Pritam Munde: ಓರ್ವ ಮಹಿಳೆಯಾಗಿ ಹೇಳುತ್ತಿದ್ದೇನೆ, ಈ ದೂರನ್ನು ನಿಜವೆಂದು ಪರಿಗಣಿಸಬೇಕು; ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಬಿಜೆಪಿ ಸಂಸದೆ
Jun 03, 2023 10:46 AM IST
ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಬಿಜೆಪಿ ಸಂಸದೆ ಪ್ರೀತಮ್ ಮುಂಡೆ
- ಬ್ರಿಜ್‌ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ (Wrestlers' Protest) ಮಹಾರಾಷ್ಟ್ರ ಮೂಲಕ ಬಿಜೆಪಿ ಸಂಸದೆ ಪ್ರೀತಮ್ ಮುಂಡೆ (BJP MP Pritam Munde Supports Wrestlers) ಅವರು ಪರೋಕ್ಷ ಬೆಂಬಲ ನೀಡಿದ್ದಾರೆ.
ಲೈಂಗಿಕ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಹಾಗೂ ಬಿಜಪಿ ಸಂಸದ ಬ್ರಿಜ್‌ಭೂಷಣ್ ಸಿಂಗ್ (Wrestling Federation of India chief Brij Bhushan Sharan Singh) ಬಂಧನಕ್ಕೆ ಒತ್ತಾಯಿಸಿ ಕಳೆದ 40 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಭಾರತದ ಖ್ಯಾತನಾಮ ಕುಸ್ತಿಪಟುಗಳಿಗೆ (Wrestlers' Protest) ಇದೀಗ ಮಹಾರಾಷ್ಟ್ರ ಮೂಲಕ ಬಿಜೆಪಿ ಸಂಸದೆ ಪ್ರೀತಮ್ ಮುಂಡೆ (BJP MP Pritam Munde Supports Wrestlers) ಅವರು ಪರೋಕ್ಷ ಬೆಂಬಲ ನೀಡಿದ್ದಾರೆ. ಮಹಿಳೆ ನೀಡಿದ ದೂರನ್ನೂ ಯಾವುದೇ ಕಾರಣಕ್ಕೂ ನಿರ್ಲಕ್ಷದ್ಯ ಸಲ್ಲದು ಎಂದು ಕ್ರೀಡಾಪಟುಗಳ ಪರ ಮಾತನಾಡಿದ್ದಾರೆ.
ನಿಜವೆಂದು ಪರಿಗಣಿಸಬೇಕು
ಮಹಿಳೆಯೊಬ್ಬರು ಈ ರೀತಿಯ ಗಂಭೀರ ದೂರು ನೀಡಿದಾಗ ಅದನ್ನು ನಿಸ್ಸಂದೇಹವಾಗಿ ನಿಜವೆಂದು ಪರಿಗಣಿಸಬೇಕು. ಯಾವುದೇ ಸರ್ಕಾರ ಅಥವಾ ಯಾವುದೇ ಪಕ್ಷ ಆಗಿರಬಹುದು. ಈ ಮಟ್ಟದ ಚಳುವಳಿಯು ಗಮನಿಸದೆ ಹೋದರೆ ಅದು ನ್ಯಾಯೋಚಿತವಲ್ಲ ಎಂದು ನಾನು ನಂಬುತ್ತೇನೆ. ಅದು ಗಮನಿಸದೆ ಹೋಗಬಾರದು. ಅದರ ಬಗ್ಗೆ ಅಗತ್ಯ ಗಮನ ನೀಡಬೇಕು ಎಂದು ಪ್ರೀತಮ್ ಮುಂಡೆ ಹೇಳಿದ್ದಾರೆ.
ಓರ್ವ ಸಂಸದೆಯಾಗಿ ಹೇಳುತ್ತಿಲ್ಲ
ನಾನು ಸಂಸತ್ತಿನ ಓರ್ವ ಸದಸ್ಯೆಯಾಗಿ ಹೇಳುತ್ತಿಲ್ಲ. ಆದರೆ ಒಬ್ಬ ಮಹಿಳೆಯಾಗಿ ಈ ಬಗ್ಗೆ ಹೇಳುತ್ತಿದ್ದೇನೆ. ಈ ರೀತಿಯ ದೂರನ್ನು ಯಾವುದೇ ಮಹಿಳೆ ಕೊಟ್ಟರೂ ಸಹ ಅದನ್ನು ನಿರ್ಲಕ್ಷಿಸಬಾರದು. ಅದರ ನಂತರವಷ್ಟೇ ಸೂಕ್ಷ್ಮವಾಗಿ ಸತ್ಯಾಸತ್ಯತೆ ಎಷ್ಟಿದೆ ಎಂಬುದರ ಕುರಿತು ತನಿಖೆ ಕೈಗೊಳ್ಳಬೇಕು. ಆದರೆ ಇದ್ಯಾವುದು ಆಗದಿರುವುದು ಬೇಸರದ ಸಂಗತಿ ಎಂದು ಪ್ರತಿಮಾ ಮುಂಡೆ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಸರ್ಕಾರ ಕೂಡ ಸಂಹವನ ನಡೆಸಿಲ್ಲ
ನಾನು ಈ (ಬಿಜೆಪಿ) ಸರ್ಕಾರದ ಭಾಗವಾಗಿದ್ದರೂ, ನಾವು ಕುಸ್ತಿಪಟುಗಳೊಂದಿಗೆ ಸಂವಹನ ನಡೆಸಬೇಕಾದ ರೀತಿಯಲ್ಲಿ ನಡೆದಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಪ್ರೀತಮ್ ಮುಂಡೆ ತಮ್ಮ ಸರ್ಕಾರದ ವಿರುದ್ಧವೇ ಹರಿಹಾಯ್ದಿದ್ದಾರೆ. ಪ್ರೀತಮ್ ಮುಂಡೆ ಅವರಿಗಿಂತಲೂ ಮೊದಲು, ಹರಿಯಾಣದ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ಅವರು ಕುಸ್ತಿಪಟುಗಳ ಪ್ರತಿಭಟನೆಯನ್ನು 'ಸಂಪೂರ್ಣ ಹೃದಯವಿದ್ರಾವಕ' ಎಂದು ಕರೆದಿದ್ದರು.
