Shri Swarna Gowri Vratha: ಗಣೇಶ ಚತುರ್ಥಿ ವೇಳೆ ಸ್ವರ್ಣಗೌರಿ ವ್ರತ ಯಾಕೆ ಆಚರಿಸಬೇಕು, ಕಥೆ, ಮಹತ್ವ ಹೀಗಿದೆ-devotional festival swarna gowri vrata should be observed during ganesh chaturthi reason story here sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Shri Swarna Gowri Vratha: ಗಣೇಶ ಚತುರ್ಥಿ ವೇಳೆ ಸ್ವರ್ಣಗೌರಿ ವ್ರತ ಯಾಕೆ ಆಚರಿಸಬೇಕು, ಕಥೆ, ಮಹತ್ವ ಹೀಗಿದೆ

Shri Swarna Gowri Vratha: ಗಣೇಶ ಚತುರ್ಥಿ ವೇಳೆ ಸ್ವರ್ಣಗೌರಿ ವ್ರತ ಯಾಕೆ ಆಚರಿಸಬೇಕು, ಕಥೆ, ಮಹತ್ವ ಹೀಗಿದೆ

Swarna Gowri Vrata: ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಕೆಲವೇ ಕೆಲವು ಗಂಟೆಗಳು ಬಾಕಿ ಇವೆ. ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಎಲ್ಲರೂ ತಲ್ಲೀನರಾಗಿದ್ದಾರೆ. ಇದರ ನಡುವೆ ದೇವಿಯ ಬಗ್ಗೆ ತಿಳಿದುಕೊಳ್ಳಬೇಕು. ಅದರಲ್ಲೂ ಶ್ರೀಸ್ವರ್ಣಗೌರಿ ವ್ರತವನ್ನು ಯಾಕೆ ಆಚರಿಸಲಾಗುತ್ತೆ. ಹಿಂದಿನ ಕಥೆಯನ್ನು ಇಲ್ಲಿ ಹೇಳಲಾಗಿದೆ. (ವರದಿ: ಜ್ಯೋತಿಷಿ ಎಚ್ ಸತೀಶ್)

ಗಣೇಶ ಚತುರ್ಥಿ ವೇಳೆ ಸ್ವರ್ಣಗೌರಿ ವ್ರತ ಯಾಕೆ ಆಚರಿಸಬೇಕು, ಕಥೆ, ಮಹತ್ವವನ್ನು ತಿಳಿಯಿರಿ.
ಗಣೇಶ ಚತುರ್ಥಿ ವೇಳೆ ಸ್ವರ್ಣಗೌರಿ ವ್ರತ ಯಾಕೆ ಆಚರಿಸಬೇಕು, ಕಥೆ, ಮಹತ್ವವನ್ನು ತಿಳಿಯಿರಿ.

ಗೌರಿ-ಗಣೇಶ ಹಬ್ಬಕ್ಕೆ ಬಹುತೇಕರ ಮನೆಯಲ್ಲಿ ಸಿದ್ಧತೆಗಳನ್ನು ನಡೆಯುತ್ತಿದ್ದು, ಗಣೇಶ ಮೂರ್ತಿಗೂ ಮುನ್ನ ಗೌರಿಯನ್ನು ಸ್ವಾಗತಿಸಲು ಮಹಿಳಾ ಭಕ್ತಾಧಿಗಳು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮನೆಗಳನ್ನು ಸ್ವಚ್ಛಗೊಳಿಸಿ ಗೌರಿಯನ್ನು ಕೂರಿಸಲು ಅಲಂಕಾರ ಹಾಗೂ ಇತರೆ ಕೆಲಸದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ನೀವು ಸ್ವರ್ಣಗೌರಿ ವ್ರತ ಯಾಕೆ ಆಚರಿಸಬೇಕು, ಕಥೆಯನ್ನು ತಿಳಿದುಕೊಂಡರೆ ಒಳ್ಳೇದು. ಜ್ಯೋತಿಷಿ ಎಚ್ ಸತೀಶ್ ಅವರು ಇಲ್ಲಿ ಬರಿದ್ದಾರೆ. ಸರಸ್ವತಿ ನದಿಯ ತೀರದಲ್ಲಿ ವಿಮಲವೆಂಬ ದೊಡ್ಡ ಪಟ್ಟಣವಿತ್ತು. ಅದ್ದನ್ನು ಚಂದ್ರಪ್ರಭು ಎಂಬ ರಾಜನು ಆಳುತ್ತಿದ್ದನು. ಇವನು ಐಶ್ವರ್ಯದಲ್ಲಿ ಕುಬೇರನನ್ನು ಮೀರಿಸುವಂತೆ ಇದ್ದನು. ಅವನಿಗೆ ರೂಪವತಿಯರಾದ ಇಬ್ಬರು ಪತ್ನಿಯರಿದ್ದರು. ಆದರೆ ಇವನಿಗೆ ಹಿರಿಯ ಪತ್ನಿಯಲ್ಲಿ ವಿಶೇಷವಾದಂತಹ ಪ್ರೀತಿ ವಿಶ್ವಾಸವಿತ್ತು. ಕಿರಿಯ ಪತ್ನಿಯ ಬಗ್ಗೆ ಅಸಡ್ಡೆ ಇರದೇ ಹೋದರು ಮನಸ್ಸಿಗೆ ಒಂದು ರೀತಿಯ ಬೇಸರವಿತ್ತು. ಅನುರಾಗದ ಕೊರತೆ ಇತ್ತು.

