Virat Kohli on RCB: 'ನಾವು ಎಲ್ಲಾ ಪಂದ್ಯ ಆಡ್ಬೇಕಿಲ್ಲ, 4-5 ಮ್ಯಾಚ್ ಆಡಿದ್ರೆ ಕಪ್ ನಮ್ದೇ; ನಮ್ಮಷ್ಟು ಫ್ಯಾನ್ಸ್ ಯಾರಿಗೂ ಇಲ್ಲ'
Apr 04, 2023 03:25 PM IST
ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್
- ಐಪಿಎಲ್ ಆರಂಭವಾದಾಗಿನಿಂದ ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಆಡುತ್ತಿದ್ದಾರೆ. ಇವರು ಈ ತಂಡದ ಅವಿಭಾಜ್ಯ ಅಂಗ. ಕಿಂಗ್ ಕೊಹ್ಲಿ ತಂಡದಲ್ಲಿರುವುದು, ಇದರ ವರ್ಚಸ್ಸು ದುಪ್ಪಟ್ಟಾಗಿದೆ. ಆರ್‌ಸಿಬಿ ಹೊರತಾಗಿ ಬೇರೆ ತಂಡದ ಪರ ಆಡುವುದನ್ನು ಊಹಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಕೊಹ್ಲಿ ಈ ಹಿಂದೆ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಇದುವರೆಗೂ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಆದರೆ ಇತರ ಐಪಿಎಲ್ ಫ್ರಾಂಚೈಸಿಗಳಿಗೆ ಹೋಲಿಸಿದ್ರೆ, ಹೆಚ್ಚು ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ. ದೇಶ ವಿದೇಶಗಳಲ್ಲೂ ಆರ್‌ಸಿಬಿಗೆ ಅಭಿಮಾನಿಗಳ ಸಾಗರವಿದೆ. ಹಲವು ಜಾಗತಿಕ ಸೆಲೆಬ್ರಿಟಿಗಳು ಕೂಡಾ, 'ನಾನು ಆರ್‌ಸಿಬಿ ಅಭಿಮಾನಿ' ಎಂಬುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇನ್ನು, ಸಾಮಾಜಿಕ ಮಾಧ್ಯಮಗಳಲ್ಲಂತೂ ಆರ್‌ಸಿಬಿಯದ್ದೇ ಹವಾ. ಈ ತಂಡವನ್ನು ಅಭಿಮಾನಿಗಳು ಅಭಿಮಾನಿಸುವಷ್ಟು, ಪ್ರೀತಿಸುವಷ್ಟು ಬೇರೆ ಯಾವ ತಂಡಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿಲ್ಲ. ಭಾರತದ ಅತ್ಯಂತ ಜನಪ್ರಿಯ ಕ್ರೀಡಾ ತಂಡವಿದು. ಈ ಕ್ರೇಝಿ ಅಭಿಮಾನವು ಆರ್‌ಸಿಬಿಯ ಟ್ರೋಫಿಯ ಬರವನ್ನು ನೀಗಿಸಿದೆ.
ಜನವರಿಯಲ್ಲಿ ನಡೆದ ಸಮೀಕ್ಷೆಯ ಪ್ರಕಾರ, ಆರ್‌ಸಿಬಿ ತಂಡವು ಇನ್ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ತಂಡ. ಈ ವೇದಿಕೆಯಲ್ಲಿ 948 ಮಿಲಿಯನ್ ಇಂಪ್ರೆಶನ್‌ಗಳೊಂದಿಗೆ ಭಾರತದ ಅತ್ಯಂತ ಜನಪ್ರಿಯ ಕ್ರೀಡಾ ತಂಡವಾಗಿದೆ ರಾಯಲ್ ಚಾಲೆಂಜರ್ಸ್ ಹೊರಹೊಮ್ಮಿದೆ. ರಿಯಲ್ ಮ್ಯಾಡ್ರಿಡ್ ಮತ್ತು ಲಿವರ್‌ಪೂಲ್ ಎಫ್‌ಸಿಯಂತಹ ಕ್ಲಬ್ ತಂಡಗಳಿರುವ ಪಟ್ಟಿಯಲ್ಲಿ 2022ರ ಅಗ್ರ ಐದು ಅತ್ಯಂತ ಜನಪ್ರಿಯ ತಂಡಗಳಲ್ಲಿ ಏಕೈಕ ಭಾರತೀಯ ಕ್ರೀಡಾ ತಂಡವಾಗಿ ಆರ್‌ಸಿಬಿ ಸ್ಥಾನ ಪಡೆದಿದೆ. ಕಪ್ ಗೆದ್ದಿದ್ದಾರೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆಯೇ, ಆರ್‌ಸಿಬಿಯು ಸಾಮಾಜಿಕ ಮಾಧ್ಯಮಗಳಲ್ಲಿ ಭದ್ರವಾಗಿ ನೆಲೆಯೂರಿದೆ.
ಐಪಿಎಲ್ ಆರಂಭವಾದಾಗಿನಿಂದ ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಆಡುತ್ತಿದ್ದಾರೆ. ಇವರು ಈ ತಂಡದ ಅವಿಭಾಜ್ಯ ಅಂಗ. ಕಿಂಗ್ ಕೊಹ್ಲಿ ತಂಡದಲ್ಲಿರುವುದು, ಇದರ ವರ್ಚಸ್ಸು ದುಪ್ಪಟ್ಟಾಗಿದೆ. ಆರ್‌ಸಿಬಿ ಹೊರತಾಗಿ ಬೇರೆ ತಂಡದ ಪರ ಆಡುವುದನ್ನು ಊಹಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಕೊಹ್ಲಿ ಈ ಹಿಂದೆ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.
