logo
ಕನ್ನಡ ಸುದ್ದಿ  /  ಕ್ರೀಡೆ  /  Pro Kabaddi League: ಐಪಿಎಲ್ ಬಳಿಕ ಡಬ್ಲ್ಯೂಪಿಎಲ್ ಬಂತು; ಈಗ ಬರ್ತಾ ಇದೆ ಪ್ರೊ ಕಬಡ್ಡಿ ಲೀಗ್ ಮಹಿಳಾ ಆವೃತ್ತಿ

Pro Kabaddi League: ಐಪಿಎಲ್ ಬಳಿಕ ಡಬ್ಲ್ಯೂಪಿಎಲ್ ಬಂತು; ಈಗ ಬರ್ತಾ ಇದೆ ಪ್ರೊ ಕಬಡ್ಡಿ ಲೀಗ್ ಮಹಿಳಾ ಆವೃತ್ತಿ

Jayaraj HT Kannada

Mar 02, 2023 07:09 PM IST

google News

ಪ್ರೊ ಕಬಡ್ಡಿ ಲೀಗ್ ಮಹಿಳಾ ಆವೃತ್ತಿಗೆ ಸಿದ್ಧತೆ

    • “ಪುರುಷರ ಲೀಗ್‌ನಲ್ಲಿ ನಾವು ಕಂಡ ಯಶಸ್ಸಿನಿಂದಾಗಿ ವೃತ್ತಿಪರ ಮಹಿಳಾ ಕಬಡ್ಡಿ ಲೀಗ್‌ ಅನ್ನು ಆಯೋಜಿಸಲು ನಾವು ಯೋಜನೆ ಹಾಕಿದ್ದೇವೆ. ಅಲ್ಲದೆ ಭಾರತದಲ್ಲಿ ಕಬಡ್ಡಿಯನ್ನು ಆಧುನಿಕ ವಿಶ್ವ ದರ್ಜೆಯ ಕ್ರೀಡೆಯಾಗಿ ಬೆಳೆಸುವುದು ನಮ್ಮ ಆದ್ಯತೆಯಾಗಿದೆ”
ಪ್ರೊ ಕಬಡ್ಡಿ ಲೀಗ್ ಮಹಿಳಾ ಆವೃತ್ತಿಗೆ ಸಿದ್ಧತೆ
ಪ್ರೊ ಕಬಡ್ಡಿ ಲೀಗ್ ಮಹಿಳಾ ಆವೃತ್ತಿಗೆ ಸಿದ್ಧತೆ (PKL)

ದೇಶದಲ್ಲಿ ಪುರುಷರ ಪ್ರೊ ಕಬಡ್ಡಿ ಲೀಗ್‌(Pro Kabaddi League) ಭಾರಿ ಯಶಸ್ಸನ್ನು ಗಳಿಸಿದೆ. ಈ ಯಶಸ್ಸಿನಿಂದ ಉತ್ತೇಜಿತರಾಗಿರುವ ಪ್ರೊ ಕಬಡ್ಡಿ ಲೀಗ್‌ನ ಸಂಘಟಕರು ಈಗ ದೇಶದಲ್ಲಿ ವೃತ್ತಿಪರ ಫ್ರಾಂಚೈಸ್ ಆಧಾರಿತ ಮಹಿಳಾ ಪಂದ್ಯಾವಳಿಯನ್ನು ಕೂಡಾ ಆರಂಭಿಸುವ ಲೆಕ್ಕಾಚಾರ ಹಾಕುತ್ತಿದ್ದಾರೆ. ಹೀಗಾಗಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆಯನ್ನು ಉನ್ನತ ಮಟ್ಟದಲ್ಲಿ ಅನ್ವೇಷಿಸಲಾಗುತ್ತಿದೆ.

