ಪ್ರೇಮನಗರಿಯಲ್ಲಿ ಪ್ರೇಮನಿವೇದನೆ; ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಗಮನಸೆಳೆದ ಅಥ್ಲೀಟ್‌ಗಳ ಮದುವೆ ಪ್ರಪೋಸಲ್
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವು ಪ್ರೇಮಿಗಳ ಪಾಲಿಗೆ ಪ್ರಣಯಕಾಲವಾಗಿದೆ. ಕ್ರೀಡಾಪಟುಗಳು ತಮ್ಮ ಕ್ರೀಡಾ ಸಾಧನೆಗಳ ನಡುವೆ ಪ್ರೇಮನಿವೇದನೆಗಾಗಿ ಸಮಯ ಕೊಟ್ಟಿದ್ದಾರೆ. ಪ್ರೇಮನಗರಿಯಲ್ಲಿ ಪ್ರೇಮಿಗಳ ಮನಸು ಅರಳಿದ್ದು, ಪ್ರೀತಿಯಲ್ಲಿ ಬಿದ್ದ ಖುಷಿಯೊಂದಿಗೆ ತವರಿಗೆ ಮರಳಿದ್ದಾರೆ.
ವಿಶ್ವದ ಸುಂದರ ನಗರಗಳಲ್ಲಿ ಪ್ಯಾರಿಸ್ ಕೂಡಾ ಒಂದು. ಫ್ರಾನ್ಸ್‌ನ ರಾಜಧಾನಿ 'ಪ್ರೇಮನಗರಿ' ಎಂದೇ ಫೇಮಸ್. ಪ್ರತಿನಿತ್ಯ ಈ ನಗರಕ್ಕೆ ಸಾವಿರಾರು ಪ್ರೇಮಿಗಳು ಭೇಟಿ ನೀಡುತ್ತಾರೆ. ಪ್ರೇಮನಿವೇದನೆ, ಡೇಟಿಂಗ್ ಇಲ್ಲಿ ಸಾಮಾನ್ಯ. ಈ ಬಾರಿ ಈ ಪ್ರೇಮನಗರಿಯಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದ ಸಂಭ್ರಮ ಕೂಡಾ ನಡೆದಿದ್ದು, ಪ್ರೀತಿಯಲ್ಲಿ ಬಿದ್ದಿರುವ ಜೋಡಿಹಕ್ಕಿಗಳಿಗೆ ಪರ್ವಕಾಲ ಸಿಕ್ಕಂತಾಗಿದೆ. ಜಾಗತಿಕ ಕ್ರೀಡಾಕೂಟದಲ್ಲಿ ಭಾಗಿಯಾದ ಕ್ರೀಡಾಳುಗಳು ಸೇರಿದಂತೆ, ಹಲವು ಪ್ರೇಮಿಗಳು ಈ ಸಂದರ್ಭದಲ್ಲಿ ತಮ್ಮ ಪ್ರೇಮನಿವೇದನೆಯನ್ನು ಪೂರ್ಣಗೊಳಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಮಧ್ಯೆ ಕ್ಯಾಮರಾದಲ್ಲಿ ದಾಖಲಾದ ಪ್ರೇಮನಿವೇದನೆಯ ಕ್ಷಣಗಳು ಇಲ್ಲಿವೆ ನೋಡಿ.
ಸಹಜವಾಗಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವು ಆಟದ ಹೊರತಾಗಿ, ಹಲವಾರು ಲವ್ ಪ್ರೋಪೋಸಲ್‌ಗಳಿಂದಾಗಿಯೂ ಹಲವರ ಸ್ಮೃತಿಪಟಲದಲ್ಲಿ ಚಿರವಾಗಿ ಉಳಿಯುತ್ತದೆ. ಅನೇಕ ಕ್ರೀಡಾಪಟುಗಳು ಕ್ರೀಡಾ ವೈಭವದ ನಡುವೆ ತಮ್ಮ ಜೊತೆಗಾರರಿಗೆ ಪ್ರಪೋಸ್ ಮಾಡಲು ಈ ಸುಂದರ ಕ್ಷಣವನ್ನು ಬಳಸಿಕೊಂಡಿದ್ದಾರೆ.
