ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕನ್ನಡಿಗರ ಕಂಪು; ಅನುಭವಿಗಳ ಜೊತೆಗೆ ಯುವ ಆಟಗಾರರು ಪದಕ ಬೇಟೆಗೆ ಸಜ್ಜು
ಪ್ರೇಮನಗರಿ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕನ್ನಡಿಗರ ಕಲರವ ಮನೆಮಾಡಿದೆ. ಈ ಬಾರಿ ಭಾರತೀಯರ ತಂಡದಲ್ಲಿ 9 ಕನ್ನಡಿಗರು ಅವಕಾಶ ಪಡೆದಿರುವುದು ವಿಶೇಷ. ಕರ್ನಾಟಕದ ಎಲ್ಲಾ ಆಟಗಾರರ ಕಿರು ಪರಿಚಯ ಇಲ್ಲಿದೆ.
ಜಾಗತಿಕ ಮಟ್ಟದ ಅದ್ಧೂರಿ ಕ್ರೀಡಾಕೂಟ ಒಲಿಂಪಿಕ್ಸ್‌ನಲ್ಲಿ ಈ ಬಾರಿ ಭಾರತದ ಒಟ್ಟು 117 ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿ ನಡೆದ ಟೋಕಿಯೋ ಒಲಿಂಪಿಕ್ಸ್‌ಗಿಂತ ಈ ಬಾರಿ ಇನ್ನೂ ಹೆಚ್ಚು ಪದಕಗಳನ್ನು ಗೆಲ್ಲುವ ಗುರಿಯಲ್ಲಿ ಭಾರತೀಯರು ಪ್ಯಾರಿಸ್ ವಿಮಾನ ಹತ್ತುತ್ತಿದ್ದಾರೆ. ವಿಶ್ವದ ಪ್ರೇಮನಗರಿಯಲ್ಲಿ ಭಾರತೀಯರ ಕ್ರೀಡಾಗತ್ತನ್ನು ಜಗತ್ತಿಗೆ ಪರಿಚಯಿಸಲು ಆಥ್ಲೀಟ್‌ಗಳು ಸಜ್ಜಾಗಿದ್ದಾರೆ. ವಿಶೇಷವೆಂದರೆ ಭಾರತದ ಒಟ್ಟು 117 ಅಥ್ಲೀಟ್‌ಗಳಲ್ಲಿ ಕರ್ನಾಟಕದವರೇ ಒಟ್ಟು 9 ಆಟಗಾರರು ಇದ್ದಾರೆ. ಇದು ಕನ್ನಡಿಗರ ಖುಷಿಗೆ ಕಾರಣವಾಗಿದೆ. ಕನ್ನಡಿಗರು ಪ್ಯಾರಿಸ್‌ನಲ್ಲಿ ಯಾವೆಲ್ಲಾ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬುದನ್ನು ನೋಡೋಣ.
ಕರ್ನಾಟಕದ ಒಟ್ಟು 9 ಮಂದಿ ಕ್ರೀಡಾಪಟುಗಳಲ್ಲಿ ನಾಲ್ವರು ಈಗಾಗಲೇ ಜಾಗತಿಕ ಕ್ರೀಡಾಕೂಟದಲ್ಲಿ ಆಡಿದ ಅನುಭವ ಹೊಂದಿದ್ದರೆ, ನಾಲ್ವರು ಇದೇ ಮೊದಲ ಬಾರಿ ಪದಾರ್ಪಣೆ ಮಾಡುತ್ತಿದ್ದಾರೆ. ಟೆನಿಸ್ ದಿಗ್ಗಜ ರೋಹನ್ ಬೋಪಣ್ಣ, ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ, ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಹಾಗೂ ಅನುಭವಿ ಓಟಗಾರ್ತಿ ಎಂಆರ್ ಪೂವಮ್ಮ ಒಲಿಂಪಿಕ್ಸ್‌ನಲ್ಲಿ ಈ ಹಿಂದೆ ಎರಡು ಬಾರಿ ಆಡಿದ ಅನುಭವ ಹೊಂದಿದ್ದಾರೆ.
