ಅಲ್ಲು ಅರ್ಜುನ್ ಬಂಧನ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ: ಪುಷ್ಪ 2 ನಟ ಅರೆಸ್ಟ್ ಆಗಿದ್ದಕ್ಕೆ ಅವರೇ ಕಾರಣ ಎಂದ ವೈಸಿಪಿ
Allu Arjun: ಸಂಧ್ಯಾ ಥಿಯೇಟರ್ನಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಅರೆಸ್ಟ್ ಆಗಿದ್ದ ಅಲ್ಲು ಅರ್ಜುನ್ ಶನಿವಾರ ರಿಲೀಸ್ ಆಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ, ಆಂಧ್ರಪ್ರದೇಶ ರಾಜಕೀಯ ನಾಯಕರು ಪರ, ವಿರೋಧವಾಗಿ ಪ್ರತಿಕ್ರಿಯಿಸಿದ್ದಾರೆ.
ಪುಷ್ಪ 2 ರಿಲೀಸ್ ಸಮಯದಲ್ಲಿ ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಶುಕ್ರವಾರ ಅರೆಸ್ಟ್ ಆಗಿ ಇಂದು (ಡಿ.14) ಬೆಳಗ್ಗೆ ರಿಲೀಸ್ ಆಗಿದ್ದಾರೆ. ಬಂಧನವಾದ ಬೆನ್ನಲ್ಲೇ ಅವರಿಗೆ ಜಾಮೀನು ಕೂಡಾ ದೊರೆತಿದೆ. ಅಲ್ಲು ಅರ್ಜುನ್ ಬಂಧನ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದೆ. ರಾಜಕೀಯ ನಾಯಕರು ಕೂಡಾ ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸಿದ್ದಾರೆ.
ಬಂಧನವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್
ಅಲ್ಲು ಅರ್ಜುನ್ ಅರೆಸ್ಟ್ ಆಗುತ್ತಿದ್ದಂತೆ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿಆರ್ ಹಾಗೂ ಹರೀಶ್ ರಾವ್ ಪ್ರತಿಕ್ರಿಯಿಸಿ ಖ್ಯಾತ ನಟನ ಬಂಧನವನ್ನು ವಿರೋಧಿಸಿದ್ದಾರೆ. ಬಿಜೆಪಿ ಕೇಂದ್ರ ಸಚಿವ ಕಿಷನ್ ರೆಡ್ಡಿ, ಬಂಡಿ ಸಂಜಯ್ ಸೇರಿದಂತೆ ಮುಂತಾದ ರಾಜಕೀಯ ನಾಯಕರು ಪ್ರತಿಕ್ರಿಯಿಸಿ ಅಲ್ಲು ಅರ್ಜುನ್ ಅರೆಸ್ಟ್ ಅಗಿದ್ದನ್ನು ವಿರೋಧಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದರಿಂದ ಅದರ ನಡೆಯನ್ನು ವಿರೋಧಿಸುವ ಮೂಲಕ ನಟನನ್ನು ಬೆಂಬಲಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಅಲ್ಲು ಅರ್ಜುನ್ ಬಂಧನವನ್ನು ಸಮರ್ಥಿಸಿಕೊಂಡಿದೆ. ಸಿಎಂ ರೇವಂತ್ ರೆಡ್ಡಿ, ಎಂಎಲ್‌ಸಿ ಬಲ್ಮೂರಿ ವೆಂಕಟ್ ಸೇರಿದಂತೆ ಇತರರು ಮಾತನಾಡಿ ಪೊಲೀಸ್ ಇಲಾಖೆ ಅದರ ಕೆಲಸವನ್ನು ತಾನು ಮಾಡಿದೆ ಎಂದಿದ್ದಾರೆ. ಆದರೆ ಅದೇ ಪಕ್ಷದ ಕೆಲವರು ಸ್ವತಃ ತಮ್ಮದೇ ಪಕ್ಷದ ನಡೆಯನ್ನು ಖಂಡಿಸಿದ್ದಾರೆ ಎನ್ನಲಾಗಿದೆ.
