ಶೂಟಿಂಗ್ನಲ್ಲಿ ರಮಿತಾ ಜಿಂದಾಲ್ ಫೈನಲ್‌ಗೆ, ರೋಯಿಂಗ್ನಲ್ಲಿ ಬಾಲರಾಜ್ ಕ್ವಾರ್ಟರ್ಫೈನಲ್ಗೆ; ಪಿವಿ ಸಿಂಧು ಶುಭಾರಂಭ
Jul 28, 2024 02:30 PM IST
ಶೂಟಿಂಗ್ನಲ್ಲಿ ರಮಿತಾ ಜಿಂದಾಲ್ ಫೈನಲ್‌ಗೆ, ರೋಯಿಂಗ್ನಲ್ಲಿ ಬಾಲರಾಜ್ ಕ್ವಾರ್ಟರ್ಫೈನಲ್ಗೆ; ಪಿವಿ ಸಿಂಧು ಶುಭಾರಂಭ
- Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ 2024 ಎರಡನೇ ದಿನದಂದು ಭಾರತ ಭರ್ಜರಿ ಆರಂಭ ಪಡೆದಿದೆ. ಪಿವಿ ಸಿಂಧು ಶುಭಾರಂಭ ಕಂಡರೆ, ಶೂಟಿಂಗ್ನಲ್ಲಿ ರಮಿತಾ ಜಿಂದಾಲ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ರೋಯಿಂಗ್ನಲ್ಲಿ ಬಾಲರಾಜ್ ಪನ್ವರ್ ಅವರು ಕ್ವಾರ್ಟರ್ಫೈನಲ್ಗೇರಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನ ಬ್ಯಾಡ್ಮಿಂಟನ್ನಲ್ಲಿ ಭಾರತೀಯರ ಪರಾಕ್ರಮ ಮುಂದುವರೆದಿದೆ. ಭಾರತದ ಏಸ್ ಷಟ್ಲರ್ ಪಿವಿ ಸಿಂಧು ಅದ್ಧೂರಿ ಆರಂಭ ಪಡೆದರೆ, ಮಹಿಳೆಯರ 10 ಮೀಟರ್ ಏರ್ ರೈಫಲ್ ಅರ್ಹತಾ ಸುತ್ತಿನಲ್ಲಿ ರಮಿತಾ ಫೈನಲ್ಗೇರಿದ್ದಾರೆ. ಹಾಗೆಯೇ ರೋಯಿಂಗ್ನಲ್ಲಿ ಬಾಲರಾಜ್ ಪನ್ವರ್ ಕ್ವಾರ್ಟರ್ಫೈನಲ್ಗೇರಿದ್ದಾರೆ.
ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, ಸ್ಟಾರ್ ಷಟ್ಲರ್ ಪಿವಿ ಸಿಂಧು ತನ್ನ ಮೊದಲ ಪಂದ್ಯದಲ್ಲೇ ಗೆದ್ದು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಶುಭಾರಂಭ ಕಂಡಿದ್ದಾರೆ. ಇಂದು (ಜುಲೈ 28) ನಡೆದ ಎಂ ಗುಂಪಿನ ಪಂದ್ಯದಲ್ಲಿ ಮಾಲ್ಡೀವ್ಸ್‌ನ ಫಾತಿಮತ್ ನಬಾಹಾ ಅಬ್ದುಲ್ ರಜಾಕ್ ವಿರುದ್ಧ 21-9, 21-6 ನೇರ ಸೆಟ್ಗಳಿಂದ ಗೆಲುವು ಸಾಧಿಸುವ ಮೂಲಕ ಪಿವಿ ಸಿಂಧು ಅಭಿಯಾನ ಆರಂಭಿಸಿದ್ದಾರೆ.
ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸಿದ ಸಿಂಧು ಅವರು, ಎದುರಾಳಿಗೆ ಎಲ್ಲೂ ಅವಕಾಶವೇ ನೀಡಲಿಲ್ಲ. ಪ್ರತಿ ಹಂತದಲ್ಲೂ ಅಗ್ರೆಸ್ಸಿವ್ ಆಟವನ್ನು ತೋರಿಸಿದ ಭಾರತದ ಏಸ್ ಷಟ್ಲರ್, ಸುಲಭ ಜಯ ಸಾಧಿಸಿದರು. ಸಿಂಧು ತನ್ನ ಎರಡನೇ ಪಂದ್ಯದಲ್ಲಿ ಕ್ರಿಸ್ಟಿನ್ ಕುಬಾ ವಿರುದ್ಧ ಜುಲೈ 31ರಂದು ಕಣಕ್ಕಿಳಿಯಲಿದ್ದಾರೆ. ರಿಯೊ ಮತ್ತು ಟೊಕಿಯೊ ಒಲಿಂಪಿಕ್ಸ್ನಲ್ಲಿ ಪಿಂಧು ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದು, ಈ ಬಾರಿ ಪದಕದ ಬಣ್ಣ ಬದಲಿಸುವ ಗುರಿಯಲ್ಲಿದ್ದಾರೆ.
