ಇಂದು ದತ್ತಾತ್ರೇಯ ಜಯಂತಿ: ಶುಭ ಮುಹೂರ್ತ, ಪೂಜಾ ವಿಧಾನ, ತ್ರಿಮೂರ್ತಿಗಳಿಗೆ ಸತಿ ಅನುಸೂಯಾ ಹಾಲುಣಿಸಿದ ಕಥೆ ಇಲ್ಲಿದೆ
Dattatreya Jayanti 2024: ಪ್ರತಿ ವರ್ಷ ಮಾರ್ಗಶೀರ್ಷ ಪೂರ್ಣಿಮಾ ತಿಥಿಯಂದು ದತ್ತಾತ್ರೇಯ ಜಯಂತಿಯನ್ನು ಆಚರಿಸಲಾಗುತ್ತದೆ. ದತ್ತಾತ್ರೇಯ ಜಯಂತಿ ಶುಭ ಮುಹೂರ್ತ, ಪೂಜಾ ವಿಧಾನ, ಲಕ್ಷ್ಮೀ ಸರಸ್ವತಿ ಪಾರ್ವತಿ ಸತಿ ಅನುಸೂಯಾಳನ್ನು ಪರೀಕ್ಷಿಸಲು ಹೇಳಿದ್ದು ಏಕೆ, ಅನುಸೂಯಾ ತ್ರಿಮೂರ್ತಿಗಳಿಗೆ ಹಾಲುಣಿಸಿದ್ದು ಏಕೆ? ವಿವರ ಇಲ್ಲಿದೆ.
ಇಂದು ದತ್ತಾತ್ರೇಯ ಜಯಂತಿಯನ್ನು ಆಚರಿಸಲಾಗುತ್ತಿದೆ. ದತ್ತಾತ್ರೇಯ ಜಯಂತಿಯು ದತ್ತಾತ್ರೇಯರ ಜನ್ಮದಿನವನ್ನು ಸ್ಮರಿಸುವ ಶುಭ ದಿನವಾಗಿದೆ. ಈ ದಿನವು ಹಿಂದೂಗಳಲ್ಲಿ ಹೆಚ್ಚು ಧಾರ್ಮಿಕ ಮಹತ್ವವನ್ನು ಹೊಂದಿದೆ. ಮಾರ್ಗಶೀರ್ಷ ಪೂರ್ಣಿಮಾ ತಿಥಿಯಂದು ದತ್ತಾತ್ರೇಯರು ಜನಿಸಿದರು. ದತ್ತಾತ್ರೇಯ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಅಂಶವೆಂದು ಪರಿಗಣಿಸಲಾಗಿದೆ.
ದತ್ತಾತ್ರೇಯ ಜಯಂತಿ 2024 ದಿನಾಂಕ ಮತ್ತು ಸಮಯ
ಪೂರ್ಣಿಮಾ ತಿಥಿ 14 ಡಿಸೆಂಬರ್ 2024 ಸಂಜೆ 04:58 ರಿಂದ ಪ್ರಾರಂಭವಾಗುತ್ತದೆ, 15 ಡಿಸೆಂಬರ್ 2024 ಮಧ್ಯಾಹ್ನ 2:31 ಕ್ಕೆ ಪೂರ್ಣಿಮಾ ತಿಥಿ ಕೊನೆಯಾಗುತ್ತದೆ.