ಪ್ರೊ ಕಬಡ್ಡಿ ಲೀಗ್‌ ಇದೀಗ 10ನೇ ವರ್ಷಕ್ಕೆ ಕಾಲಿಟ್ಟಿದೆ. ಈ ನಿಟ್ಟಿನಲ್ಲಿ ಪಿಕೆಎಲ್‌ನ ಸಂಘಟಕರಾಗಿರುವ ಮಶಾಲ್ ಸ್ಪೋರ್ಟ್ಸ್(Mashal Sports), ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ (Amateur Kabaddi Federation of India) ಮತ್ತು ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಶನ್ (International Kabaddi Federation) ಸಹಯೋಗದಲ್ಲಿ ವನಿತೆಯರ ಲೀಗ್ ಅನ್ನು ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ.

“ಪುರುಷರ ಲೀಗ್‌ನಲ್ಲಿ ನಾವು ಕಂಡ ಯಶಸ್ಸಿನಿಂದಾಗಿ ವೃತ್ತಿಪರ ಮಹಿಳಾ ಕಬಡ್ಡಿ ಲೀಗ್‌ ಅನ್ನು ಆಯೋಜಿಸಲು ನಾವು ಯೋಜನೆ ಹಾಕಿದ್ದೇವೆ. ಅಲ್ಲದೆ ಭಾರತದಲ್ಲಿ ಕಬಡ್ಡಿಯನ್ನು ಆಧುನಿಕ ವಿಶ್ವ ದರ್ಜೆಯ ಕ್ರೀಡೆಯಾಗಿ ಬೆಳೆಸುವುದು ನಮ್ಮ ಆದ್ಯತೆಯಾಗಿದೆ,” ಎಂದು ಮಶಾಲ್ ಸ್ಪೋರ್ಟ್ಸ್ ಸಿಇಒ ಮತ್ತು ಪಿಕೆಎಲ್ ಕಮಿಷನರ್ ಅನುಪಮ್ ಗೋಸ್ವಾಮಿ (Anupam Goswami) ಹೇಳಿದ್ದಾರೆ. “ನಾವು ಮಹಿಳಾ ಲೀಗ್ ಅನ್ನು ಪ್ರಾರಂಭಿಸಲು AKFI ಮತ್ತು ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಶನ್ ಸೇರಿದಂತೆ ನಮ್ಮ ವಿವಿಧ ಪಾಲುದಾರರೊಂದಿಗೆ ಕೆಲಸ ಮಾಡುತ್ತೇವೆ,” ಎಂದು ಅವರು ತಿಳಿಸಿದ್ದಾರೆ.

ಫೈರ್‌ಬರ್ಡ್ಸ್, ಐಸ್‌ಡಿವಾಸ್ ಮತ್ತು ಸ್ಟಾರ್ಮ್ ಕ್ವೀನ್ಸ್ ಎಂಬ ಮೂರು ತಂಡಗಳನ್ನು ಒಳಗೊಂಡ ವಿಮೆನ್ಸ್‌ ಕಬಡ್ಡಿ ಚಾಲೆಂಜ್ (Women's Kabaddi Challenge) ಎಂಬ ಪ್ರಾಯೋಗಿಕ ಪಂದ್ಯಾವಳಿಯನ್ನು 2016ರಲ್ಲಿ ಆಯೋಜಿಸಲಾಗಿತ್ತು.

