ಚೀನಾ ಪದ್ಧತಿ ವರ್ಷ ಭವಿಷ್ಯ; ಹುಂಜ ಚಿಹ್ನೆಯವರು ಇತರರ ತಪ್ಪುಗಳನ್ನು ಕ್ಷಮಿಸಿ, ಸರಿಯಾದ ಸಲಹೆಗಳಿಗೆ ಕಿವಿಗೊಡುವುದು ಮುಖ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಚೀನಾ ಪದ್ಧತಿ ವರ್ಷ ಭವಿಷ್ಯ; ಹುಂಜ ಚಿಹ್ನೆಯವರು ಇತರರ ತಪ್ಪುಗಳನ್ನು ಕ್ಷಮಿಸಿ, ಸರಿಯಾದ ಸಲಹೆಗಳಿಗೆ ಕಿವಿಗೊಡುವುದು ಮುಖ್ಯ

ಚೀನಾ ಪದ್ಧತಿ ವರ್ಷ ಭವಿಷ್ಯ; ಹುಂಜ ಚಿಹ್ನೆಯವರು ಇತರರ ತಪ್ಪುಗಳನ್ನು ಕ್ಷಮಿಸಿ, ಸರಿಯಾದ ಸಲಹೆಗಳಿಗೆ ಕಿವಿಗೊಡುವುದು ಮುಖ್ಯ

ಜ್ಯೋತಿಷ್ಯದ ನಂಬಿಕೆ ಒಂದೊಂದು ದೇಶದಲ್ಲಿ ಒಂದೊಂದು ಥರ. ಇಂದಿನ ವರ್ಷ ಭವಿಷ್ಯಕ್ಕೆ ಚೀನಾದಲ್ಲಿ ಅನುಸರಿಸುವ ಜ್ಯೋತಿಷ್ಯ ನಂಬಿಕೆ ಆಧರಿಸಿ ವಿವರ ನೀಡಲಾಗಿದೆ. ಚೀನಾದಲ್ಲಿ ಒಂದು ವರ್ಷಕ್ಕೆ ಒಂದು ಪ್ರಾಣಿಯ ಚಿಹ್ನೆ. ಅಂದರೆ 12 ವರ್ಷಕ್ಕೆ 12 ಪ್ರಾಣಿ. ಈ ಪದ್ಧತಿಯಲ್ಲಿ 10ನೇ ಚಿಹ್ನೆ ಹುಂಜ ಆಗಿರುತ್ತದೆ. 2025ರಲ್ಲಿ ಹುಂಜ ರಾಶಿಯವರ ಭವಿಷ್ಯ ಹೇಗಿರುತ್ತೆ ನೋಡೋಣ.

ಚೀನಾ ಪದ್ಧತಿ ವರ್ಷ ಭವಿಷ್ಯ 2025: ಹುಂಜ ಗುಂಪಿಗೆ ಸೇರಿದವರ ಹೊಸ ವರ್ಷದ ರಾಶಿಫಲ
ಚೀನಾ ಪದ್ಧತಿ ವರ್ಷ ಭವಿಷ್ಯ 2025: ಹುಂಜ ಗುಂಪಿಗೆ ಸೇರಿದವರ ಹೊಸ ವರ್ಷದ ರಾಶಿಫಲ (PC: Canva)

