ಪ್ಯಾರಿಸ್ ಒಲಿಂಪಿಕ್ಸ್: ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು, ಲಕ್ಷ್ಯ ಕಣಕ್ಕೆ; ಭಾರತದ ಜುಲೈ 31ರ ಸಂಪೂರ್ಣ ವೇಳಾಪಟ್ಟಿ ಹೀಗಿದೆ
Jul 31, 2024 05:08 AM IST
ಪ್ಯಾರಿಸ್ ಒಲಿಂಪಿಕ್ಸ್: ಭಾರತದ ಜುಲೈ 31ರ ಸಂಪೂರ್ಣ ವೇಳಾಪಟ್ಟಿ ಹೀಗಿದೆ
- ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜುಲೈ 31ರ ಬುಧವಾರ ಭಾರತದ ಆಟಗಾರರು ಯಾವುದೇ ಪದಕ ಸುತ್ತಿನಲ್ಲಿ ಆಡುತ್ತಿಲ್ಲ. ಆದರೆ ಭಾರತೀಯ ಕ್ರೀಡಾಪಟುಗಳು ಕೆಲವು ಪ್ರಮುಖ ಈವೆಂಟ್‌ಗಳಲ್ಲಿ ಭಾಗವಹಿಸಲಿದ್ದಾರೆ. ಪಿವಿ ಸಿಂಧು, ಲಕ್ಷ್ಯ ಸೇನ್, ದೀಪಿಕಾ ಕುಮಾರಿ, ಶ್ರೀಜಾ ಅಕುಲಾ, ಲೊವ್ಲಿನಾ ಬೊರ್ಗೊಹೈನ್ ಇಂದು ಆಡಲಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತ ಈವರೆಗೆ 2 ಪದಕಗಳನ್ನು ಮಾತ್ರ ಗೆದ್ದಿದೆ. ದೇಶಕ್ಕೆ ಮೊದಲ ಪದಕ ಗೆದ್ದಿದ್ದ ಮನು ಭಾಕರ್, ಮತ್ತೊಮ್ಮೆ ಮಂಗಳವಾರ ಎರಡನೇ ಪದಕವನ್ನು ಗೆದ್ದು ಬೀಗಿದರು. 10 ಮೀಟರ್ ಮಿಶ್ರ ತಂಡ ಪಿಸ್ತೂಲ್ ಈವೆಂಟ್‌ನಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ದಕ್ಷಿಣ ಕೊರಿಯಾವನ್ನು ಸೋಲಿಸಿ ಕಂಚಿನ ಪದಕವನ್ನು ಗೆದ್ದರು. ಇದರೊಂದಿಗೆ ಭಾರತ ಶೂಟಿಂಗ್‌ನಲ್ಲೇ ಎರಡು ಪದಕಗಳನ್ನು ಗೆದ್ದಂತಾಗಿದೆ. ಇದೀಗ ಜುಲೈ 31ರ ಬುಧವಾರವು ಐದನೇ ದಿನದ ಕ್ರೀಡೆಗಳು ನಡೆಯುತ್ತಿವೆ. ಈ ದಿನ ಭಾರತದ ಆಟಗಾರರು ಯಾವೆಲ್ಲಾ ಕ್ರೀಡೆಗಳಲ್ಲಿ ಪಾಲ್ಕೊಗಳ್ಳಲಿದ್ದಾರೆ ಎಂಬುದನ್ನು ನೋಡೋಣ.
ಜುಲೈ 31ರ ಬುಧವಾರ ಯಾವುದೇ ಪದಕ ಸುತ್ತು ನಡೆಯುತ್ತಿಲ್ಲ. ಆದರೆ ಭಾರತೀಯ ಕ್ರೀಡಾಪಟುಗಳು ಹಲವು ಈವೆಂಟ್‌ಗಳಲ್ಲಿ ಭಾಗವಹಿಸಿ ಪದಕ ಸುತ್ತಿಗೆ ಲಗ್ಗೆ ಇಡುವ ಅವಕಾಶ ಪಡೆಯಲಿದ್ದಾರೆ. ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಇಂದು ಮತ್ತೆ ಅಖಾಡಕ್ಕೆ ಧುಮುಕಲಿದ್ದಾರೆ. ಇದೇ ವೇಳೆ ಬ್ಯಾಡ್ಮಿಂಟನ್ ಸ್ಟಾರ್ ಲಕ್ಷ್ಯ ಸೇನ್ ಕೂಡಾ ಆಡಲಿದ್ದಾರೆ.
