Paralympics 2024: ಆಗಸ್ಟ್ 28ರಿಂದ ಪ್ಯಾರಿಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಸಂಭ್ರಮ; ಭಾರತದ 84 ಕ್ರೀಡಾಪಟುಗಳು ಭಾಗಿ
Aug 26, 2024 04:59 PM IST
ಆಗಸ್ಟ್ 28ರಿಂದ ಪ್ಯಾರಿಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಸಂಭ್ರಮ; ಭಾರತದ 84 ಕ್ರೀಡಾಪಟುಗಳು ಭಾಗಿ
- ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟು 22 ಕ್ರೀಡೆಗಳ 549 ಸ್ಪರ್ಧೆಗಳು ನಡೆಯಲಿವೆ. 184 ದೇಶಗಳ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಭಾರತದಿಂದ 84 ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದಾರೆ.
ಪ್ಯಾರಿಸ್ ಬೇಸಿಗೆ ಒಲಿಂಪಿಕ್ಸ್ 2024 ಮುಕ್ತಾಯಗೊಂಡ ಬೆನ್ನಲ್ಲೇ ಈ ವರ್ಷದ ಪ್ಯಾರಾಲಿಂಪಿಕ್ಸ್ (Paralympic Games) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. 17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಪ್ರೇಮನಗರಿ ಪ್ಯಾರಿಸ್ (Paris) ಸಜ್ಜಾಗಿದೆ. ಬೇಸಿಂಗ್ ಒಲಿಂಪಿಕ್ಸ್ ಯಶಸ್ವಿಯಾಗಿ ನಡೆಸಿದ ನಗರವು, ಇದೀಗ ಪ್ಯಾರಾಲಿಂಪಿಕ್ಸ್ ಕೂಟದ ಯಶಸ್ಸನ್ನು ಎದುರು ನೋಡುತ್ತಿದೆ. ಕ್ರೀಡಾಕೂಟಕ್ಕೆ ನಾಳೆ, ಅಂದರೆ ಆಗಸ್ಟ್ 28ರ ಬುಧವಾರ ಚಾಲನೆ ಸಿಗಲಿದೆ. ಸೆಪ್ಟೆಂಬರ್ 8ರಂದು ಜಾಗತಿಕ ಕ್ರೀಡಾಕೂಟ ಮುಕ್ತಾಯವಾಗಲಿದೆ.
ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್ ನಗರ ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ಗೆ ಆತಿಥ್ಯ ವಹಿಸುತ್ತಿದೆ. ಫ್ರಾನ್ಸ್‌ನಲ್ಲಿ ನಡೆಯಲಿರುವ 2ನೇ ಪ್ಯಾರಾಲಿಂಪಿಕ್ಸ್ ಇದು. 1992ರಲ್ಲಿ ಟಿಗ್ನೆಸ್ ಹಾಗೂ ಆಲ್ಬರ್ಟ್‌ವಿಲ್ಲೆ ನಗರಗಳು ಚಳಿಗಾಲದ ಪ್ಯಾರಾಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದ್ದವು. ಅಂತಾರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಷನ್ ಹಾಗೂ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಂಸ್ಥೆಗಳ ನಡುವಿನ ಒಪ್ಪಂದದ ಪ್ರಕಾರ, ಒಲಿಂಪಿಕ್ಸ್ ಆಯೋಜಿಸುವ ನಗರವೇ ಪ್ಯಾರಾಲಿಂಪಿಕ್ಸ್‌ಗೂ ಆತಿಥ್ಯ ವಹಿಸಬೇಕು. ಹೀಗಾಗಿ, ಪ್ಯಾರಿಸ್ ನಗರಕ್ಕೆ ಒಲಿಂಪಿಕ್ಸ್ ಆತಿಥ್ಯ ಹಕ್ಕು ಸಿಕ್ಕಾಗಲೇ ಪ್ಯಾರಾಲಿಂಪಿಕ್ಸ್‌ನ ಆತಿಥ್ಯ ಹಕ್ಕು ಕೂಡಾ ದೊರೆತಿತ್ತು.
ಕೊನೆಯ ಬಾರಿಗೆ ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿ ನಡೆದಿದ್ದ 16ನೇ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ದೇಶದ ಕ್ರೀಡಾಳುಗಳು 19 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು. ಈ ಬಾರಿ ಭಾರತವು ಕನಿಷ್ಠ 25 ಪದಕ ಗೆಲ್ಲುವ ಗುರಿ ಹೊಂದಿದೆ.
