logo
ಕನ್ನಡ ಸುದ್ದಿ  /  ಕ್ರೀಡೆ  /  Ram Baboo Profile: ದಿನಗೂಲಿಗಾಗಿ ಬೆವರಿಳಿಸಿದ್ದ ಹಳ್ಳಿ ಹುಡುಗನಿಗೆ ಏಷ್ಯನ್ ಗೇಮ್ಸ್ ಪದಕ; ಇದು ರಾಮ್ ಬಾಬೂ ಬೆವರಿನ ಕತೆ

Ram Baboo Profile: ದಿನಗೂಲಿಗಾಗಿ ಬೆವರಿಳಿಸಿದ್ದ ಹಳ್ಳಿ ಹುಡುಗನಿಗೆ ಏಷ್ಯನ್ ಗೇಮ್ಸ್ ಪದಕ; ಇದು ರಾಮ್ ಬಾಬೂ ಬೆವರಿನ ಕತೆ

Jayaraj HT Kannada

Oct 06, 2023 02:10 PM IST

google News

ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ರಾಮ್ ಬಾಬೂ ವ್ಯಕ್ತಿ ಚಿತ್ರಣ

    • Ram Baboo Profile in Kannada:  ಏಷ್ಯನ್‌ ಗೇಮ್ಸ್‌ 35 ಕಿಮೀ ಓಟದ ನಡಿಗೆ ಮಿಶ್ರ ತಂಡ ವಿಭಾಗದಲ್ಲಿ ಭಾರತದ ರಾಮ್ ಬಾಬೂ ಕಂಚಿನ ಪದಕ ಗೆದ್ದಿದ್ದಾರೆ. ಇವರ ವ್ಯಕ್ತಿ ಬದುಕಿನ ಚಿತ್ರಣ ಇಲ್ಲಿದೆ.
ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ರಾಮ್ ಬಾಬೂ ವ್ಯಕ್ತಿ ಚಿತ್ರಣ
ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ರಾಮ್ ಬಾಬೂ ವ್ಯಕ್ತಿ ಚಿತ್ರಣ

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ‌ (Asian Games 2023) ಭಾರತದ ರಾಮ್ ಬಾಬೂ (Ram Baboo) ಎಂಬ ಯುವಕ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಅದು 35 ಕಿಮೀ ಓಟದ ನಡಿಗೆ ಮಿಶ್ರ ತಂಡ ವಿಭಾಗದಲ್ಲಿ. ಮಂಜು ರಾಣಿ ಜೊತೆಗೂಡಿ ಕಂಚಿನ ಪದಕ ಗೆದ್ದ ಉತ್ತರ ಪ್ರದೇಶದ ಈ ಯುವಕನ ಕತೆಯನ್ನು ನಾವು ಹೇಳಲೇ ಬೇಕು. ನೀವು ಕೇಳಲೇಬೇಕು.

ಉತ್ತರ ಪ್ರದೇಶದ ಬಡ ಗ್ರಾಮವೊಂದರಲ್ಲಿ ದಿನಗೂಲಿ ಮಾಡುತ್ತಿದ್ದ ಸಾಮಾನ್ಯ ಕಾರ್ಮಿಕನೊಬ್ಬನ ಮಗ, ಈಗ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆದ್ದಿದ್ದಾನೆ. ಈ ಕಂಚು ಈ ಯುವಕನಿಗೆ ಬಂಗಾರಕ್ಕಿಂತ ಹೆಚ್ಚು. ಅದಕ್ಕೆ ಆತನ ಶ್ರಮ ಮತ್ತು ಆತ ಬಂದ ಹಿನ್ನೆಲೆಯೇ ಪ್ರಮುಖ ಕಾರಣ.

ಇಚ್ಛಾಶಕ್ತಿಯೊಂದಿದ್ದರೆ, ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ನಮ್ಮ ನಿಮ್ಮ ನಡುವಣ ಸಮಾಜದಲ್ಲಿ ಸಾವಿರಾರು ಮಂದಿ ಕಾಣಸಿಗುತ್ತಾರೆ. ಆಸಕ್ತಿ ಮತ್ತು ಕಠಿಣ ಪರಿಶ್ರಮದಿಂದ ನಮ್ಮ ಹಣೆಬರಹವನ್ನು ನಾವೇ ಬರೆದುಕೊಳ್ಳಬಹುದು. ರಾಮ್ ಬಾಬೂ ಮಾಡಿರುವುದು ಅದನ್ನೇ.‌

