logo
ಕನ್ನಡ ಸುದ್ದಿ  /  ಕ್ರೀಡೆ  /  ವರ್ಷದ ಬಳಿಕ ಸಿಂಗಲ್ಸ್‌ ಗೆದ್ದ ರಫೆಲ್ ನಡಾಲ್; ಗಾಯದ ಬಳಿಕ ಗೆಲುವಿನ ಲಯ ಕಂಡ ಗ್ರ್ಯಾಂಡ್ ಸ್ಲಾಮ್‌ ದೊರೆ

ವರ್ಷದ ಬಳಿಕ ಸಿಂಗಲ್ಸ್‌ ಗೆದ್ದ ರಫೆಲ್ ನಡಾಲ್; ಗಾಯದ ಬಳಿಕ ಗೆಲುವಿನ ಲಯ ಕಂಡ ಗ್ರ್ಯಾಂಡ್ ಸ್ಲಾಮ್‌ ದೊರೆ

Jayaraj HT Kannada

Jan 02, 2024 05:21 PM IST

google News

ರಫೆಲ್ ನಡಾಲ್

    • Rafael Nadal: ಸ್ಪೇನ್ ಟೆನಿಸ್‌ ದೊರೆ ರಫೆಲ್ ನಡಾಲ್ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ ಡೊಮಿನಿಕ್ ಥೀಮ್‌ ವಿರುದ್ಧ ಗೆದ್ದಿದ್ದಾರೆ. ರೋಚಕ ಪಂದ್ಯದಲ್ಲಿ 7-5, 6-1 ಅಂತರದಿಂದ ಗೆದ್ದು ಪ್ರೀ ಕ್ವಾರ್ಟರ್ಸ್ ಹಂತಕ್ಕೆ ಲಗ್ಗೆ ಹಾಕಿದ್ದಾರೆ.
ರಫೆಲ್ ನಡಾಲ್
ರಫೆಲ್ ನಡಾಲ್ (AP)

ಟೆನ್ನಿಸ್‌ ಲೋಕದ ಬಲಿಷ್ಠ ಆಟಗಾರ ರಫೆಲ್ ನಡಾಲ್ (Rafael Nadal), ಮತ್ತೆ ತಮ್ಮ ಹಳೆ ಖದರ್‌ ಪ್ರದರ್ಶಿಸಿದ್ದಾರೆ. ಸೊಂಟದ ಗಾಯದಿಂದಾಗಿ ಸುಮಾರು 12 ತಿಂಗಳ ಕಾಲ ಟೆನಿಸ್‌ ಕೋರ್ಟ್‌ನಿಂದ ಹೊರಗುಳಿದಿದ್ದ ಸ್ಟಾರ್‌ ಆಟಗಾರ, ಇದೀಗ ಜಯದ ಅಭಿಯಾನ ಮರುಆರಂಭಿಸಿದಾರೆ. ಇತ್ತೀಚೆಗೆ ಡಬಲ್ಸ್‌ ಪಂದ್ಯದಲ್ಲಿ ಸೋತಿದ್ದ ನಡಾಲ್‌, ಇದೀಗ ತಾವು ದಾಖಲೆಯ 22 ಗ್ರ್ಯಾಂಡ್ ಸ್ಲಾಮ್‌ ಪ್ರಶಸ್ತಿ ಗೆದ್ದ ಸಿಂಗಲ್ಸ್‌ ವಿಭಾಗದಲ್ಲಿ ಮತ್ತೆ ತಮ್ಮ ಸರ್ವೋಚ್ಚ ಆಳ್ವಿಕೆ ಆರಂಭಿಸಿದ್ದಾರೆ.

