US Open 2023: 3ನೇ ಸುತ್ತಿಗೆ ಪ್ರವೇಶಿಸಿದ ಜೋಕೊವಿಕ್, ಅಲ್ಕರಾಜ್; ಮತ್ತೆ ಅಗ್ರಸ್ಥಾನ ಪಡೆಯುವೆ ಎಂದ ಕಾರ್ಲೋಸ್
Sep 02, 2023 01:09 PM IST
ಕಾರ್ಲೋಸ್ ಅಲ್ಕರಾಜ್ ಮತ್ತು ನೋವಾಕ್ ಜೋಕೋವಿಕ್.
- US Open 2023: ಗುರುವಾರ ರಾತ್ರಿ ನಡೆದ ಯುಎಸ್ ಓಪನ್‌ನಲ್ಲಿ ದಕ್ಷಿಣ ಆಫ್ರಿಕಾದ ಲಾಯ್ಡ್ ಹ್ಯಾರಿಸ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿದ ಕಾರ್ಲೋಸ್ ಅಲ್ಕರಾಜ್ ಮೂರನೇ ಸುತ್ತಿಗೆ ಪ್ರವೇಶಿಸಿದರು.
ದಿಗ್ಗಜ ನೋವಾಕ್ ಜೋಕೋವಿಕ್ ಅವರನ್ನು (Novak Djokovic) ಸೋಲಿಸಿ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದ ಸ್ಪೇನ್ನ ಯುವ ಆಟಗಾರ ಕಾರ್ಲೋಸ್ ಅಲ್ಕರಾಜ್ (Carlos Alcaraz), ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲೂ (US Open 2023) ತಮ್ಮ ಅದ್ಭುತ ಪ್ರದರ್ಶನ ಮುಂದುವರೆಸಿದ್ದಾರೆ. ಎರಡನೇ ಸುತ್ತಿನಲ್ಲಿ ಲಾಯ್ಡ್ ಹ್ಯಾರಿಸ್ (Lloyd Harris) ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಮೂರನೇ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಆಗಸ್ಟ್ 31ರ ರಾತ್ರಿ ಆರ್ಥರ್ ಆ್ಯಷ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕಾರ್ಲೋಸ್ ಅಲ್ಕರಾಜ್, ಸೌತ್ ಆಫ್ರಿಕಾದ ಲಾಯ್ಡ್ ಹ್ಯಾರಿಸ್ ವಿರುದ್ಧ 6-3, 6-1, 7-6(4) ಸೆಟ್‌ಗಳಿಂದ ಗೆದ್ದರು. ಈ ಭರ್ಜರಿ ಗೆಲುವುಗಳ ಮೂಲಕ ಟೆನಿಸ್ ಲೋಕದಲ್ಲಿ ಮತ್ತೆ ನಂಬರ್ವನ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಯುಎಸ್ ಓಪನ್ ಟೂರ್ನಿಯ ಮೊದಲ ಸುತ್ತಿಗೂ ಮುನ್ನ ಅಗ್ರಸ್ಥಾನದಲ್ಲಿದ್ದ ಅಲ್ಕರಾಜ್, ಸದ್ಯ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಜೋಕೋವಿಕ್ 3ನೇ ಸುತ್ತಿಗೆ
ಟೆನಿಸ್ ಲೋಕದ ದಿಗ್ಗಜ ಆಟಗಾರ ಸರ್ಬಿಯಾದ ನೋವಾಕ್ ಜೋಕೋವಿಕ್ ಅವರು ಮೊದಲ ಸುತ್ತಿನಲ್ಲಿ ಅಲೆಕ್ಸಾಂಡರ್ ಮುಲ್ಲರ್ (Alexander Muller) ವಿರುದ್ಧ ಜಯಿಸಿ ನಂಬರ್ 1 ಶ್ರೇಯಾಂಕ ತಲಿಪಿದ್ದರು. ಜೋಕೋವಿಕ್ ಕೂಡ ಎರಡನೇ ಸುತ್ತಿನಲ್ಲಿ ಬಿ. ಜಪಾಟಾ ಮಿರಾಲ್ಲೆಸ್ (B. Zapata Miralles) ವಿರುದ್ಧ 6-4, 6-1, 6-1 ನೇರ ಗೇಮ್ಗಳ ಅಂತರದಿಂದ ಜಯಿಸಿದ್ದು, 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ.
