡೆಯಲಿವೆ. ಮುಖ್ಯ ಪಂದ್ಯಗಳು ನ.28 ರಿಂದ ಆರಂಭವಾಗಲಿವೆ. ಡಿಸೆಂಬರ್ 2 ರಂದು ಡಬಲ್ಸ್ ಫೈನಲ್ 3 ರಂದು ಸಿಂಗಲ್ಸ್ ಫೈನಲ್ ಪಂದ್ಯ ನಡೆಯಲಿದೆ. ಪಂದ್ಯಾವಳಿಯಲ್ಲಿ 32 ಆಟಗಾರರು ಸಿಂಗಲ್ಸ್ ಪಂದ್ಯ ಆಡಲಿದ್ದರೆ, 16 ಜೋಡಿಗಳು ತಮ್ಮ ಸಾಮಥ್ರ್ಯ ಒರೆಗೆ ಹಚ್ಚಲಿವೆ. ಈ ಮಧ್ಯೆ, ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಶಿಯಷನ್ ಮುಖ್ಯ ಪಂದ್ಯಗಳಿಗೆ ವೈಲ್ಡ್ ಕಾರ್ಡ್ ಪ್ರವೇಶ ನೀಡಿದ್ದು, ಆ ಪೈಕಿ ರಾಜ್ಯದ ಆದಿಲ್ ಕಲ್ಯಾಣಪುರ, ಮನೀಶ್. ಜಿ ಮತ್ತು ಕಬೀರ್ ಹಂಸ ಮತ್ತು ಜಗಮೀತಸಿಂಗ್ ಪ್ರವೇಶ ಪಡೆದಿದ್ದಾರೆ ಎಂದು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಸಂಸ್ಥೆಯ ಟೂರ್ನಾಮೆಂಟ್ ನಿರ್ದೇಶಕ ಪೀಟರ್ ವಿಜಯಕುಮಾರ ತಿಳಿಸಿದರು.
ರಾಜ್ಯ ಮತ್ತು ದೇಶದ ಟೆನಿಸ್ ಆಟಗಾರರು ಕಲಬುರಗಿ ಸೇರಿದಂತೆ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸುವ ಐ.ಟಿ.ಎಫ್. ಟೂರ್ನಿಯಲ್ಲ್ಲಿ ಭಾಗವಹಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ರ‌್ಯಾಂಕಿಂಗ್ ಸುಧಾರಿಸಿಕೊಳ್ಳಬಹುದಾಗಿದೆ. ಐ.ಟಿ.ಎಫ್. ಟೂರ್ನಿಯಲ್ಲಿ ಭಾಗವಹಿಸಲು ಸ್ಥಳೀಯ ಕ್ರೀಡಾಪಟುಗಳು ವಿದೇಶ ಪ್ರಯಾಣ ಕೈಗೊಳ್ಳಬೇಕಾಗುತ್ತದೆ. ಇದು ಆರ್ಥಿಕ ಹೊರೆಗೂ ಕಾರಣವಾಗಿದೆ. ಸ್ಥಳೀಯವಾಗಿ ಇಲ್ಲಿಯೇ ಭಾಗವಹಿಸಿದಲ್ಲಿ ತುಂಬಾ ಅನುಕೂಲವಾಗಲಿದೆ. ಜೊತೆಗೆ ಸ್ಥಳೀಯವಾಗಿ ಭವಿಷ್ಯದ ಟೆನಿಸ್ ಕ್ರೀಡಾಪಟುಗಳಿಗೆ ಉತ್ತೇಜನ ದೊರೆಯಲಿದೆ. ಇದುವೇ ಟೂರ್ನಿ ಆಯೋಜನೆಯ ಉದ್ದೇಶ ಎಂದು ಪೀಟರ್ ವಿಜಯಕುಮಾರ ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಗಜಾನನ್ ಬಾಳೆ, ಸಹಾಯಕ ಆಯುಕ್ತೆ ಮಮತಾ ಕುಮಾರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ, ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್, ಜಿಲ್ಲಾ ಕೈಗಾರಿಕೆ ಕೇಂದ್ರ ಜಂಟಿ ನಿರ್ದೇಶಕ ಎಂ.ಸತೀಷ್ ಕುಮಾರ ಸೇರಿದಂತೆ ಕೆ.ಎಸ್.ಎಲ್.ಟಿ.ಎ. ಸಂಸ್ಥೆಯ ಇತರೆ ಅಧಿಕಾರಿಗಳು ಇದ್ದರು.