ತಂಡಕ್ಕೆ ಬೃಹತ್ ಅಭಿಮಾನ ಬಳಗ ಇರುವ ಬಗ್ಗೆ ಮಾತನಾಡಿದ ಕಿಂಗ್ ಕೊಹ್ಲಿ, ಒಂದು ವೇಳೆ ಸೋಶಿಯಲ್ ಮೀಡಿಯಾ ಟ್ರೋಫಿ ಎಂಬುದನ್ನು ಆಯೋಜಿಸಿದರೆ, ಖಂಡಿತವಾಗಿಯೂ ಆರ್‌ಸಿಬಿ ಗೆಲ್ಲುತ್ತದೆ. ಅದು ಕೂಡಾ ಭಾರಿ ಅಂತರದೊಂದಿಗೆ ಎಂದು ಕೊಹ್ಲಿ ಹೇಳಿದ್ದಾರೆ. “ನಮ್ಮ ಸಾಮಾಜಿಕ ಮಾಧ್ಯಮ ಪ್ರದರ್ಶನವು ಎಲ್ಲರಿಗಿಂತಲೂ ಮೈಲುಗಳಷ್ಟು ಮುಂದಿದೆ. ಸಾಮಾಜಿಕ ಮಾಧ್ಯಮ ಟ್ರೋಫಿ ಎಂಬ ಸ್ಪರ್ಧೆಯನ್ನು ಆಯೋಜಿಸಿ ನೋಡಿ. ಆರ್‌ಸಿಬಿ ಹೇಗೆ ಗೆಲ್ಲುತ್ತದೆ ಎಂಬುದನ್ನು ನೀವೇ ನೋಡಿ. ನಮ್ಗೆ ಯಾರಿಂದಲೂ ಸ್ಪರ್ಧೆಯೇ ಇಲ್ಲ. ಎರಡು ವಾರಗಳ ಪಂದ್ಯಾವಳಿಯಲ್ಲಿ ನಾವೇ ಗೆಲ್ಲುತ್ತೇವೆ. ಅದರಲ್ಲೂ ಕೊನೆಯ ಕೆಲವು ಪಂದ್ಯಗಳನ್ನು ಆಡುವ ಅಗತ್ಯವೇ ಇಲ್ಲ. 4-5 ಪಂದ್ಯಗಳನ್ನು ಆಡಿದರೆ ಸಾಕು. ಟ್ರೋಫಿ ನಮ್ಮದೆ” ಎಂದು ಆರ್‌ಸಿಬಿ ಇನ್‌ಸೈಡರ್ ಶೋನಲ್ಲಿ ಕೊಹ್ಲಿ ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಸೇರಿದಂತೆ ಆರಂಭದಿಂದಲೂ ಐಪಿಎಲ್‌ನಲ್ಲಿ ಆಡುತ್ತಿರುವ ಎಂಟು ಫ್ರಾಂಚೈಸಿಗಳಲ್ಲಿ ಆರ್‌ಸಿಬಿ ಕೂಡಾ ಒಂದೇ ಒಂದು ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಹೀಗಾಗಿ ಇದೇ ವಿಚಾರವಾಗಿ ಬೇರೆ ತಂಡಗಳ ಅಭಿಮಾನಿಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ವರ್ಷಗಳಿಂದ ಆರ್‌ಸಿಬಿ ಸಾಕಷ್ಟು ಟ್ರೋಲ್‌ಗೆ ಆಹಾರವಾಗಿದೆ. ಆರ್‌ಸಿಬಿಯಂತಹ ಕ್ರೇಜಿ ಅಭಿಮಾನಿಗಳನ್ನು ಹೊಂದಿರುವ ಫ್ರಾಂಚೈಸಿ ಪರ ಆಡುವಾಗ ನಿರೀಕ್ಷೆಗಳ ಒತ್ತಡವನ್ನು ಜನರು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
“ಇದು ದೊಡ್ಡ ಒತ್ತಡ. ಬಹಳಷ್ಟು ಜನರು ಇದನ್ನು ತಮಾಷೆಯಾಗಿ ನೋಡುತ್ತಾರೆ. 'ಈ ತಂಡ ಯಾವತ್ತೂ ಕಪ್ ಗೆಲ್ಲುವುದಿಲ್ಲ' ಎಂದು ಹೇಳುತ್ತಾರೆ. ಹಲವಾರು ನಿರೀಕ್ಷೆಗಳಿರುವಾಗ ಬಂದು ಆಟವಾಡಿ. ಆಗ ಒತ್ತಡದ ಬಗ್ಗೆ ತಿಳಿಯುತ್ತದೆ. ನಮ್ಮದು ದೊಡ್ಡ ತಂಡ. ಇಲ್ಲದಿದ್ದರೆ ನಮಗೆ ಇಷ್ಟೊಂದು ಅಭಿಮಾನಿಗಳು ಇರಲು ಹೇಗೆ ಸಾಧ್ಯ?” ಎಂದು ಕೊಹ್ಲಿ ಉತ್ತರ ನೀಡಿದ್ದಾರೆ.