ಮತ್ತೊಬ್ಬ ಬಿಜೆಪಿ ಸಂಸದ ಬೆಂಬಲ
ಕುಸ್ತಿಪಟುಗಳು ಮಂಗಳವಾರ ಹರಿದ್ವಾರದ ಗಂಗಾದಲ್ಲಿ ತಮ್ಮ ಪದಕಗಳನ್ನು ವಿಸರ್ಜಿಸಲು ಹೋಗಿದ್ದನ್ನು ರೈತ ಸಂಘದ ನಾಯಕ ನರೇಶ್ ಟಿಕಾಯರ್ ತಡೆದಿದ್ದರು. ನಮ್ಮ ಕುಸ್ತಿಪಟುಗಳ ನೋವು ಮತ್ತು ಅಸಹಾಯಕತೆಯನ್ನು ನಾನು ಅನುಭವಿಸುತ್ತೇನೆ. ಒಲಿಂಪಿಕ್ಸ್, ಕಾಮನ್ವೆಲ್ತ್, ಏಷ್ಯನ್ ಗೇಮ್ಸ್‌ನ ಪದಕಗಳನ್ನು ಪವಿತ್ರ ಗಂಗೆಯಲ್ಲಿ ಎಸೆಯುವುದು. ಸಂಪೂರ್ಣವಾಗಿ ಹೃದಯ ವಿದ್ರಾವಕ ಎಂದು ಬ್ರಿಜೇಂದ್ರ ಸಿಂಗ್ ಟ್ವೀಟ್ ಮಾಡಿದ್ದರು.
ವಿಶ್ವ ಕುಸ್ತಿ ಸಂಸ್ಥೆ ನಿಷೇಧದ ವಾರ್ನ್
ವಿಶ್ವ ಕುಸ್ತಿ ಫೆಡರೇಶನ್, ಭಾರತೀಯ ಕುಸ್ತಿಗಳ ಮೇಲೆ ನಡೆದಿರುವ ದೌರ್ಜನ್ಯವನ್ನು ಖಂಡಿಸಿದೆ. ಭಾರತದ ಕುಸ್ತಿಪಟುಗಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈಗಾಗಲೇ ನಿಗದಿಯಾದ 45 ದಿನಗಳೊಳಗೆ ನೂತನ ಚುನಾವಣೆ ನಡೆಸದೇ ಇದ್ದರೆ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ನಿಷೇಧಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದೆ.
ಮಹಿಳಾ ಕುಸ್ತಿಪಟುಗಳ ಆರೋಪಗಳು ಬಹಿರಂಗ
ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ವಿರುದ್ಧ ದೆಹಲಿ ಪೊಲೀಸರು ಇತ್ತೀಚೆಗೆ ಎಫ್‌ಐಆರ್ ದಾಖಲಿಸಿದ್ದರು. ಈ ಎಫ್ಐಆರ್ನಲ್ಲಿ ದಾಖಲಾದ ಆರೋಪಗಳು ಈಗ ಬಯಲಾಗಿವೆ. ಅಸಮರ್ಪಕ ಸ್ಪರ್ಶ, ಮೈ ಸವರುವುದು, ಮುಜುಗರ ಪ್ರಶ್ನೆಗಳನ್ನು ಕೇಳುವುದು, ಲೈಂಗಿಕ ಸುಖಕ್ಕೆ ಬೇಡಿಕೆ ಇಡುವುದು ಸೇರಿದಂತೆ ಪ್ರಮುಖ ಆರೋಪಗಳನ್ನು ದೂರಿನಲ್ಲಿ ದಾಖಲಿಸಲಾಗಿದೆ. ಏನೆಲ್ಲಾ ದೂರುಗಳು ದಾಖಲಾಗಿದ್ದವು ಎಂಬುದರ ಕುರಿತ ಸಂಪೂರ್ಣ ವರದಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.