ಹಳ್ಳಿಯಿಂದ ದಿಲ್ಲಿವರೆಗೆ

ಉತ್ತರ ಪ್ರದೇಶದ ಸೋನ್‌ಭದ್ರಾ ಜಿಲ್ಲೆಯ ಬೌರ್‌ ಎಂಬ ಕುಗ್ರಾಮದವರಾದ ಬಾಬೂ, ಇದೀಗ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಿಂತಿದ್ದಾರೆ. ಮ್ಯಾರಥಾನ್ ಓಟಗಾರನಾಗಿ ಕ್ರೀಡಾಸಕ್ತಿ ಬೆಳೆಸಿಕೊಂಡ ಅವರು, ಬಳಿಕ ರೇಸ್ ವಾಕಿಂಗ್‌ ಕಡೆಗೆ ಆಸಕ್ತಿ ಬೆಳೆಸಿದರು. ಅದರಲ್ಲೇ ರಾಷ್ಟ್ರೀಯ ಮಟ್ಟ ತಲುಪಿದರು.

ಲಾಕ್‌ಡೌನ್‌ ತಂದ ಸಂಕಷ್ಟ

ತರಬೇತಿಗೆ ಕೈಯಲ್ಲಿ ಹಣ ಸಾಲದಿದ್ದಾಗ, ಸ್ವಂತ ದುಡಿಮೆ ಅನಿವಾರ್ಯವಾಯ್ತು. ವಾರಣಾಸಿಯಲ್ಲಿ ವೈಟರ್‌ ಆಗಿ ಮತ್ತು ಪಾರ್ಟ್‌ ಟೈಮ್‌ ಕೊರಿಯರ್ ಪ್ಯಾಕೇಜರ್ ಆಗಿ ಕೆಲಸ ಮಾಡಿ, ತನ್ನ ತರಬೇತಿಗೆ ಬೇಕಾದ ಹಣ ಒಟ್ಟುಗೂಡಿಸಿದರು. ಕೋವಿಡ್‌ ಲಾಕ್‌ಡೌನ್ ಸಮಯದಲ್ಲಿ ಬಾಬೂ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕುಟುಂಬದ ನಿರ್ವಹಣಗೆ ಬೆವರು ಬಸಿಯುತ್ತಿದ್ದ ತಮ್ಮ ತಂದೆಗೆ ಹೆಗಲಾಗಿದವರು ಬಾಬೂ. MGNREGA ಯೋಜನೆಯಡಿ ರಸ್ತೆ ನಿರ್ಮಾಣ ಕೆಲಸದಲ್ಲಿ ತಮ್ಮ ತಂದೆಯೊಂದಿಗೆ ಸೇರಿಕೊಂಡರು.

ನನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದೇನೆ

ಗ್ರಾಮದಲ್ಲಿ ಸಾಮಾನ್ಯ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಬಾಬೂ ಅವರ ತಂದೆ ತಿಂಗಳಿಗೆ 3000ದಿಂದ 3500 ರೂಪಾಯಿ ಸಾಂಪಾದಿಸುತ್ತಾರೆ. ಆರು ಜನರಿರುವ ಕುಟುಂಬವನ್ನು ನಿರ್ವಹಣೆ ಮಾಡಲು ಈ ಮೊತ್ತ ಸಾಲುತ್ತಿರಲಿಲ್ಲ. “ಬದುಕಿನಲ್ಲಿ ನನ್ನಿಂದ ಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದೇನೆ. ವಾರಣಾಸಿಯಲ್ಲಿ ವೈಟರ್‌ ಆಗಿ ಕೆಲಸ ಮಾಡುವುದರಿಂದ ಹಿಡಿದು ನಮ್ಮ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕಾಗಿ ನನ್ನ ತಂದೆಯೊಂದಿಗೆ ಹೊಂಡ ತೋಡುವವರೆಗೆ ಎಲ್ಲವನ್ನೂ ಮಾಡಿದ್ದೇನೆ” ಎಂದು ಇನ್ನೂ 24 ವರ್ಷ ಹರೆಯದ ಬಾಬೂ ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಕಲಿಕೆಯಲ್ಲಿ ನಿರಾಸಕ್ತಿ, ಕ್ರೀಡೆ ಎಂದರೆ ಪ್ರೀತಿ

