logo
ಕನ್ನಡ ಸುದ್ದಿ  /  ಕ್ರೀಡೆ  /  India Vs South Africa T20i: ಹರಿಣಗಳ ವಿರುದ್ಧದ ಸರಣಿಯಿಂದ ಹೂಡಾ ಹೊರಕ್ಕೆ, ಈ ಮೂವರಿಗೆ ಬಿಸಿಸಿಐ ಬುಲಾವ್

India vs South Africa T20I: ಹರಿಣಗಳ ವಿರುದ್ಧದ ಸರಣಿಯಿಂದ ಹೂಡಾ ಹೊರಕ್ಕೆ, ಈ ಮೂವರಿಗೆ ಬಿಸಿಸಿಐ ಬುಲಾವ್

HT Kannada Desk HT Kannada

Sep 28, 2022 02:40 PM IST

google News

ದೀಪಕ್‌ ಹೂಡಾ

    • ಇಂದಿನ ಪಂದ್ಯವು ಕೇರಳದ ರಾಜಧಾನಿ ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ಭರ್ಜರಿ ಕಂಬ್ಯಾಕ್‌ ಮಾಡುವ ಮೂಲಕ 2-1ರಿಂದ ಸರಣಿ ಗೆದ್ದಿದೆ. ಅದೇ ಉತ್ಸಾಹದಲ್ಲಿ ಹರಿಣಗಳನ್ನು ಮಣಿಸುವ ಯೋಜನೆ ಹೊಂದಿದೆ.
ದೀಪಕ್‌ ಹೂಡಾ
ದೀಪಕ್‌ ಹೂಡಾ (ANI)

ತಿರುವನಂತಪುರಂ: ಇಂದಿನಿಂದ ಹರಿಣಗಳ ವಿರುದ್ಧದ ಟಿ20 ಸರಣಿ ಆರಂಭವಾಗುತ್ತಿದೆ. ತಂಡದ ಭಾಗವಾಗಿದ್ದ ದೀಪಕ್ ಹೂಡಾ, ಬೆನ್ನುನೋವಿನ ಕಾರಣದಿಂದ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ದೃಢಪಡಿಸಿದೆ. ಈ ನಡುವೆ ಉಮೇಶ್ ಯಾದವ್, ಶ್ರೇಯಸ್ ಅಯ್ಯರ್ ಮತ್ತು ಶಹಬಾಜ್ ಅಹ್ಮದ್‌ಗೆ ಭಾರತ ತಂಡಕ್ಕೆ ಬುಲಾವ್‌ ನೀಡಲಾಗಿದೆ.

ಇನ್ನೊಂದೆಡೆ ಕೋವಿಡ್ 19 ಸೋಂಕಿನಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದಲೂ ಹೊರಗುಳಿದಿದ್ದ ವೇಗಿ ಮೊಹಮ್ಮದ್ ಶಮಿ ಇನ್ನೂ ಸಂಪೂರ್ಣ ಚೇತರಿಕೆ ಕಂಡಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದಲೂ ಹೊರಗುಳಿಯಲಿದ್ದಾರೆ ಎಂದು BCCI ಹೇಳಿದೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೂ ಶಮಿ ಬದಲಿಗೆ ಉಮೇಶ್ ಯಾದವ್ ಆಯ್ಕೆಯಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಶಮಿ ಪಾತ್ರವನ್ನು ಉಮೇಶ್‌ ಯಾದವ್‌ ತುಂಬಲಿದ್ದಾರೆ. ಅಕ್ಟೋಬರ್ ಹಾಗೂ ನವೆಂಬರ್‌ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಟ್ಯಾಂಡ್‌ಬೈ ಆಟಗಾರನಾಗಿದ್ದ ಶ್ರೇಯಸ್ ಅಯ್ಯರ್ ಅವರನ್ನು ದೀಪಕ್ ಹೂಡಾ ಬದಲಿಗೆ ತಂಡಕ್ಕೆ ಕರೆಯಲಾಗಿದೆ.