ಜುಲೈ 27ರಂದು ನಡೆದ ಪುರುಷರ ಸಿಂಗಲ್ಸ್ನಲ್ಲಿ ಲಕ್ಷ್ಯ ಸೇನ್, ಕೆವಿನ್ ಕಾರ್ಡನ್ ವಿರುದ್ಧ 21-8, 22-20 ಅಂತರದ ಗೆಲುವು ಮತ್ತು ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ- ಚಿರಾಗ್ ಶೆಟ್ಟಿ ಅವರು ಫ್ರಾನ್ಸ್‌ನ ಲುಕಾಸ್-ಲಾಬರ್ ರೊನನ್ ವಿರುದ್ಧ 21-17, 21-14 ಸೆಟ್ಗಳಿಂದ ಗೆದ್ದರು. ಆದರೆ ಮಹಿಳೆಯರ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ತನಿಷಾ ಕ್ರಾಸ್ತೊ ತಮ್ಮ ಮೊದಲ ಪಂದ್ಯದಲ್ಲೇ ಮುಗ್ಗರಿಸಿದರು. ದಕ್ಷಿಣ ಕೊರಿಯಾದ ಕಿಮ್ ಸೊ ಯಿಯಾಂಗ್ ಮತ್ತು ಕಾಗ್ ಹೀ ಯಾಂಗ್ ವಿರುದ್ಧ 18-21, 10-21 ಸೋತರು.
ಶೂಟಿಂಗ್ನಲ್ಲಿ ರಮಿತಾ ಜಿಂದಾಲ್ ಫೈನಲ್ ಅರ್ಹತೆ
ಮಹಿಳೆಯರ 10 ಮೀಟರ್ ಏರ್ ರೈಫಲ್ ಅರ್ಹತಾ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರಮಿತಾ ಜಿಂದಾಲ್ ಅವರು 631.5 ಅಂಕಗಳೊಂದಿಗೆ 5ನೇ ಸ್ಥಾನ ಪಡೆಯುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದರು. ಕಣದಲ್ಲಿದ್ದ 43 ಶೂಟರ್ಗಳ ಪೈಕಿ ಅಗ್ರ 8 ಮಂದಿ ಚಿನ್ನದ ಪದಕದ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದಾರೆ. ಆದರೆ ಮತ್ತೊಬ್ಬ ಶೂಟರ್ ಎಲವೆನಿಲ್ ವಲರಿವನ್ ಅವರು 10ನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆಯಲು ವಿಫಲರಾದರು.
ರೋಯಿಂಗ್ನಲ್ಲಿ ಕ್ವಾರ್ಟರ್ಫೈನಲ್ಗೇರಿದ ಬಾಲರಾಜ್
ಪುರುಷರ ರೋಯಿಂಗ್ ಸ್ಕಲ್ಸ್ ಈವೆಂಟ್‌ನಲ್ಲಿ ಭಾರತದ ಬಾಲರಾಜ್ ಪನ್ವರ್ ಕ್ವಾರ್ಟರ್ಫೈನಲ್ಗೆ ಅರ್ಹತೆ ಪಡೆದಿದ್ದಾರೆ. ಈ ಸ್ಪರ್ಧೆಯ ರೆಪೆಚೇಜ್ 2 ಸುತ್ತಿನಲ್ಲಿ ಬಾಲರಾಜ್ 7 ನಿಮಿಷ, 12 ಸೆಕೆಂಡ್, 41 ಮಿಲಿ ಸೆಕೆಂಡ್ಗಳೊಂದಿಗೆ 2ನೇ ಸ್ಥಾನ ಪಡೆದು ಮುಂದಿನ ಸುತ್ತಿಗೆ ಆಯ್ಕೆಯಾದರು. ಇದರೊಂದಿಗೆ ರೋಯಿಂಗ್ ಈವೆಂಟ್‌ನ ಕ್ವಾಲಿಫೈಯರ್ ಸುತ್ತಿಗೆ ಅರ್ಹತೆ ಪಡೆದ 4ನೇ ಭಾರತೀಯ ಎಂಬ ಹೆಗ್ಗಳಿಕಗೂ ಪಾತ್ರರಾಗಿದ್ದಾರೆ. ಬಾಲರಾಜ್ ಈ ಸ್ಪರ್ಧೆಯ ಮೊದಲ ಸುತ್ತಿನಲ್ಲಿ 4ನೇ ಸ್ಥಾನದೊಂದಿಗೆ ಮುಗಿಸಿ ರೆಪೆಚೇಜ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದ್ದರು.
ಪ್ರೀತಿ ಪವಾರ್ ಸಖತ್ ಪಂಚ್
ಶನಿವಾರ ತಡರಾತ್ರಿ ಜರುಗಿದ್ದ ಮಹಿಳೆಯರ 54 ಕೆಜಿ ವಿಭಾಗದ ಬಾಕ್ಸಿಂಗ್ನಲ್ಲಿ ಭಾರತದ ಬಾಕ್ಸರ್ ಪ್ರೀತಿ ಪವಾರ್ ಎದುರಾಳಿಗೆ ಸಖತ್ ಪಂಚ್ ಕೊಟ್ಟು ಪ್ರೀ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ವಿಫಲರಾದ ವಿಯೆಟ್ನಾಂನ ವೋ ಥಿ ಕಿಮ್ ಅನ್ಹ್ ವಿರುದ್ಧ 0-5 ಅಂತರದ ಗೆಲುವು ದಾಖಲಿಸಿದ್ದಾರೆ.