logo
ಕನ್ನಡ ಸುದ್ದಿ  /  ಕ್ರೀಡೆ  /  ವಿಶ್ವ ಚೆಸ್ ಚಾಂಪಿಯನ್‌ಶಿಪ್; ಕಿರಿಯ ಚೆಸ್ ಚಾಂಪಿಯನ್ ಆಗುವ ತವಕದಲ್ಲಿ ಡಿ ಗುಕೇಶ್, ವೇಳಾಪಟ್ಟಿ-ನೇರಪ್ರಸಾರ ವಿವರ

ವಿಶ್ವ ಚೆಸ್ ಚಾಂಪಿಯನ್‌ಶಿಪ್; ಕಿರಿಯ ಚೆಸ್ ಚಾಂಪಿಯನ್ ಆಗುವ ತವಕದಲ್ಲಿ ಡಿ ಗುಕೇಶ್, ವೇಳಾಪಟ್ಟಿ-ನೇರಪ್ರಸಾರ ವಿವರ

Jayaraj HT Kannada

Nov 25, 2024 10:08 AM IST

google News

ವಿಶ್ವ ಚೆಸ್ ಚಾಂಪಿಯನ್‌ಶಿಪ್; ಕಿರಿಯ ಚೆಸ್ ಚಾಂಪಿಯನ್ ಆಗುವ ತವಕದಲ್ಲಿ ಡಿ ಗುಕೇಶ್

    • D Gukesh: ಸಿಂಗಾಪುರದಲ್ಲಿ ನಡೆಯಲಿರುವ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಭಾರತದ‌ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್, ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಎದುರಿಸಲಿದ್ದಾರೆ. ಭಾರತದ ಹದಿಹರೆಯದ ಆಟಗಾರ ಇತಿಹಾಸ ನಿರ್ಮಿಸುವ ತವಕದಲ್ಲಿದ್ದಾರೆ.
ವಿಶ್ವ ಚೆಸ್ ಚಾಂಪಿಯನ್‌ಶಿಪ್; ಕಿರಿಯ ಚೆಸ್ ಚಾಂಪಿಯನ್ ಆಗುವ ತವಕದಲ್ಲಿ ಡಿ ಗುಕೇಶ್
ವಿಶ್ವ ಚೆಸ್ ಚಾಂಪಿಯನ್‌ಶಿಪ್; ಕಿರಿಯ ಚೆಸ್ ಚಾಂಪಿಯನ್ ಆಗುವ ತವಕದಲ್ಲಿ ಡಿ ಗುಕೇಶ್

ಸಿಂಗಾಪುರದಲ್ಲಿ ಇಂದಿನಿಂದ (ನವೆಂಬರ್ 25, ಸೋಮವಾರ) ವಿಶ್ವ ಚೆಸ್ ಚಾಂಪಿಯನ್‌ಶಿಪ್‌ (World Chess Championship) ಆರಂಭವಾಗುತ್ತಿದೆ. ಭಾರತದ ಯುವ ಚೆಸ್‌ ಆಟಗಾರ ಡಿ ಗುಕೇಶ್, ವಿಶ್ವದ ಕಿರಿಯ ಚೆಸ್ ಚಾಂಪಿಯನ್ ಆಗುವ ಕನಸಲ್ಲಿದ್ದಾರೆ. ಸಿಂಗಾಪುರದಲ್ಲಿ ನಡೆಯುತ್ತಿರುವ ಬಹುನಿರೀಕ್ಷಿತ ಕೂಟದ ಮೊದಲ ಸುತ್ತಿನಲ್ಲೇ ಗುಕೇಶ್‌ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಎದುರಿಸಲಿದ್ದಾರೆ. 18ರ ಹರೆಯದ ಭಾರತೀಯ ಚೆಸ್‌ ಆಟಗಾರ ಈ ಬಾರಿ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಪಂದ್ಯದ ಆರಂಭದಲ್ಲಿಯೇ ಚೀನಾದ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ವಿರುದ್ಧ ಭಾರತದ ಗುಕೇಶ್‌ ಫೇವರೆಟ್‌ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಸದ್ಯ ಟೀನೇಜರ್‌ ಗುಕೇಶ್ ಹೆಗಲ ಮೇಲೆ ಸಾಕಷ್ಟು ನಿರೀಕ್ಷೆಗಳ ಭಾರವಿದೆ. ಕೋಟಿ ಕೋಟಿ ಭಾರತೀಯರ ಆಸೆ ಪೂರೈಸುವ ಒತ್ತಡವಿದೆ. ಎಲ್ಲಕ್ಕಿಂತ ಮುಖ್ಯವಾಗಿ‌, ಟೂರ್ನಿಯ ಆರಂಭದಲ್ಲೇ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಎದುರಿಸುವ ಅತಿ ದೊಡ್ಡ ಸವಾಲಿದೆ.

