logo
ಕನ್ನಡ ಸುದ್ದಿ  /  ಕ್ರೀಡೆ  /  ಮಂಗಳೂರು ಮಂಗಳಾ ಸ್ಟೇಡಿಯಂನಿಂದ ಪ್ಯಾರಿಸ್‌ವರೆಗೆ; ಒಲಿಂಪಿಕ್ಸ್‌ ಪದಕದ ನಿರೀಕ್ಷೆಯಲ್ಲಿ ಕರ್ನಾಟಕದ ಕುವರ ಮೀಜೋ ಚಾಕೋ ಕುರಿಯನ್

ಮಂಗಳೂರು ಮಂಗಳಾ ಸ್ಟೇಡಿಯಂನಿಂದ ಪ್ಯಾರಿಸ್‌ವರೆಗೆ; ಒಲಿಂಪಿಕ್ಸ್‌ ಪದಕದ ನಿರೀಕ್ಷೆಯಲ್ಲಿ ಕರ್ನಾಟಕದ ಕುವರ ಮೀಜೋ ಚಾಕೋ ಕುರಿಯನ್

Jayaraj HT Kannada

Jul 25, 2024 07:50 AM IST

google News

ಒಲಿಂಪಿಕ್ಸ್‌ ಪದಕದ ನಿರೀಕ್ಷೆಯಲ್ಲಿ ಕರ್ನಾಟಕದ ಕುವರ ಮೀಜೋ ಚಾಕೋ ಕುರಿಯನ್

    • ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳ ಪೈಕಿ 9 ಮಂದಿ ಕನ್ನಡಿಗರು. ಅವರಲ್ಲಿ ಇಬ್ಬರು ಕರಾವಳಿ ನಗರಿ ಮಂಗಳೂರಿನವರು. ಮೀಜೋ ಚಾಕೋ ಕುರಿಯನ್ ಹುಟ್ಟಿದ್ದು ಕೇರಳದಲ್ಲಿ. ಆದರೆ ಬೆಳೆದಿದ್ದು, ಅಥ್ಲೆಟಿಕ್ಸ್‌ನತ್ತ ಆಕರ್ಷಿತರಾಗಿದ್ದು ಮಂಗಳೂರಲ್ಲೇ. ಭಾರತದ ಒಲಿಂಪಿಕ್ಸ್‌ ಅಭಿಯಾನ ಆರಂಭಕ್ಕೂ ಮುನ್ನ ಅವರ ಕಿರು ಪರಿಚಯ ನೋಡೋಣ.
ಒಲಿಂಪಿಕ್ಸ್‌ ಪದಕದ ನಿರೀಕ್ಷೆಯಲ್ಲಿ ಕರ್ನಾಟಕದ ಕುವರ ಮೀಜೋ ಚಾಕೋ ಕುರಿಯನ್
ಒಲಿಂಪಿಕ್ಸ್‌ ಪದಕದ ನಿರೀಕ್ಷೆಯಲ್ಲಿ ಕರ್ನಾಟಕದ ಕುವರ ಮೀಜೋ ಚಾಕೋ ಕುರಿಯನ್ (Instagram)

ಕೆಲವು ವರ್ಷಗಳ ಹಿಂದೆ ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಅಥ್ಲೆಟಿಕ್ಸ್‌ ಅಭ್ಯಾಸ ಮಾಡುತ್ತಿದ್ದ ಮೀಜೋ ಚಾಕೋ ಕುರಿಯನ್ (Mijo Chacko Kurian), ಇದೀಗ ಪ್ಯಾರಿಸ್‌ ಕ್ರೀಡಾಗ್ರಾಮದಲ್ಲಿದ್ದಾರೆ. ತಮ್ಮ ಈವೆಂಟ್‌ ದಿನಕ್ಕಾಗಿ ಕಾತರದಿಂದ ಕಾಯುತ್ತಿರುವ ಕರ್ನಾಟಕದ ಕರಾವಳಿ ಕುವರ, ತಮ್ಮ ತಂಡದೊಂದಿಗೆ ಬಂಗಾರ ಗೆಲ್ಲುವ ಹಂಬಲದಲ್ಲಿದ್ದಾರೆ. ಕಳೆದ ವರ್ಷ ಚೀನಾದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ 4x400 ಮೀಟರ್‌ ರಿಲೇಯಲ್ಲಿ ಬಂಗಾರ ಗೆದ್ದ ಭಾರತ ಪುರುಷರ ತಂಡದ ಸದಸ್ಯನಾಗಿದ್ದ ಕುರಿಯನ್, ಈ ಬಾರಿ ಒಲಿಂಪಿಕ್ಸ್‌ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಕುರಿಯನ್‌ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

