ಶಾಲೆಗೆ ಹೋಗುವುದಿಲ್ಲ ಎಂದು ಹಟ ಮಾಡುವ ಮಗುವಿನ ವರ್ತನೆಗೆ ಇವೂ ಕಾರಣವಿರಬಹುದು, ಪೋಷಕರು ಮಾಡಬೇಕಿರುವುದಿಷ್ಟು– ಮನದ ಮಾತು
ಭವ್ಯಾ ವಿಶ್ವನಾಥ್: ಮಗು ನಿರಂತರವಾಗಿ ಶಾಲೆಗೆ ಹೋಗುವುದನ್ನು ತಪ್ಪಿಸುತ್ತಿದ್ದರೆ ಅಥವಾ ಇದ್ದಕ್ಕಿದ್ದಂತೆ ಶಾಲೆಗೆ ಹೋಗಲು ನಿರಾಕರಿಸಿದರೆ, ಅದರ ಹಿಂದೆ ದೊಡ್ಡ ಕಾರಣವೇ ಇರಬಹುದು. ಶಾಲೆಗೆ ಹೋಗುವುದನ್ನು ತಪ್ಪಿಸುವುದು ಅಥವಾ ನಿರಾಕರಿಸುವುದು ಭಾವನಾತ್ಮಕ ಸಮಸ್ಯೆಗಳು, ಬೆಳವಣಿಗೆಯ ಸಮಸ್ಯೆಗಳು ಅಥವಾ ಬೆದರಿಸುವಿಕೆಯ (Bullying) ಸಂಕೇತವಾಗಿರಬಹುದು.
ಮಕ್ಕಳು ಶಾಲೆಗೆ ಹೋಗುವುದಿಲ್ಲವೆಂದು ಹಟ ಮಾಡಿದಾಗ, ಪೋಷಕರು ಬೇಸರಗೊಳ್ಳುತ್ತಾರೆ. ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಬಹುದೆಂದು ಆತಂಕಗೊಂಡು ಚಿಂತೆ ಮಾಡುತ್ತಾರೆ. ಮಕ್ಕಳಿಗೆ ಸಾಧ್ಯವಾದಷ್ಟು ಬುದ್ಧಿ ಹೇಳುತ್ತಾರೆ, ಆದರೂ ಒಪ್ಪಿಕೊಳ್ಳದಿದ್ದಾಗ ಮಕ್ಕಳ ಮೇಲೆ ಕೋಪಗೊಳ್ಳುತ್ತಾರೆ. ಸರಿಯಾದ ಕಾರಣವೇನೆಂದು ತಿಳಿದುಕೊಳ್ಳದೇ ತಮ್ಮದೇ ಆದ ತಿರ್ಮಾನಕ್ಕೆ ಬರುವುದು ಸಹ ಉಂಟು. ಇದರಿಂದ ಕೋಪ, ಬೇಸರ ಹೆಚ್ಚಾಗುವುದೇ ವಿನಃ ಮಕ್ಕಳ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ.
ಯಾವುದೇ ವಿದ್ಯಾರ್ಥಿ ಅಥವಾ ಮಗುವೇ ಆಗಲಿ, ತಮ್ಮನ್ನು ಇಷ್ಟಪಡುವ ಮತ್ತು ಅರ್ಥ ಮಾಡಿಕೆೊಳ್ಳುವ ವ್ಯಕ್ತಿಗಳು ಶಾಲೆಯಲ್ಲಿ ಇದ್ದಾರೆಂದು ಭಾವಿಸಿದರೆ ಓಡೋಡಿ ಶಾಲೆಗೆ ಹೋಗುತ್ತಾರೆ. ಮನೆಯಲ್ಲಿ ಇಂಥವರು ಇದ್ದಾರೆ ಎಂದಾದರೆ ಮನೆಗೂ ಸಹ ಖುಷಿಯಿಂದ ಓಡೋಡಿ ಬರುತ್ತಾರೆ. ನನ್ನನ್ನು ಇಷ್ಟಪಡುವ ಟೀಚರ್, ಫ್ರೆಂಡ್ಸ್ ಅಥವಾ ಅಮ್ಮ–ಅಪ್ಪ ಇದ್ದಾರೆಂದು ಭಾವಿಸುವ ಮಕ್ಕಳು ಮಾನಸಿಕ ಅಭದ್ರತೆಯನ್ನು ಹೊಂದಿರುವುದಿಲ್ಲ. ಇಂಥ ಶಿಕ್ಷಕರು ಅಥವಾ ಪೋಷಕರು ಇಲ್ಲದಿದ್ದರೆ ಮಕ್ಕಳು ಶಾಲೆಯನ್ನು ತಪ್ಪಿಸಿಕೊಳ್ಳುವುದಕ್ಕೆ ಬಯಸುತ್ತಾರೆ. ಮನೆಯಿಂದ ದೂರವೇ ಉಳಿಯಲು ಇಷ್ಟಪಡುತ್ತಾರೆ.
