ಜಗತ್ತು ನಿಬ್ಬೆರಗಾಗಿ ನಿಂತು ನೋಡುವ ಒಂದು ಜಯ ಸಿಗುವ ಮುಂಚೆ ಅದೆಷ್ಟು ಸಂಘರ್ಷಗಳು ಇರುತ್ತವೆ ಗೊತ್ತಾ? ರಂಗಸ್ವಾಮಿ ಮೂಕನಹಳ್ಳಿ
ಭಾರತದ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ಡಿ ಅವರು ತಮ್ಮ 18ನೇ ವಯಸ್ಸಿಗೆ ವಿಶ್ವ ಚೆಸ್ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಆ ಮೂಕ ಅತಿ ಕಿರಿಯ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಆದರೆ ಅತಿ ಚಿಕ್ಕ ವಯಸ್ಸಿಗೆ ಇವರ ಈ ಸಾಧನೆಯಲ್ಲಿನ ಹೋರಾಟ, ಸಂಘರ್ಷಗಳು ಇರುತ್ತವೆ ಎಂಬುದರ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ಅವರು ಜಾಲತಾಣದಲ್ಲಿ ಬರೆದಿದ್ದಾರೆ.
ಗುಕೇಶ್ ಇವತ್ತಿಗೆ ಭಾರತ ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ಸದ್ದು ಮಾಡುತ್ತಿರುವ ಹೆಸರು. ಏಳು ವರ್ಷದ ಹುಡುಗನಿದ್ದಾಗ ಆತ ವರ್ಲ್ಡ್ ಚಾಂಪಿಯನ್ ಆಗಬೇಕು ಎಂದದ್ದು, ಇಂದು ಆತ ನಿಂತದ್ದು , ಕೊತದ್ದು , ಎಲ್ಲವೂ ಸುದ್ದಿ! ಗೆಲುವಿಗೆ, ಯಶಸ್ಸಿಗೆ ಇರುವ ತಾಕತ್ತು ಅದು. ಇದೆ ಗುಕೇಶ್ ಚಿಕ್ಕ ವಯಸ್ಸಿಗೆ ಗ್ರಾಂಡ್ ಮಾಸ್ಟರ್ ಆಗಿದ್ದಾಗ, ವಿಶ್ವನಾಥ್ ಆನಂದ್ ಅವರನ್ನು ಮೀರಿಸಿದ ಆಟಗಾರ ಎನ್ನಿಸಿಕೊಂಡಾಗ ಆತನಿಗೆ ಪ್ರಯೋಜಕರೇ ಇರಲಿಲ್ಲ. ತುಂಬಾ ಹಿಂದಿನ ಕಥೆಯಲ್ಲ 2017-18ರ ಸಮಯದಲ್ಲಿ ಗುಕೇಶ್ ಕುಟುಂಬ ಹಣಕ್ಕಾಗಿ ಪರದಾಡಿದ್ದಾರೆ. ಮಗನಿಗಾಗಿ ಹಣ ಹೊಂಚಲು ಪರಿಪಾಟಲು ಬಿದ್ದಿದ್ದಾರೆ.
ಗುಕೇಶ್ ತಂದೆ ವೃತ್ತಿಯಿಂದ ವೈದ್ಯರಾಗಿದ್ದು ಕೂಡ ಮಗನ ಹಿಂದೆ ಮುಂದೆ ಸುತ್ತಾಡುವ ಸಲುವಾಗಿ ಕೆಲಸ ಬಿಡುತ್ತಾರೆ. ಗುಕೇಶ್ ತಾಯಿಯ ಗಳಿಕೆಯಲ್ಲಿ ಮನೆ ಸಾಗಬೇಕು. ಕೊನೆಗೊಂದು ಸಮಯದಲ್ಲಿ ಪೈಸೆ ಪೈಸೆಗೂ ಪರೆದಾಡುವ ಸಮಯದಲ್ಲಿ ಮಿತ್ರರ ಪ್ರಯೋಜಕತ್ವದಿಂದ ಗುಕೇಶ್ ಚೆಸ್ ಕನಸು ಇಂದಿಗೆ ಪೂರ್ಣಗೊಂಡಿದೆ. ಜಗತ್ತಿನ ಇತರ ಭಾಗದಲ್ಲಿ ನಡೆಯುವ ಚೆಸ್ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಲು , ಜಾಗತಿಕ ಮಟ್ಟದ ಕೋಚ್ಗಳನ್ನು ನೇಮಿಸಿಕೊಳ್ಳಲು ಒಂದು ವರ್ಷಕ್ಕೆ 50 ಲಕ್ಷ ರೂಪಾಯಿ ಬೇಕಾಗುತ್ತದೆ. ಹೇಳಿಕೇಳಿ ಗುಕೇಶ್ ಮನೆಯವರು ಮಧ್ಯಮವರ್ಗಕ್ಕೆ ಸೇರಿದವರು.