ವರ್ಷ ಭವಿಷ್ಯ 2025 ಚೀನಾ ಪದ್ಧತಿ: ಇಲ್ಲಿ ನೀಡಿರುವುದು 2025ರ ವರ್ಷ ಭವಿಷ್ಯ. ಆದರೆ ಇದು ಭಾರತದಲ್ಲಿ ಅಲ್ಲ, ಚೀನಾ ದೇಶದಲ್ಲಿ ಅನುಸರಿಸುವ ವಿಧಾನ. ಅಲ್ಲಿ ಹನ್ನೆರಡು ವರ್ಷಕ್ಕೆ ಒಂದು ಚಕ್ರ. ಅಂದರೆ ಪ್ರತಿ ವರ್ಷಕ್ಕೆ ಒಂದರಂತೆ ಹನ್ನೆರಡು ವರ್ಷಕ್ಕೆ ಒಂದೊಂದು ಪ್ರಾಣಿಯ ಚಿಹ್ನೆಯನ್ನು ಇರಿಸಿಕೊಂಡಿದ್ದಾರೆ. ಹನ್ನೆರಡು ವರ್ಷದ ನಂತರ ಅವೇ ಆರಂಭದಿಂದ ಪುನರಾವರ್ತನೆ ಆಗುತ್ತವೆ. ಹಾಗೆ ಅದು ಶುರುವಾಗುವುದು ಇಲಿಯಿಂದ. ಆ ನಂತರ ಎತ್ತು, ಹುಲಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಕುರಿ, ಕೋತಿ, ಹುಂಜ, ನಾಯಿ ಮತ್ತು ಹಂದಿ. ಥೇಟ್ ಭಾರತದಲ್ಲಿ ಇರುವಂತೆಯೇ.  ಆದರೆ ಇಲ್ಲಿ ಮೇಷದಿಂದ ಮೀನದ ತನಕ ಹೆಸರನ್ನು ನೀಡಿದ್ದೇವೆ. ಆದರೆ ಚೀನಾದಲ್ಲಿ ಒಂದೊಂದು ಇಸವಿಗೆ ಒಂದೊಂದು ಪ್ರಾಣಿಗಳ ಹೆಸರನ್ನು ನೀಡುತ್ತಾರೆ. ಆ ಇಡೀ ವರ್ಷದಲ್ಲಿ ಯಾವುದೇ ತಿಂಗಳು ಅಥವಾ ದಿನದಂದು ಹುಟ್ಟಿದರೂ ಅವರಿಗೆ ಆ ಪ್ರಾಣಿಯೇ ರಾಶಿ ಅಂದುಕೊಳ್ಳಬೇಕು. 2025ನೇ ಇಸವಿಯನ್ನು ಪ್ರತಿನಿಧಿಸುವುದು ‘ಮರದ ಹಾವು (ವುಡ್ ಸ್ನೇಕ್)‘. ಇನ್ನು ಯಾರೆಲ್ಲಾ ‘ಹುಂಜ‘ವನ್ನು ಪ್ರತಿನಿಧಿಸುತ್ತಾರೋ ಅವರ ವರ್ಷ ಭವಿಷ್ಯ ಈ ಲೇಖನದಲ್ಲಿದೆ.

ಹುಂಜ ರಾಶಿಯನ್ನು ಪ್ರತಿನಿಧಿಸುವವರಿಗೆ ಈ ವರ್ಷ ಕಲಿಕೆಗೆ ಹಾಗೂ ಬೆಳವಣಿಗೆಗೆ ಹಲವು ಅವಕಾಶಗಳು ತೆರೆದುಕೊಳ್ಳಲಿದ್ದು, ಬದಲಾವಣೆ ಹಾಗೂ ಪರಿವರ್ತನೆಯ ವರ್ಷವೂ ಇದಾಗಲಿದೆ. ಆದ್ದರಿಂದ ಯಾವುದಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಿದ್ಧರಾಗಿ ಹಾಗೂ ನಿಮಗೆ ಆಗುವಂಥ ಒಳಿತಿಗೆ ತಯಾರಾಗಿರಿ. ಹೊಸ ಹೊಸ ಜನರ ಪರಿಚಯ ಆಗಲಿದ್ದು, ಸಂಬಂಧಗಳಲ್ಲಿನ ಅಭಿಪ್ರಾಯ ಭೇದಗಳನ್ನು ಬಗೆಹರಿಸಿಕೊಳ್ಳಲು ಆದ್ಯತೆ ನೀಡಿ. ಇತರರ ತಪ್ಪುಗಳನ್ನು ಕ್ಷಮಿಸಿ, ಮುಂದಕ್ಕೆ ಹೆಜ್ಜೆ ಹಾಕುತ್ತಾ ಸಾಗಿ. ಬೇರೆಯವರು ನೀಡುವ ಸಲಹೆ- ಸೂಚನೆಗಳನ್ನು ಕಿವಿಗೊಟ್ಟು ಕೇಳಿಸಿಕೊಳ್ಳಿ. ಹಾಗೂ ಉತ್ತಮವಾಗಿರುವುದರ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿ. ಯಾವುದನ್ನೂ ಅತಿ ಮಾಡುವುದಕ್ಕೆ ಹೋಗಬೇಡಿ. ಇನ್ನು ನಿಮ್ಮ ಸಾಮರ್ಥ್ಯಕ್ಕೆ ಮೀರಿ ಕೆಲಸಗಳನ್ನು ಮಾಡಿಕೊಡುವುದಾಗಿ ಮಾತು ನೀಡುವುದಕ್ಕೆ ಹೋಗಬೇಡಿ.