“ನಾನು ಕಲಿಕೆಯಲ್ಲಿ ತುಂಬಾ ಹಿಂದಿದ್ದೆ. ಅಲ್ಲದೆ ಅಧ್ಯಯನದಲ್ಲಿ ಆಸಕ್ತಿಯೂ ಇರಲಿಲ್ಲ. ಹೀಗಾಗಿ ಕ್ರೀಡೆಯಲ್ಲಿಯೇ ವೃತ್ತಿಬದುಕನ್ನು ಕಟ್ಟಿಕೊಳ್ಳಲು ಬಯಸಿದ್ದೆ. ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ಶಾಲೆಯ ಹಾಸ್ಟೆಲ್ ದೂರದರ್ಶನದಲ್ಲಿ ಮೇರಿ ಕೋಮ್, ಸೈನಾ ನೆಹ್ವಾಲ್, ಸುಶೀಲ್ ಕುಮಾರ್ ಮತ್ತು ಗಗನ್ ನಾರಂಗ್ ಪದಕಗಳನ್ನು ಗೆಲ್ಲುತ್ತಿದ್ದುದನ್ನು ನೋಡುತ್ತಿದ್ದೆ. ಮರುದಿನ ಪತ್ರಿಕೆಗಳ ಮುಖಪುಟಗಳಲ್ಲಿ ಅವರ ಜೀವನಗಾಥೆಗಳು ಬಂದವು. ಅವೆಲ್ಲವನ್ನೂ ನಾನು ಓದಿದೆ. 2012ರ ಒಲಿಂಪಿಕ್ಸ್ ಪದಕ ವಿಜೇತರ ಕುರಿತಾಗಿ ವೃತ್ತಪತ್ರಿಕೆಗಳಲ್ಲಿ ಬಂದ ಲೇಖನಗಳು ಮತ್ತು ಫೋಟೋಗಳ ಕಟಿಂಗ್‌ಗಳನ್ನು ನಾನು ಈಗಲೂ ಇಟ್ಟುಕೊಂಡಿದ್ದೇನೆ. ಆಗಲೇ ನಾನು ಅವರಂತೆಯೇ ಪದಕಗಳನ್ನು ಗೆಲ್ಲಬೇಕೆಂದು ನಿರ್ಧರಿಸಿದೆ” ಎಂದು ಬಾಬೂ ಹೇಳುವಾಗ ಎಂಥವರಿಗೂ ರೋಮಾಂಚನ ಆಗದಿರದು.

ಮ್ಯಾರಥಾನ್ ಓಟದಿಂದ ರೇಸ್ ವಾಕಿಂಗ್‌ ಕಡೆ ಚಿತ್ತ

ಆರಂಭದಲ್ಲಿ 10000ಮೀ ಮತ್ತು 5000ಮೀ ಮ್ಯಾರಥಾನ್ ಓಟಗಳಲ್ಲಿ ಭಾಗವಹಿಸುತ್ತಿದ್ದ ಬಾಬೂ, ಮೊಣಕಾಲಿನ ನೋವು ಅನುಭವಿಸಿದರು. ಆಗ ಸ್ಥಳೀಯ ತರಬೇತುದಾರ ಪ್ರಮೋದ್ ಯಾದವ್ ಅವರ ಸಲಹೆಯ ಮೇರೆಗೆ ರೇಸ್ ವಾಕಿಂಗ್‌ ಕಡೆ ವಾಲಿದರು. ಇದರಿಂದ ಮೊಣಕಾಲಿನ ಮೇಲೆ ಬೀಳುವ ಒತ್ತಡ ಕಡಿಮೆಯಾಯ್ತು.

2017ರಲ್ಲಿ, 17 ವರ್ಷ ವಯಸ್ಸಿನವರಾಗಿದ್ದಾಗಲೇ ಬಾಬೂ ವಾರಣಾಸಿಗೆ ಬಂದರು. ಅಲ್ಲಿ ತರಬೇತುದಾರ ಚಂದ್ರಬಹನ್ ಯಾದವ್ ಅವರೊಂದಿಗೆ ತರಬೇತಿ ಪಡೆಯಲು ಸೇರಿಕೊಂಡರು. ಆರಂಭದಲ್ಲಿ ಮನೆಯವರು ಕೊಟ್ಟ ಹಣದಿಂದ ತಿಂಗಳಿಗೆ 1500 ರೂಪಾಯಿಯ ಬಾಡಿಗೆ ಮನೆ ಪಡೆದರು. ಆ ಬಳಿಕ ಹಣಕ್ಕಾಗಿ ತನ್ನದೇ ಸಂಪಾದನೆ ಅಗತ್ಯವಾಯ್ತು.

ಬಾಡಿಗೆ ಮನೆ, ವೈಟರ್‌ ಕೆಲಸ

“ವೈಟರ್‌ ಕೆಲಸಕ್ಕೆ ತಿಂಗಳಿಗೆ 3000 ರೂಪಾಯಿ ಸಂಬಳ ಸಿಕ್ಕಿತು. ಆದರೆ ಅವರು ನನ್ನನ್ನು ಮಧ್ಯರಾತ್ರಿಯವರೆಗೆ ದುಡಿಸಿಕೊಂಡರು. ನಾನು ತರಬೇತಿಗಾಗಿ 4 ಗಂಟೆಗೆ ಎದ್ದೇಳಬೇಕಾಯಿತು. ಆಗ ನನಗೆ ತುಂಬಾ ಕಷ್ಟವಾಯಿತು. ಜನರು ನನ್ನನ್ನು ಗೌರವಿಸಲಿಲ್ಲ. ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ಕಡೆಗೆ ನಾನು ವಾರಣಾಸಿ ತೊರೆದು ಮತ್ತೆ ಮನೆಗೆ ಮರಳಿದೆ” ಎಂದು ಅವರು ಹೇಳುತ್ತಾರೆ.