ಆಲಿಸ್ ಫಿನೋಟ್ ಮತ್ತು ಬ್ರೂನೋ ಮಾರ್ಟಿನೆಜ್
3000 ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಫ್ರೆಂಚ್ ಅಥ್ಲೀಟ್ ಆಲಿಸ್ ಫಿನೋಟ್ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ, ಅವರ ಈವೆಂಟ್ ನಡೆದ ಬಳಿಕ ಅವರು ಖುಷಿಖುಷಿಯಾಗಿದ್ದರು. ಯುರೋಪಿಯನ್ ದಾಖಲೆ ಮಾಡಿದ ಅವರು, ತಮ್ಮ ಬಾಯ್‌ಫ್ರೆಂಡ್ ಟ್ರಯಥ್ಲೀಟ್ ಬ್ರೂನೊ ಮಾರ್ಟಿನೆಜ್ ಬಾರ್ಗಿಲಾ ಅವರಿಗೆ ಪ್ರಪೋಸ್ ಮಾಡಿದ್ದಾರೆ. ಬಾರ್ಗಿಯೆಲಾ ಆ ಕ್ಷಣದಲ್ಲೇ ಪ್ರೇಮನಿವೇದನೆಯನ್ನು ಒಪ್ಪಿಕೊಂಡು, ಇಬ್ಬರೂ ಪರಸ್ಪರ ಅಪ್ಪಿಕೊಂಡಿದ್ದಾರೆ. ಈ ವೇಳೆ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಹರ್ಷೋದ್ಘಾರ ಮೊಳಗಿಸಿದ್ದಾರೆ.
"ನಾವು ಒಂಬತ್ತು ವರ್ಷಗಳಿಂದ ಒಟ್ಟಿಗೆ ಇದ್ದೇವೆ ಎಂದು ಫಿನೋಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹುವಾಂಗ್ ಯಾ ಕಿಯಾಂಗ್ ಮತ್ತು ಲಿಯು ಯುಚೆನ್
ಚೀನಾದ ಬ್ಯಾಡ್ಮಿಂಟನ್ ಆಟಗಾರ ಲಿಯು ಯುಚೆನ್, ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದ ತನ್ನ ಗೆಳತಿ ಮತ್ತು ಸಹ ಒಲಿಂಪಿಯನ್ ಹುವಾಂಗ್ ಯಾ ಕಿಯಾಂಗ್‌ಗೆ ಪ್ರಪೋಸ್ ಮಾಡಿದ್ದಾರೆ. ಲಾ ಚಾಪೆಲ್ ಅರೆನಾ ಮೈದಾನದಲ್ಲಿ, ಯುಚೆನ್ ಮಂಡಿಯೂರಿ ಕಿಯಾಂಗ್‌ಗೆ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾರೆ. ತನ್ನ ವಿಜಯದ ಜೊತೆಗೆ ಹುವಾಂಗ್ ಪ್ರಿಯಕರನ ಜೊತೆಯಾದ ಖುಷಿಯನ್ನೂ ಅನುಭವಿಸಿದರು.
"ನನಗೆ, ಈ ಪ್ರಪೋಸಲ್ ತುಂಬಾ ಆಶ್ಚರ್ಯಕರವಾಗಿದೆ. ಏಕೆಂದರೆ ನಾನು ಆಟಕ್ಕಾಗಿ ತಯಾರಿ ನಡೆಸುತ್ತಿದ್ದೇನೆ" ಎಂದು ಆಟಗಾರ್ತಿ ಸುದ್ದಿಗಾರರಿಗೆ ತಿಳಿಸಿದರು. "ಇಂದು ನಾನು ಒಲಿಂಪಿಕ್ ಚಾಂಪಿಯನ್ ಆಗಿದ್ದೇನೆ. ಇದರ ಜೊತೆಗೆ ಪ್ರಪೋಸ್ ಕೂಡಾ ಬಂದಿದೆ. ಇವೆರಡನ್ನೂ ನಾನು ನಿರೀಕ್ಷಿಸಿರಲಿಲ್ಲ" ಎಂದು ಅವರು ಹೇಳಿದ್ದಾರೆ.
ಜಸ್ಟಿನ್ ಬೆಸ್ಟ್ ಮತ್ತು ಲೈನಿ ಡಂಕನ್
ಅಮೇರಿಕದ ರೋವರ್ ಜಸ್ಟಿನ್ ಬೆಸ್ಟ್, ಸಾರ್ವಜನಿಕವಾಗಿ ತಮ್ಮ ಪ್ರೇಯಸಿಗೆ ಪ್ರಪೋಸ್ ಮಾಡಿದ್ದಾರೆ. ಒಂಬತ್ತು ವರ್ಷಗಳಿಂದ ಪ್ರೀತಿಸುತ್ತಿರುವ ಗೆಳತಿ ಲೈನಿ ಡಂಕನ್ ಅವರಿಗೆ ಟಿವಿ ಶೋನಲ್ಲಿ ಲೈವ್‌ನಲ್ಲಿ ಪ್ರಪೋಸ್ ಮಾಡಿದ್ದಾರೆ. ಬೆಸ್ಟ್ ಅವರು 60 ವರ್ಷಗಳಲ್ಲಿ ರೋಯಿಂಗ್‌ನಲ್ಲಿ ಯುಎಸ್ಎಗೆ ಮೊದಲ ಚಿನ್ನವನ್ನು ಗೆದ್ದಿರು. ಆಗಸ್ಟ್ 5ರಂದು, ಬರೋಬ್ಬರಿ 2,738 ಹಳದಿ ಗುಲಾಬಿಗಳನ್ನು ಹಿಡಿದಿರುವ ಕುಟುಂಬ ಸದಸ್ಯರೊಂದಿಗೆ ಡಂಕನ್‌ಗೆ ಪ್ರಪೋಸ್ ಮಾಡಿದ್ದಾರೆ. ಈ ಸಂಖ್ಯೆಯು ಅವರ ಸ್ನ್ಯಾಪ್‌ಚಾಟ್ ಸ್ಟ್ರೀಕ್ ಇರುವ ದಿನಗಳನ್ನು ಸಂಕೇತಿಸುತ್ತದೆ.