ಚಂದ್ರಬಾಬು ನಾಯ್ಡು ಕಾರಣ ಎಂದ ವೈಸಿಪಿ
ತೆಲಂಗಾಣದಲ್ಲಿ ಪರಿಸ್ಥಿತಿ ಹೀಗಿದ್ದರೆ, ಆಂಧ್ರಪ್ರದೇಶದಲ್ಲಿ ಕೂಡಾ ಅಲ್ಲು ಅರ್ಜುನ್ ಅರೆಸ್ಟ್ ಆಗಿರುವ ವಿಚಾರ ಹಾಟ್ ಟಾಪಿಕ್ ಆಗಿದೆ. ಆಡಳಿತಾರೂಢ ತೆಲುಗು ದೇಶಂ ಪಕ್ಷದ ಉಪ ಸ್ಪೀಕರ್ ರಘುರಾಮಕೃಷ್ಣರಾಜು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಜನಸೇನಾ ಪಕ್ಷದಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಅಲ್ಲು ಅರ್ಜುನ್ ಬಂಧನದ ಹಿಂದೆ ಚಂದ್ರಬಾಬು ನಾಯ್ಡು ಕೈವಾಡವಿದೆ ಎಂದು ವೈಸಿಪಿ ಆರೋಪಿಸಿದೆ. ನೀವು ನಮ್ಮ ಪರ ನಿಂತಿದ್ದಿರಿ, ಈಗ ನಾವು ನಿಮ್ಮ ಪರ ನಿಲ್ಲುತ್ತಿದ್ದೇವೆ ಎಂದು ವೈಸಿಪಿ ಕಾರ್ಯಕರ್ತರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಹೈಕೋರ್ಟ್‌ನಲ್ಲಿ ಅಲ್ಲು ಅರ್ಜುನ್ ಪರ ವಾದ ಮಂಡಿಸಿದ ವಕೀಲ ನಿರಂಜನ್ ರೆಡ್ಡಿ ಅವರು ವೈಸಿಪಿಯ ರಾಜ್ಯಸಭಾ ಸಂಸದರಾಗಿದ್ದಾರೆ. ಇದೇ ಕಾರಣಕ್ಕಾಗಿ ವೈಸಿಪಿ ಅಲ್ಲು ಅರ್ಜುನ್ ಪರ ನಿಂತಿದೆ ಎನ್ನಲಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ
ಇದಿಷ್ಟೇ ಅಲ್ಲ, ಅಲ್ಲು ಅರ್ಜುನ್ ಅರೆಸ್ಟ್ ಆದ ವಿಚಾರಕ್ಕೆ ಸಂಬಂದಿಸಿದಂತೆ ನಾನಾ ಊಹಾಪೋಹಗಳು ಹರಿದಾಡುತ್ತಿದೆ. ಇತ್ತೀಚೆಗೆ ನಡೆದ ಪುಷ್ಪ 2 ಸಕ್ಸಸ್ ಮೀಟ್‌ನಲ್ಲಿ ಅಲ್ಲು ಅರ್ಜುನ್, ಚಿತ್ರಕ್ಕೆ ನೀಡಿದ ಬೆಂಬಲಕ್ಕಾಗಿ ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಧನ್ಯವಾದ ಅರ್ಪಿಸಿದ್ದರು. ಆದರೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೆಸರು ಹೇಳಿರಲಿಲ್ಲ. ಇದೇ ದ್ವೇಷಕ್ಕಾಗಿ ಅಲ್ಲು ಅರ್ಜುನ್ ಅವರನ್ನು ಅರೆಸ್ಟ್ ಮಾಡಿಸಲಾಗಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಈ ಪೋಸ್ಟ್‌ಗಳಿಗೆ ಹೆಚ್ಚಿನ ಜನರು, ಅಲ್ಲು ಅರ್ಜುನ್ ಇನ್ಮುಂದೆ ರೇವಂತ್ ರೆಡ್ಡಿ ಹೆಸರನ್ನು ಮರೆಯುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಒಂದೇ ದಿನ ಅರೆಸ್ಟ್ ಆಗಿ ಜಾಮೀನು ದೊರೆತಿರುವ ವಿಚಾರದ ಬಗ್ಗೆ ಕೂಡಾ ಚರ್ಚೆ ನಡೆಯುತ್ತಿದೆ. ಅಲ್ಲು ಅರ್ಜುನ್ ಬಂಧನದ ಹಿಂದೆ ಏನೇ ಕಾರಣವಿರಲಿ, ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ಒಬ್ಬರ ವಿರುದ್ಧ ಮತ್ತೊಬ್ಬರು ಆರೋಪ ಮಾಡುತ್ತಿರುವುದು ಕೂಡಾ ಹಾಸ್ಯಾಸ್ಪದ ಎನಿಸಿದೆ.