ರಾಮಾಯಣ: ದಶರಥನಿಗೆ ಪುತ್ರೋತ್ಸವ - ಅಯೋಧ್ಯೆಯಲ್ಲಿ ರಾಮ, ಲಕ್ಷ್ಮಣ, ಭರತ, ಶತ್ರುಘ್ನರ ಜನನ; ವಸಿಷ್ಠರಿಂದ ನಾಮಕರಣ-dasharatha became father of rama lakshmana bharata shatrughan in ayodhya naming from vasishtha sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಮಾಯಣ: ದಶರಥನಿಗೆ ಪುತ್ರೋತ್ಸವ - ಅಯೋಧ್ಯೆಯಲ್ಲಿ ರಾಮ, ಲಕ್ಷ್ಮಣ, ಭರತ, ಶತ್ರುಘ್ನರ ಜನನ; ವಸಿಷ್ಠರಿಂದ ನಾಮಕರಣ

ರಾಮಾಯಣ: ದಶರಥನಿಗೆ ಪುತ್ರೋತ್ಸವ - ಅಯೋಧ್ಯೆಯಲ್ಲಿ ರಾಮ, ಲಕ್ಷ್ಮಣ, ಭರತ, ಶತ್ರುಘ್ನರ ಜನನ; ವಸಿಷ್ಠರಿಂದ ನಾಮಕರಣ

ತನ್ನ ಪಾಲಿನ ಕರ್ತವ್ಯವನ್ನು ಒಂದೇ ಮನಸ್ಸಿನಿಂದ ಯಶಸ್ವಿಯಾಗಿ ನಿರ್ವಹಿಸಿದ ದಶರಥನು ದೈವಾನುಗ್ರಹದಿಂದ ನನ್ನ ವಂಶವನ್ನು ಬೆಳಗುವ ಮಕ್ಕಳಿಗಾಗಿ ಎದುರು ನೋಡುತ್ತಾ ಕಾಲ ಕಳೆಯುತ್ತಿರುವಾಗ ಅರಮನೆಯಲ್ಲಿ ಸಂತಸದ ವಾತಾವರಣ ಮೂಡಿತು. ರಾಮ, ಲಕ್ಷ್ಮಣ, ಭರತ, ಶತ್ರುಘ್ನರ ಜನನ ಕಥನ ಇಲ್ಲಿದೆ, ಓದಿ. (ಬರಹ: ಎಚ್. ಸತೀಶ್‌, ಜ್ಯೋತಿಷಿ)

ರಾಮ, ಲಕ್ಷ್ಮಣ, ಭರತ, ಶತ್ರುಘ್ನರ ಜನನ
ರಾಮ, ಲಕ್ಷ್ಮಣ, ಭರತ, ಶತ್ರುಘ್ನರ ಜನನ (image credit: Voice of Garuda)