ತಮ್ಮನ್ನು ಅರ್ಥ ಮಾಡಿಕೊಳ್ಳುವ ಶಿಕ್ಷಕರು ಅಥವಾ ಪೋಷಕರು ಇದ್ದರೆ ತಮ್ಮ ಅಭದ್ರತೆಗಳನ್ನು, ಮನಸ್ಸಿನಲ್ಲಿರುವುದನ್ನು ತಾವಾಗಿಯೇ ಶಿಕ್ಷಕರ, ಸ್ನೇಹಿತರ ಮತ್ತು ಪೋಷಕರ ಬಳಿ ಹಂಚಿಕೊಳ್ಳುತ್ತಾರೆ. ಆದರೆ ಸಂಕೋಚ, ಭಯ ಮತ್ತು ಅಭದ್ರತೆ ಇರುವ ಮಕ್ಕಳು ತಮಗಿರುವ ಸಮಸ್ಯೆಗಳನ್ನು ಯಾರ ಬಳಿಯೂ ಹಂಚಿಕೊಳ್ಳುವುದಿಲ್ಲ. ಆತಂಕ, ದುಃಖ, ಅಸಹಾಯಕತೆ, ಬೇಸರ, ನಿರಾಸೆ ಮತ್ತು ಮಾನಸಿಕ ಒತ್ತಡದಿಂದ ಬಳಲುತ್ತಾರೆ. ಆತಂಕ ಮತ್ತು ಬಳಲಿಕೆಯಿಂದ ಶಾಲೆಯಲ್ಲಿ ಸಿಗುವ ವಿದ್ಯಾಭ್ಯಾಸ, ಸ್ನೇಹ ಮತ್ತು ಖುಷಿಯನ್ನು ಸಹ ಕಳೆದುಕೊಳ್ಳುತ್ತಾರೆ.
ಮಗು ಶಾಲೆ ತಪ್ಪಿಸಲು ಕಾರಣ
ನಿಮ್ಮ ಮಗು ನಿರಂತರವಾಗಿ ಶಾಲೆಗೆ ಹೋಗುವುದನ್ನು ತಪ್ಪಿಸುತ್ತಿದ್ದರೆ ಅಥವಾ ಇದ್ದಕ್ಕಿದ್ದಂತೆ ಶಾಲೆಗೆ ಹೋಗಲು ಬಯಸದಿದ್ದರೆ, ಕಾರಣ ದೊಡ್ಡ ಸಮಸ್ಯೆ ಇರಬಹುದು. ಶಾಲೆಗೆ ಹೋಗುವುದನ್ನು ತಪ್ಪಿಸುವುದು ಅಥವಾ ನಿರಾಕರಿಸುವುದು ಸಾಮಾಜಿಕ ಅಥವಾ ಭಾವನಾತ್ಮಕ ಸಮಸ್ಯೆಗಳು, ಬೆಳವಣಿಗೆಯ ಸಮಸ್ಯೆಗಳು ಅಥವಾ ಬೆದರಿಸುವಿಕೆಯ (bullying) ಸಂಕೇತವಾಗಿರಬಹುದು.
ಶಾಲೆಗೆ ಹೋಗಲು ಇಷ್ಟಪಡದ ಮಕ್ಕಳ ಪೋಷಕರು ಗಮನಿಸಬೇಕಾದ ಅಂಶಗಳಿವು
ಶಾಲೆಗೆ ಹೋಗಲು ನಿರಾಕರಿಸುವ ನಿಮ್ಮ ಮಗುವಿನ ಸಮಸ್ಯೆಯನ್ನು ಪರಿಹರಿಸುವ ಮಾರ್ಗಗಳಿವೆ. ಈ ತಂತ್ರಗಳು ನಿಮ್ಮ ಮಗುವನ್ನು ಶಾಲೆಗೆ ಕಳುಹಿಸಲು ನಿಮಗೆ ಸಹಾಯ ಮಾಡುತ್ತದೆ.