ಈವರೆಗೆ ಭಾರತದಿಂದ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದಿರುವುದು ವಿಶ್ವನಾಥನ್ ಆನಂದ್ ಮಾತ್ರ. ಅವರ ನಂತರ ಈ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಆಟಗಾರನಾಗುವುದು ಗುಕೇಶ್ ಗುರಿ. 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಇನ್-ಫಾರ್ಮ್ ಆಟಗಾರರಾಗಿದ್ದು, ಈಗಾಗಲೇ ತಾನೊಬ್ಬ ಚಾಂಪಿಯನ್‌ ಆಟಗಾರ ಎಂಬ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಆದರೆ, ಇದೀಗ ಪ್ರಮುಖ ಪಂದ್ಯದಲ್ಲಿ ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

2023ರಲ್ಲಿ ಲಿರೆನ್ ಅವರು ರಷ್ಯಾದ ಇಯಾನ್ ನೆಪೋಮ್ನಿಯಾಚಿ ವಿರುದ್ಧ ಗೆದ್ದು ವಿಶ್ವ ಚಾಂಪಿಯನ್ ಕಿರೀಟವನ್ನು ಅಲಂಕರಿಸಿದ್ದರು. ಆನಂತರ ಚೀನಿ ಆಟಗಾರ ಸಾಕಷ್ಟು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕಳೆದ ವರ್ಷ ಗುಕೇಶ್‌ಗೆ ಹೋಲಿಸಿದರೆ ಲಿರೆನ್‌ ಹೆಚ್ಚು ಸ್ಪರ್ಧೆಗಳಲ್ಲಿ ಸ್ಪರ್ಧಿಸಿಲ್ಲ.

“ನನ್ನ ಕೆಲಸ ನನಗೆ ಬಹಳ ಸ್ಪಷ್ಟವಾಗಿದೆ. ಪ್ರತಿ ಪಂದ್ಯಕ್ಕೂ ನನ್ನಿಂದ ಸಾಧ್ಯವಾದ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ. ನಾನು ಹಾಗೆ ಮಾಡಿದರೆ, ನಾನು ಉತ್ತಮ ಚೆಸ್ ಆಡುವುದನ್ನು ಮುಂದುವರಿಸಿದರೆ ಮತ್ತು ಸರಿಯಾದ ಉತ್ಸಾಹವಿದ್ದರೆ ಉತ್ತಮ ಫಲಿತಾಂಶ ಸಾಧ್ಯ,” ಎಂದು ಹದಿನೈದು ದಿನಗಳ ಅವಧಿಯ ಸ್ಪರ್ಧೆಯ ಮೊದಲು ಗುಕೇಶ್ ಹೇಳಿದ್ದಾರೆ.

