WTC points table: ಆಸೀಸ್ ವಿರುದ್ಧ ಐತಿಹಾಸಿಕ ಗೆಲುವಿನ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಲೆಕ್ಕಾಚಾರ ಹೇಗಿದೆ?
Feb 19, 2023 03:50 PM IST
ರವೀಂದ್ರ ಜಡೇಜಾ, ರೋಹಿತ್ ಶರ್ಮಾ
- ಆಸ್ಟ್ರೇಲಿಯಾ ಮತ್ತು ಭಾರತವು ಜಂಟಿಯಾಗಿ ಈ ಋತುವಿನಲ್ಲಿ WTC ಫೈನಲ್‌ಗೆ ಪ್ರವೇಶಿಸುವ ಅವಕಾಶವನ್ನು 88.9 ಶೇಕಡದಷ್ಟು ಹೊಂದಿದೆ. ಅತ್ತ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಒಟ್ಟಾಗಿ ಫೈನಲ್ ತಲುಪುವ ಸಾಧ್ಯತೆ 8.3 ಶೇಕಡ ಮಾತ್ರ ಇದೆ.
ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಮತ್ತು ಬಳಗವನ್ನು ಸೋಲಿಸಿದ ಬೆನ್ನಲ್ಲೇ, ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಭಾನುವಾರ ಬಾರ್ಡರ್-ಗವಾಸ್ಕರ್ ಟ್ರೋಫಿಯ 2ನೇ ಟೆಸ್ಟ್‌ನಲ್ಲೂ ಆಸ್ಟ್ರೇಲಿಯಾವನ್ನು ಸೋಲಿಸಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ರವೀಂದ್ರ ಜಡೇಜಾ ಸ್ಪಿನ್ ದಾಳಿಗೆ ನಲುಗಿದ ಆಸ್ಟ್ರೇಲಿಯಾವು, 6 ವಿಕೆಟ್‌ಗಳಿಂದ ಮುಗ್ಗರಿಸಿದೆ. ಆ ಮೂಲಕ ನಾಲ್ಕು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 2-0ಯಿಂದ ಮುನ್ನಡೆ ಸಾಧಿಸಿದೆ.
ದೆಹಲಿಯಲ್ಲಿ ನಡೆದ ನಾಲ್ಕು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ ನಂತರ, ಭಾರತ ತನ್ನ ಗೆಲುವಿನ ಶೇಕಡಾವಾರು ಪ್ರಮಾಣವನ್ನು 64.06ಕ್ಕೆ ಹೆಚ್ಚಿಸಿಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (WTC) ಫೈನಲ್‌ಗೆ ಪ್ರವೇಶಿಸಲು ಭಾರತವು ಡ್ರೈವಿಂಗ್ ಸೀಟಿನಲ್ಲಿ ಕುಳಿತಿದ್ದರೂ, ಆತಿಥೇಯರು ಇನ್ನೂ ತಮ್ಮ ಸ್ಥಾನವನ್ನು ಕಳೆದುಕೊಂಡಿಲ್ಲ. ಅದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಲು ಶ್ರೀಲಂಕಾ ತಂಡಕ್ಕೂ ಅವಕಾಶವಿದೆ.
ರೋಹಿತ್ ಮತ್ತು ಬಳಗವು ಇಂದು (ಭಾನುವಾರ) ಕಮಿನ್ಸ್ ಪಡೆಯ ವಿರುದ್ಧ ಸುಲಭ ಜಯ ದಾಖಲಿಸಿದ ನಂತರ, ಡಬ್ಲ್ಯುಟಿಸಿ ಫೈನಲ್ ತಲುಪುವ ಸಂಭಾವ್ಯರ ಪಟ್ಟಿಯಿಂದ ದಕ್ಷಿಣ ಆಫ್ರಿಕಾ ಹೊರಗುಳಿದಿದೆ. ಈಗ ಫೈನಲ್ ಪ್ರವೇಶಿಸಲು ಇರುವ ಪೈಪೋಟಿಯು ಭಾರತ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳ ನಡುವಣ ಕುದುರೆ ರೇಸ್ ಆಗಿ ಮಾರ್ಪಟ್ಟಿದೆ. ಹರಿಣಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತಕ್ಕಿಂತ ಹಿಂದಿದ್ದಾರೆ. ಸದ್ಯ ಫೈನಲ್‌ಗೆ ಪ್ರವೇಶಿಸುವ ಅವರ ಶೇಕಡಾವಾರು ಅವಕಾಶವು ಕೇವಲ 55 ಮಾತ್ರ.