ದಶರಥನು ಪುತ್ರಪ್ರಾಪ್ತಿಗಾಗಿ ಮಾಡಿದ ಯಾಗಗಳು ಸುಸಂಪನ್ನವಾಗುತ್ತದೆ. ದಶರಥನು ನೀಡಿದ ಹವಿಸ್ಸಿನಿಂದ ದೇವತೆಗಳೆಲ್ಲರೂ ಸಂತೋಷಗೊಂಡು ತಮ್ಮ ತಮ್ಮ ಸ್ವಸ್ಥಾನಗಳಿಗೆ ಮರಳುತ್ತಾರೆ. ಆನಂತರ ದಶರಥ ಮಹಾರಾಜನು ತನ್ನ ಪತ್ನಿಯರು ಮತ್ತು ಅವರ ದಾಸಿಯರ ಸಮೇತ ಅಯೋಧ್ಯೆ ನಗರವನ್ನು ಮರು ಪ್ರವೇಶಿಸುತ್ತಾನೆ. ದಶರಥನಿಗೆ ಬೆಂಗಾವರಾಗಿದ್ದ ರಾಜ ಮಹಾರಾಜರು ಆಸ್ಥಾನದ ಗುರು ಹಿರಿಯರ ಆಶೀರ್ವಾದವನ್ನು ಪಡೆದು ತಮ್ಮ ರಾಜ್ಯಗಳಿಗೆ ಮರಳುತ್ತಾರೆ. ನಂತರ ದಶರಥನು ಆಸ್ಥಾನದ ಪಂಡಿತರು ಮತ್ತು ಗುರು ಹಿರಿಯರ ಜೊತೆಯಲ್ಲಿ ಅರಮನೆಯನ್ನು ಪ್ರವೇಶಿಸುತ್ತಾನೆ. ತಾನು ಮಾಡಿದ ಯಾಗಗಳಿಗೆ ಬೆಂಗಾವಲಾದ ಋಷ್ಯಶೃಂಗರನ್ನು ವಿಶೇಷವಾಗಿ ಗೌರವಿಸುತ್ತಾನೆ. ಋಷ್ಯಶೃಂಗನು ಶಾಂತಾದೇವಿ ಮತ್ತು ರೋಮಪಾದರ ಜೊತೆಗೂಡಿ ಅಂಗ ದೇಶಕ್ಕೆ ಪ್ರಯಾಣ ಬೆಳೆಸುತ್ತಾರೆ.

ದಶರಥನಿಗೆ ಪುತ್ರೋತ್ಸವ

ತನ್ನ ಪಾಲಿನ ಕರ್ತವ್ಯವನ್ನು ಒಂದೇ ಮನಸ್ಸಿನಿಂದ ಯಶಸ್ವಿಯಾಗಿ ನಿರ್ವಹಿಸಿದ ದಶರಥನು ದೈವಾನುಗ್ರಹದಿಂದ ನನ್ನ ವಂಶವನ್ನು ಬೆಳಗುವ ಮಕ್ಕಳಿಗಾಗಿ ಎದುರು ನೋಡುತ್ತಾ ಕಾಲ ಕಳೆಯುತ್ತಿರುತ್ತಾನೆ. ಅಶ್ವಮೇಧ ಯಾಗವಾಗಿ, ಪುತ್ರಕಾಮೇಷ್ಠಿಯಾಗವಾಗಿ ಒಂದು ವರ್ಷವಾದ ನಂತರ ಅರಮನೆಯಲ್ಲಿ ಸಂತಸದ ವಾತಾವರಣವು ಉಂಟಾಗುತ್ತದೆ. ಬಹುದಿನದಿಂದ ನಿರೀಕ್ಷಿಸುತ್ತಿದ್ದ ವರ್ತಮಾನವು ದಶರಥನಿಗೆ ದೊರೆಯುತ್ತದೆ. ರಾವಣ ಮತ್ತು ಕುಂಭಕರ್ಣರ ಸಂಹಾರಕ್ಕಾಗಿ ಭಗವಾನ್ ವಿಷ್ಣುವು ಭೂಲೋಕದಲ್ಲಿ ಮಾನವನಾಗಿ ಜನ್ಮ ತಾಳುವ ಶುಭಘಳಿಗೆ ಬರುತ್ತದೆ.

