ಅದೇ ರಾಗ ಅದೇ ತಾಳ; ಬೆಂಗಳೂರು ಬುಲ್ಸ್‌ಗೆ 10ನೇ ಸೋಲು; ಹೀಗಿದೆ ಪ್ರೊ ಕಬಡ್ಡಿ ಲೀಗ್ ಅಪ್ಡೇಟೆಡ್ ಅಂಕಪಟ್ಟಿ
Nov 20, 2024 11:10 AM IST
ಬೆಂಗಳೂರು ಬುಲ್ಸ್‌ಗೆ 10ನೇ ಸೋಲು; ಹೀಗಿದೆ ಪ್ರೊ ಕಬಡ್ಡಿ ಲೀಗ್ ಅಂಕಪಟ್ಟಿ
- Pro kabaddi league Point Table: ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡವು ಜಯದ ಹಳಿಗೆ ಮರಳುತ್ತಿಲ್ಲ. ಸತತ ಸೋಲುಗಳಿಂದ ಕಂಗೆಟ್ಟ ತಂಡವು 10ನೇ ಸೋಲಿಗೆ ಶರಣಾಗಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.
ಪ್ರೊ ಕಬಡ್ಡಿ ಸೀಸನ್ 11ರಲ್ಲಿ ಬೆಂಗಳೂರು ಬುಲ್ಸ್ ತಂಡ ಮತ್ತೆ ಅದೇ ರಾಗ ಅದೇ ತಾಳ ಎಂಬಂತೆ ಸೋಲಿನ ಸರಪಳಿ ಮುಂದುವರೆಸಿದೆ. ಟೂರ್ನಿಯಲ್ಲಿ ಮತ್ತೊಮ್ಮೆ ರೈಡಿಂಗ್‌ನಲ್ಲಿ ಮುಗ್ಗರಿಸಿದ್ ತಂಡವು, 10ನೇ ಸೋಲಿಗೆ ಶರಣಾಗಿದೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಬಲಿಷ್ಠ ಪಾಟ್ನಾ ಪೈರೇಟ್ಸ್ ತಂಡದ ವಿರುದ್ಧ 54-31 ಅಂಕಗಳ ಹೀನಾಯ ಸೋಲು ಕಂಡ ಗೂಳಿಗಳ ಬಳಗವು, ಪ್ರೊ ಕಬಡ್ಡಿ ಲೀಗ್ ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲೇ ಉಳಿದಿದೆ. ತಂಡವು ಆಡುವ ಬಳಗದಲ್ಲಿ ಎಲ್ಲಾ ರೀತಿಯ ಬದಲಾವಣೆ ಮಾಡಿ ನೋಡಿದರೂ ಫಲಿತಾಂಶ ಮಾತ್ರ ಬರುತ್ತಿಲ್ಲ.
ಪಾಟ್ನಾ ಪರ ಯುವ ರೈಡಿಂಗ್ ಜೋಡಿ ದೇವಂಕ್ ದಲಾಲ್ ಮತ್ತು ಅಯಾನ್ ಲೋಹಾಬ್ ಅಮೋಘ ಪ್ರದರ್ಶನ ನೀಡಿದರು. ಈ ಇಬ್ಬರೂ ಸೂಪರ್ 10 ಪೂರ್ಣಗೊಳಿಸಿದರು. ಆದರೆ, ಇವರನ್ನು ಕಟ್ಟಿಹಾಕಲು ಬುಲ್ಸ್ ಡಿಫೇಂಡರ್‌ಗಳು ವಿಫಲರಾದರು. ಅಲ್ಲದೆ ರೈಡಿಂಗ್‌ನಲ್ಲಿ ಪಾಯಿಂಟ್ ತರಲು ಒಬ್ಬರಿಂದಲೂ ಸಾಧ್ಯವಾಗಲಿಲ್ಲ. ದೇವಾಂಕ್ ಒಟ್ಟು 131 ಅಂಕಗಳೊಂದಿಗೆ ರೈಡರ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಮಾತ್ರವಲ್ಲದೆ ತಮ್ಮ ತಂಡವನ್ನು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕೊಂಡೊಯ್ದರು.