1) ನಿರ್ಲಕ್ಷ್ಯ ಮಾಡದಿರಿ: ನಿಮ್ಮ ಮಗುವನ್ನು ಗಂಭೀರವಾಗಿ ತೆಗೆದುಕೊಳ್ಳಿ. ಮಗುವಿನ ದೂರನ್ನು, ನಡವಳಿಕೆಯನ್ನು ನಿರ್ಲಕ್ಷ್ಯ ಮಾಡದಿರಿ. ಮಗು ಹೇಳಿದ್ದನ್ನು ನಿರಾಕರಿಸಬೇಡಿ. ವಯಸ್ಕರಂತೆ ಮಕ್ಕಳಿಗೂ ಕೆಟ್ಟ ಅನುಭವಗಳಾಗಿರಬಹುದು. ನಿಮ್ಮ ಮಗು ಶಾಲೆಯ ಬಗ್ಗೆ ದೂರು ನೀಡುತ್ತಿದ್ದರೆ ನೀವು ಗಮನಿಸಬೇಕು. ಆತಂಕ, ಕಲಿಕೆಯ ವ್ಯತ್ಯಾಸಗಳು, ಸಾಮಾಜಿಕ ಮತ್ತು ಭಾವನಾತ್ಮಕ ಸಮಸ್ಯೆಗಳು ಮತ್ತು ಬೆದರಿಸುವಿಕೆ (ಬುಲ್ಲಿಯಿಂಗ್) ಸೇರಿದಂತೆ ಹಲವಾರು ಅಂಶಗಳಿಂದ ಶಾಲೆಯನ್ನು ತಪ್ಪಿಸಿಕೊಳ್ಳುವಂತೆ ಮಾಡಬಹುದು. ಆದ್ದರಿಂದ ಕಾರಣ ಏನೇ ಇರಲಿ, ಅವರ ದೂರುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.
2) ಕಾರಣ ತಿಳಿದುಕೊಳ್ಳಿ: ಮಗು ಶಾಲೆ ಹೋಗುವುದಿಲ್ಲ ಎನ್ನುವುದಕ್ಕೆ ಕಾರಣವೇನೆಂದು ಮಗುವಿನ ಮೂಲಕ ತಿಳಿದುಕೊಳ್ಳಿ. ಮಗು ನೀಡಿದ ಕಾರಣವನ್ನು ಒಮ್ಮೆಲೆ ಸರಿ ಅಥವಾ ತಪ್ಪೆಂದು ನಿರ್ಣಯ ಮಾಡದಿರಿ. ಮಗು ಹೇಳಿದ ಸಮಸ್ಯೆಯನ್ನು ನಿಜವೆಂದು ಒಪ್ಪಿಕೊಂಡು, ಸಮಸ್ಯೆಯನ್ನು ನೀವು ಗಂಭೀರವಾಗಿ ಪರಿಗಣಿಸಿದ್ದೀರೆಂದು ಭರವಸೆ ನೀಡಿ.
3) ಭಯ ಮತ್ತು ಅಭದ್ರತೆ: ಮಕ್ಕಳಿಗೆ ಶಾಲೆಯಲ್ಲಿ ಅವರದೇ ಆದ ಭಯ ಮತ್ತು ಆತಂಕಗಳಿರುತ್ತವೆ. ಅಭದ್ರತೆಗಳೂ ಕೂಡ ಇರುತ್ತವೆ. ಇತ್ತೀಚಿನ ದಿನಗಳ ವಿದ್ಯಾಭ್ಯಾಸದಲ್ಲಿ ಅತಿಯಾದ ಸ್ಪರ್ಧೆಯಿರುವುದರಿಂದ ಮಕ್ಕಳಿಗೆ ಮಾನಸಿಕ ಒತ್ತಡ ಹೆಚ್ಚಾಗಿದೆ. ಪ್ರತಿ ಹೆಜ್ಜೆಯಲ್ಲೂ ತಮ್ಮ ಪ್ರತಿಭೆ, ಪಾಂಡಿತ್ಯವನ್ನು ಸಾಬೀತು ಮಾಡಬೇಕಾದ ಒತ್ತಡ ಪ್ರಮೇಯ ಹೆಚ್ಚಾಗಿರುತ್ತದೆ. ಇಲ್ಲದಿದ್ದರೆ, ಆನಾರೋಗ್ಯಕರವಾದ ಹೋಲಿಕೆಗಳು, ತಾರತಮ್ಯ, ನಿಂದನೆ, ನೆಗೆಟಿವ್ ಹಣೆಪಟ್ಟಿಗಳು, ಬುಲ್ಲಿಯಿಂಗ್ (ದೌರ್ಜನ್ಯ) ಹೀಗೆ ಹಲವು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಎದುರಿಸುವ ಪರಿಸ್ಥಿತಿಯಿರುತ್ತದೆ. ಇವುಗಳಿಂದ ಮಕ್ಕಳು ಅಭದ್ರತೆ, ಭಯ ಮತ್ತು ತಮ್ಮ ಮೇಲೆಯೇ ಕೀಳರಿಮೆ ಬೆಳೆಸಿಕೊಳ್ಳಬಹುದು.