1945, 1957, 1969, 1981, 1993, 2005, 2017ನೇ ಇಸವಿಯಲ್ಲಿ ಹುಟ್ಟಿದವರು ‘ಹುಂಜ‘ದ ಚಿಹ್ನೆಯವರು.

ಉದ್ಯೋಗ-ವೃತ್ತಿ ಭವಿಷ್ಯ

ಈ ವರ್ಷ ನೀವು ಖಂಡಿತ ಉತ್ತಮ ಅವಕಾಶಗಳನ್ನು ನಿರೀಕ್ಷಿಸಬಹುದು, ಆದರೆ ನೆನಪಿನಲ್ಲಿ ಇರಬೇಕಾದ ಸಂಗತಿ ಏನೆಂದರೆ, ಈ ಅವಕಾಶಗಳು ಸುಲಭವಾಗಿ ಬರುವುದಿಲ್ಲ. ನೀವೇನಾದರೂ ವೃತ್ತಿಪರರಾಗಿದ್ದಲ್ಲಿ ಕೆಲಸ ನಿರ್ವಹಿಸುವ ಕ್ಷೇತ್ರದಲ್ಲಿ ವೈಯಕ್ತಿಕ ಬೆಳವಣಿಗೆಗೆ ಉತ್ತಮ ವರ್ಷ. ನಿಮ್ಮ ಪಾಲಿಗೆ ಅದೆಂಥದ್ದೇ ಹೊಸ ಸವಾಲುಗಳನ್ನು ಎದುರಾಗುತ್ತದೆ. ಇನ್ನು ವೃತ್ತಿಯನ್ನು ಬದಲಾವಣೆ ಮಾಡಲು ಅಥವಾ ಈಗ ಕೆಲಸ ಮಾಡುತ್ತಿರುವ ಕ್ಷೇತ್ರವನ್ನೇ ಬದಲಾಯಿಸುವುದಕ್ಕೆ ಪ್ಲಾನಿಂಗ್ ಮಾಡುತ್ತಿದ್ದರೆ ಈ ವರ್ಷ ಬಹಳ ಉತ್ತಮ ಸಮಯವಾಗಿರುತ್ತದೆ. ನಿಮಗಿರುವ ಕೌಶಲ್ಯ ಮತ್ತು ಅನುಭವಕ್ಕೆ ಬಹಳ ಬೇಡಿಕೆ ಬರಲಿದೆ. ಅವಕಾಶ ಸಿಕ್ಕಿಬಿಟ್ಟಿತು ಅಂತ ಒಪ್ಪಿಕೊಳ್ಳುವ ಮುನ್ನ ಆ ಕೆಲಸವು ನಿಮಗೆ ಸರಿಹೊಂದುತ್ತದೆ ಎಂದು ಖಚಿತಪಡಿಸಿಕೊಳ್ಳಿ.