ಆಸ್ಟ್ರೇಲಿಯಾ ಮತ್ತು ಭಾರತವು ಜಂಟಿಯಾಗಿ ಈ ಋತುವಿನಲ್ಲಿ WTC ಫೈನಲ್‌ಗೆ ಪ್ರವೇಶಿಸುವ ಅವಕಾಶವನ್ನು 88.9 ಶೇಕಡದಷ್ಟು ಹೊಂದಿದೆ. ಅತ್ತ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಒಟ್ಟಾಗಿ ಫೈನಲ್ ತಲುಪುವ ಸಾಧ್ಯತೆ 8.3 ಶೇಕಡ ಮಾತ್ರ ಇದೆ. ಮತ್ತೊಂದೆಡೆ ಭಾರತ ಮತ್ತು ಶ್ರೀಲಂಕಾ ದೇಶಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸ್ಪರ್ಧಿಸಲು ಕೇವಲ 2.8 ಶೇಕಡದಷ್ಟು ಅವಕಾಶವನ್ನು ಹೊಂದಿವೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ವಿರುದ್ಧ 4-0 ವೈಟ್‌ವಾಶ್ ಮುಖಭಂಗವನ್ನು ತಪ್ಪಿಸುವ ಮೂಲಕ ಕಮಿನ್ಸ್ ಬಳಗವು ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸಬಹುದು. ಭಾರತವು ಇನ್ನೊಂದು ಪಂದ್ಯವನ್ನು ಗೆದ್ದರೆ ಫೈನಲ್ ಪ್ರವೇಶಿಸಲಿದೆ. ಅತ್ತ ಶ್ರೀಲಂಕಾವು ತನ್ನ ಮುಂಬರುವ ಟೆಸ್ಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಅನ್ನು 2-0 ಅಂತರದಿಂದ ಸೋಲಿಸಲು ವಿಫಲವಾದರೆ, ಟೀಮ್ ಇಂಡಿಯಾ WTCಯ ಅಂತಿಮ ಘರ್ಷಣೆಗೆ ಪ್ರವೇಶಿಸಲಿದೆ.
ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯರು 263 ರನ್ ಗಳಿಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತವು 262 ರನ್ ಗಳಿಸಿ ಇನ್ನಿಂಗ್ಸ್ ಮುಗಿಸಿತು. ಒಂದು ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸೀಸ್, ಅಶ್ವಿನ್ ಹಾಗೂ ಜಡೇಜಾ ಸ್ಪಿನ್ ದಾಳಿಗೆ ತತ್ತರಿಸಿತು. ಮೂರನೇ ದಿನದಾಟದ ಮೊದಲ ಸೆಷನ್‌ನಲ್ಲಿ ಕೇವಲ 52 ರನ್‌ಗಳ ಅಂತರದಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡಿತು. ಆಸೀಸ್ ಬಳಗದ ಕೊನೆಯ ಏಳು ವಿಕೆಟ್‌ಗಳು 19 ರನ್‌ಗಳ ಅಂತರಲ್ಲಿ ಪತನವಾಯ್ತು. ಅಂತಿಮವಾಗಿ ಆಸೀಸ್ ಕೇವಲ 113 ರನ್ ಮಾತ್ರ ಗಳಿಸಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತವು ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡರೂ, ಗುರಿಯತ್ತ ಸಾಗಿತು. ಕೊನೆಗೆ 26.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 118 ರನ್ ಗಳಿಸಿ ಭಾರತ ಗೆಲುವಿನ ನಗೆ ಬೀರಿತು.