ರೋಹನ್ ಬೋಪಣ್ಣ
ಟೆನಿಸ್ ಡಬಲ್ಸ್‌ನಲ್ಲಿ ನಂಬರ್ ವನ್ ಶ್ರೇಯಾಂಕಕ್ಕೇರಿದ ವಿಶ್ವದ ಹಿರಿಯ ಆಟಗಾರ ಎಂಬ ಹೆಗ್ಗಳಿಕೆ ಕೊಡಗಿನ ಕುವರ ಬೋಪಣ್ಣ ಅವರದ್ದು. 44 ವರ್ಷ ವಯಸ್ಸಿನಲ್ಲೂ ಫಿಟ್‌ನೆಸ್ ಕಾಪಾಡಿಕೊಂಡಿರುವ ಕನ್ನಡಿಗ, ಈ ಬಾರಿಯೂ ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಕೊನೆಯ ಬಾರಿಗೆ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಜೊತೆಗೆ ಕಣಕ್ಕಿಳಿದಿದ್ದ ಬೋಪಣ್ಣ, ಸ್ವಲ್ಪದರಲ್ಲೇ ಕಂಚಿನ ಪದಕ ಮಿಸ್ ಮಾಡಿಕೊಂಡಿದ್ದರು. ಜಾಗತಿಕ ಕ್ರೀಡಾ ಹಬ್ಬದಲ್ಲಿ ಮೊದಲ ಪದಕದ ನಿರೀಕ್ಷೆಯಲ್ಲಿ ಹಿರಿಯ ಆಟಗಾರನಿದ್ದಾರೆ.
ಅಶ್ವಿನಿ ಪೊನ್ನಪ್ಪ
ಕೊಡಗಿನ ಬ್ಯಾಡ್ಮಿಂಟನ್ ತಾರೆ, ಈ ಬಾರಿ ಮಹಿಳಾ ಡಬಲ್ಸ್‌ನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಮೂರನೇ ಬಾರಿ ಒಲಿಂಪಿಕ್ಸ್ ಅಖಾಡದಲ್ಲಿ ಆಡುತ್ತಿರುವ 34 ವರ್ಷದ ಅನುಭವಿ ಆಟಗಾರ್ತಿ, ಹಿಂದೆ 2012ರ ಲಂಡನ್ ಹಾಗೂ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಜ್ವಾಲಾ ಗುಟ್ಟಾ ಜೊತೆಗೆ ಆಡಿ ಪದಕವಿಲ್ಲದೆ ತವರಿಗೆ ಮರಳಿದ್ದರು. ಈ ಬಾರಿ ತನಿಶಾ ಕಾಸ್ಟ್ರೋ ಜೊತೆಗೆ ಪದಕದ ಗುರಿ ಹಾಕಿಕೊಂಡಿದ್ದಾರೆ.
ಎಂಆರ್ ಪೂವಮ್ಮ
ಕರಾವಳಿಯ ಅನುಭವಿ ಓಟಗಾರ್ತಿ ಪೂವಮ್ಮ, ಡೋಪಿಂಗ್‌ನಲ್ಲಿ ಸಿಲುಕಿ ಟೋಕಿಯೋ ಒಲಿಂಪಿಕ್ಸ್ ಟಿಕೆಟ್ ಮಿಸ್ ಮಾಡಿಕೊಂಡಿದ್ದರು. 2008ರ ಬೀಜಿಂಗ್ ಹಾಗೂ 2016ರ ರಿಯೋ ಒಲಿಪಿಕ್ಸ್‌ನಲ್ಲಿ ರಿಲೇ ತಂಡದ ಭಾಗವಾಗಿದ್ದ ಅವರು, 4/400 ಮೀಟರ್ ರಿಲೇ ತಂಡದ ಭಾಗವಾಗಿದ್ದಾರೆ.
ನಿಶಾಂತ್ ದೇವ್
ಬಾಕ್ಸರ್ ನಿಶಾಂತ್ ಮೂಲತಃ ಹರಿಯಾಣದವರಾದರೂ, 2019ರಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಕವನ್ನು ಪ್ರತಿನಿಧಿಸಿದ ಬಳಿಕ ಕನ್ನಡಗಿನೇ ಆಗಿದ್ದಾರೆ. ಈ ಬಾರಿ ಇವರು 71 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು, ಮೊದಲ ಬಾರಿ ಒಲಿಂಪಿಕ್ಸ್ ಅಖಾಡದಲ್ಲಿ ಆಡುತ್ತಿದ್ದಾರೆ.