ಜುಲೈ 31ರ ಬುಧವಾರ ದಿನ ಭಾರತದ ವೇಳಾಪಟ್ಟಿ ಹೀಗಿದೆ
ಮಧ್ಯಾಹ್ನ 12:30: ಶೂಟಿಂಗ್ -ಪುರುಷರ 50 ಮೀಟರ್ ರೈಫಲ್ ಅರ್ಹತಾ ಸುತ್ತಿನಲ್ಲಿ ಭಾರತದ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು ಸ್ವಪ್ನಿಲ್ ಕುಸಾಲೆ.
ಮಧ್ಯಾಹ್ನ 12:30: ಶೂಟಿಂಗ್ - ಮಹಿಳೆಯರ ಟ್ರ್ಯಾಪ್ ಅರ್ಹತೆಯ 2ನೇ ದಿನದಲ್ಲಿ ಶ್ರೇಯಸಿ ಸಿಂಗ್ ಮತ್ತು ರಾಜೇಶ್ವರಿ ಕುಮಾರಿ.
ಮಧ್ಯಾಹ್ನ 12:50ರ ನಂತರ: ಬ್ಯಾಡ್ಮಿಂಟನ್ - ಮಹಿಳೆಯರ ಸಿಂಗಲ್ಸ್ ಗುಂಪು ಹಂತದ ಪಂದ್ಯದಲ್ಲಿ ಪಿವಿ ಸಿಂಧು vs ಕ್ರಿಸ್ಟಿನ್ ಕುಬಾ (ಎಸ್ಟೋನಿಯಾ). ಇಲ್ಲಿ ಗೆಲುವು ಸಾಧಿಸಿದರೆ ಸಿಂಧು ನಾಕೌಟ್ ಅರ್ಹತೆ ಪಡೆಯುತ್ತಾರೆ.
ಮಧ್ಯಾಹ್ನ 1:30 : ಈಕ್ವೆಸ್ಟ್ರಿಯನ್ - ಅನುಷ್ ಅಗರ್‌ವಾಲಾ ಮತ್ತು ಸರ್ ಕ್ಯಾರಮೆಲ್ಲೊ, ಡ್ರೆಸ್ಸೇಜ್ ವೈಯಕ್ತಿಕ ಗ್ರ್ಯಾಂಡ್ ಪ್ರಿಕ್ಸ್ 2ನೇ ದಿನದಲ್ಲಿ ಆಡಲಿದ್ದಾರೆ.
ಮಧ್ಯಾಹ್ನ 1:40ರ ನಂತರ: ಬ್ಯಾಡ್ಮಿಂಟನ್ - ಪುರುಷರ ಸಿಂಗಲ್ಸ್ ಗುಂಪು ಹಂತದ ಪಂದ್ಯದಲ್ಲಿ ಲಕ್ಷ್ಯ ಸೇನ್ ವಿರುದ್ಧ ಜೊನಾಟನ್ ಕ್ರಿಸ್ಟಿ.
ಮಧ್ಯಾಹ್ನ 2:30; ಟೇಬಲ್ ಟೆನಿಸ್ - ಮಹಿಳೆಯರ ಸಿಂಗಲ್ಸ್ ರೌಂಡ್ ಆಫ್ 32ರಲ್ಲಿ ಶ್ರೀಜಾ ಅಕುಲಾ vs ಝೆಂಗ್ ಜಿಯಾನ್. (ಸೋಮವಾರ ನಡೆದ ಪಂದ್ಯದಲ್ಲಿ ಮಣಿಕಾ ಬಾತ್ರಾ ಒಲಿಂಪಿಕ್ಸ್‌ನಲ್ಲಿ 16ರ ಸುತ್ತು ತಲುಪಿದ ಮೊದಲ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಎನಿಸಿಕೊಂಡರು. ಇದೀಗ ಶ್ರೀಜಾ ಗೆದ್ದರೆ ಇದೇ ಸಾಧನೆ ಮಾಡಿದಂತಾಗುತ್ತದೆ.)