ಇನ್ನೊಂದೆಡೆ ವಿಶ್ರಾಂತಿ ಪಡೆದಿರುವ ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಬಗ್ಗೆಯೂ ಬಿಸಿಸಿಐ ಅಪ್ಡೇಟ್ ನೀಡಿದೆ. “ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಫಿಟ್ನೆಸ್‌ ಸಂಬಂಧಿತ ವಿಚಾರವಾಗಿ ಎನ್‌ಸಿಎಗೆ ಹಾಜರಾಗಿದ್ದಾರೆ. ಹೀಗಾಗಿ ಅರ್ಷ್‌ದೀಪ್ ಸಿಂಗ್ ಅವರು ತಿರುವನಂತಪುರಂನಲ್ಲಿರುವ ತಂಡದೊಂದಿಗೆ ಸಂಪರ್ಕ ಹೊಂದಿದ್ದಾರೆ” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ಇವರೊಂದಿಗೆ ಆರ್‌ಸಿಬಿ ಆಲ್‌ರೌಂಡರ್‌ ಶಹಬಾಜ್ ಅಹ್ಮದ್ ಅವರನ್ನು ಟಿ20 ತಂಡಕ್ಕೆ ಕರೆದುಕೊಳ್ಳಲಾಗಿದೆ.

ಇಂದಿನ ಪಂದ್ಯವು ಕೇರಳದ ರಾಜಧಾನಿ ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ನಿನ್ನೆಯಿಂದಲೇ ನೆಟ್‌ನಲ್ಲಿ ಅಭ್ಯಾಸದ ಮೂಲಕ ಬೆವರು ಹರಿಸಿದೆ. ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಸೌತ್‌ ಆಫ್ರಿಕಾವನ್ನು ಮಣಿಸಲು ರೋಹಿತ್‌ ಪಡೆ ಮಾಸ್ಟರ್‌ ಪ್ಲಾನ್‌ ರೂಪಿಸಬೇಕಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ಭರ್ಜರಿ ಕಂಬ್ಯಾಕ್‌ ಮಾಡುವ ಮೂಲಕ 2-1ರಿಂದ ಸರಣಿ ಗೆದ್ದಿದೆ. ಅದೇ ಉತ್ಸಾಹದಲ್ಲಿ ಹರಿಣಗಳನ್ನು ಮಣಿಸುವ ಯೋಜನೆ ಹೊಂದಿದೆ. ಇಂದಿನಿಂದ ಮೂರು ಪಂದ್ಯಗಳ ಚುಟುಕು ಸರಣಿ ನಡೆದ ಬೆನ್ನಲ್ಲೇ ಏಕದಿನ ಸರಣಿ ಕೂಡಾ ನಡೆಯಲಿದೆ. ಆ ಬಳಿಕ ಆಸೀಸ್‌ ನೆಲದಲ್ಲಿ ಮಹತ್ವದ ವಿಶ್ವಕಪ್‌ ಕ್ರೀಡಾಕೂಟ ನಡೆಯಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆರ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಅರ್ಶದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್, ಶ್ರೇಯಸ್ ಅಯ್ಯರ್, ಶಹಬಾಜ್ ಅಹ್ಮದ್.

ದಕ್ಷಿಣ ಆಫ್ರಿಕಾ ತಂಡ

ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ತೆಂಬಾ ಬವುಮಾ (ನಾಯಕ), ರಿಲೀ ರೊಸ್ಸೌ, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಡ್ವೈನ್ ಪ್ರಿಟೋರಿಯಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡಾ, ಆನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ, ರೀಜಾ ಹೆಂಡ್ರಿಕ್ಸ್, ಲುಂಗಿ ಎನ್‌ಗಿಡಿ, ಕೇಶವ್ ಮಹಾರಾಜ್, ಹೆನ್ರಿಚ್ ಕ್ಲಾಸೆನ್‌ವೆನ್ವಿಯಮ್

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