ಸ್ಪೇನ್ ಟೆನಿಸ್‌ ದೊರೆ, ಜನವರಿ 2ರ ಮಂಗಳವಾರ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ (Brisbane International) ಟೂರ್ನಿಯಲ್ಲಿ ಪರಿಚಿತ ಪ್ರತಿಸ್ಪರ್ಧಿ ಡೊಮಿನಿಕ್ ಥೀಮ್‌ ವಿರುದ್ಧ ಗೆದ್ದಿದ್ದಾರೆ. ಪ್ಯಾಟ್ ರಾಫ್ಟರ್ ಅರೆನಾ ಮೈದಾನದಲ್ಲಿ ನಡೆದ ಬರೋಬ್ಬರಿ ಒಂದೂವರೆ ಗಂಟೆಗಳ ಹೋರಾಟದಲ್ಲಿ ಕೊನೆಗೂ ನಡಾಲ್‌ ವಿಜಯಶಾಲಿಯಾಗಿ ಹೊರಹೊಮ್ಮಿದರು. ರೋಚಕ ಪಂದ್ಯದಲ್ಲಿ 7-5, 6-1 ಅಂತರದಿಂದ ಗೆದ್ದು ಪ್ರೀ ಕ್ವಾರ್ಟರ್ಸ್ ಹಂತಕ್ಕೆ ಮುನ್ನಡೆದರು.‌

ಇದನ್ನು ಓದಿ | ಹೊಸ ವರ್ಷಕ್ಕೆ ಗೆಲುವಿನ ಸಿಹಿ ನೀಡಿದ ಬೆಂಗಳೂರು ಬುಲ್ಸ್; ಗೆದ್ದು ಅಗ್ರಸ್ಥಾನಕ್ಕೇರಿದ ಗುಜರಾತ್

ಕಳೆದ ಭಾನುವಾರ ನಡೆದ ಪುರುಷರ ಡಬಲ್ಸ್‌ ಪಂದ್ಯದಲ್ಲಿ ಮಾರ್ಕ್ ಲೋಪೆಜ್ ಅವರೊಂದಿಗೆ ಕಣಕ್ಕಿಳಿದಿದ್ದ ನಡಾಲ್, 12 ತಿಂಗಳ ಬಳಿಕ ಸೋಲಿನೊಂದಿಗೆ ಅಭಿಯಾನ ಮರುಆರಂಭಿಸಿದರು. 70 ಎಟಿಪಿ ಪ್ರಶಸ್ತಿಗಳನ್ನು ಗೆದ್ದ ಸ್ಪೇನ್ ಟೆನಿಸ್‌ ದೊರೆ, ಇದೀಗ ತಮ್ಮ ನೆಚ್ಚಿನ ಸಿಂಗಲ್ಸ್‌ ವಿಭಾಗದಲ್ಲಿ ಅಬ್ಬರ ಆರಂಭಿಸಿದ್ದಾರೆ.

ಆಸ್ಟ್ರೇಲಿಯನ್ ಓಪನ್‌ನಲ್ಲಿ ಕೊನೆಯ ಬಾರಿಗೆ ಆಡಿದ್ದ ನಡಾಲ್

ಕಳೆದ 349 ದಿನಗಳಲ್ಲಿ ನಡಾಲ್ ಅವರ ಮೊದಲ ಸ್ಪರ್ಧಾತ್ಮಕ ಸಿಂಗಲ್ಸ್ ಪಂದ್ಯ ಇದಾಗಿದೆ. ಕೊನೆಯ ಬಾರಿಗೆ ಅವರು 2023ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡಿದ್ದರು. ಆ ಬಳಿಕ ಜೂನ್‌ ತಿಂಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಹೊಸ ವರ್ಷದಲ್ಲಿ ಮತ್ತೆ ಟೆನಿಸ್‌ ಕೋರ್ಟ್‌ಗೆ ಕಾಲಿಟ್ಟ ಅವರು, ತಮ್ಮ ಚಾಣಾಕ್ಷ ಆಟವಾಡಿದರು. ನುಣುಪಾದ ಚಲನೆ, ತೀಕ್ಷ್ಣ ಹೊಡೆ ಹಾಗೂ ತಮ್ಮ ಮಾರಣಾಂತಿಕ ಫೋರ್‌ಹ್ಯಾಂಡ್‌ ಹೊಡೆತಗಳಿಂದ ಮೇಲುಗೈ ಸಾಧಿಸಿದರು.

“ನನ್ನ ಟೆನಿಸ್ ವೃತ್ತಿಜೀವನದ ಅತ್ಯಂತ ಕಠಿಣ ವರ್ಷವೊಂದರ ನಂತರ ಪ್ರಾಮಾಣಿಕವಾಗಿ ಈ ದಿನ ನನಗೆ ಭಾವನಾತ್ಮಕ ಮತ್ತು ಪ್ರಮುಖ ದಿನವಾಗಿದೆ,” ಎಂದು ನಡಾಲ್ ಹೇಳಿದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