ನಿಮ್ಮ ಕಠಿಣ ಪರಿಶ್ರಮ ಮತ್ತು ಸ್ಥಿರತೆ ಸಂಬಂಧಪಟ್ಟವರ ಗಮನಕ್ಕೆ ಬರಲಿದೆ. ಆದರೆ ನಿಮ್ಮ ಕೆಲಸಗಳು ಮುಕ್ತವಾಗಿರಬೇಕು. ಕೆಲಸ- ಕಾರ್ಯಗಳಲ್ಲಿ ನೀವಾಗಿ ಮುನ್ನುಗ್ಗಿ ಜವಾಬ್ದಾರಿಗಳನ್ನು ನಿರ್ವಹಿಸಿ. ಬಡ್ತಿಗಾಗಿ ಪ್ರಯತ್ನ ಮಾಡುತ್ತಿದ್ದೀರಿ ಎಂದಾದಲ್ಲಿ ಮುಜುಗರ ಆಗುವ ಮಟ್ಟಕ್ಕೆ ಒತ್ತಡ ಹಾಕಲು ಪ್ರಯತ್ನಿಸಬೇಡಿ. ನಿಮ್ಮ ಬಗ್ಗೆ ಒಳ್ಳೆಯದನ್ನು ಹೇಳುವ ಭರದಲ್ಲಿ ಮತ್ತೊಬ್ಬರನ್ನು ಹೀಗಳೆದು ಮಾತನಾಡಬೇಡಿ. ನಿಮ್ಮ ವರ್ಚಸ್ಸು ಕೆಡದಿರುವಂತೆ ನೋಡಿಕೊಳ್ಳಲು ಸಹೋದ್ಯೋಗಿಗಳ ಸಹಕಾರ ಅಗತ್ಯ, ಅದಕ್ಕಾಗಿ ಅವರೊಂದಿಗೆ ಸ್ನೇಹದಿಂದ ವರ್ತಿಸುವುದು ಬುದ್ಧಿವಂತಿಕೆ.

ನೀವು ಇತರರ ಬಗ್ಗೆ ಮಾಡುವ ವಿಮರ್ಶೆ ಅಥವಾ ಕಠಿಣವಾದ ಮಾತುಗಳ ಮೂಲಕ ನೇರಾನೇರ ಹೇಳುವುದರಿಂದ ತೊಂದರೆ ಎದುರಿಸಬೇಕಾಗುತ್ತದೆ. ಪ್ರಾಮಾಣಿಕತೆಯಾಗಿ ಇರುವುದು ಜನರಿಂದ ಮೆಚ್ಚುಗೆಗೆ ಪಾತ್ರವಾಗಬಹುದು. ಆದರೆ ಕೆಲವೊಮ್ಮೆ ಹೀಗೆ ಹೇಳುವುದು ತೀಕ್ಷ್ಣ ಅಥವಾ ಕ್ರೌರ್ಯ ಎನಿಸಿಕೊಳ್ಳಲಿದೆ. ಅದರಲ್ಲೂ ಉದ್ಯೋಗದ ಸ್ಥಳದಲ್ಲಿ ಹೀಗಾಗಲಿದೆ. ಸದಾ ಆಕ್ರಮಣಕಾರಿಯಾಗಿ ಇರುವುದರ ಬದಲಿಗೆ ಸಭ್ಯವಾಗಿ, ಯಾರಿಗೂ ಮನಸ್ಸಿಗೆ ಬೇಸರ ಆಗದ ರೀತಿಯಲ್ಲಿ ನಡೆದುಕೊಳ್ಳಿ.

ಹಣಕಾಸು ಭವಿಷ್ಯ

ಈ ವರ್ಷ ನೀವು ಸರಿಯಾದ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಆದ್ದರಿಂದ ನಿಮ್ಮ ಹಣಕಾಸಿನ ವಿಚಾರದಲ್ಲಿ ಸರಿಯಾದ ಯೋಜನೆ ಮಾಡಿಕೊಳ್ಳುವುದು ಬುದ್ಧಿವಂತಿಕೆ ಎನಿಸಿಕೊಳ್ಳಲಿದೆ. ಸಂಪತ್ತು ಸಂಗ್ರಹಕ್ಕೆ ಈ ವರ್ಷ ಹಲವು ಅವಕಾಶಗಳಿವೆ. ಒಂದು ವೇಳೆ ನೀವೇನಾದರೂ ದೀರ್ಘಾವಧಿಯ ಹೂಡಿಕೆ ಮಾಡಬೇಕು ಎಂದುಕೊಂಡಿದ್ದಲ್ಲಿ ಕಂಪನಿಗಳಲ್ಲಿನ ಷೇರುಗಳು ಅಥವಾ ಉದ್ಯಮಗಳಲ್ಲಿನ ಬಾಂಡ್‌ಗಳಿಗಿಂತ ಉತ್ತಮವಾದ ಹೂಡಿಕೆ ಬೇರೆ ಇಲ್ಲ ಎನ್ನಬಹುದು. ಮೂಲತಃ ನಿಮ್ಮ ಚಿಹ್ನೆಯವರ ವಿಶ್ಲೇಷಣಾ ಸಾಮರ್ಥ್ಯ ಉತ್ತಮವಾಗಿರುತ್ತದೆ. ಆದ್ದರಿಂದ ಹೂಡಿಕೆ ಮಾಡುವಾಗ ನೀವು ಅನಗತ್ಯ ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುವುದಿಲ್ಲ.