4) ಸಹಾನುಭೂತಿ ಅಗತ್ಯ: ಮಕ್ಕಳ ಮನಃಸ್ಥಿತಿಯನ್ನು ಅರಿಯುವುದಕ್ಕೆ ಯತ್ನಿಸಿ. ಅವರು ಕೊಡುವ ಕಾರಣಗಳೇನೇ ಇದ್ದರೂ ಅದನ್ನು ಕ್ಷುಲ್ಲಕ ಎನ್ನಬೇಡಿ. ನಿಮ್ಮ ಅಭಿಪ್ರಾಯ, ತೀರ್ಮಾನಗಳನ್ನು ಪಕ್ಕಕ್ಕೆ ಇಟ್ಟು, ಮಕ್ಕಳ ಸ್ಥಾನದಲ್ಲಿ ನಿಂತು ಆಲೋಚಿಸಿ. ಹೀಗೆ ಮಾಡುವುದರಿಂದ ಮಕ್ಕಳ ಮನಸ್ಸು ಮತ್ತು ಸಮಸ್ಯೆ ಎರಡೂ ಅರ್ಥವಾಗುತ್ತದೆ. ನಂತರ ಅವರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬಹುದೆಂದು ಯೋಚಿಸಬಹುದು.
5) ಹಣೆಪಟ್ಟಿ ಕಟ್ಟಬೇಡಿ: ಮಗುವನ್ನು ಅವಹೇಳನ ಅಥವಾ ಹಾಸ್ಯ ಮಾಡುವುದು, ಕೀಳಾಗಿ ನೋಡುವುದು, ಎಲ್ಲರ ಬಳಿ ಮಗುವಿನ ಬಗ್ಗೆ ನೆಗೆಟಿವ್ ಹೇಳುವುದು ಮಾಡಬೇಡಿ. ಮಕ್ಕಳಿಗೆ ಪೆದ್ದು, ಸೋಮಾರಿ, ಹಟಮಾರಿ, ಅಪ್ರಯೊಜಕಿ/ಕ ಇತ್ಯಾದಿ ನೆಗೆಟಿವ್ ಹಣೆಪಟ್ಟಿಗಳನ್ನು ಕೊಡುವುದನ್ನು ತಡೆಯಿರಿ. ಇದರಿಂದ ಮಕ್ಕಳು ಮಾನಸಿಕವಾಗಿ ಕುಗ್ಗಲೂಬಹುದು, ಹಟಮಾರಿ ವರ್ತನೆ ತೋರಬಹುದು.
6) ಶಿಕ್ಷಕರೊಂದಿಗೆ ಮಾತನಾಡಿ: ಮಗು ನಿರಂತರವಾಗಿ ಶಾಲೆ ತಪ್ಪಿಸಿಕೊಳ್ಳುತ್ತಿದ್ದರೆ ಕೂಡಲೇ ಶಿಕ್ಷಕರನ್ನು ಸಂಪರ್ಕಿಸಿ. ಶಿಕ್ಷಕರ ಬಳಿ ಮಗುವಿನ ಮೇಲೆ ದೂರು ಹೇಳಬೇಡಿ. ಶಿಕ್ಷಕರೇ ಇದಕ್ಕೆಕಾರಣ ಎನ್ನುವಂತೆ ದೂರುವುದೂ ಸಲ್ಲದು. ಅವರಿಗೆ ಸೂಕ್ಷ್ಮವಾಗಿ ಮಗುವಿನ ಸಮಸ್ಯೆಯ ಬಗ್ಗೆ ವಿವರಿಸಿ. ಮಗುವಿನ ಪಾಸಿಟಿವ್ ಗುಣಗಳ ಬಗ್ಗೆಯೂ ಸಹ ಮಾತನಾಡಿ. ಶಾಲೆಗೆ ಹೋಗದಿರಲು ಇರಬಹುದಾದ ಕಾರಣಗಳನ್ನು ವಿಶ್ಲೇಷಿಸಿ. ನಿಮ್ಮ (ಶಿಕ್ಷಕರ) ಸಹಕಾರ ಹಾಗೂ ಸಂಯಮದಿಂದ ಮಗುವಿನ ಸಮಸ್ಯೆಯನ್ನು ಬಗೆಹರಿಸಬಹುದೆಂದು ಭರವಸೆಯನ್ನು ನೀಡಿ.
7) ಸಹಾಯ ಕೇಳುವುದನ್ನು ಮರೆಯಬೇಡಿ: ನಿಮ್ಮ (ಪೋಷಕರು) ಮತ್ತು ಶಿಕ್ಷಕರ ಇಬ್ಬರ ಮಾತನ್ನು ಮಗು ಕೇಳದೇ ಶಾಲೆಗೆ ಹೋಗುವುದನ್ನು ನಿರಾಕರಿಸಿದ್ದಲ್ಲಿ ಸಹಾಯ ಪಡೆಯುವುದನ್ನು ಮರೆಯಬೇಡಿ. ಆಪ್ತಸಮಾಲೋಚಕರನ್ನು ಸಂಪರ್ಕಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಿ.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.
ವಿಭಾಗ