ನಾಲ್ಕು ಸೂಪರ್ ಟ್ಯಾಕಲ್‌ಗಳ ನೆರವಿನಿಂದ ಬೆಂಗಳೂರು ಬುಲ್ಸ್ ತಂಡದ ಡಿಫೆಂಡರ್‌ಗಳು ಪಾಟ್ನಾ ಪೈರೇಟ್ಸ್ ಡಿಫೆಂಡರ್‌ಗಳಿಂಗಿಂತ ತುಸು ಉತ್ತಮ ಪ್ರದರ್ಶನ ತೋರಿದರು. ಸೌರಭ್ ನಂದಾಲ್ ಮತ್ತು ಸನ್ನಿ ಸೆಹ್ರಾವತ್ ಅವರ ಸಾಮರ್ಥ್ಯಕ್ಕೆ ಸವಾಲೊಡ್ಡಿದ ಅಪಾಯಕಾರಿ ರೈಡರ್‌ಗಳಾದ ದೇವಂಕ್ ದಲಾಲ್ ಮತ್ತು ಅಯಾನ್, ಬುಲ್ಸ್ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದರು. ದೇವಾಂಕ್ ಒಟ್ಟು 16 ಅಂಕ ಗಳಿಸಿದರೆ, ಅಯಾನ್ 12 ಅಂಕ ಗಳಿಸಿದರು.
ಮೂರು ಬಾರಿಯ ಪಿಕೆಎಲ್ ಚಾಂಪಿಯನ್ ಆಗಿರುವ ಪಾಟ್ನಾಗೆ ಎದುರಾಳಿ ತಂಡ ಸುಲಭ ತುತ್ತಾಯಿತು. ಮೊದಲಾರ್ಧದ ಅಂತ್ಯಕ್ಕೆ ಪಾಟ್ನಾ ಪೈರೇಟ್ಸ್ 20-13 ಅಂಕಗಳ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ಪಾಟ್ನಾ ಪೈರೇಟ್ಸ್ ತಂಡ ಮತ್ತಷ್ಟು ಬಲಿಷ್ಟವಾಯ್ತು. ಮೂರು ನಿಮಿಷಗಳಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಆಲೌಟ್ ಮಾಡಿತು. ದೇವಂಕ್ ಸೂಪರ್ ರೈಡ್ ಮಾಡಿದರು. ಮತ್ತೆ ಮುನ್ನಡೆ ಸಾಧಿಸಿದ ಪಾಟ್ನಾ ಪೈರೇಟ್ಸ್, ಅಂತಿಮವಾಗಿ ಅಜೇಯವಾಯಿತು.
ಬೆಂಗಳೂರು ತಂಡವನ್ನು ಮೂರು ಬಾರಿ ಆಲೌಟ್ ಮಾಡಿದ ಪಾಟ್ನಾ, ತನ್ನ ತಂಡದ ಕೋರ್ಟ್ ಖಾಲಿಯಾಗದಂತೆ ನೋಡಿತು. ತಂಡದ ಒಟ್ಟು ಮೊತ್ತವನ್ನು 50ಕ್ಕೂ ಹೆಚ್ಚು ಅಂಕಗಳಿಗೆ ವಿಸ್ತರಿಸಿಕೊಂಡಿತು. ಬೆಂಗಳೂರು ಬುಲ್ಸ್ ತಂಡವು 23 ಅಂಕಗಳ ಅಂತರದಿಂದ ಸೋಲೊಪ್ಪಿತು.