“ಏಷ್ಯನ್‌ ಗೇಮ್ಸ್‌ನಲ್ಲಿ ನಮ್ಮ ಈವೆಂಟ್‌ ಇದ್ದ ಹಿಂದಿನ ರಾತ್ರಿಯಿಡೀ ನಿದ್ದೆಯೇ ಬರಲಿಲ್ಲ” ಎಂದಿದ್ದ ಕುರಿಯನ್‌, ಈ ಬಾರಿಯೂ ತಮ್ಮ ಈವೆಂಟ್‌ಗಾಗಿ ಕಾಯುತ್ತಿದ್ದಾರೆ. ಹೆಸರು ಕೇಳುವಾಗ ಈತ ಕೇರಳದ ಅಥ್ಲೀಟ್‌ ಎಂದು ನೀವಂದುಕೊಳ್ಳಬಹುದು. ಆದರೆ, ಕುರಿಯನ್‌ ನಮ್ಮ ಕರ್ನಾಟಕದವರು. ಬಾಲ್ಯದಿಂದಲೂ ಕರ್ನಾಟಕದಲ್ಲೇ ಬೆಳೆದ ಅವರು, ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ.

ಕೇರಳದಿಂದ ಕರ್ನಾಟಕ ಕರಾವಳಿಗೆ

ಮೀಜೋ ಚಾಕೋ ಕುರಿಯನ್ ಹುಟ್ಟಿದ್ದು ಕೇರಳದಲ್ಲಿ. ಆದರೆ, 2 ವರ್ಷದವರಿದ್ದಾಗಲೇ ಅವರ ಕುಟುಂಬ ಕರ್ನಾಟಕದ ಕರಾವಳಿ ನಗರಿ ಮಂಗಳೂರಿಗೆ ಬಂದು ನೆಲೆಯೂರಿತು. ಪಣಂಬೂರಿನಲ್ಲಿ ಬೆಳೆದ ಅವರು ಓದಿದ್ದು ಕೂಡಾ ಬಂದರು ನಗರಿಯಲ್ಲೇ. ಉರ್ವದ ಸೇಂಟ್ ಅಲೋಶಿಯಸ್‌ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಳಿಕ, ಶಾರದಾ ವಿದ್ಯಾಲಯದಲ್ಲಿ ಪಿಯು ವ್ಯಾಸಂಗ ಮಾಡಿದರು. ಅದಾಗಲೇ ಅಥ್ಲೆಟಿಕ್ಸ್‌ನತ್ತ ಒಲವು ತೋರಿದರು.