ದತ್ತಾತ್ರೇಯ ಜಯಂತಿ ಮಹತ್ವ
ಹಿಂದೂ ಧರ್ಮದಲ್ಲಿ ದತ್ತಾತ್ರೇಯ ಜಯಂತಿಗೆ ಹೆಚ್ಚಿನ ಧಾರ್ಮಿಕ ಪ್ರಾಮುಖ್ಯತೆ ಇದೆ. ಈ ದಿನ ದತ್ತಾತ್ರೇಯರ ಜನ್ಮದಿನ. ಅವರು ಮಾರ್ಗಶೀರ್ಷ ಪೂರ್ಣಿಮಾ ತಿಥಿಯಂದು ಜನಿಸಿದರು. ಅವರನ್ನುಶಿವ, ವಿಷ್ಣು ಮತ್ತು ಬ್ರಹ್ಮನ ಸಂಯೋಜನೆ ಎಂದು ನಂಬಲಾಗಿದೆ. ಆದ್ದರಿಂದಲೇ ಮೂರು ತಲೆಗಳು ಮತ್ತು ಆರು ತೋಳುಗಳನ್ನು ಹೊಂದಿದ್ದಾರೆ. ದತ್ತಾತ್ರೇಯ ಜಯಂತಿಯನ್ನು ಭಾರತದ ಅನೇಕ ಕಡೆ ಆಚರಿಸಲಾಗುತ್ತದೆ. ಮುಖ್ಯವಾಗಿ ಮಹಾರಾಷ್ಟ್ರ, ಗುಜರಾತ್ ಮತ್ತು ದಕ್ಷಿಣ ಭಾರತದಲ್ಲಿ ಆಚರಿಸಲಾಗುತ್ತದೆ. ಅನೇಕ ಕಡೆ ದತ್ತಾತ್ರೇಯ ದೇವಾಲಯಗಳಿವೆ, ಭಕ್ತರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಉಪವಾಸ ಆಚರಿಸಿ ಪ್ರಾರ್ಥಿಸುತ್ತಾರೆ. ಈ ಪೂಜೆಯಿಂದ ಮನೆಯಲ್ಲಿ ಸುಖ, ಸಂತೋಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ದತ್ತಾತ್ರೇಯ ಜಯಂತಿ ಕಥೆ
ಹಿಂದೂ ಧರ್ಮಗ್ರಂಥಗಳ ಪ್ರಕಾರ, ದತ್ತಾತ್ರೇಯನು ಅನುಸೂಯಾ ಮತ್ತು ಅತ್ರಿ ಋಷಿಯ ಮಗ. ಸತಿ ಅನುಸೂಯಾ ಮಹಾನ್ ಗುಣವನ್ನು ಹೊಂದಿದ್ದಳು. ಬ್ರಹ್ಮ, ವಿಷ್ಣು, ಮಹೇಶ ಎಂಬ ತ್ರಿಮೂರ್ತಿಗಳಿಗೆ ಸಮಾನನಾದ ಪುತ್ರನನ್ನು ಪಡೆಯಲು ಅನುಸೂಯಾ ತಪಸ್ಸು ಮಾಡಿದಳು. ತ್ರಿಮೂರ್ತಿಗಳ ಪತ್ನಿಯರಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿಯರು ಅನುಸೂಯಾಳ ಬಗ್ಗೆ ಅಸೂಯೆಪಟ್ಟು ಆಕೆಯ ಸದ್ಗುಣದ ಪರೀಕ್ಷೆಗೆ ಒಳಪಡಿಸಬೇಕೆಂದು ತ್ರಿಮೂರ್ತಿಗಳಲ್ಲಿ ಮನವಿ ಮಾಡುತ್ತಾರೆ. ಮುನಿಗಳ ರೂಪ ತಾಳುವ ತ್ರಿಮೂರ್ತಿಗಳು ಅನಸೂಯ ಬಳಿ ತೆರಳಿ ವಸ್ತ್ರಗಳಿಲ್ಲದೆ ನೈಸರ್ಗಿಕ ಸ್ಥಿತಿಯಲ್ಲಿ ತಮಗೆ ಆಹಾರ ನೀಡಬೇಕೆಂದು ತಿಳಿಸುತ್ತಾರೆ. ತನ್ನ ಪತಿಯಲ್ಲದೆ ಯಾರೂ ನನ್ನನ್ನು ಹಾಗೆ ನೋಡಲಾಗದೆ ಎಂದು ತಿಳಿಸುವ ಅನಸೂಯ, ಆ ಮೂವರನ್ನೂ ಶಿಶುಗಳನ್ನಾಗಿ ಪರಿವರ್ತಿಸುತ್ತಾಳೆ. ನಂತರ ಆ ಮೂವರಿಗೂ ಹಾಲುಣಿಸುತ್ತಾಳೆ.