ವಿಷ್ಣುವಿನ ಅವತಾರ ರಾಮನ ರೂಪದಲ್ಲಿ ಜನನ

ಚೈತ್ರ ಮಾಸದ ಶುದ್ಧ ನವಮಿ. ಆ ದಿನ ಪುನರ್ವಸು ನಕ್ಷತ್ರವಿರುತ್ತದೆ. ನಿತ್ಯ ಕುಂಡಲಿಯಲ್ಲಿ ಐದು ಗ್ರಹಗಳು ಉಚ್ಚ ಸ್ಥಾನದಲ್ಲಿ ಇರುವ ವೇಳೆ, ಚಂದ್ರ ಮತ್ತು ಗುರು ಗ್ರಹಗಳು ಸಂಯೋಜನೆಯಲ್ಲಿದ್ದು ಗಜಕೇಸರಿ ಯೋಗವಿರುತ್ತದೆ. ಇಂತಹ ವೇಳೆಯಲ್ಲಿ ಕೌಸಲ್ಯೆಯು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ವಿಷ್ಣುವಿನ ಅಂಶದಿಂದ ಜನಿಸಿದ ಈ ಮಗು ಸರ್ವಲಕ್ಷಣ ಸಂಪನ್ನನಾಗಿರುತ್ತಾನೆ. ಈ ಮಗುವಿಗೆ ವಿಶೇಷವಾದ ನಾಯಕತ್ವದ ಗುಣವಿರುತ್ತದೆ. ಸರ್ವ ಲೋಕದಲ್ಲಿಯೂ ಗೌರವಾದರ ಲಭಿಸುತ್ತದೆ. ಇಂತಹ ಮಹಾಪುರುಷನಿಗೆ ದಶರಥನು ತಂದೆಯಾಗುತ್ತಾನೆ. ಈ ಮಗುವಿಗೆ ಇಂದ್ರನಿಗೆ ಸಮಾನವಾದಂತಹ ತೇಜಸ್ಸಿರುತ್ತದೆ.

ಸಾಕ್ಷಾತ್ ವಿಷ್ಣುವಿನ ಮತ್ತೊಂದು ಅಂಶವಾದ ಎಲ್ಲಾ ರೀತಿಯ ಕಲ್ಯಾಣ ಗುಣಗಳನ್ನು ಹೊಂದಿದ, ಪರಾಕ್ರಮಕ್ಕೆ ಹೆಸರುವಾಸಿಯಾದ ಮತ್ತೊಬ್ಬ ಪುತ್ರನಿಗೆ ಕೈಕೇಯಿ ತಾಯಿಯಾಗುತ್ತಾಳೆ. ಪುಷ್ಯನಕ್ಷತ್ರ ಇರುವ ದಿನ, ದಶಮಿಯ ದಿನ ಮೀನ ಲಗ್ನದಲ್ಲಿ ಜನಿಸುವ ಇವನನ್ನು ಭರತ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ದಶರಥನ ಇನ್ನೊಬ್ಬ ಮುದ್ದಿನ ಮಡದಿಯಾದ ಸುಮಿತ್ರ ದೇವಿಯು ಅವಳಿ ಜವಳಿ ಮಕ್ಕಳಿಗೆ ತಾಯಿಯಾಗುತ್ತಾಳೆ. ಕುಶಲರಾದ, ವೀರರಾಧ ಇವರ ಮೊಗದಲ್ಲಿ ವಿಶೇಷ ತೇಜಸ್ಸು ಕಂಡು ಬರುತ್ತಿರುತ್ತದೆ. ಕಟಕ ಲಗ್ನದಲ್ಲಿ, ದಶಮಿಯ ದಿನ, ಆಶ್ಲೇಷ ನಕ್ಷತ್ರದಲ್ಲಿ ಲಕ್ಷ್ಮಣ ಶತ್ರುಘ್ನರ ಜನನವಾಗುತ್ತದೆ.

ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನರ ಜನುಮದ ಕಾಲದಲ್ಲಿ ಆಕಾಶದಲ್ಲಿ ಹೂಮಳೆಯಾಗುತ್ತದೆ. ಇವರ ಜನನಕ್ಕೆ ಸಂತಸಗೊಂಡು ಗಂಧರ್ವರು ಗಾಯನದಲ್ಲಿ ತೊಡಗಿದರೆ, ಇದರಿಂದ ಉತ್ತೇಜಿತಗೊಂಡ ಅಪ್ಸರೆಯರು ನೃತ್ಯದಲ್ಲಿ ತೊಡಗುತ್ತಾರೆ. ಅಯೋಧ್ಯೆಯ ಜನರು ಮನೆಗಳಲ್ಲಿ ಹಬ್ಬದ ಊಟವನ್ನು ಮಾಡಿ ಸಂಭ್ರಮವನ್ನು ಆಚರಿಸುತ್ತಾರೆ. ಅಯೋಧ್ಯ ನಗರದ ಬೀದಿ ಬೀದಿಗಳಲ್ಲಿ ನಾದಸ್ವರದ ಮಧುರನಾದ ಹೊಮ್ಮುತ್ತದೆ. ಅರಿವಿಗೆ ಬಾರದಷ್ಟು ಗೋದಾನ ಮಾಡುತ್ತಾರೆ. ಅವಶ್ಯಕತೆ ಇದ್ದವರಿಗೆ ಹಣದ ಸಹಾಯವು ಮಾಡುತ್ತಾರೆ.

