ಒಲಿಂಪಿಕ್ಸ್: ಹಾಕಿ-ಬ್ಯಾಡ್ಮಿಂಟನ್ ಪುರುಷರ ಡಬಲ್ಸ್‌ನಲ್ಲಿ ಗೆಲುವು; ವನಿತೆಯರಗೆ ಹ್ಯಾಟ್ರಿಕ್ ಸೋಲು, ಆರ್ಚರಿಯಲ್ಲಿ ಮಿಶ್ರ ಫಲಿತಾಂಶ
Jul 30, 2024 08:38 PM IST
ಒಲಿಂಪಿಕ್ಸ್: ಹಾಕಿ-ಬ್ಯಾಡ್ಮಿಂಟನ್ ಪುರುಷರ ಡಬಲ್ಸ್‌ನಲ್ಲಿ ಗೆಲುವು
- ಪ್ಯಾರಿಸ್ ಒಲಿಂಪಿಕ್ಸ್ ನಾಲ್ಕನೇ ದಿನದಾಟದಲ್ಲಿ ಭಾರತ ತಂಡ ಒಂದು ಪದಕ ಗೆದ್ದಿದೆ. ಇದರೊಂದಿಗೆ ಇನ್ನೂ ಕೆಲವೊಂದು ಕ್ರೀಡೆಗಳಲ್ಲಿ ಮುಂದಿನ ದಿನಗಳಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದೆ. ಇಂದಿನ ದಿನ ಭಾರತದ ಆಟಗಾರರು ಗೆದ್ದ ಹಾಗೂ ಸೋತಿರುವ ಕ್ರೀಡಗಳ ವಿವರ ಇಲ್ಲಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ದಿನದಾಟದಲ್ಲಿ ಭಾರತ ಮತ್ತೊಂದು ಪದಕ ಗೆದ್ದಿದೆ. 10 ಮೀಟರ್ ಮಿಶ್ರ ಟೀಮ್ ಏರ್ ಪಿಸ್ತೂಲ್‌ನಲ್ಲಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಜೋಡಿ ಕಂಚಿನ ಪದಕ ಗೆದ್ದಿದೆ. ಇದು ಮನು ಅವರಿಗೆ ಸತತ ಎರಡನೇ ಪದಕದ ದಾಖಲೆಯಾಗಿದೆ. ಸದ್ಯ ಪ್ಯಾರಿಸ್ ಗೇಮ್ಸ್‌ನಲ್ಲಿ ಈವರೆಗೆ ಭಾರತ ಗೆದ್ದ ಎರಡೂ ಪದಕಗಳಲ್ಲಿ ಮನು ಅವರ ಪ್ರಯತ್ನ ಇರುವುದು ಶ್ಲಾಘನೀಯ. ಇದೇ ವೇಳೆ ನಾಲ್ಕನೇ ದಿನದಾಟದಲ್ಲಿ ಭಾರತದ ಆಟಗಾರರು ತಮ್ಮ ತಮ್ಮ ಕ್ರೀಡೆಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಐರ್ಲೆಂಡ್ ವಿರುದ್ಧದ ಹಾಕಿ ಪಂದ್ಯದಲ್ಲಿ ಭಾರತ ತಂಡ ಜಯ ಸಾಧಿಸಿದರೆ, ಇಂಡೋನೇಷ್ಯಾ ವಿರುದ್ಧದ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಭಾರತದ ಸ್ಟಾರ್ ಜೋಡಿ ಸುಲಭ ಗೆಲುವು ಒಲಿಸಿಕೊಂಡಿದ್ದಾರೆ.
