ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದ ಸರಬ್ಜೋತ್ ಸಿಂಗ್ ಯಾರು? ರೈತನ ಮಗ ಫುಟ್ಬಾಲ್‌ನಿಂದ ಶೂಟಿಂಗ್‌ನತ್ತ ವಾಲಿದ್ದೇ ರೋಚಕ
ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಮನು ಭಾಕರ್ ಅವರೊಂದಿಗೆ ಭಾರತಕ್ಕೆ ಎರಡನೇ ಪದಕ ಗೆದ್ದ 22 ವರ್ಷದ ಸರಬ್ಜೋತ್ ಸಿಂಗ್ ಕುರಿತು ನಿಮಗೆ ತಿಳಿದಿರಬೇಕಾದ ಮಾಹಿತಿ ಇಲ್ಲಿದೆ. ರೈತನ ಮಗನಿಗೆ ಶೂಟಿಂಗ್‌ನತ್ತ ಆಸಕ್ತಿ ಬೆಳೆದ ಆಸಕ್ತಿದಾಯಕ ಸ್ಟೋರಿ ಇದು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪಾಲಿಗೆ ಮನು ಭಾಕರ್ ಪದಕಗಳ ಬೆಡಗಿಯಾಗಿ ಹೊರಹೊಮ್ಮಿದ್ದಾರೆ. ವನಿತೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಬೆನ್ನಲ್ಲೇ ಅವರು, ಮಿಶ್ರ ತಂಡ ವಿಭಾಗದಲ್ಲೂ ಕಂಚಿಗೆ ಕೊರಳೊಡ್ಡಿದ್ದಾರೆ. ಇವರೊಂದಿಗೆ ಜೊತೆಯಾಗಿ ಶೂಟ್ ಮಾಡಿದವರು ಸರಬ್ಜೋತ್ ಸಿಂಗ್. ಈಗಾಗಲೇ ಒಂದು ದಿನದ ಹಿಂದೆಯೇ ಮನು ಭಾಕರ್ ದೇಶದೆಲ್ಲೆಡೆ ಪರಿಚಿತರಾಗಿದ್ದಾರೆ. ಅವರೊಂದಿಗೆ ಈಗ ಸರಬ್ಜೋತ್ ಕೂಡಾ ಪದಕ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಭಾರತವು ಒಲಿಂಪಿಕ್ ಇತಿಹಾಸದಲ್ಲಿ ಶೂಟಿಂಗ್‌ನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಈ ಸಾಧನೆಗೆ ಕಾರಣರಾದ ಸರಬ್ಜೋತ್ ಅವರ ಬಗ್ಗೆ ತಿಳಿಯೋಣ.
ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರ ಜೋಡಿಯು 10 ಮೀಟರ್ ಏರ್ ಪಿಸ್ತೂಲ್ ವಿಭಾಗದ ಕಂಚಿನ ಪದಕ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾ ಜೋಡಿಯನ್ನು 16-10 ಅಂತರದಿಂದ ಮಣಿಸುವುದರೊಂದಿಗೆ ಕಂಚಿನ ಪದಕ ಸಾಧನೆ ಮಾಡಿದ್ದಾರೆ. ಹಾಗಿದ್ದರೆ ಈ ಸರಬ್ಜೋತ್ ಸಿಂಗ್ ಯಾರು? ಅವರ ಸಾಧನೆ ಏನು ಎಂಬುದನ್ನು ನೋಡೋಣ.
ರೈತನ ಮಗ
ಭಾರತದ ಅತ್ಯುತ್ತಮ ಶೂಟರ್‌ಗಳಲ್ಲಿ ಒಬ್ಬರಾಗಿರುವ 22 ವರ್ಷ ವಯಸ್ಸಿನ ಸರಬ್ಜೋತ್ ಸಿಂಗ್, ಹರಿಯಾಣದ ಅಂಬಾಲಾ ಜಿಲ್ಲೆಯ ಧೀನ್ ಗ್ರಾಮದ ರೈತ ಕುಟುಂಬದವರು. ಕೃಷಿಯನ್ನೇ ನೆಚ್ಚಿಕೊಂಡಿರುವ ರೈತ ಜತೀಂದರ್ ಸಿಂಗ್ ಮತ್ತು ಗೃಹಿಣಿಯಾಗಿರುವ ಹರ್ದೀಪ್ ಕೌರ್ ಅವರ ಪುತ್ರ ಸರಬ್ಜೋತ್, ಚಂಡೀಗಢದ ಡಿಎವಿ ಕಾಲೇಜಿನಲ್ಲಿ ಅಧ್ಯಯನ ಪೂರ್ಣಗೊಳಿಸಿದ್ದಾರೆ. ಅಂಬಾಲಾದ ಎಆರ್ ಶೂಟಿಂಗ್ ಅಕಾಡೆಮಿಯಲ್ಲಿ ಅಭಿಷೇಕ್ ರಾಣಾ ಅವರ ತರಬೇತಿಯೊಂದಿಗೆ ಶೂಟಿಂಗ್‌ನಲ್ಲಿ ಆಸಕ್ತಿ ಬೆಳೆಸಿಕೊಂಡರು.