ಹೀಗಿರುವಾಗ ರಾಜನು ಜನರ ಕ್ಷೇಮಕ್ಕಾಗಿ ಕ್ರೂರ ಮೃಗಗಳ ಬೇಟೆಗಾಗಿ ಕಾಡಿಗೆ ತೆರಳುತ್ತಾನೆ. ದಣಿವಾರಿಸಿಕೊಳ್ಳಲು ಅಲ್ಲಿಯೇ ಇದ್ದ ಜಲಾಶಯದ ಬಳಿಗೆ ಬರುತ್ತಾನೆ. ಅಲ್ಲಿ ಕೆಲವೊಂದು ಮಹಿಳೆಯರು ಒಂದುಗೂಡಿ ಪೂಜೆಯನ್ನು ಆಚರಿಸುತ್ತಿರುತ್ತಾರೆ. ಅದೇನೆಂದು ಕೇಳಲು ಇದನ್ನು ಸ್ವರ್ಣಗೌರಿ ವ್ರತ ಎಂದು ಕರೆಯುತ್ತಾರೆ. ಈ ಸ್ವರ್ಣಗೌರಿ ವ್ರತವು ಪ್ರತಿ ಸಂವತ್ಸರವು ಭಾದ್ರಪದ ಮಾಸದ ಶುಕ್ಲು ಪಕ್ಷದ ತದಿಗೆಯ ದಿನದಂದು ಬರುತ್ತದೆ. ಈ ಪೂಜೆಯ ಕ್ರಮವನ್ನು ಕಂಡ ರಾಜನಿಗೆ ಕುತೂಹಲ ಉಂಟಾಗುತ್ತದೆ. ಆದ್ದರಿಂದ ಆ ಪೂಜೆಯ ಬಗ್ಗೆ ತಿಳಿಸಬೇಕೆಂದು ವಿನಂತಿಸಿಕೊಳ್ಳುತ್ತಾನೆ. ಆಗ ಅಲ್ಲಿದ್ದ ಮಹಿಳೆಯರು ಇದನ್ನು ಪ್ರತಿ ಸಂವತ್ಸರದ ಮಾಸದ ಶುಕ್ಲುಪಕ್ಷದ ತದಿಗೆಯ ದಿನ ಆಚರಿಸಬೇಕು ಎಂದು ಹೇಳುತ್ತಾರೆ.