ವಸಿಷ್ಟರಿಂದ ನಾಮಕರಣ

ಇವೆಲ್ಲದರ ನಡುವೆ ನಾಲ್ವರು ಮಕ್ಕಳಿಗೆ ನಾಮಕರಣವನ್ನು ಮಾಡಲು ದಶರಥನು ಇಚ್ಚಿಸುತ್ತಾನೆ. ಇದರ ಮುಖ್ಯ ಜವಾಬ್ದಾರಿಯನ್ನು ವಸಿಷ್ಟರು ನಿರ್ವಹಿಸುತ್ತಾರೆ. ಸ್ವತ: ವಸಿಷ್ಟರೇ ಹಿರಿಯ ಮಗನಿಗೆ ಶ್ರೀರಾಮನೆಂದು ನಾಮಕರಣ ಮಾಡುತ್ತಾರೆ. ಕೈಕೇಯಿಯ ಮಗನಿಗೆ ಭರತನೆಂಬ ಹೆಸರನ್ನು ಇಡುತ್ತಾರೆ. ಸುಮಿತ್ರಯ ಅವಳಿ ಜವಳಿ ಮಕ್ಕಳಿಗೆ ಲಕ್ಷ್ಮಣ ಮತ್ತು ಶತ್ರುಘ್ನ ಎಂಬ ಹೆಸರುಗಳನ್ನು ಇಡುತ್ತಾರೆ.

ನಾಲ್ವರು ಮಕ್ಕಳಿಗೆ ಸಂಸ್ಕಾರ

ನಾಲ್ವರು ಮಕ್ಕಳಿಗೆ ಅನ್ನಪ್ರಾಶನ ಮತ್ತು ಚೌಲ ಹಾಗೂ ಉಪನಯನ ಶಾಸ್ತ್ರಗಳನ್ನು ವಸಿಷ್ಠ ಮುನಿಗಳಿಂದ ದಶರಥನ್ನು ಮಾಡಿಸುತ್ತಾನೆ. ಶ್ರೀರಾಮನಿಗೆ ತಂದೆಯ ಮೇಲೆ ವಿಶೇಷವಾದಂತಹ ಭಕ್ತಿ ಮತ್ತು ಗೌರವವಿರುತ್ತದೆ. ಶ್ರೀರಾಮನು ಪ್ರಾಣಿಗಳನ್ನು ಅತಿ ಪ್ರೀತಿಯಿಂದ ಕಾಣುತ್ತಾನೆ. ಚಿಕ್ಕ ವಯಸ್ಸಿನಲ್ಲಿಅಯೋಧ್ಯೆಯ ಪ್ರಜೆಗಳ ಮನಸ್ಸನ್ನು ಗೆಲ್ಲುತ್ತಾನೆ. ರಾಮನಿಗೆ ಧನುರ್ ವಿದ್ಯೆಯು ವಿಶೇಷವಾಗಿ ಒಲಿಯುತ್ತದೆ. ಶ್ರೀರಾಮನ ಸೋದರರು ಸಹ ಹಿರಿಯ ಅಣ್ಣನನ್ನೇ ಗುಣದಲ್ಲಿಅನುಸರಿಸುತ್ತಾರೆ. ಈ ವೇಳೆಯಲ್ಲಿ ದಶರಥನ ಆಸ್ಥಾನಕ್ಕೆ ವಿಶ್ವಾಮಿತ್ರರ ಆಗಮನವಾಗುತ್ತದೆ.

mysore-dasara_Entry_Point

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.