ಏರ್‌ಫೋರ್ಸ್‌ನಲ್ಲಿ ಉದ್ಯೋಗ

2014-15ರ ಸಮಯದಲ್ಲಿ ಪಿಯುಸಿ ಓದುತ್ತಿದ್ದಾಗ ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ತರಬೇತಿ ಪಡೆಯಲು ಆರಂಭಿಸಿದ ಕುರಿಯನ್‌, ಆ ಬಳಿಕ ಒಂದೊಂದೇ ಹಂತ ಮೇಲೆ ಬಂದರು. ಆರಂಭದಲ್ಲಿ ಕುರಿಯನ್‌ಗೆ ತರಬೇತಿ ನೀಡಿದ್ದೇ, ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್‌ ಕೋಚ್‌ ದಿನೇಶ್‌ ಕುಂದರ್‌. ಒಂದು ಹಂತದಲ್ಲಿ ವಿದ್ಯಾಭ್ಯಾಸದತ್ತ ಗಮನಹರಿಸುವ ನಿರ್ಧಾರ ಮಾಡಿದ ಅವರು ಎಂಜಿನಿಯರಿಂಗ್ ಸೇರಿಕೊಂಡು ಅಧ್ಯಯನದತ್ತ ಗಮನ ಹರಿಸಿದರು. 2019ರಲ್ಲಿ ಇಂಡಿಯನ್ ಏರ್‌ಫೋರ್ಸ್‌ ಉದ್ಯೋಗ ಪಡೆದ ಅವರು, ಆವರೆಗೆ ರಾಷ್ಟ್ರಮಟ್ಟದವರೆಗೂ ಅಥ್ಲೆಟಿಕ್ಸ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.‌

ಮೇಲಿಂದ ಮೇಲೆ ಪದಕ ಬೇಟೆ

2022ರ ನವೆಂಬರ್‌ನಲ್ಲಿ ರಾಷ್ಟ್ರೀಯ ಕ್ರೀಡಾ ಶಿಬಿರದಲ್ಲಿ ಭಾಗವಹಿಸಿದ್ದ ಕುರಿಯನ್‌, 2023ರ ಜುಲೈ ತಿಂಗಳಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಿಲೆಯಲ್ಲಿ ಭಾಗವಹಿಸಿದರು. ಏಷ್ಯನ್‌ ಚಾಂಪಿಯನ್‌ಶಿಪ್‌ 4x400 ರಿಲೆಯಲ್ಲಿ ಬೆಳ್ಳಿ ಗೆದ್ದ ತಂಡದ ಭಾಗವಾಗಿದ್ದರು. ಅದರ ಬೆನ್ನಲ್ಲೇ ಬುಡಾಫೆಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿಯೂ ಭಾಗವಹಿಸಿದ್ದರು. ಆ ಬಳಿಕ ಏಷ್ಯನ್‌ ಗೇಮ್ಸ್‌ನಲ್ಲಿ ಮೊದಲ ಅಂತಾರಾಷ್ಟ್ರೀಯ ಬಂಗಾರಕ್ಕೆ ತಮ್ಮ ತಂಡದೊಂದಿಗೆ ಕೊರಳೊಡ್ಡಿದರು. ವಿಶೇಷವೆಂದರೆ, ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಹಿಂದಿಕ್ಕಿದ್ದ ತಂಡ ಶ್ರೀಲಂಕಾ. ಆದರೆ ಏಷ್ಯನ್‌ ಗೇಮ್ಸ್‌ ವೇಳೆಗೆ ಅದೇ ಲಂಕಾವನ್ನು ಹಿಂದಿಕ್ಕಿದ ಕುರಿಯನ್‌ ಬಳಗ ಬಂಗಾರಕ್ಕೆ ಮುತ್ತಿಕ್ಕಿತು.

ಕಳೆದ ಬಾರಿ ಏಷ್ಯನ್‌ ಗೇಮ್ಸ್‌ ಚಿನ್ನ ಗೆದ್ದ ಬಳಿಕ ಮಾತನಾಡಿದ್ದ ಕುರಿಯನ್‌, ಚಿನ್‌ ಗೆದ್ದಿರುವುದು ಅನಿರೀಕ್ಷಿತ ಎಂದು ಹೇಳಿಕೊಂಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವುದು ಕನಸಾಗಿತ್ತು. ಆದರೆ ಪದಕದ ನಿರೀಕ್ಷೆ ಇರಲಿಲ್ಲ ಎಂದು ಹೇಳಿದ್ದರು.