ಅದಿತಿ ಅಶೋಕ್
ತಮ್ಮ 18ನೇ ವಯಸ್ಸಿನಲ್ಲೇ ಒಲಿಂಪಿಕ್ಸ್ ಆಡುವ ಅವಕಾಶ ಪಡದಿದ್ದ ಅದಿತಿ, 2016ರ ರಿಯೋ ಗೇಮ್ಸ್‌ನಲ್ಲಿ ಮಿಂಚಿದ್ದರು. ಕಳೆದ ಬಾರಿ ನಡೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕದ ಸನಿಹ ಬಂದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಆದರೂ, ಅದಿತಿ ಸಾಧನೆ ಭಾರತೀಯರ ಹೆಮ್ಮೆಗೆ ಕಾರಣವಾಯ್ತು. ಬಾಗಲಕೋಟೆ ಮೂಲದ 26 ವರ್ಷದ ಆಟಗಾರ್ತಿ, ಈ ಬಾರಿ ಪದಕ ಗೆಲ್ಲುವ ಫೇವರೆಟ್ ಆಟಗಾರರಲ್ಲಿ ಒಬ್ಬರು.
ಅರ್ಚನಾ ಕಾಮತ್
ವನಿತೆಯರ ಟೇಬಲ್ ಟೆನಿಸ್ ತಂಡದ ಭಾಗವಾಗಿರುವ ಅರ್ಚನಾ ಕಾಮತ್, 2018ರ ಯೂತ್ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಬೆಂಗಳೂರಿನ ಈ ತಾರೆ, ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಅಖಾಡಕ್ಕಿಳಿದಿದ್ದಾರೆ.
ಮಿಜೋ ಚಾಕೋ ಕುರಿಯನ್
ಮಂಗಳೂರಿನ ಪ್ರತಿಭಾವಂತ ಅಥ್ಲೀಟ್ ಕುರಿಯನ್, ಪುರುಷರ 4/400 ಮೀ ರಿಲೆಯಲ್ಲಿ ಆಡುತ್ತಿದ್ದಾರೆ. ಇಂಡಿಯನ್ ಏರ್‌ಫೋರ್ಸ್ ಉದ್ಯೋಗಿಯಾಗಿರುವ ಇವರಿಗೆ ಕ್ರೀಡೆ ಅಚ್ಚುಮೆಚ್ಚು. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಆಟಗಾರ, ಈ ಬಾರಿ ಒಲಿಂಪಿಕ್ಸ್ ಪದಕದ ಗುರಿ ಹೊಂದಿದ್ದಾರೆ.
ಧಿನಿಧಿ ದೇಸಿಂಘು
14 ವರ್ಷ ವಯಸ್ಸಿನ ಈಜುಪಟು ಧಿನಿಧಿ ದೇಸಿಂಘು, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಅತ್ಯಂತ ಕಿರಿಯ ಭಾರತೀಯ ಆಟಗಾರ್ತಿ. 200 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಇವರು ಸ್ಪರ್ಧಿಸುತ್ತಾರೆ. ಸದ್ಯ ಇವರು ಭಾರತದ ನಂಬರ್ ವನ್ ಈಜುಪಟು.
ಶ್ರೀಹರಿ ನಟರಾಜ್
ಬೆಂಗಳೂರಿನ ಈಜುಪಟು ನಾಟರಾಜ್, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಡಿದ್ದರು. ಅಂದು 27ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಅವರು, ಈ ಬಾರಿ 100 ಮೀಟರ್ ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ಮತ್ತೊಮ್ಮೆ ಆಡುವ ಅವಕಾಶ ಪಡೆದಿದ್ದಾರೆ. ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಹಲವು ಪದಕಗಳನ್ನು ಗೆದ್ದಿರುವ ಆಟಗಾರ, ಒಲಿಂಪಿಕ್ಸ್ ಪದಕದ ನಿರೀಕ್ಷೆಯಲಿದ್ದಾರೆ.
ಇನ್ನಷ್ಟು ಒಲಿಂಪಿಕ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತದ 117 ಕ್ರೀಡಾಪಟುಗಳಿಗೆ ಗುಡ್ನ್ಯೂಸ್ ಕೊಟ್ಟ ಬಿಸಿಸಿಐ