ಪಿಕೆಲ್ ಟೂರ್ನಿಯಲ್ಲಿ ಬುಲ್ಸ್ ಪ್ರದರ್ಶನ
- ತೆಲುಗು ಟೈಟಾನ್ಸ್ ವಿರುದ್ಧ 37-29 ರಿಂದ ಸೋಲು
- ಗುಜರಾತ್ ಜೈಂಟ್ಸ್ ವಿರುದ್ಧ 36-32 ರಿಂದ ಸೋಲು
- ಯುಪಿ ಯೋಧಾಸ್ ವಿರುದ್ಧ 57-36 ರಿಂದ ಸೋಲು
- ಪುಣೇರಿ ಪಲ್ಟನ್ ವಿರುದ್ಧ 22-36 ರಿಂದ ಸೋಲು
- ದಬಾಂಗ್ ಡೆಲ್ಲಿ ವಿರುದ್ಧ 34-32 ರಿಂದ ಗೆಲುವು
- ತೆಲುಗು ಟೈಟಾನ್ಸ್ ವಿರುದ್ಧ 35-38 ರಿಂದ ಸೋಲು
- ತಮಿಳ್ ತಲೈವಾಸ್ ವಿರುದ್ಧ 36-32 ರಿಂದ ಗೆಲುವು
- ಬೆಂಗಾಲ್ ವಾರಿಯರ್ಸ್ ವಿರುದ್ಧ 29-40 ರಿಂದ ಸೋಲು
- ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 32-39 ರಿಂದ ಸೋಲು
- ದಬಾಂಗ್ ಡೆಲ್ಲಿ ವಿರುದ್ಧ 35-25 ರಿಂದ ಸೋಲು
- ಯು ಮುಂಬಾ ವಿರುದ್ಧ 37-38 ರಿಂದ ಸೋಲು
- ಪಾಟ್ನಾ ಪೈರೇಟ್ಸ್ ವಿರುದ್ಧ 31-54 ರಿಂದ ಸೋಲು
ಇದನ್ನೂ ಓದಿ | PKL 11: ವರ್ಕ್ ಆಗದ ಪರ್ದೀಪ್ ನರ್ವಾಲ್ ಕಮ್ಬ್ಯಾಕ್: ಮತ್ತೊಮ್ಮೆ ಕೆಟ್ಟದಾಗಿ ಸೋತ ಬೆಂಗಳೂರು ಬುಲ್ಸ್
ಪ್ರೊ ಕಬಡ್ಡಿ ಲೀಗ್ 2024 ಪಾಯಿಂಟ್ಸ್ ಟೇಬಲ್
1) ಹರಿಯಾಣ ಸ್ಟೀಲರ್ಸ್ - 41 ಅಂಕಗಳು
2) ಯು ಮುಂಬಾ - 39 ಅಂಕಗಳು
3) ಪಾಟ್ನಾ ಪೈರೇಟ್ಸ್ - 38 ಅಂಕಗಳು
4) ಪುಣೇರಿ ಪಲ್ಟನ್ - 37 ಅಂಕಗಳು
5) ಜೈಪುರ ಪಿಂಕ್ ಪ್ಯಾಂಥರ್ಸ್ - 35 ಅಂಕಗಳು
6) ದಬಾಂಗ್ ದೆಹಲಿ KC - 32 ಅಂಕಗಳು
7) ತೆಲುಗು ಟೈಟಾನ್ಸ್ - 32 ಅಂಕಗಳು
8) ತಮಿಳ್ ತಲೈವಾಸ್ - 28 ಅಂಕಗಳು
9) ಯುಪಿ ಯೋಧಾಸ್ - 28 ಅಂಕಗಳು
10) ಬೆಂಗಾಲ್ ವಾರಿಯರ್ಸ್ - 23 ಅಂಕಗಳು
11) ಬೆಂಗಳೂರು ಬುಲ್ಸ್ - 14 ಅಂಕಗಳು
12) ಗುಜರಾತ್ ಜೈಂಟ್ಸ್ - 12 ಅಂಕಗಳು