logo
ಕನ್ನಡ ಸುದ್ದಿ  /  ಕ್ರೀಡೆ  /  ಲೂಸಾನ್ ಡೈಮಂಡ್ ಲೀಗ್; 89.49 ಮೀ ದೂರ ಜಾವೆಲಿನ್‌ ಎಸೆದು 2ನೇ ಸ್ಥಾನ ಪಡೆದ ನೀರಜ್ ಚೋಪ್ರಾ, ಫೈನಲ್‌ ಯಾವಾಗ?

ಲೂಸಾನ್ ಡೈಮಂಡ್ ಲೀಗ್; 89.49 ಮೀ ದೂರ ಜಾವೆಲಿನ್‌ ಎಸೆದು 2ನೇ ಸ್ಥಾನ ಪಡೆದ ನೀರಜ್ ಚೋಪ್ರಾ, ಫೈನಲ್‌ ಯಾವಾಗ?

Jayaraj HT Kannada

Aug 23, 2024 10:20 AM IST

google News

ಲೂಸಾನ್ ಡೈಮಂಡ್ ಲೀಗ್‌ನಲ್ಲಿ 2ನೇ ಸ್ಥಾನ ಪಡೆದ ನೀರಜ್ ಚೋಪ್ರಾ

    • Neeraj Chopra: ನೀರಜ್ ಚೋಪ್ರಾ ತಮ್ಮ ಅಂತಿಮ ಪ್ರಯತ್ನದಲ್ಲಿ 89.49 ಮೀಟರ್ ದೂರ ಜಾವೆಲಿನ್ೆಸೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದರು. ಇದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅವರು ನೀಡಿದ ಪ್ರದರ್ಶನಕ್ಕಿಂತ ಉತ್ತಮವಾಗಿದೆ.
ಲೂಸಾನ್ ಡೈಮಂಡ್ ಲೀಗ್‌ನಲ್ಲಿ 2ನೇ ಸ್ಥಾನ ಪಡೆದ ನೀರಜ್ ಚೋಪ್ರಾ
ಲೂಸಾನ್ ಡೈಮಂಡ್ ಲೀಗ್‌ನಲ್ಲಿ 2ನೇ ಸ್ಥಾನ ಪಡೆದ ನೀರಜ್ ಚೋಪ್ರಾ (REUTERS)

ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಲೂಸಾನ್ ಡೈಮಂಡ್ ಲೀಗ್‌ನಲ್ಲಿ ಎರಡನೇ ಸ್ಥಾನ ಪಡೆದರು. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿಯೂ ಚಿನ್ನದ ಪದಕ ವಂಚಿತರಾಗಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದ ಚಿನ್ನದ ಹುಡುಗ, ಇದೀಗ ಮತ್ತೊಮ್ಮೆ ಎರಡನೇ ಸ್ಥಾನ ಪಡೆದಿದ್ದಾರೆ. ಗುರುವಾರ ತಡರಾತ್ರಿ ನಡೆದ ಫೈನಲ್‌ ಈವೆಂಟ್‌ನಲ್ಲಿ, ಕೊನೆಯ ಪ್ರಯತ್ನದಲ್ಲಿ 89.49 ಮೀಟರ್ ದೂರ ಎಸೆಯುವ ಮೂಲಕ ಈ ಋತುವಿನ ಅತ್ಯುತ್ತಮ ಎಸೆತವನ್ನು ದಾಖಲಿಸಿದರು. ಇದು ಅವರ ಪ್ಯಾರಿಸ್‌ ಒಲಿಂಪಿಕ್ಸ್‌ ಎಸೆತಕ್ಕಿಂತಲೂ ಉತ್ತಮ ಪ್ರಯತ್ನವಾಗಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದಿದ್ದ 26 ವರ್ಷದ ಚೋಪ್ರಾ, ಲೂಸಾನ್‌ನಲ್ಲಿ ನಾಲ್ಕನೇ ಸುತ್ತಿನವರೆಗೆ ನಾಲ್ಕನೇ ಸ್ಥಾನದಲ್ಲಿದ್ದರು. ಆದರೆ ಐದನೇ ಪ್ರಯತ್ನದಲ್ಲಿ 85.58 ಮೀಟರ್ ದೂರವನ್ನು ಎಸೆದು ಮುನ್ನಡೆ ಸಾಧಿಸಿದರು. ಅವರು ತಮ್ಮ ಆರನೇ ಮತ್ತು ಅಂತಿಮ ಪ್ರಯತ್ನದಲ್ಲಿ ಅತ್ಯುತ್ತಮ ಎಸೆತವನ್ನು ದಾಖಲಿಸಿದರು. 89.49 ಮೀಟರ್ ದೂರ ಜಾವೆಲಿನ್‌ ಎಸೆಯುವ ಮೂಲಕ, ಪ್ಯಾರಿಸ್ ಒಲಿಂಪಿಕ್ಸ್‌ ಪ್ರದರ್ಶನವನ್ನು ಸುಧಾರಿಸಿಕೊಂಡರು.

ಪ್ಯಾರಿಸ್‌ನಲ್ಲಿ ಮೇಲಿಂದ ಮೇಲೆ ಫೌಲ್‌ ಎಸೆತಗಳನ್ನು ದಾಖಲಿಸಿದ್ದ ನೀರಜ್‌, ಈ ಬಾರಿಯೂ ಆರನೇ ಎಸೆತವನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದರು. ಆದರೆ ಅವರ ಐದನೇ ಸುತ್ತಿನ ಪ್ರಯತ್ನ 85.58 ಮೀಟರ್ ಅವರನ್ನು ಉಳಿಸಿತು. ಏಕೆಂದರೆ ಐದು ಸುತ್ತುಗಳ ನಂತರ ಅಗ್ರ ಮೂರು ಸ್ಥಾನ ಪಡೆದವರಿಗೆ ಮಾತ್ರವೇ ಅಂತಿಮ ಮತ್ತು ಆರನೇ ಎಸೆತಕ್ಕೆ ಅವಕಾಶ ನೀಡಕಗುತ್ತದೆ.