ಇಂದು ನಡೆದ ಪುರುಷರ ಪೂಲ್ ಬಿ ಹಾಕಿ ಪಂದ್ಯದಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಐರ್ಲೆಂಡ್ ವಿರುದ್ಧ 2-0 ಗೋಲುಗಳ ಅಂತರದ ಜಯ ಸಾಧಿಸಿದೆ. ಆ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ. ಅರ್ಜೆಂಟೀನಾ ವಿರುದ್ಧವೂ ನಿರ್ಣಾಯಕ ಗೋಲು ಗಳಿಸಿ ಪಂದ್ಯ ಡ್ರಾ ಸಾಧಿಸುವಲ್ಲಿ ನೆರವಾಗಿದ್ದ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್, ಈ ಬಾರಿಯೂ ತಂಡದ ಗೆಲುವಿಗೆ ಕೊಡುಗೆ ನೀಡಿದ್ದಾರೆ. 11ನೇ ನಿಮಿಷದಲ್ಲಿ ಪೆನಾಲ್ಟಿ ಶಾಟ್ ಮೂಲಕ ಮೊದಲ ಗೋಲು ಗಳಿಸಿದ ಅವರು, ಆ ಬಳಿಕ 19ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಮತ್ತೊಂದು ಗೋಲು ದಾಖಲಿಸಿದರು.
ಬ್ಯಾಡ್ಮಿಂಟನ್ ಪುರುಷರ ಜೋಡಿಗೆ ಗೆಲುವು
ಪ್ಯಾರಿಸ್‌ನಲ್ಲಿ ಪದಕದ ನಿರೀಕ್ಷೆ ಮೂಡಿಸಿರುವ ಸ್ಟಾರ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ. ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಈ ಜೋಡಿ, ಮತ್ತೊಂದು ಬಲಿಷ್ಠ ಜೋಡಿಯಾದ ಇಂಡೋನೇಷ್ಯಾದ ಮುಹಮ್ಮದ್ ರಿಯಾಂಟೊ ಮತ್ತು ಫಜರ್ ಅಲ್ಫಿಯಾನ್ ವಿರುದ್ಧ ನೇರ ಗೇಮ್‌ಗಳ ಸುಲಭ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಸಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಮೂರನೇ ಶ್ರೇಯಾಂಕದ ಭಾರತೀಯ ಜೋಡಿಯು ಕೇವಲ 38 ನಿಮಿಷಗಳ ಕಾಲ ನಡೆದ ಸಿ ಗುಂಪಿನ ಅಂತಿಮ ಪಂದ್ಯದಲ್ಲಿ ಎದುರಾಳಿಗಳನ್ನು 21-13, 21-13 ಅಂತರದಿಂದ ಸೋಲಿಸಿದರು.
ಭಾರತದ ಜೋಡಿ ಸೋಮವಾರವೇ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿತ್ತು. ಇಂದಿನ ಪಂದ್ಯದ ಮೂಲಕ ಗುಂಪಿನ ಅಗ್ರಸ್ಥಾನಿ ಯಾರೆಂಬುದು ನಿರ್ಧಾರವಾಗಿದೆ. ಭಾರತದೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಇಂಡೋನೇಷ್ಯಾ ಜೋಡಿ ಕೂಡಾ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಗಳಿಸಿದೆ.
ವನಿತೆಯರ ಜೋಡಿಗೆ ಹ್ಯಾಟ್ರಿಕ್ ಸೋಲು
ಭಾರತದ ಮಹಿಳಾ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಅವರು ಸಿ ಗುಂಪಿನಲ್ಲಿ ಸತತ ಮೂರನೇ ಸೋಲು ಕಂಡರು. ಇದರೊಂದಿಗೆ ಗುಂಪಿನಲ್ಲಿ ನಾಲ್ಕನೇ ಸ್ಥಾನ ಪಡೆದು ಗುಂಪು ಹಂತದಲ್ಲೇ ಹೊರಬಿದ್ದರು. ಇಂದು ನಡೆದ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾದ ಸೆಟ್ಯಾನಾ ಮಪಾಸಾ ಮತ್ತು ಏಂಜೆಲಾ ಯು ವಿರುದ್ಧ 15-21, 10-21 ನೇರ ಗೇಮ್‌ಗಳಿಂದ ಸೋಲು ಅನುಭವಿಸಿದರು.