549 ಸ್ಪರ್ಧೆಗಳು
ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟು 22 ಕ್ರೀಡೆಗಳ 549 ಸ್ಪರ್ಧೆಗಳು ನಡೆಯಲಿವೆ. 184 ದೇಶಗಳ ಅಂದಾಜು 4400ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.
ಭಾರತದಿಂದ 84 ಕ್ರೀಡಾಪಟುಗಳು ಭಾಗಿ
ಪ್ಯಾರಾಲಿಂಪಿಕ್ಸ್‌ಗೆ ಈ ಬಾರಿ ಭಾರತವು 84 ಕ್ರೀಡಾಪಟುಗಳನ್ನು ಕಳುಹಿಸಿದೆ. ಭಾರತದ ಮಟ್ಟಿಗೆ ಇದು ದಾಖಲೆಯ ಸಂಖ್ಯೆ. 2020ರ ಟೋಕಿಯೋ ಪ್ಯಾರಾಗೇಮ್ಸ್‌ಗೆ 54 ಅಥ್ಲೀಟ್‌ಗಳು ತೆರಳಿದ್ದರು. 1968ರಲ್ಲಿ ಮೊದಲ ಬಾರಿಗೆ ಭಾರತದ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. 1984ರಿಂದ ನಡೆದ ಪ್ರತಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಸ್ಪರ್ಧಿಸುತ್ತಾ ಬಂದಿದೆ.
ಅಥ್ಲೆಟಿಕ್ಸ್‌ನಲ್ಲಿ ಭಾರತದ ಅತಿಹೆಚ್ಚು ಸ್ಪರ್ಧಿಗಳು ಕಣಕ್ಕೆ
ಭಾರತ ಈ ಬಾರಿ 12 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ. ಪ್ರಮುಖವಾಗಿ ಅಥ್ಲೆಟಿಕ್ಸ್‌ನಲ್ಲೇ ಭಾರತದ 38 ಸ್ಪರ್ಧಿಗಳು ಇರಲಿದ್ದಾರೆ. ಆರ್ಚರಿ, ಬ್ಯಾಡ್ಮಿಂಟನ್, ಸೈಕ್ಲಿಂಗ್, ಜುಡೋ, ಪ್ಯಾರಾಕೆನೋಯಿಂಗ್, ಪವರ್‌ಲಿಫ್ಟಿಂಗ್, ರೋಯಿಂಗ್, ಶೂಟಿಂಗ್, ಈಜು, ಟೇಬಲ್ ಟೆನಿಸ್, ಟೆಕ್ವಾಂಡೋ ಕ್ರೀಡೆಗಳಲ್ಲಿ ಭಾರತದ ಸ್ಪರ್ಧಿಗಳು ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.
ಭಾರತಕ್ಕೆ 25 ಪದಕ ಗುರಿ
ಕಳೆದ ಆವೃತ್ತಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸುಮಿತ್ ಅಂತಿಲ್, ಮರಿಯಪ್ಪನ್ ತಂಗವೇಲು, ಸುಹಾನ್ ಎಲ್‌ವೈ, ಕೃಷ್ಣ ನಾಗರ್, ಅವನಿ ಲೇಖರ, ಮನೀಶ್ ನರ್ವಾಲ್, ಭವಿನಾ ಪಟೇಲ್, ನಿಶಾದ್ ಕುಮಾರ್ ಸೇರಿ ಇನ್ನೂ ಕೆಲವರು ಈ ಆವೃತ್ತಿಗೂ ಅರ್ಹತೆ ಪಡೆದಿದ್ದು, ಮತ್ತೊಮ್ಮೆ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಯುವ ಪ್ಯಾರಾ ಆರ್ಚರಿ ಪಟು, ಎರಡೂ ಕೈಗಳಿಲ್ಲದಿದ್ದರೂ ವಿಶ್ವ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಶೀತಲ್ ದೇವಿ ಭಾರತದ ಅತಿದೊಡ್ಡ ಪದಕ ಭರವಸೆ ಎನಿಸಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಈವರೆಗೂ ಭಾರತ ಒಟ್ಟು 9 ಚಿನ್ನ, 12 ಬೆಳ್ಳಿ, 10 ಕಂಚು ಸೇರಿ ಒಟ್ಟು 31 ಪದಕಗಳನ್ನು ಗೆದ್ದಿದೆ.