ಈ ವರ್ಷ ನಿಮಗೆ ರಿಯಲ್ ಎಸ್ಟೇಟ್, ಭರವಸೆಯ ಕ್ಷೇತ್ರಗಳಲ್ಲಿ ಒಂದು ಎನಿಸಲಿದೆ. ಒಳ್ಳೆ ಬೆಲೆಗೆ ಆಸ್ತಿ ಖರೀದಿ ಮಾಡುವ ಅವಕಾಶ ನಿಮ್ಮೆದುರು ನಿಲ್ಲಲಿದೆ. ಅದರಲ್ಲೂ ವಿಶೇಷವಾಗಿ ನೀವು ವಸತಿ ಅಥವಾ ವಾಣಿಜ್ಯ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಬಯಸಿದರೆ ತುಂಬ ಒಳ್ಳೆ ಬೆಲೆಗೆ ಆಸ್ತಿ ಖರೀದಿ ಮಾಡಬಹುದು. ಈ ವರ್ಷ ನೀವು ಹಣ ಗಳಿಸುವುದಂತೂ ನಿಶ್ಚಿತ. ಆದರೂ ನೀವು ಏನು ಖರ್ಚು ಮಾಡುತ್ತಿದ್ದೀರಿ ಮತ್ತು ಉಳಿತಾಯ ಏನು ಮಾಡುತ್ತಿದ್ದೀರಿ ಎಂದು ಬಗ್ಗೆ ಗಮನ ವಹಿಸುವುದು ಅತ್ಯಗತ್ಯ. ಉಳಿತಾಯ ಯೋಜನೆಯನ್ನು ರೂಪಿಸಿಕೊಳ್ಳುವುದು ಹಾಗೂ ಅದರಂತೆಯೇ ನಡೆದುಕೊಳ್ಳುವುದು ಮುಖ್ಯ. ಇನ್ನು ತುರ್ತು ಎಂಬ ಸಮಯ ಎದುರಾದಲ್ಲಿ ಅದಕ್ಕೆ ಒಂದು ಪ್ರಮಾಣದಲ್ಲಿ ಹಣವನ್ನು ಇರಿಸಿಕೊಳ್ಳುವದು ಒಳ್ಳೆಯದು.

ಪ್ರೀತಿ-ಪ್ರೇಮ, ಮದುವೆ ಭವಿಷ್ಯ

ಈ ವರ್ಷ ಪ್ರೀತಿ ಮತ್ತು ಸಂಬಂಧಗಳ ವಿಚಾರ ಭಾವನಾತ್ಮಕ ದಿಕ್ಕಿನ ಕಡೆಗೆ ಸಾಗಲಿದೆ. ನಿಮ್ಮಲ್ಲಿ ಕೆಲವರು ಹೊಸ ಪ್ರೀತಿಯನ್ನು ಹುಡುಕಲಿದ್ದೀರಿ. ಸರಿಯಾದ ಸಂಗಾತಿಯನ್ನು ಪಡೆಯಲು ನೀವೇ ಪ್ರಯತ್ನವನ್ನು ಮಾಡಬೇಕು ಹಾಗೂ ಶಾಂತಿ- ಸಮಾಧಾನದಿಂದ ಇರಬೇಕು. ಸಾಮಾನ್ಯವಾಗಿ ಹುಂಜದ ಚಿಹ್ನೆಯವರು ಆತ್ಮವಿಶ್ವಾಸದಿಂದ ಇರುತ್ತಾರೆ ಹಾಗೂ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇದೆಲ್ಲದರ ಆಚೆಗೆ ಸಂಬಂಧಗಳಲ್ಲಿ ಭಾವನಾತ್ಮಕ ಮಟ್ಟವನ್ನು ಕಾಪಾಡಿಕೊಳ್ಳಿ. ಈ ಹಿಂದಿನ ನಿಮ್ಮ ಅನುಭವಗಳನ್ನು ಒಂದು ಸಲ ನೆನಪಿಸಿಕೊಳ್ಳಿ. ಯಾವ ಸಂಗತಿಗಳು ಆರೋಗ್ಯಪೂರ್ಣ ಸಂಬಂಧಕ್ಕೆ ಅಡೆತಡೆಯಾಗಿ ಎದುರು ನಿಲ್ಲುತ್ತಾ ಇದೆ ಎಂಬುದನ್ನು ಕಂಡುಕೊಳ್ಳಲು ಪ್ರಯತ್ನಿಸಿ.