ಪಾಬ್ಲೊ ಸಿಮೊನೆಟ್ ಮತ್ತು ಮಾರಿಯಾ ಕ್ಯಾಂಪೊಯ್
ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಅರ್ಜೆಂಟೀನಾದ ಪುರುಷರ ಹ್ಯಾಂಡ್ಬಾಲ್ ತಂಡದ ಆಟಗಾರ ಪಾಬ್ಲೊ ಸಿಮೊನೆಟ್, ಮಹಿಳಾ ಹಾಕಿ ತಂಡದ ಆಟಗಾರ್ತಿ ಮಾರಿಯಾ ಕ್ಯಾಂಪೊಯ್ ಅವರಿಗೆ ಪ್ರಪೋಸ್ ಮಾಡಿದರು. ಎರಡು ತಂಡಗಳು ಗ್ರೂಪ್ ಫೋಟೋಗಾಗಿ ಒಟ್ಟುಗೂಡಿದ್ದ ಸಮಯದಲ್ಲಿ ಸಿಮೊನೆಟ್ ಈ ಪ್ರಸ್ತಾಪ ಮಾಡಿದ್ದಾರೆ. ಆ ಕ್ಷಣವೇ ಕ್ಯಾಂಪೊಯ್ ಒಪ್ಪಿಕೊಂಡಿದ್ದಾರೆ.
"ನನ್ನ ಜೀವನದಲ್ಲಿ ಹುಡುಗಿ ನನಗೆ 'ಹೌದು' ಎಂದು ಹೇಳಿದ್ದಾರೆ" ಎಂದು ಸಿಮೊನೆಟ್ ಸ್ಪ್ಯಾನಿಷ್ ಭಾಷೆಯಲ್ಲಿ ಬರೆದುಕೊಂಡಿದ್ದಾರೆ.
ಪೇಟನ್ ಒಟ್ಟರ್ಡಾಲ್ ಮತ್ತು ಮ್ಯಾಡಿ ನಿಲ್ಲೆಸ್
ಅಮೆರಿಕದ ಶಾಟ್ ಪುಟ್ ಆಟಗಾರ ಪೇಟನ್ ಒಟ್ಟರ್ಡಾಲ್, ಪ್ಯಾರಿಸ್‌ನ ಐತಿಹಾಸಿಕ ಐಫೆಲ್ ಟವರ್ ಕೆಳಗೆ ತನ್ನ ಗೆಳತಿ ಮ್ಯಾಡಿ ನಿಲ್ಲೆಸ್‌ಗೆ ಪ್ರಪೋಸ್ ಮಾಡಿದರು. ಇದನ್ನು ಒಟ್ಟರ್ಡಾಲ್ ತನ್ನ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಲ್ಲಿ ಹಂಚಿಕೊಂಡಿದ್ದಾರೆ.
ಜುಲೈ 26ರಂದು ಆರಂಭವಾದ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆಗಸ್ಟ್ 11ರಂದು ಅದ್ಧುರಿ ತೆರೆ ಬಿದ್ದಿದೆ.ಭಾರತವು ಒಟ್ಟು 6 ಪದಕಗಳೊಂದಿಗೆ ತವರಿಗೆ ಮರಳಿದೆ. ಯುಎಸ್‌ಎ ಅತಿ ಹೆಚ್ಚು ಪದಕಗಳೊಂದಿಗೆ ಮೊದಲ ಸ್ಥಾನ ಪಡೆಯಿತು.
ಒಲಿಂಪಿಕ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಒದಿ | ಮನು ಭಾಕರ್ ಮತ್ತು ತಾಯಿ ಭೇಟಿಯಾದ ನೀರಜ್ ಚೋಪ್ರಾ; ಇಂಟರ್ನೆಟ್ನಲ್ಲಿ ಧೂಳೆಬ್ಬಿಸಿದ ವಿಡಿಯೋ, ನೆಟ್ಟಿಗರ ತುಂಟ ಪ್ರಶ್ನೆ