ಒಂದು ಗೆಲುವಿಗೆ ಅದೆಷ್ಟು ಜನರ ದೇಣಿಗೆ ಇರುತ್ತದೆಯಲ್ಲವೇ? ಇದು ಕೇವಲ ಹಣಕಾಸಿನ ಕಥೆಯಾದರೆ , ಅಪ್ಪ ಮಗನನ್ನು ಬಿಟ್ಟಿರಬೇಕಾದ ತಾಯಿಯ ಕಥೆ ಇನ್ನೊಂದು , ಪ್ರತಿ ಹೋರಾಟದಲ್ಲೂ ಮಗನ ಸೋಲು ಗೆಲುವಿನ ಬಗ್ಗೆ ಚಿಂತಿಸುವ ತಂದೆಯ ಮೇಲಿನ ಒತ್ತಡ ಬೇರೆಯ ತರಹದ್ದು , ಅಪ್ಪ ಅಮ್ಮನ , ಪ್ರಾಯೋಜಕರ , ಹಿತೈಷಿಗಳ ನಂಬಿಕೆಯನ್ನು ಹುಸಿ ಮಾಡದೆ ಇರಲು ಸದಾ ಪ್ರಯತ್ನಿಸಬೇಕಾದ ಸನ್ನಿವೇಶ ಆ ಹುಡುಗನದು!
ಇವೆಲ್ಲವುದರ ಜೊತೆಗೆ ವಾರಿಗೆಯ ಹುಡುಗರು ಕುಣಿದು ಕುಪ್ಪಳಿಸುವಾಗ ಕೂಡ ಪ್ರಾಕ್ಟೀಸ್ ಪ್ರಾಕ್ಟೀಸ್ ಮತ್ತು ಪ್ರಾಕ್ಟೀಸ್ ಎನ್ನುವ ಮಂತ್ರ ಬಿಟ್ಟು ಬೇರೇನೂ ಬದುಕಿನಲ್ಲಿ ಇಲ್ಲದ ಸ್ಯಾಕ್ರಿಫೈಸ್ ಮಾಡುವುದು ಸುಲಭವಲ್ಲ. ಇಷ್ಟೆಲ್ಲಾ ಮಾಡಿ ಕೂಡ ಈ ಗೆಲುವು ಎನ್ನುವುದು , ಯಶಸ್ಸು ಎನ್ನುವುದು ಬಹಳ ಚಂಚಲೆ , ನಿನ್ನೆಯ ಆಟದಲ್ಲೂ ಏನು ಬೇಕಾದರೂ ಆಗ ಬಹುದಿತ್ತು. ಏಕೆಂದರೆ ಗುಕೇಶ್ ಬಹಳಷ್ಟು ತಪ್ಪು ನಡೆಗಳನ್ನು ಮಾಡಿದ್ದರು. ಅದೃಷ್ಟ ಪಾಲಿಗಿತ್ತು , ಚೀನಿ ಆಟಗಾರ ಹೆಚ್ಚು ತಪ್ಪು ನಡೆಗಳನ್ನು ಮಾಡಿದರು.
ಇವತ್ತು ಗುಕೇಶ್ ಪ್ರಸಿದ್ದರು , ಆದರೆ ಅದರ ಹಿಂದೆ ಇರುವ ಬಲಿದಾನ, ಕಠಿಣ ಪರಿಶ್ರಮ ಗೊತ್ತಾಗಲಿ ಎನ್ನುವುದಕ್ಕೆ ಇಷ್ಟೆಲ್ಲಾ ಬರೆಯಬೇಕಾಯಿತು. ನೆನಪಿರಲಿ ಯಾವುದೂ ಸುಲಭವಾಗಿ ಸಿಗುವುದಿಲ್ಲ. ಮಕ್ಕಳಿಗೆ ಪ್ರಯತ್ನ ಮತ್ತು ಕಠಿಣ ಹಾದಿಯನ್ನು ಆಯ್ಕೆ ಮಾಡಿಕೊಳ್ಳಲು ಹೇಳಬೇಕು. ಮನಸ್ಸಿಗೆ ಖುಷಿ ನೀಡಿವ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಹೇಳಬೇಕು. ಎಳೆವೆಯಲ್ಲಿ ಅವರಿಗೆ ಏನು ಬೇಕು ಎನ್ನುವುದು ಗೊತ್ತಿರುವುದಿಲ್ಲ. ಪೋಷಕರು ಅವರಲ್ಲಿರುವ ಶಕ್ತಿಯನ್ನು ಗುರುತಿಸಿ ನೀರೆರೆಯಬೇಕು. ಗುಕೇಶ್ ಅಪ್ಪ -ಅಮ್ಮ ಗೆದ್ದಿದ್ದಾರೆ. ಮಕ್ಕಳ ಚಂಚಲ ಸ್ವಭಾವವನ್ನು ತಿದ್ದಬೇಕಾದದ್ದು ಪೋಷಕರ ಕೆಲಸ. ಮಕ್ಕಳಿಗೆ ನಿಖರತೆ , ಹಿಡಿದದ್ದು ಸಾಧಿಸುವ ತನಕ ರಿಲ್ಯಾಕ್ಸ್ ಆಗದ ಮನಸ್ಥಿತಿ ಕಲಿಸುವುದು ಕೂಡ ನಮ್ಮ ಕೈಲಿದೆ. ಶುಭವಾಗಲಿ (ಬರಹ: ರಂಗಸ್ವಾಮಿ ಮೂಕನಹಳ್ಳಿ)