ಇಷ್ಟು ಸಮಯ ಹೇಗಿದ್ದಿರೋ ಏನೋ ಗೊತ್ತಿಲ್ಲ. ಆದರೆ ಈ ವರ್ಷ ಯಾವ ಪ್ರೀತಿ- ಪ್ರೇಮದ ವಿಚಾರದಲ್ಲಿ ಬದ್ಧರಾಗಿದ್ದೀರೋ ಅದು ಮದುವೆಯ ಹಂತಕ್ಕೆ ಒಯ್ಯುತ್ತದೆ. ಪ್ರೀತಿಯನ್ನು ಬಲಪಡಿಸಲು ಅವಕಾಶಗಳು ತೆರೆದುಕೊಳ್ಳುತ್ತವೆ. ಸ್ವಲ್ಪ ಮಟ್ಟಿಗೆ ಸವಾಲಂತೂ ಇದ್ದೇ ಇರುತ್ತದೆ. ಇದನ್ನು ದಾಟಲು ಸರಿಯಾದ ಶ್ರಮ ಮತ್ತು ಗ್ರಹಿಕೆ ಅತ್ಯಗತ್ಯ. ಸೂಕ್ತವಾದ ಮಾಹಿತಿ ಸರಿಯಾದ ಸಮಯಕ್ಕೆ ಹಂಚುವುದು ಮತ್ತು ಸರಿಯಾದ ಸಮಯಕ್ಕೆ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳುವುದು ಮುಖ್ಯ. ನಿಮ್ಮ ಚಿಹ್ನೆಯವರ ಸಮಸ್ಯೆ ಏನೆಂದರೆ ಬಹಳ ಬೇಗ ಸಿಟ್ಟು ಬರುತ್ತದೆ ಅಥವಾ ಬಹಳ ಕಠಿಣವಾಗಿ ನಡೆದುಕೊಳ್ಳುತ್ತೀರಿ. ಈ ವರ್ಷ ಹಿಡಿದಿದ್ದೇ ಹಟ ಎಂಬಂತೆ ನಡೆದುಕೊಳ್ಳಬೇಡಿ ಹಾಗೂ ರಾಜಿ- ಸಂಧಾನದ ಮೂಲಕ ವಾಗ್ವಾದಗಳನ್ನು ಕೊನೆಗೊಳಿಸಿ.

