ನಾರ್ವೆ ಚೆಸ್: ಕರುವಾನಾ ವಿರುದ್ಧ ಸೋಲು ಕಂಡ ಪ್ರಜ್ಞಾನಂದ; ಸಹೋದರಿ ವೈಶಾಲಿಗೂ ಹಿನ್ನಡೆ
ಕನ್ನಡ ಸುದ್ದಿ  /  ಕ್ರೀಡೆ  /  ನಾರ್ವೆ ಚೆಸ್: ಕರುವಾನಾ ವಿರುದ್ಧ ಸೋಲು ಕಂಡ ಪ್ರಜ್ಞಾನಂದ; ಸಹೋದರಿ ವೈಶಾಲಿಗೂ ಹಿನ್ನಡೆ

ನಾರ್ವೆ ಚೆಸ್: ಕರುವಾನಾ ವಿರುದ್ಧ ಸೋಲು ಕಂಡ ಪ್ರಜ್ಞಾನಂದ; ಸಹೋದರಿ ವೈಶಾಲಿಗೂ ಹಿನ್ನಡೆ

ನಾರ್ವೆ ಚೆಸ್ ಟೂರ್ನಿಯಲ್ಲಿ ಭಾರತದ ಅಕ್ಕ-ತಮ್ಮಂದಿರು ಸೋಲು ಕಂಡಿದ್ದಾರೆ. ಅಮೆರಿಕದ ಫ್ಯಾಬಿಯಾನೊ ಕರುವಾನಾ ಪ್ರಜ್ಞಾನಂದ ಸೋತು 13 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ಅವರ ಸಹೋದರಿ ವೈಶಾಲಿ ಕೂಡಾ ಸೋಲು ಕಂಡಿದ್ದಾರೆ.

ಕರುವಾನಾ ವಿರುದ್ಧ ಸೋಲು ಕಂಡ ಪ್ರಜ್ಞಾನಂದ; ಸಹೋದರಿ ವೈಶಾಲಿಗೂ ಹಿನ್ನಡೆ
ಕರುವಾನಾ ವಿರುದ್ಧ ಸೋಲು ಕಂಡ ಪ್ರಜ್ಞಾನಂದ; ಸಹೋದರಿ ವೈಶಾಲಿಗೂ ಹಿನ್ನಡೆ (PTI)

ನಾರ್ವೆಯಲ್ಲಿ ನಡೆಯುತ್ತಿರುವ ನಾರ್ವೆ ಚೆಸ್ ಪಂದ್ಯಾವಳಿಯ ಅಂತಿಮ ಸುತ್ತಿಗೂ ಮುನ್ನ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ಸೋಲು ಕಂಡಿದ್ದಾರೆ. ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧ ಸೋತಿದ್ದಾರೆ. ಇದರೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಇದೇ ವೇಳೆ ವಿಶ್ವದ ನಂ.1 ಚೆಸ್‌ ಆಟಗಾರ ಹಾಗೂ ಐದು ಬಾರಿಯ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್, 9ನೇ ಸುತ್ತಿನಲ್ಲಿ ಅಲಿರೆಜಾ ಫಿರೌಜ್ಜಾ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ತಮ್ಮ ಮುನ್ನಡೆಯನ್ನು ವಿಸ್ತರಿಸಿದ್ದಾರೆ. ಆ ಮೂಲಕ ಅಂತಿಮ ಸುತ್ತಿನಲ್ಲಿ ಗೆದ್ದರೆ ಅವರು ಪಂದ್ಯಾವಳಿಯ ವಿನ್ನರ್‌ ಆಗಲಿದ್ದಾರೆ.

