logo
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ: ದಿನಾಂಕ, ಸ್ಥಳ, ಸಮಯ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ

ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ: ದಿನಾಂಕ, ಸ್ಥಳ, ಸಮಯ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ

Jayaraj HT Kannada

Jul 25, 2024 03:57 PM IST

google News

ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ: ದಿನಾಂಕ, ಸ್ಥಳ, ಸಮಯ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ

    • ಪ್ಯಾರಿಸ್‌ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭವು ಈ ಬಾರಿ ಭಿನ್ನವಾಗಿರಲಿದೆ. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗೆ ಸಮಾರಂಭ ನಡೆಯುತ್ತಿದೆ. ವಿಶ್ವದ 10 ಸಾವಿರಕ್ಕೂ ಅಧಿಕ ಮಂದಿ ಜಗಮಗಿಸುವ ದೀಪಗಳ ನಡುವೆ ಕ್ರೀಡಾಕೂಟಕ್ಕೆ ಅದ್ಧೂರಿಯಾಗಿ ಕಾಲಿಡಲಿದ್ದಾರೆ. ಉದ್ಘಾಟನಾ ಸಮಾರಂಭ ಕುರಿತ ಮಾಹಿತಿ ಇಲ್ಲಿದೆ.
ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ: ದಿನಾಂಕ, ಸ್ಥಳ, ಸಮಯ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ
ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ: ದಿನಾಂಕ, ಸ್ಥಳ, ಸಮಯ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ (Bloomberg)

ವಿಶ್ವದ ಸುಂದರ ನಗರಗಳಲ್ಲಿ ಒಂದಾದ ಪ್ರೇಮನಗರ ಪ್ಯಾರಿಸ್, ಮೂರನೇ ಬಾರಿಗೆ ಜಾಗತಿಕ ಕ್ರೀಡಾಹಬ್ಬ ಒಲಂಪಿಕ್ಸ್‌ ಕ್ರೀಡಾಕೂಟದ ಆಯೋಜನಗೆ ಸಜ್ಜಾಗಿ ನಿಂತಿದೆ. ಫ್ರಾನ್ಸ್‌ನ ರಾಜಧಾನಿಯಲ್ಲಿ ವಿಶ್ವದ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಬಂದು ಸೇರಿದ್ದಾರೆ. ಜುಲೈ 26ರ ಶುಕ್ರವಾರದಂದು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅಧಿಕೃತ ಹಾಗೂ ಅದ್ಧೂರಿ ಚಾಲನೆ ಸಿಗಲಿದೆ. ಈಗಾಗಲೇ, ಅಂದರೆ ಜುಲೈ 24ರಂದು ಕೆಲವೊಂದು ಕ್ರೀಡೆಗಳು ಅಧಿಕೃತ ಉದ್ಘಾಟನಾ ಸಮಾರಂಭಕ್ಕೂ ಮುನ್ನವೇ ಆರಂಭಿವಾಗಿವೆ. ಆದರೆ, ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ಸಿಗಲಿರುವುದು ನಾಳೆ ಸಂಜೆ. ಅಂದರೆ ಜುಲೈ 26ರ ಶುಕ್ರವಾರ. ಹತ್ತು ಹಲವು ವೈಶಿಷ್ಟ್ಯಗಳೊಂದಿಗೆ ಈ ಬಾರಿಯ ಒಲಿಂಪಿಕ್ಸ್‌ ಕ್ರೀಡಾಕೂಟ ನಡೆಯುತ್ತಿದ್ದು, ನೇರವಾಗಿ ಕ್ರೀಡಾಕೂಟವನ್ನು ಸವಿಯಲು ವಿಶ್ವದ ಮೂಲೆ ಮೂಲೆಗಳಿಂದ ಕ್ರೀಡಾಭಿಮಾನಿಗಳು ಫ್ರಾನ್ಸ್‌ ಪ್ರವಾಸ ಕೈಗೊಂಡಿದ್ದಾರೆ.

ಎಲ್ಲರಿಂದಲೂ ಪ್ಯಾರಿಸ್‌ಗೆ ಹೋಗಲು ಸಾಧ್ಯವಿಲ್ಲ. ನೀವು ಮನೆಯಿಂದಲೇ ಚತುರ್ವಾರ್ಷಿಕ ಕ್ರೀಡಾಕೂಟವನ್ನು ಸವಿಯಲು ಎದುರು ನೋಡುತ್ತಿದ್ದರೆ, ಅದು ಖಂಡಿತಾ ಸಾಧ್ಯವಿದೆ. ಭಾರತದಲ್ಲಿ ಮನೆಯಿಂದಲೂ ಕುಳಿತು ಅದ್ಧೂರಿ ಉದ್ಘಾಟನಾ ಸಮಾರಂಭ ವೀಕ್ಷಿಸುವವರಿಗಾಗಿ ಈ ಮಾಹಿತಿ.

ಈ ಬಾರಿಯ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭವು ಮೊಟ್ಟ ಮೊದಲನೇ ಬಾರಿಗೆ ಕ್ರೀಡಾಂಗಣದ ಹೊರಗೆ ನಡೆಯುತ್ತಿದೆ. ಅಂದರೆ, ಪ್ಯಾರಿಸ್‌ನ ಜೀವನದಿಯಾಗಿರುವ ಸೀನ್ ನದಿಯ ಉದ್ದಕ್ಕೂ ಉದ್ಘಾಟನಾ ಸಮಾರಂಭದ ಕಾರ್ಯಕ್ರಮಗಳು ನಡೆಯುತ್ತದೆ.

ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಸಾಮಾನ್ಯವಾಗಿ ಕ್ರೀಡಾಪಟುಗಳು ಸಾಂಪ್ರದಾಯಿಕವಾಗಿ ಕ್ರೀಡಾಂಗಣದಲ್ಲಿ ಪರೇಡ್‌ ಮಾಡುತ್ತಾರೆ. ಆದರೆ ಈ ಬಾರಿ ಹಾಗಿಲ್ಲ. ಕ್ರೀಡಾಪಟುಗಳು ಸೀನ್ ಉದ್ದಕ್ಕೂ ದೋಣಿಗಳಲ್ಲಿ ಮೆರವಣಿಗೆ ಮೂಲಕ ಬರಲಿದ್ದಾರೆ. 10,500 ಕ್ರೀಡಾಪಟುಗಳನ್ನು ಸುಮಾರು 100 ದೋಣಿಗಳು ಕರೆತರಲಿವೆ. ಬೇಸಿಗೆ ಒಲಿಂಪಿಕ್ಸ್‌ನಲ್ಲಿ 206 ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳು (ಎನ್‌ಒಸಿ) ಭಾಗವಹಿಸುತ್ತಿವೆ.

ಉದ್ಘಾಟನಾ ಸಮಾರಂಭ ಯಾವಾಗ?

ಪ್ಯಾರಿಸ್‌ ಗೇಮ್ಸ್‌ ಉದ್ಘಾಟನಾ ಸಮಾರಂಭವು ಜುಲೈ 26ರ ಶುಕ್ರವಾರ ಸಂಜೆ ಆರಂಭವಾಗಲಿದೆ. ಫ್ರಾನ್ಸ್‌ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಸಮಾರಂಭ ಆರಂಭವಾಗಲಿದೆ. ಆದರೆ ಭಾರತೀಯ ಕಾಲಮಾನದ ಪ್ರಕಾರ ಇದು ರಾತ್ರಿ 11 ಗಂಟೆಗೆ ಆರಂಭವಾಗುತ್ತದೆ. ಭಾರತದ ಸಮಯ ಹಾಗೂ ಫ್ರಾನ್ಸ್‌ನ ಸಮಯಕ್ಕೆ ಮೂರು ಗಂಟೆಗಳ ವ್ಯತ್ಯಾಸ ಇರುತ್ತದೆ. ಅಂದರೆ ಫ್ರಾನ್ಸ್‌ನ ಸಮಯ ಭಾರತಕ್ಕಿಂತ ಮೂರು ಗಂಟೆ ಹಿಂದೆ ಇರುತ್ತದೆ. ಉದ್ಘಾಟನಾ ಕಾರ್ಯಕ್ರಮವು ಸುಮಾರು 3 ಗಂಟೆಗಳಿಗೂ ಹೆಚ್ಚು ಕಾಲ ಸತತವಾಗಿ ನಡೆಯಲಿದೆ.

ನೇರ ಪ್ರಸಾರ ವೀಕ್ಷಿಸುವುದು ಹೇಗೆ?

ಭಾರತದಲ್ಲಿ ಒಲಿಂಪಿಕ್ಸ್‌ ಪಂದ್ಯಗಳು ಹಾಗೂ ಉದ್ಘಾಟನಾ ಸಮಾರಂಭದ ಉದ್ಘಾಟನಾ ಹಕ್ಕುಗಳನ್ನು ವಯಾಕಾಮ್‌ 18 ಪಡೆದಿದೆ. ಹೀಗಾಗಿ ಭಾರತದಲ್ಲಿ ಪ್ಯಾರಿಸ್‌ ಗೇಮ್ಸ್‌ ಉದ್ಘಾಟನಾ ಸಮಾರಂಭವನ್ನು ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ಟಿವಿ ಮೂಲಕ ನೇರಪ್ರಸಾರದಲ್ಲಿ ವೀಕ್ಷಿಸಬಹುದು. ಇದೇ ವೇಳೆ ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿದೆ. ಮೊಬೈಲ್‌ ಮೂಲಕ ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು.‌

ಬೇರೆ ಬೇರೆ ದೇಶಗಳಲ್ಲಿ ನೇರಪ್ರಸಾರ ವೀಕ್ಷಣೆ ಹೇಗೆ?

  • ಫ್ರಾನ್ಸ್‌ ಟಿವಿ -ಫ್ರಾನ್ಸ್
  • ಆಸ್ಟ್ರೇಲಿಯಾ -9 ನೌ
  • ಕೆನಡಾ -CBC
  • ಯುನೈಟೆಡೆ ಕಿಂಗ್‌ಡಮ್-‌ BBC iPlayer
  • ಐರ್ಲೆಂಡ್ -RTE
  • ದಕ್ಷಿಣ ಆಫ್ರಿಕಾ -SABC
  • ಜರ್ಮನಿ -ARD
  • ಇಟಲಿ -RAI

ಇನ್ನಷ್ಟು ಒಲಿಂಪಿಕ್ಸ್‌ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | ಮಂಗಳೂರು ಮಂಗಳಾ ಸ್ಟೇಡಿಯಂನಿಂದ ಪ್ಯಾರಿಸ್‌ವರೆಗೆ; ಒಲಿಂಪಿಕ್ಸ್‌ ಪದಕದ ನಿರೀಕ್ಷೆಯಲ್ಲಿ ಕರ್ನಾಟಕದ ಕುವರ ಮೀಜೋ ಚಾಕೋ ಕುರಿಯನ್

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