3ನೇ ಸುತ್ತಿನಲ್ಲಿ ಯಾರ ವಿರುದ್ಧ ಸೆಣಸಾಟ?
ನೋವಾಕ್ ಜೋಕೋವಿಕ್, ತಮ್ಮ 3ನೇ ಸುತ್ತಿನಲ್ಲಿ ತಮ್ಮದೇ ದೇಶ ಸರ್ಬಿಯಾದ ಲಾಸ್ಲೋ ಡಿಜೆರೆ (Laslo Djere) ಅವರನ್ನು ಎದುರಿಸಲಿದ್ದಾರೆ. ಇನ್ನು 3ನೇ ಸುತ್ತಿನಲ್ಲಿ ಬ್ರಿಟಿಷ್ ಟೆನಿಸ್ ತಾರೆ ಡಾನ್ ಇವಾನ್ಸ್ (Ivan Don) ಅವರನ್ನು ಕಾರ್ಲೋಸ್ ಅಲ್ಕರಾಜ್ ಎದುರಿಸಲು ಸಜ್ಜಾಗಿದ್ದಾರೆ. ಈ ಪಂದ್ಯವು ನಾಳೆ ಜರುಗಲಿದೆ. ಸದ್ಯ ನಂಬರ್ 1 ಪಟ್ಟ ಕಳೆದುಕೊಂಡಿರುವ ಅಲ್ಕರಾಜ್, ಪ್ರಶಸ್ತಿ ಗೆಲ್ಲುವುದರ ಜೊತೆಗೆ ಮತ್ತೆ ಅಗ್ರಸ್ಥಾನಕ್ಕೆ ಏರುವೆ ಎಂದು ಶಪಥ ಮಾಡಿದ್ದಾರೆ.
ಮತ್ತೆ ಅಗ್ರಸ್ಥಾನಕ್ಕೇರುವೆ ಎಂದ ಅಲ್ಕರಾಜ್
ಯುಎಸ್ ಓಪನ್ ನಂತರ ಅಗ್ರಸ್ಥಾನಕ್ಕೆ ಏರಿರುವ ನೊವಾಕ್ ಜೊಕೊವಿಕ್ ಅವರಿಂದ ನಂಬರ್ 1 ಪಟ್ಟವನ್ನು ಕಸಿದುಕೊಳ್ಳುತ್ತೇನೆ ಎಂದು ಅಲ್ಕರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಾಧ್ಯವಾದಷ್ಟು ಬೇಗ ವಿಶ್ವದ ನಂ 1 ಶ್ರೇಯಾಂಕ ಪಡೆಯಲು ಯತ್ನಿಸುತ್ತೇನೆ. ಅದು ನನ್ನ ಗುರಿ. ನಂಬರ್ 1 ಸ್ಥಾನಕ್ಕೆ ಏರುವ ಸಲುವಾಗಿ ಸತತ ಪರಿಶ್ರಮ ಹಾಕುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಈ ವರ್ಷದಲ್ಲಿ ಬಹಳಷ್ಟು ಟೂರ್ನಿಗಳು ನಡೆಯಲಿವೆ. ಈ ಟೂರ್ನಿ ಮುಗಿಯುವ ಮೊದಲು ಅಥವಾ ವರ್ಷಾಂತ್ಯಕ್ಕೂ ಮುನ್ನ ನಾನು ವಿಶ್ವ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಅಲಂಕರಿಸುವೆ ಎಂದು ಅಲ್ಕರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 9885 ಅಂಕ ಪಡೆದಿರುವ ನೋವಾಕ್ ಜೋಕೋವಿಕ್ ಅಗ್ರಸ್ಥಾನದಲ್ಲಿದ್ದರೆ, 7905 ಅಂಕ ಪಡೆದಿರುವ ಅಲ್ಕರಾಜ್ 2ನೇ ಶ್ರೇಯಾಂಕದಲ್ಲಿದ್ದಾರೆ.