2014ರ ಇಂಚಿಯಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡವನ್ನು ಮುನ್ನಡೆಸಿದ್ದ ಮಾಜಿ ನಾಯಕಿ ವಿ ತೇಜೆಸ್ವಿನಿ ಬಾಯಿ (V Tejeswini Bai), ಮಹಿಳಾ ಲೀಗ್ ರೂಪುಗೊಂಡರೆ ದೊಡ್ಡ ಕನಸು ನನಸಾಗುತ್ತದೆ ಎಂದು ಹೇಳಿದ್ದಾರೆ. “2014ರಲ್ಲಿ ಪ್ರೊ ಕಬಡ್ಡಿ ಲೀಗ್ ಪ್ರಾರಂಭವಾದಾಗಿನಿಂದ, ಭಾರತದಲ್ಲಿ ಮಹಿಳಾ ಕಬಡ್ಡಿ ಆಟಗಾರರು ತಮ್ಮದೇ ಆದ ವೃತ್ತಿಪರ ಕಬಡ್ಡಿ ಲೀಗ್‌ಗಾಗಿ ಹಾತೊರೆಯುತ್ತಿದ್ದಾರೆ” ಎಂದು ಸ್ಟಾರ್ಮ್ ಕ್ವೀನ್ಸ್ ತಂಡದ ನಾಯಕಿ ತೇಜೆಸ್ವಿನಿ ಹೇಳಿದ್ದಾರೆ.

“ಈಗ, ಪಿಕೆಎಲ್‌ನ ಮಹಿಳಾ ಆವೃತ್ತಿ ನಡೆಯುತ್ತಿರುವುದರಿಂದ ಭಾರತದ ಪ್ರತಿಯೊಬ್ಬ ಮಹಿಳಾ ಕಬಡ್ಡಿ ಅಥ್ಲೀಟ್‌ಗೆ ಇದೊಂದು ದೊಡ್ಡ ಕನಸು ನನಸಾಗುವಂತಹ ಸಮಯ. ಅಲ್ಲದೆ ಇತರ ದೇಶಗಳ ಮಹಿಳಾ ಕಬಡ್ಡಿ ಕ್ರೀಡಾಪಟುಗಳಿಗೂ ಇದೊಂದು ಉತ್ತಮ ಅವಕಾಶವಾಗಲಿದೆ” ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತೆ ಹೇಳಿದ್ದಾರೆ.

“ಪ್ರೊ ಕಬಡ್ಡಿಯು ಭಾರತದಾದ್ಯಂತ ಪುರುಷರ ಕಬಡ್ಡಿ ಕ್ರೀಡಾಪಟುಗಳ ಜೀವನ ಮತ್ತು ಚಿತ್ರಣವನ್ನು ಪರಿವರ್ತಿಸಿದೆ” ಎಂದು ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಅಜಯ್ ಠಾಕೂರ್ ಹೇಳಿದ್ದಾರೆ.

ಪಿಕೆಎಲ್‌ನಲ್ಲಿ ಅತ್ಯಧಿಕ ಅಂಕ ಗಳಿಸಿದ ರೈಡರ್ ಪರ್ದೀಪ್ ನರ್ವಾಲ್ (Pardeep Narwal) ಕೂಡಾ, ಠಾಕೂರ್ ಅವರ ಅಭಿಪ್ರಾಯಗಳನ್ನು ಪ್ರತಿಧ್ವನಿಸಿದರು. “ಪ್ರೊ ಕಬಡ್ಡಿ ಲೀಗ್‌ನ ಗುಣಮಟ್ಟ ಮತ್ತು ಜನಪ್ರಿಯತೆಯು ಕಬಡ್ಡಿ ಆಟಗಾರರಾಗಿ ಹೆಮ್ಮೆ ಮತ್ತು ಗೌರವವನ್ನು ಪಡೆಯಲು ನಮಗೆ ಅನುವು ಮಾಡಿಕೊಟ್ಟಿದೆ. ಅದೇ ರೀತಿ ವನಿತೆಯರ ಪಿಕೆಎಲ್‌ ನಮ್ಮ ಮಹಿಳಾ ಕ್ರೀಡಾಪಟುಗಳಿಗೆ ಅದೇ ರೀತಿಯ ಹೆಸರು ಮತ್ತು ಬಹುಮಾನವನ್ನು ಖಾತರಿಪಡಿಸುತ್ತದೆ ಎಂದು ನನಗೆ ತಿಳಿದಿದೆ,” ಎಂದು ಅವರು ಹೇಳಿದರು.

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