ಆರೋಗ್ಯ ಭವಿಷ್ಯ

ಈ ವರ್ಷ ಆರೋಗ್ಯ ವಿಚಾರಕ್ಕೆ ಬಹಳ ಎಚ್ಚರಿಕೆ ವಹಿಸಬೇಕು. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ನಿಮ್ಮ ದೇಹ ಯಾವಾಗ ವಿಪರೀತವಾಗಿ ದಣಿದಿದೆ ಎಂಬುದನ್ನು ಗುರುತಿಸಿ. ಅದಕ್ಕೆ ಇನ್ನಷ್ಟು ಹೊರೆ ಹೊರಿಸಲು ಹೋಗಬೇಡಿ. ದೈಹಿಕ ಆರೋಗ್ಯದ ಬಗ್ಗೆ ಹೇಳಬೇಕು ಅಂತಾದರೆ, ಈ ವರ್ಷ ನೀವು ಹೊಟ್ಟೆ ಮತ್ತು ಕರುಳಿನ ಬಗ್ಗೆ ಜಾಗರೂಕರಾಗಿರಬೇಕು. ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಬಹುದು, ಅದರಲ್ಲೂ ಕೆಲಸದಲ್ಲಿ ಒತ್ತಡ ಇದ್ದರೆ ಅಥವಾ ಭಾವನಾತ್ಮಕವಾಗಿ ಬಹಳ ಚಿಂತೆ ಮಾಡುತ್ತಾ ಇದ್ದಲ್ಲಿ ಸಮಸ್ಯೆ ಇನ್ನಷ್ಟು ತೀವ್ರವಾಗುತ್ತದೆ. ಗಮನಿಸಲೇಬೇಕಾದ ಮತ್ತೊಂದು ಸಮಸ್ಯೆಯೆಂದರೆ, ಅದು ನಿಮ್ಮ ಉಸಿರಾಟದ ವ್ಯವಸ್ಥೆಯದರು. ಅದರಲ್ಲೂ ವಿಶೇಷವಾಗಿ ನಿಮ್ಮ ಸುತ್ತ ಮುತ್ತಲ ಪರಿಸರದಲ್ಲಿ ಜ್ವರ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದೆ ಅಂದಾಗ ಜಾಗ್ರತೆ ವಹಿಸಿ.

ಮೂಲತಃ ಈ ಚಿಹ್ನೆಯವರಿಗೆ ಹವಾಮಾನದಲ್ಲಿನ ಸಣ್ಣ- ಪುಟ್ಟ ಬದಲಾವಣೆಗಳು ಅಥವಾ ಅಲರ್ಜಿಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಒಡ್ಡಿಕೊಂಡರೂ ಬಹಳ ಬೇಗ ಅನಾರೋಗ್ಯ ಆಗುತ್ತದೆ ಹಾಗೂ ಇದರ ಜೊತೆಗೆ ಶೀತ ಮತ್ತು ಜ್ವರ ಕಾಡುತ್ತದೆ. ಈ ಎಚ್ಚರಿಕೆ ಅನುಸರಿಸುವಂಥದ್ದೇ ಆದರೂ ಮತ್ತೊಮ್ಮೆ ಹೇಳಬೇಕು ಅಂದರೆ, ಚಳಿಗಾಲದಲ್ಲಿ ಬೆಚ್ಚಗಿನ ಬಟ್ಟೆಗಳನ್ನು ಧರಿಸಿ, ಮನೆಯೊಳಗೆ ಗಾಳಿಯನ್ನು ಶುದ್ಧೀಕರಿಸುವ ಸಾಧನ- ಸಲಕರಣೆಗಳನ್ನು ಬಳಸಿ ಮತ್ತು ಆಗಾಗ ಕೈಗಳನ್ನು ತೊಳೆಯಿರಿ. ಈ ವರ್ಷದ ಮೊದಲಾರ್ಧದಲ್ಲಿ ಮೂಳೆ ಮತ್ತು ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲಿದ್ದೀರಿ. ಇನ್ನು ಚಳಿ ಹೆಚ್ಚಿಗೆ ಇರುವ ತಿಂಗಳಲ್ಲಿ ಕೀಲುಗಳು ಚಲಿಸುವುದಕ್ಕೆ ಸಾಧ್ಯವಾಗದಷ್ಟು ಗಟ್ಟಿಯಾಗುತ್ತದೆ, ಜೊತೆಗೆ ನೋವು ಕೊಡುತ್ತದೆ. ಇನ್ನು ಅತಿಯಾಗಿ ಕೆಲಸ ಮಾಡುವ ಜೋಷ್‌ನಲ್ಲಿ ಕೆಲವು ಆರೋಗ್ಯ ಸಮಸ್ಯೆಗಳನ್ನು ಮಾಡಿಕೊಳ್ಳಲಿದ್ದೀರಿ ಎಚ್ಚರ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.