ಎರಡು ಬಾರಿಯ ವಿಶ್ವ ಚಾಂಪಿಯನ್ ಮತ್ತು ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಗ್ರೆನಡಾದ ಆಂಡರ್ಸನ್ ಪೀಟರ್ಸ್ 90.61 ಮೀಟರ್ ಎಸೆದು ಎರಡನೇ ಸುತ್ತಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡರು. ಅತ್ತ ಜರ್ಮನಿಯ ಜೂಲಿಯನ್ ವೆಬರ್ 87.08 ಮೀಟರ್ ದೂರ ಎಸೆದು ಮೂರನೇ ಸ್ಥಾನ ಪಡೆದರು.

“ಮೊದಲಿಗೆ ನನ್ನ ಪ್ರಯತ್ನದ ಬಗ್ಗೆ ನನಗೆ ಅಷ್ಟು ಖುಷಿಯಾಗಿಲ್ಲ. ಆದರೆ ನನ್ನ ಎಸೆತದಿಂದ ನಾನು ಸಂತೋಷವಾಗಿದ್ದೇನೆ. ವಿಶೇಷವಾಗಿ ನನ್ನ ಕೊನೆಯ ಪ್ರಯತ್ನಯು ನನ್ನ ವೃತ್ತಿಜೀವನದ ಎರಡನೇ ಅತ್ಯುತ್ತಮ ಎಸೆತ. ಆರಂಭ ಕಠಿಣವಾಗಿತ್ತು. ಆದರೆ ಪುನರಾಗಮನವು ನಿಜವಾಗಿಯೂ ಉತ್ತಮವಾಗಿತ್ತು. ನಾನು ತೋರಿಸಿದ ಹೋರಾಟದ ಮನೋಭಾವವನ್ನು ಖುದ್ದು ನಾನು ಆನಂದಿಸಿದ್ದೇನೆ” ಎಂದು ನೀರಜ್ ಚೋಪ್ರಾ ಈವೆಂಟ್‌ ನಂತರ ಹೇಳಿದ್ದಾರೆ.

ದೀರ್ಘಕಾಲದ ಸೊಂಟದ ನೋವಿನಿಂದಿಂದ ಬಳಲುತ್ತಿರುವ ಚೋಪ್ರಾ, ಆಗಸ್ಟ್ 8ರಂದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 89.45 ಮೀಟರ್ ಎಸೆತದೊಂದಿಗೆ ಬೆಳ್ಳಿ ಪದಕ ಗೆದ್ದಿದ್ದರು. ಅದಕ್ಕೂ ಮೂರು ವರ್ಷಗಳ ಹಿಂದೆ ಟೋಕಿಯೊ ಆವೃತ್ತಿಯಲ್ಲಿ ಐತಿಹಾಸಿಕ ಚಿನ್ನ ಗೆದ್ದಿದ್ದರು.

ಡೈಮಂಡ್‌ ಲೀಗ್‌ ಅಂಕಪಟ್ಟಿ ಹೀಗಿದೆ

ಗುರುವಾರದ ಲೂಸಾನ್‌ ಡೈಮಂಡ್‌ ಲೀಗ್‌ ಲೆಗ್‌ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ನೀರಜ್‌ ಏಳು ಅಂಕ ಸಂಪಾದಿಸಿದ್ದಾರೆ. ಹೀಗಾಗಿ 15 ಅಂಕಗಳೊಂದಿಗೆ ಡೈಮಂಡ್ ಲೀಗ್ ಅಂಕಪಟ್ಟಿಯಲ್ಲಿ ವೆಬರ್ ಅವರೊಂದಿಗೆ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ. ಲೂಸಾನ್‌ ಈವೆಂಟ್‌ಗೂ ಮುನ್ನ ನೀರಜ್‌ ನಾಲ್ಕನೇ ಸ್ಥಾನದಲ್ಲಿದ್ದರು. ಅತ್ತ ಪೀಟರ್ಸ್ 21 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ಜಿಗಿದಿದ್ದಾರೆ. ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ಚ್ ಗುರುವಾರ ಏಳನೇ ಸ್ಥಾನ (82.03 ಮೀ) ಗಳಿಸಿ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಈ ಋತುವಿನ ಡೈಮಂಡ್‌ ಲೀಗ್ ಫೈನಲ್ಸ್ ಸೆಪ್ಟೆಂಬರ್ 14ರಂದು ಬ್ರಸೆಲ್ಸ್‌ನಲ್ಲಿ ನಡೆಯಲಿದೆ. ಋತುವಿನ ಅಂತಿಮ ಹಂತಕ್ಕೆ ಅರ್ಹತೆ ಪಡೆಯಲು ಅಥ್ಲೀಟ್‌ಗಳು ಡೈಮಂಡ್ ಲೀಗ್‌ಗಳ ಸರಣಿಯಲ್ಲಿ ಅಗ್ರ ಆರು ಸ್ಥಾನಗಳನ್ನು ಪಡೆಯಬೇಕಾಗಿದೆ. ಫೈನಲ್‌ಗೂ ಮುನ್ನ ಸೆಪ್ಟೆಂಬರ್ 5 ರಂದು ಜ್ಯೂರಿಚ್‌ನಲ್ಲಿ ಮತ್ತೊಂದು ಈವೆಂಟ್‌ ನಡೆಯಲಿದೆ.‌

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