ಮಧ್ಯಾಹ್ನ 3:34: ಬಾಕ್ಸಿಂಗ್ - ಮಹಿಳೆಯರ 75 ಕೆಜಿ ವಿಭಾಗದ 16ರ ಸುತ್ತಿನಲ್ಲಿ ನಾರ್ವೆಯ ಸುನ್ನಿವಾ ಹಾಫ್‌ಸ್ಟಾಡ್ ವಿರುದ್ಧ ಲೊವ್ಲಿನಾ ಬೊರ್ಗೊಹೈನ್.
ಮಧ್ಯಾಹ್ನ 3:56: ಆರ್ಚರಿ - ಮಹಿಳೆಯರ ವೈಯಕ್ತಿಕ ವಿಭಾಗದ 64ರ ಸುತ್ತಿನಲ್ಲಿ ಭಾರತದ ದೀಪಿಕಾ ಕುಮಾರಿ vs ರೀನಾ ಪರ್ನಾಟ್.
ಸಂಜೆ 7: ಶೂಟಿಂಗ್ - ಮಹಿಳೆಯರ ಟ್ರ್ಯಾಪ್ ಫೈನಲ್. ಶ್ರೇಯಸಿ ಅಥವಾ ರಾಜೇಶ್ವರಿ ಅರ್ಹತೆ ಪಡೆದರೆ ಒಲಿಂಪಿಕ್ ಪದಕ ಗೆಲ್ಲಲು ಅವಕಾಶ ಸಿಗಲಿದೆ.
ರಾತ್ರಿ 9:15: ಆರ್ಚರಿ - ಪುರುಷರ ವೈಯಕ್ತಿಕ 64ರ ಸುತ್ತಿನಲ್ಲಿ ತರುಣ್‌ದೀಪ್ ರೈ ವಿರುದ್ಧ ಟಾಮ್ ಹಾಲ್.
ರಾತ್ರಿ 11: ಬ್ಯಾಡ್ಮಿಂಟನ್ - ಪುರುಷರ ಸಿಂಗಲ್ಸ್ ಗುಂಪು ಹಂತದಲ್ಲಿ ಎಚ್‌ಎಸ್ ಪ್ರಣಯ್ vs ಡಕ್ ಫಟ್ ಲೆ. ಇಲ್ಲಿ ಗೆದ್ದರೆ ಪ್ರಣಯ್ 16ರ ಸುತ್ತಿಗೆ ಪ್ರವೇಶಿಸಲಿದ್ದಾರೆ. ಪ್ರಣಯ್ ಮತ್ತು ಲಕ್ಷ್ಯ ಇಬ್ಬರೂ ತಮ್ಮ ಪಂದ್ಯಗಳನ್ನು ಗೆದ್ದರೆ, ಅವರು ಮೊದಲ ನಾಕೌಟ್ ಸುತ್ತಿನಲ್ಲಿ ಪರಸ್ಪರ ಎದುರಾಗಲಿದ್ದಾರೆ.
ತಡರಾತ್ರಿ 12:18 ಗಂಟೆ: ಬಾಕ್ಸಿಂಗ್ - ಪುರುಷರ 71 ಕೆಜಿ 16ರ ಸುತ್ತಿನಲ್ಲಿ ನಿಶಾಂತ್ ದೇವ್ ವಿರುದ್ಧ ಜೋಸ್ ಗೇಬ್ರಿಯಲ್ ರೋಡ್ರಿಗಸ್ ಟೆನೊರಿಯೊ.