logo
ಕನ್ನಡ ಸುದ್ದಿ  /  ಕ್ರೀಡೆ  /  ಜಾನಿಕ್ ಸಿನ್ನರ್ ಮಣಿಸಿ ಚೊಚ್ಚಲ ಫ್ರೆಂಚ್ ಓಪನ್ ಫೈನಲ್ ಲಗ್ಗೆ ಇಟ್ಟ ಕಾರ್ಲೊಸ್ ಅಲ್ಕರಾಜ್

ಜಾನಿಕ್ ಸಿನ್ನರ್ ಮಣಿಸಿ ಚೊಚ್ಚಲ ಫ್ರೆಂಚ್ ಓಪನ್ ಫೈನಲ್ ಲಗ್ಗೆ ಇಟ್ಟ ಕಾರ್ಲೊಸ್ ಅಲ್ಕರಾಜ್

Jayaraj HT Kannada

Jun 07, 2024 11:20 PM IST

google News

ಜಾನಿಕ್ ಸಿನ್ನರ್ ಮಣಿಸಿ ಚೊಚ್ಚಲ ಫ್ರೆಂಚ್ ಓಪನ್ ಫೈನಲ್ ಲಗ್ಗೆ ಇಟ್ಟ ಕಾರ್ಲೊಸ್ ಅಲ್ಕರಾಜ್

    • Carlos Alcaraz: ಫ್ರೆಂಚ್ ಓಪನ್ 2024ರ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್‌ ದೇಶದ ಕಾರ್ಲೊಸ್ ಅಲ್ಕರಾಜ್ ಅವರು ಜಾನಿಕ್ ಸಿನ್ನರ್ ಅವರನ್ನು ಮಣಿಸಿದ್ದಾರೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಫ್ರೆಂಚ್ ಓಪನ್ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ.
ಜಾನಿಕ್ ಸಿನ್ನರ್ ಮಣಿಸಿ ಚೊಚ್ಚಲ ಫ್ರೆಂಚ್ ಓಪನ್ ಫೈನಲ್ ಲಗ್ಗೆ ಇಟ್ಟ ಕಾರ್ಲೊಸ್ ಅಲ್ಕರಾಜ್
ಜಾನಿಕ್ ಸಿನ್ನರ್ ಮಣಿಸಿ ಚೊಚ್ಚಲ ಫ್ರೆಂಚ್ ಓಪನ್ ಫೈನಲ್ ಲಗ್ಗೆ ಇಟ್ಟ ಕಾರ್ಲೊಸ್ ಅಲ್ಕರಾಜ್ (AP)

ಸ್ಪೇನ್‌ನ ಕಾರ್ಲೊಸ್ ಅಲ್ಕರಾಜ್ (Carlos Alcaraz) ತಮ್ಮ ಚೊಚ್ಚಲ ಫ್ರೆಂಚ್ ಓಪನ್ (French Open 2024) ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಜೂನ್‌ 7ರ ಶುಕ್ರವಾರ ನಡೆದ ಫ್ರೆಂಚ್ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ಜಾನಿಕ್ ಸಿನ್ನರ್ ಅವರನ್ನು 2-6, 6-3, 3-6, 6-4, 6-3 ರೋಚಕ ಸೆಟ್‌ಗಳಿಂದ ಸೋಲಿಸುವ ಮೂಲಕ ಯುವ ಟೆನಿಸ್‌ ಆಟಗಾರ ಅಲ್ಕರಾಜ್ ದಾಖಲೆ ನಿರ್ಮಿಸಿದ್ದಾರೆ. 21 ವರ್ಷದ ಯುವ ಆಟಗಾರ, ಎಲ್ಲಾ ಮೂರು ವಿಧದ ಮೇಲ್ಮೈಗಳಲ್ಲಿ (ಕೋರ್ಟ್) ಗ್ರ್ಯಾಂಡ್‌ ಸ್ಲ್ಯಾಮ್ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಲ್ಕರಾಜ್ 2022ರಲ್ಲಿ ಹಾರ್ಡ್ ಕೋರ್ಟ್‌ನಲ್ಲಿ ನಡೆದ ಯುಎಸ್‌ ಓಪನ್‌ ಗೆದ್ದಿದ್ದರು. ಆ ಬಳಿಕ 2023ರಲ್ಲಿ ಹುಲ್ಲಿನ ಮೇಲೆ ವಿಂಬಲ್ಡನ್ ಗೆದ್ದಿದ್ದರು. ಇದೀಗ ಫ್ರಾನ್ಸ್‌ನ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಕೆಂಪು ಜೇಡಿಮಣ್ಣಿನ ಕೋರ್ಟ್ ಮೇಲೆ ಫ್ರೆಂಚ್‌ ಓಪನ್‌ ಚಾಂಪಿಯನ್‌ ಆಗಲು ಅಂತಿಮ ಸುತ್ತಿಗೆ ಕಾಲಿಟ್ಟಿದ್ದಾರೆ.

ಭಾನುವಾರ ನಡೆಯಲಿರುವ ಫ್ರೆಂಚ್‌ ಓಪನ್‌ ಫೈನಲ್‌ ಪಂದ್ಯದಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತ ಅಲ್ಕರಾಜ್‌, 4ನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ ಅಥವಾ 7ನೇ ಶ್ರೇಯಾಂಕದ ಕ್ಯಾಸ್ಪರ್ ರುಡ್ ಅವರನ್ನು ಎದುರಿಸಲಿದ್ದಾರೆ.

ಸುದೀರ್ಘ ಅವಧಿಗೆ ಸಾಗಿದ ಸೆಮಿಕದನ

ರೋಚಕ ಸೆಮಿಫೈನಲ್‌ ಸುದೀರ್ಘ ಐದು ಸೆಟ್‌ಗಳಲ್ಲಿ ನಡೆಯಿತು. ಆರಂಭಿಕ ಸೆಟ್‌ ಕಳೆದುಕೊಂಡ ಅಲ್ಕರಾಜ್, ಆಗಾಗ ತರಬೇತುದಾರರಿಂದ ಸಲಹೆ ಪಡೆದುಕೊಂಡು ದೈಹಿಕವಾಗಿ ಮೈದಾನಕ್ಕೆ ಹೊಂದಿಕೊಂಡರು. ಎರಡನೇ ಸೆಟ್‌ ಗೆದ್ದ ಬಳಿಕ ಮೂರನೇ ಸೆಟ್‌ನಲ್ಲಿ ಸೋತರು. ಆ ಬಳಿಕ ನಾಲ್ಕು ಮತ್ತು ಐದನೇ ಸೆಟ್‌ ಎರಡರಲ್ಲೂ ಗೆದ್ದು ಫೈನಲ್‌ ಟಿಕೆಟ್‌ ಪಡೆದರು.

ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದ ನಂತರ 2024ರಲ್ಲಿ ಗ್ರ್ಯಾಂಡ್ ಸ್ಲಾಮ್ ಆಟದಲ್ಲಿ ದಾಖಲೆಯ 13-0 ವಿಜಯದೊಂದಿಗೆ ಸಿನ್ನರ್ ಸೆಮಿಫೈನಲ್ ಪ್ರವೇಶಿಸಿದ್ದರು.‌ ಇದೀಗ ಅಲ್ಕರಾಜ್‌ ವಿರುದ್ಧ ಸೋಲು ಕಂಡಿದ್ದಾರೆ. ಈ ಸೋಲಿನ ಹೊರತಾಗಿಯೂ ಮುಂದಿನ ವಾರದ ವೇಳೆಗ ಮೊದಲ ಬಾರಿಗೆ ಎಟಿಪಿ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಏರಲಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