ತಂದೆಯೊಂದಿಗೆ ದಿನಗೂಲಿ ಕೆಲಸ

2019ರಲ್ಲಿ ಭೋಪಾಲ್ SAI ಕೇಂದ್ರದ ತರಬೇತುದಾರರಿಂದ ತರಬೇತಿ ಪಡೆದ ಬಾಬೂ, 2020ರ ಫೆಬ್ರವರಿಯಲ್ಲಿ ರಾಷ್ಟ್ರೀಯ ರೇಸ್ ವಾಕ್ ಚಾಂಪಿಯನ್‌ಶಿಪ್‌ನಲ್ಲಿ 50 ಕಿಮೀ ಈವೆಂಟ್‌ನಲ್ಲಿ ಸ್ಪರ್ಧಿಸಿ ನಾಲ್ಕನೇ ಸ್ಥಾನ ಪಡೆದರು. ಆದರೆ ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಭೋಪಾಲ್ ತರಬೇತಿ ಕೇಂದ್ರವನ್ನು ಮುಚ್ಚಲಾಯಿತು. ಹೀಗಾಗಿ ಬಾಬೂ ಮನೆಗೆ ಮರಳಿದರು. ಆಗ ಅವರ ಬದುಕಿನ ಬಂಡಿ ಸಾಗಿಸುವುದು ತೀರಾ ಕಷ್ಟವಾಯ್ತು. ಈ ವೇಳೆ MGNREGA ಯೋಜನೆಯಡಿ ಒಂದೂವರೆ ತಿಂಗಳು ಕೆಲಸ ಸಿಕ್ಕಿತು. ತಂದೆಯೊಂದಿಗೆ ಸೇರಿ ಹೊಂಡ ತೋಡಲು ನೆರವಾದರು. ದಿನಕ್ಕೆ 300ರಿಂದ 400 ರೂಪಾಯಿವರೆಗೆ ಸಂಪಾದನೆ ಮಾಡಿದರು.

ಭಾರತೀಯ ಸೇನೆಯಲ್ಲಿ ಹವಾಲ್ದಾರ್

ಕ್ರೀಡೆಯಿಂದ ದೂರ ಉಳಿದು ಚಡಪಡಿಸಿದ ಬಾಬೂ, ಮತ್ತೆ ಭೋಪಾಲ್‌ಗೆ ಹೊರಟರು. 2021ರ ಫೆಬ್ರವರಿಯಲ್ಲಿ, ರಾಷ್ಟ್ರೀಯ ರೇಸ್ ವಾಕ್ ಚಾಂಪಿಯನ್‌ಶಿಪ್‌ನಲ್ಲಿ 50 ಕಿಮೀ ಓಟದ ನಡಿಗೆಯಲ್ಲಿ ಬೆಳ್ಳಿ ಪದಕ ಗೆದ್ದರು. ಆ ಬಳಿಕ ಕೋಚ್ ಬಸಂತ್ ರಾಣಾ ಅವರ ನೆರವಿನಿಂದ ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ಗೆ ಪ್ರವೇಶ ಗಿಟ್ಟಿಸಿಕೊಂಡರು. 2021ರ ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ಓಪನ್ ಚಾಂಪಿಯನ್‌ಶಿಪ್‌ 35 ಕಿಮೀ ಓಟದ ನಡಿಗೆಯಲ್ಲಿ ಕೊನೆಗೂ ಬಾಬೂ ಚಿನ್ನ ಗೆದ್ದರು. ಅದಾದ ಕೆಲವು ತಿಂಗಳ ನಂತರ ಅವರನ್ನು ಬೆಂಗಳೂರಿನ ರಾಷ್ಟ್ರೀಯ ಶಿಬಿರಕ್ಕೆ ಕರೆಯಲಾಯಿತು. ಕಳೆದ ವರ್ಷ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ 35 ಕಿಮೀ ಓಟದಲ್ಲಿ ಚಿನ್ನ ಗೆದ್ದ ನಂತರ, ಬಾಬೂಗೆ ಭಾರತೀಯ ಸೇನೆಯಲ್ಲಿ ಕೆಲಸ ಸಿಕ್ಕಿತು. ಈಗ ಅವರು ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