ವಿಶ್ವ ಚೆಸ್ ಚಾಂಪಿಯನ್‌ಶಿಪ್ ಸ್ವರೂಪ

ಈ ಪಂದ್ಯವು 14 ಶಾಸ್ತ್ರೀಯ ಆಟಗಳನ್ನು ಒಳಗೊಂಡಿರುತ್ತದೆ. ಮೊದಲು 7.5 ಅಂಕಗಳನ್ನು ಗಳಿಸುವ ಆಟಗಾರ ಗೆಲ್ಲುತ್ತಾರೆ. ಸಮಯ ಮಿತಿಯು ಮೊದಲ 40 ಚಲನೆಗಳಿಗೆ 120 ನಿಮಿಷಗಳು, ನಂತರ ಆಟದ ಅಂತ್ಯದವರೆಗೆ 30 ಹೆಚ್ಚುವರಿ ನಿಮಿಷಗಳು ಇರುತ್ತದೆ. ಅಂದರೆ 41ರ ನಂತರದ ಪ್ರತಿ ಚಲನೆಗೆ ಹೆಚ್ಚುವರಿ 30-ಸೆಕೆಂಡ್ ನೀಡಲಾಗುತ್ತದೆ. 41ನೇ ಚಲನೆಗೂ ಮೊದಲು ಆಟಗಾರರು ಒಪ್ಪಿದ ಡ್ರಾಗೆ ಅನುಮತಿ ಇಲ್ಲ.

ಇಂದು (ಸೋಮವಾರ), ಸಿಂಗಾಪುರದ ಈಕ್ವೇರಿಯಸ್ ಹೋಟೆಲ್‌ನಲ್ಲಿ ಆರಂಭಿಕ ಪಂದ್ಯದಲ್ಲಿ ಗುಕೇಶ್ ಮತ್ತು ಡಿಂಗ್‌ ಲಿರೆನ್‌ ಮುಖಾಮುಖಿಯಾಗಲಿದ್ದಾರೆ. ಕೋಟ್ಯಾಂತರ ಭಾರತೀಯರು ಗುಕೇಶ್‌ ಗೆಲುವಿಗೆ ಎದುರು ನೋಡುತ್ತಿದ್ದಾರೆ.

ವಿಶ್ವ ಚೆಸ್ ಚಾಂಪಿಯನ್‌ಶಿಪ್ 2024 ಸಂಪೂರ್ಣ ವೇಳಾಪಟ್ಟಿ ಮತ್ತು ಪಂದ್ಯದ ಸಮಯ

ರೌಂಡ್ 1: 25 ನವೆಂಬರ್

ರೌಂಡ್ 2: 26 ನವೆಂಬರ್

ರೌಂಡ್ 3: 27 ನವೆಂಬರ್

ರೌಂಡ್ 4: 29 ನವೆಂಬರ್

ರೌಂಡ್ 5: 30 ನವೆಂಬರ್

ರೌಂಡ್ 6: 1 ಡಿಸೆಂಬರ್

ರೌಂಡ್ 7: 3 ಡಿಸೆಂಬರ್

ರೌಂಡ್ 8: 4 ಡಿಸೆಂಬರ್

ರೌಂಡ್ 9: 5 ಡಿಸೆಂಬರ್

ರೌಂಡ್ 10: 6 ಡಿಸೆಂಬರ್

ರೌಂಡ್ 11: 7 ಡಿಸೆಂಬರ್

ರೌಂಡ್ 11: 8 ಡಿಸೆಂಬರ್

ರೌಂಡ್ 12: 9 ಡಿಸೆಂಬರ್

ರೌಂಡ್ 13: 11 ಡಿಸೆಂಬರ್

ರೌಂಡ್ 14: 12 ಡಿಸೆಂಬರ್

ಟೈ ಬ್ರೇಕ್: 13 ಡಿಸೆಂಬರ್ (ಅಗತ್ಯವಿದ್ದರೆ)

ಸಮಾರೋಪ ಸಮಾರಂಭ: ಡಿಸೆಂಬರ್ 14

ವಿಶ್ವ ಚಾಂಪಿಯನ್‌ಶಿಪ್ ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2:30ಕ್ಕೆ ಆರಂಭವಾಗುತ್ತವೆ.

ವಿಶ್ವ ಚೆಸ್ ಚಾಂಪಿಯನ್‌ಶಿಪ್ 2024 ಅನ್ನು ಎಲ್ಲಿ ವೀಕ್ಷಿಸಬಹುದು?

ಡಿ ಗುಕೇಶ್ ಮತ್ತು ಡಿಂಗ್ ಲಿರೆನ್ ನಡುವಿನ ವಿಶ್ವ ಚೆಸ್ ಚಾಂಪಿಯನ್‌ಶಿಪ್ 2024 ಪಂದ್ಯವನ್ನು FIDE ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ (YouTube, Twitch) ಮತ್ತು Chess.com ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ (YouTube, Twitch) ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