ಬಾಲರಾಜ್ ಪನ್ವಾರ್, ಪೃಥ್ವಿರಾಜ್ ತೊಂಡೈಮಾನ್, ಅಮಿತ್ ಪಂಗಲ್ ಸೋಲು
ಪುರುಷರ ರೋಯಿಂಗ್ ಸಿಂಗಲ್ಸ್ ಸ್ಕಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಬಾಲರಾಜ್ ಪನ್ವಾರ್ 5ನೇ ಸ್ಥಾನ ಪಡೆದರು. ಇದರೊಂದಿಗೆ ಪದಕ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಅತ್ತ ಪುರುಷರ ಟ್ರ್ಯಾಪ್ ಅರ್ಹತಾ ಸುತ್ತಿನಲ್ಲಿ ಭಾರತದ ಪೃಥ್ವಿರಾಜ್ ತೊಂಡೈಮಾನ್ 21ನೇ ಸ್ಥಾನ ಪಡೆದರು. ಅಗ್ರ ಆರು ಶೂಟರ್‌ಗಳು ಫೈನಲ್‌ಗೆ ಅರ್ಹತೆ ಪಡೆದರು. ಮತ್ತೊಂದೆಡೆ ಪುರುಷರ 51 ಕೆಜಿ ಬಾಕ್ಸಿಂಗ್ ಪಂದ್ಯದಲ್ಲಿ ಜಾಂಬಿಯಾದ ಪ್ಯಾಟ್ರಿಕ್ ಚಿನ್ಯೆಂಬಾ ಅವರ ವಿರುದ್ಧ ಸೋತ ಅಮಿತ್ ಪಂಗಲ್, ಎಲಿಮನೇಟ್ ಆದರು.
ಭಜನ್ ಕೌರ್ ಗೆಲುವು, ಅಂಕಿತಾಗೆ ಸೋಲು
ಮಹಿಳಾ ಬಿಲ್ಲುಗಾರಿಕೆ ವೈಯಕ್ತಿಕ ಸ್ಪರ್ಧೆಯಲ್ಲಿ ಇಂಡೋನೇಷ್ಯಾದ ಸೈಫಾ ನುರಾಫಿಫಾ ಕಮಾಲ್ ಅವರನ್ನು ಸೋಲಿಸಿದ ಭಾರತದ ಭಜನ್ ಕೌರ್ ಅಂತಿಮ ಸೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ 16 ರ ಸುತ್ತಿಗೆ ಪ್ರವೇಶಿಸಿದರು. ಆ ಬಳಿಕ ಪೋಲೆಂಡ್ ಎದುರಾಳಿ ವಿರುದ್ಧ ಗೆದ್ದು ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಇದೇ ವೇಳೆ ಮಹಿಳೆಯರ ವೈಯಕ್ತಿಕ ಬಿಲ್ಲುಗಾರಿಕೆಯಲ್ಲಿ ಅಂಕಿತಾ ಭಕತ್ ಸೋಲು ಕಂಡಿದ್ದಾರೆ. ಪೋಲೆಂಡ್‌ನ ವಿಯೊಲೆಟಾ ಮೈಸ್ಜೋರ್ ವಿರುದ್ಧದ 16ರ ಸುತ್ತಿನ ಪಂದ್ಯದಲ್ಲಿ ಸೋತು ನಿರ್ಗಮಿಸಿದ್ದಾರೆ.
ಒಲಿಂಪಿಕ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 2ನೇ ಪದಕ ಗೆದ್ದ ಮನು ಭಾಕರ್; ಶೂಟಿಂಗ್ನಲ್ಲಿ ಸರಬ್ಜೋತ್ ಸಿಂಗ್ ಜೊತೆಗೆ ಕಂಚಿನ ಪದಕ