ಅತ್ತ ಕರುವಾನಾ ವಿರುದ್ಧ ಸೋತರೂ, ನಾರ್ವೆ ಚೆಸ್‌ ಟೂರ್ನಿಯಲ್ಲಿ ಪ್ರಜ್ಞಾನಂದ 13 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಇರಾನ್‌ ಅಲಿರೆಜಾಗಿಂತ ಒಂದು ಪೂರ್ಣ ಪಾಯಿಂಟ್ ಮುಂದಿದ್ದಾರೆ. ಅತ್ತ ಗೆಲುವಿನ ಬಳಿಕ ಕಾರ್ಲ್‌ಸೆನ್ ತಮ್ಮ ಮುನ್ನಡೆಯನ್ನು ಹತ್ತಿರದ ಪ್ರತಿಸ್ಪರ್ಧಿ ಹಿಕಾರು ನಕಮುರಾ ವಿರುದ್ಧ 1.5 ಅಂಕಗಳಿಗೆ ವಿಸ್ತರಿಸಿದರು. ಆ ಮೂಲಕ ಒಟ್ಟು 16 ಅಂಕಗಳೊಂದೊಗೆ ಅಗ್ರಸ್ಥಾನದಲ್ಲಿದ್ದಾರೆ. ಅಮೆರಿಕದ ನಕಮುರಾ 14.5 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಕರುವಾನಾ 10.5 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಭಾರತದ ಆರ್ ವೈಶಾಲಿ ಅವರು ಚೀನಾದ ಟಿಂಗ್ಜಿ ಲೀ ವಿರುದ್ಧ ಮತ್ತೊಂದು ಸೋಲಿಗೆ ಶರಣಾದರೆ. ಆ ಮೂಲಕ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಕೊನೇರು ಹಂಪಿ ಚೀನಾದ ವೆನ್ಜು ಜು ವಿರುದ್ಧ ಸೋತರು.

ಚೀನಾದ ವೆಂಜುನ್ ಜು 16 ಅಂಕ ಗಳಿಸುವ ಮೂಲಕ ಪ್ರಶಸ್ತಿ ಗೆಲ್ಲುವ ಫೇವರೆಟ್‌ ಆಟಗಾರ್ತಿಯಾಗಿ ಮುನ್ನಡೆದರು. ಇವರಿಗಿಂತ 1.5 ಅಂಕಗಳ ಕೊರತೆಯಿಂದ ಉಕ್ರೇನ್‌ನ ಟಿಂಗ್ಜಿ ಲೀ ಮತ್ತು ಅನ್ನಾ ಮುಜಿಚುಕ್ ನಂತರದ ಸ್ಥಾನದಲ್ಲಿದ್ದಾರೆ. ವೈಶಾಲಿ 11.5 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅನುಭವಿ ಸ್ವೀಡನ್ ಆಟಗಾರ್ತಿ ಪಿಯಾ ಕ್ರ್ಯಾಮ್ಲಿಂಗ್ 6.5 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದ್ದಾರೆ.

ಅಗ್ರ ಶ್ರೇಯಾಂಕಿತರನ್ನು ಮಣಿಸಿದ್ದ ಪ್ರಜ್ಞಾನಂದ

ಪ್ರಜ್ಞಾನಂದ ಅವರು ಇದೇ ಟೂರ್ನಿಯಲ್ಲಿ ಇತ್ತೀಚೆಗಷ್ಟೇ ವಿಶ್ವದ ನಂಬರ್ ವನ್ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಮತ್ತು ವಿಶ್ವದ ಎರಡನೇ ಶ್ರೇಯಾಂಕದ ಕರುವಾನಾ ಅವರನ್ನು ಸೋಲಿಸಿದದ್ದರು. ಸ್ಪರ್ಧೆಯ 3ನೇ ಸುತ್ತಿನಲ್ಲಿ ವಿಶ್ವದ ನಂ.1 ಆಟಗಾರ ಕಾರ್ಲ್‌ಸೆನ್ ಮಣಿಸಿದರೆ. ಅದಾದ ಒಂದು ದಿನದಲ್ಲಿ ನಡೆದ 5ನೇ ಸುತ್ತಿನಲ್ಲಿ ವಿಶ್ವದ ನಂ.2 ಆಟಗಾರನನ್ನು ಕೂಡಾ ಮಣಿಸಿದ್ದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.