ಚಂದ್ರಶೇಖರ್ ಪಾಟೀಲ ಕ್ರೀಡಾಂಗಣಕ್ಕೆ ಆರ್.ಸಿ., ಡಿ.ಸಿ. ಭೇಟಿ, ಸಿದ್ಧತೆ ಪರಿಶೀಲನೆ
ಕಲಬುರಗಿಯ ಚಂದ್ರಶೇಖರ್ ಪಾಟೀಲ ಕ್ರೀಡಾಂಗಣದಲ್ಲಿ ಇದೇ ನವೆಂಬರ್ 26 ರಿಂದ ಡಿಸೆಂಬರ್ 3ರ ವರೆಗೆ ಐ.ಟಿ.ಎಫ್. ಕಲಬುರಗಿ ಓಪನ್-2023 ಮೆನ್ಸ್ ಟೆನಿಸ್ ಟೂರ್ನಿ ಆಯೋಜನೆ ಹಿನ್ನೆಲೆಯಲ್ಲಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಮತ್ತು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶುಕ್ರವಾರ ಚಂಪಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದರು.
ಕ್ರೀಡಾಂಗಣದಲ್ಲಿರುವ ಸಿಂಥೆಟಿಕ್ ಟೆನಿಸ್ ಕೋರ್ಟ್ ಅಂಗಣ, ಪ್ರೇಕ್ಷಕರ ಗ್ಯಾಲರಿ, ಐ.ಟಿ.ಎಫ್. ಸೂಪರ್‍ವೈಸರ್ ಕೋಣೆ, ಆಟಗಾರರ ಲಾಂಜ್, ಮೀಡಿಯಾ ಸೆಂಟರ್, ಫುಡ್ ಕೋರ್ಟ್ ಸ್ಥಳವನ್ನು ಖುದ್ದಾಗಿ ಪರಿಶೀಲಿಸಿದರು.
ಪಂದ್ಯಾವಳಿಯಲ್ಲಿ ಭಾಗವಹಿಸಲು ಈಗಾಗಲೆ ದೇಶ-ವಿದೇಶದಿಂದ ಆಟಗಾರರು ಆಗಮಿಸಿ ಅಭ್ಯಾಸದಲ್ಲಿ ನಿರತರಾಗಿದ್ದವರನ್ನು ಕುಶಲೋಪರಿ ವಿಚಾರಿಸಿದ ಕೃಷ್ಣ ಭಾಜಪೇಯಿ ಮತ್ತು ಬಿ.ಫೌಜಿಯಾ ತರನ್ನುಮ್ ಅವರು ಟೂರ್ನಿಗೆ ಶುಭ ಕೋರಿದರು. ಸಿಂಥೆಟಿಕ್ ಅಂಗಣ ಬಗ್ಗೆ ಅಭ್ಯಾಸದಲ್ಲಿ ನಿರತ ಟೆನಿಸ್ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ದೇಶ-ವಿದೇಶದಿಂದ ಖ್ಯಾತನಾಮದ ಕ್ರೀಡಾಪಟುಗಳು ಆಗಮಿಸುವ ಕಾರಣ ಕ್ರೀಡಾಂಗಣ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶ ಸ್ವಚ್ಚತೆ ಕಾಪಾಡಬೇಕು. ಕ್ರೀಡಾಪಟುಗಳಿಗೆ, ಐ.ಟಿ.ಎಫ್. ಸಿಬ್ಬಂದಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದರು.
ವಿಧಾನ ಪರಿಷತ್ ಶಾಸಕ ಶಶೀಲ ಜಿ. ನಮೋಶಿ, ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಸಂಸ್ಥೆಯ ಟೂರ್ನಾಮೆಂಟ್ ನಿರ್ದೇಶಕ ಪೀಟರ್ ವಿಜಯಕುಮಾರ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಗಜಾನನ್ ಬಾಳೆ, ಸಹಾಯಕ ಆಯುಕ್ತೆ ಮಮತಾ ಕುಮಾರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ಇದ್ದರು.
(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)