ಅತ್ರಿ ಋಷಿ, ಆಶ್ರಮಕ್ಕೆ ಹಿಂದಿರುಗಿದಾಗ, ಅನುಸೂಯಾ ನಡೆದ ಎಲ್ಲಾ ವಿಚಾರವನ್ನೂ ತಿಳಿಸುತ್ತಾಳೆ. ಆದರೆ ಅತ್ರಿಯು ಆಗಲೇ ತಮ್ಮ ಅತೀಂದ್ರಿಯ ಶಕ್ತಿಗಳ ಮೂಲಕ ಎಲ್ಲವನ್ನೂ ತಿಳಿದಿರುತ್ತಾರೆ. ಅವರು ಮೂರು ಶಿಶುಗಳನ್ನು ಅಪ್ಪಿಕೊಳ್ಳುತ್ತಾರೆ. ಇತ್ತ ತ್ರಿಮೂರ್ತಿಗಳು ವಾಪಸ್ ಬಾರದ ಕಾರಣ ಪತ್ನಿಯರು ಆತಂಕಕ್ಕೆ ಒಳಗಾಗಿ ಅನುಸೂಯಾ ಬಳಿ ಬರುತ್ತಾರೆ. ತಾವೇ ಇಟ್ಟ ಪರೀಕ್ಷೆ ಬಗ್ಗೆ ಪಶ್ಚಾತಾಪ ವ್ಯಕ್ತಪಡಿಸಿ ಅವಳ ಬಳಿ ಕ್ಷಮೆ ಕೇಳುತ್ತಾರೆ. ನಂತರ ತ್ರಿಮೂರ್ತಿಗಳು ಅತ್ರಿ ಮತ್ತು ಅನುಸೂಯರ ಮುಂದೆ ನಿಜ ರೂಪದಲ್ಲಿ ಕಾಣಿಸಿಕೊಂಡು ಅನುಸೂಯಾ ಆಸೆಯಂತೆ ದತ್ತಾತ್ರೇಯ ಎಂಬ ಮಗನನ್ನು ಅನುಗ್ರಹಿಸುತ್ತಾರೆ.
ದತ್ತ್ರೇಯ ಜಯಂತಿ ಪೂಜಾ ವಿಧಿ ವಿಧಾನ
ಸೂರ್ಯೊದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ.
ದತ್ತಾತ್ರೇಯನ ವಿಗ್ರಹ/ಫೋಟೋಗೆ ತುಪ್ಪದ ದೀಪ ಹಚ್ಚಿ, ದತ್ತಾತ್ರೇಯರಿಗೆ ನೈವೇದ್ಯ ಅರ್ಪಿಸಿ
ಮನೆಯಲ್ಲಿ ದತ್ತಾತ್ರೇಯನ ಫೋಟೋ ಇಲ್ಲದಿದ್ದರೆ ವಿಷ್ಣುವಿನ ಫೋಟೋಗೆ ಪೂಜೆ ಮಾಡಬಹುದು.
ಉಪವಾಸವಿದ್ದು ತುಳಸಿ ಪತ್ರ ಮತ್ತು ಪಂಚಾಮೃತವನ್ನು ಅರ್ಪಿಸಬೇಕು. ಸಂಜೆ ನಿಮ್ಮ ಉಪವಾಸವನ್ನು ಮುರಿಯಿರಿ.
ಪ್ರಸಾದವನ್ನು ಕುಟುಂಬದ ಸದಸ್ಯರಿಗೆ ಹಂಚಿ ನಂತರ ಆಹಾರ ಸ್ವೀಕರಿಸಬೇಕು
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.