ಫುಟ್ಬಾಲ್‌ನಿಂದ ಶೂಟಿಂಗ್‌ನತ್ತ ಆಸಕ್ತಿ
ಆರಂಭದಲ್ಲಿ ಫುಟ್ಬಾಲ್ ಆಟದತ್ತ ಆಸಕ್ತಿ ಬೆಳೆಸಿಕೊಂಡಿದ್ದ ಸರಬ್ಜೋತ್, ಆ ಬಳಿಕ ಬೇಸಿಗೆ ಶಿಬಿರವೊಂದಲ್ಲಿ ಮಕ್ಕಳು ಪಿಸ್ತೂಲ್‌ಗಳಿಂದ ಕಾಗದವನ್ನು ಗುರಿಯಾಗಿಸಿ ಶೂಟ್ ಮಾಡುತ್ತಿರುವುದನ್ನು ಗಮನಿಸಿದ ಬಳಿಕ, ಅವರ ಆಸಕ್ತಿ ಶೂಟಿಂಗ್‌ನತ್ತ ವಾಲಿತು. ಶೂಟಿಂಗ್ ಕಲಿಕೆಗೆ ಹೆಚ್ಚು ವೆಚ್ಚವಾಗುವ ಕಾರಣದಿಂದಾಗಿ ಕೃಷಿಕನಾಗಿರುವ ತಂದೆ ಆರಂಭದಲ್ಲಿ ಮಗನ ನಿರ್ಧಾರಕ್ಕೆ ಸಮ್ಮತಿ ಸೂಚಿಸಲು ಹಿಂಜರಿದರು. ಆದರೆ, ಅಷ್ಟಕ್ಕೆ ಸರಬ್ಜೋತ್ ತಮ್ಮ ಹಠ ಬಿಡಲಿಲ್ಲ. ಶೂಟಿಂಗ್ ಅನ್ನೇ ವೃತ್ತಿಯಾಗಿ ಮುಂದುವರಿಸುವ ಗಟ್ಟಿ ಸಂಕಲ್ಪ ಮಾಡಿದ್ದ ಅವರು, ಸತತ ಪ್ರಯತ್ನಗಳ ಬಳಿಕ ತಮ್ಮ ಹೆತ್ತವರ ಮನವೊಲಿಸುವಲ್ಲಿ ಯಶಸ್ವಿಯಾದರು. ಅದಕ್ಕೆ ಸರಿಯಾಗಿ ಹಂತಹಂತವಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಂಡು ಬಂದರು.
ಪದಕಕ್ಕೆ ಗುರಿಯಿಟ್ಟು ಶೂಟಿಂಗ್
2019ರಲ್ಲಿ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಚಿನ್ನದ ಪದಕ ಗೆದ್ದ ಸರಬ್ಜೋತ್, 2023ರಲ್ಲಿ ಏಷ್ಯನ್ ಗೇಮ್ಸ್ ಟೀಮ್ ಈವೆಂಟ್‌ನಲ್ಲಿ ಚಿನ್ನ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದರು. 2023ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ವೈಯಕ್ತಿಕ ಕಂಚಿನ ಪದಕ ಗೆದ್ದರು. ಅದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ತಮ್ಮ ಸ್ಥಾನ ಖಚಿತಪಡಿಸಿದರು.
ಆರಂಭದಲ್ಲಿ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಗೆದ್ದ ನಂತರ, 2016ರಿಂದ ಕೋಚ್ ಅಭಿಷೇಕ್ ರಾಣಾ ಅವರ ಗರಡಿಯಲ್ಲಿ ವೃತ್ತಿಪರ ತರಬೇತಿ ಪಡೆಯಲು ಆರಂಭಿಸಿದರು. 2022ರ ಡಿಸೆಂಬರ್‌ನಲ್ಲಿ ಭೋಪಾಲ್‌ನಲ್ಲಿ ನಡೆದ ಮಧ್ಯಪ್ರದೇಶ ರಾಜ್ಯ ಶೂಟಿಂಗ್ ಅಕಾಡೆಮಿ ಆಫ್ ಎಕ್ಸಲೆನ್ಸ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಜಯಗಳಿಸುವ ಮೂಲಕ ಮತ್ತೆ ಮಿಂಚಿದರು. ಆ ಬಳಿಕ 2022ರ ಡಿಸೆಂಬರ್‌ನಲ್ಲಿ ನಡೆದ 65ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡರು.
2021ರ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತಂಡ ಮತ್ತು ಮಿಶ್ರ ತಂಡ ಸ್ಪರ್ಧೆಗಳಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು. 2023ರ ಮಾರ್ಚ್‌ನಲ್ಲಿ ನಡೆದ ವಿಶ್ವಕಪ್‌ನ ಮೊದಲ ಫೈನಲ್ ಪಂದ್ಯದಲ್ಲಿ ಭಾರಿ ಅಂತರದೊಂದಿಗೆ ಮತ್ತೊಮ್ಮೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಸ್ಪರ್ಧೆಯುದ್ದಕ್ಕೂ ಅವರು 585 ಅಂಕಗಳೊಂದಿಗೆ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದರು. ಇಂದು ತಮ್ಮ ಕನಸಿನಂತೆ ಒಲಿಂಪಿಕ್ಸ್ ಪದಕವನ್ನು ಗೆದ್ದಿದ್ದಾರೆ. ಪ್ರತಿಯೊಬ್ಬ ಆಟಗಾರನಿಗೆ ಒಲಿಂಪಿಕ್ಸ್‌ನಲ್ಲಿ ಆಡುವುದು ಅತಿ ದೊಡ್ಡ ಸಾಧನೆ. ಅಲ್ಲಿ ಪದಕ ಗಳಿಸುವುದೆಂದರೆ ಹೆಮ್ಮೆಯ ಕ್ಷಣ. ಅದನ್ನು ಇವರು ಸಾಧಿಸಿದ್ದಾರೆ.
ಇನ್ನಷ್ಟು ಒಲಿಂಪಿಕ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 2ನೇ ಪದಕ ಗೆದ್ದ ಮನು ಭಾಕರ್; ಶೂಟಿಂಗ್‌ನಲ್ಲಿ ಸರಬ್ಜೋತ್ ಸಿಂಗ್ ಜೊತೆಗೆ ಕಂಚಿನ ಪದಕ