ಪ್ರಧಾನಿ ಮೋದಿ ವಿಶ್

ಆರಂಭದಲ್ಲಿ ಮೀಜೋ ಚಾಕೋ ಕುರಿಯನ್ ಸಾಧನೆ ರಾಷ್ಟ್ರದ ಗಮನ ಸೆಳೆದಿರಲಿಲ್ಲ. ಏಷ್ಯನ್‌ ಗೇಮ್ಸ್‌ ಚಿನ್ನ ಗೆದ್ದಾಗ ದೇಶವೇ ರಿಲೇ ತಂಡದ ಸಾಧನೆಯನ್ನು ಕೊಂಡಾಡಿತ್ತು. ಚೀನಾದಿಂದ ಭಾರತಕ್ಕೆ ತಂಡ ಮರಳಿದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಕೂಡಾ ಭಾರತೀಯ ಆಟಗಾರರನ್ನು ಅಭಿನಂದಿಸಿದ್ದರು. ಏಕೆಂದರೆ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತವು ಮೊದಲ ಬಾರಿಗೆ ಪದಕಗಳ ಶತಕ ಸಾಧನೆ ಮಾಡಿತ್ತು.

ಒಲಿಂಪಿಕ್ಸ್‌ ಪದಕ ಗೆದ್ದು ತವರೂರು ಮಂಗಳೂರಿಗೆ ಬರುವವರೆಗೂ, ಕುರಿಯನ್‌ ಮಂಗಳೂರಿನವರು ಎಂಬುದು ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ. ಮಂಗಳೂರಿನಲ್ಲಿ ಹೆಚ್ಚೇನೂ ಗುರುತಿಸಿಕೊಳ್ಳದ ಕುರಿಯನ್‌ ಆ ಬಳಿಕ ನಿಧಾನವಾಗಿ ಕರಾವಳಿ ಹಾಗೂ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ. ಏಷ್ಯನ್‌ ಗೇಮ್ಸ್‌ ಗೆಲುವಿನ ಬಳಿಕ ಒಲಿಂಪಿಕ್ಸ್‌ ಪದಕ ಗೆಲುವಿನ ಗುರಿ ಹಾಕಿಕೊಂಡಿದ್ದ ಅವರು, ಇದೀಗ ಬಂಗಾರದ ಗೆಲುವಿನ ಕನಸಿನಲ್ಲಿದ್ದಾರೆ. ಕನ್ನಡಿಗ ಇರುವ ರಿಲೇ ತಂಡಕ್ಕೆ ನಿಮ್ಮ ಶುಭಹಾರೈಕೆ ಬೇಕಿದೆ.

ಭಾರತ ಪುರುಷರ 4X400 ಮೀಟರ್ ರಿಲೇ ತಂಡ

ಮುಹಮ್ಮದ್ ಅನಾಸ್, ಅಮೋಜ್ ಜಾಕೋಬ್, ಮುಹಮ್ಮದ್ ಅಜ್ಮಲ್, ರಾಜೇಶ್ ರಮೇಶ್, ಮೀಜೋ ಚಾಕೊ ಕುರಿಯನ್, ಸಂತೋಷ್ ತಮಿಳರಸನ್. ಈವೆಂಟ್‌ ಆಗಸ್ಟ್‌ 9ರಂದು ಆರಂಭವಾಗಲಿದೆ.

ಸಂಕ್ಷಿಪ್ತ ಪರಿಚಯ

  • ಹೆಸರು: ಮೀಜೋ ಚಾಕೊ ಕುರಿಯನ್
  • ಜನನ: 16 ಜುಲೈ 1995
  • ವಯಸ್ಸು: 29
  • ಹುಟ್ಟೂರು‌ : ಕೇರಳ
  • ವಾಸಸ್ಥಳ: ಪಣಂಬೂರು, ಮಂಗಳೂರು
  • ಈವೆಂಟ್:‌ 4X400 ಮೀಟರ್ ರಿಲೇ

ಇನ್ನಷ್ಟು ಒಲಿಂಪಿಕ್ಸ್‌ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕನ್ನಡಿಗರ ಕಂಪು; ಅನುಭವಿಗಳ ಜೊತೆಗೆ ಯುವ ಆಟಗಾರರು ಪದಕ ಬೇಟೆಗೆ ಸಜ್ಜು

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