ನೀರಿರುವ ಸ್ಥಳ ಎಂದರೆ ಜಲಾಶಯ ಅಥವಾ ನದಿಯ ದಡದಲ್ಲಿ ಇದನ್ನುಆಚರಿಸಬೇಕೆಂದು ತಿಳಿಸುತ್ತಾರೆ. ಒಂದು ವೇಳೆ ಅಸಾಧ್ಯವಾದಲ್ಲಿ ಮನೆಯಲ್ಲಿ ಮೊದಲು ನದಿಯಿಂದ ತಂದ ಗಂಗಯೆ ಪೂಜೆಯನ್ನು ಮಾಡಬೇಕು. ಆ ನಂತರ ನದಿಯ ಮಣ್ಣು ಅಥವಾ ಅರಿಶಿನದಿಂದ ಮಾಡಿದ ಗೌರಿಯನ್ನು ಪೂಜಿಸಬೇಕು. ಆ ನಂತರ ಸ್ವರ್ಣಗೌರಿಯನ್ನು ಪೂಜಿಸಬೇಕೆಂದು ತಿಳಿಸುತ್ತಾರೆ. ಈ ಪೂಜೆ ಮಾಡಿದ ನಂತರ ಹದಿನಾರು ಗಂಟುಗಳುಳ್ಳ ದಾರವನ್ನು ಬಲಗೈಯಲ್ಲಿ ದೇವರ ಪ್ರಸಾದದ ಹೂವಿನೊಂದಿಗೆ ಧರಿಸಬೇಕೆಂದು ತಿಳಿಸುತ್ತಾನೆ. ಇದರಿಂದ ಪ್ರೇರಿತನಾದ ರಾಜನು ಅವರಿಂದ ದಾರವನ್ನು ಪಡೆದು ತನ್ನ ಕೈಯಲ್ಲಿ ಧರಿಸುತ್ತಾನೆ.

ರಾಜನು ತನ್ನ ಊರಿಗೆ ಮರಳಿ ತನ್ನ ಇಬ್ಬರು ಹೆಂಡತಿಯರಿಗೆ ಈ ಪೂಜೆಯ ವಿವರವನ್ನು ತಿಳಿಸುತ್ತಾನೆ. ಅವರಿಗೆ ಈ ಪೂಜೆಯನ್ನು ಮಾಡುವಂತೆ ತಿಳಿಸುತ್ತಾನೆ. ಸತತವಾಗಿ ಹದಿನಾರು ವರ್ಷಗಳ ಕಾಲ ಈ ಪೂಜೆಯನ್ನು ಮಾಡಿದರೆ ಉದ್ಯಾನವನ್ನು ಮಾಡಬೇಕು. ನಂತರ ಇದರ ಸಿದ್ದಿ ಲಭಿಸುತ್ತದೆ ಎಂದು ತಿಳಿಸುತ್ತಾನೆ. ಆದರೆ ಇವನ ಮಾತಿನಲ್ಲಿ ಹಿರಿಯ ಪತ್ನಿಗೆ ನಂಬಿಕೆ ಬರುವುದಿಲ್ಲ. ರಾಜನ ಕೈಯಲ್ಲಿದ್ದ ದಾರವನ್ನು ಕಿತ್ತು ಎಸೆದಾಗ ಅಲ್ಲಿಯೇ ಇದ್ದ ಒಣಮರದ ಮೇಲೆ ಬೀಳುತ್ತದೆ. ಆ ಕ್ಷಣವೇ ಒಣಗಿ ಹೋಗಿದ್ದ ಆ ಮರವು ಚಿಗುರಲು ಆರಂಭಿಸುತ್ತದೆ. ಇದನ್ನು ಕಂಡ ಕಿರಿಯ ಹೆಂಡತಿಯು ಕಿತ್ತೆಸೆದ ಆ ದಾರವನ್ನು ತನ್ನ ಕೈಯಲ್ಲಿ ಧರಿಸುತ್ತಾಳೆ.

ಭಯ ಭಕ್ತಿಯಿಂದ ಗೌರಿಯ ಪೂಜೆಯನ್ನು ಮಾಡುತ್ತಾಳೆ. ಪೂಜೆಯ ವೇಳೆ ಬಂದವರಿಗೆ ಅರಿಶಿನ, ಕುಂಕುಮ ಮತ್ತು ಬಳೆಯನ್ನು ಉಡುಗೊರೆಯಾಗಿ ನೀಡುತ್ತಾಳೆ. ಅಲ್ಲದೆ ಪ್ರಸಾದ ರೂಪವಾಗಿ ದೇವರಿಗೆ 16 ರೀತಿಯ ಹೂವು ಹಣ್ಣುಗಳನ್ನು ಅರ್ಪಿಸುತ್ತಾಳೆ. ಇದರಿಂದಾಗಿ ಸುಖ ಸಂತೋಷದ ಜೀವನ ಅವಳದಾಗುತ್ತದೆ. ಇತ್ತ ಪೂಜೆ ಮಾಡಲು ನಿರಾಕರಿಸಿದ ಹಿರಿಯ ಪತ್ನಿಯು ಕಷ್ಟಕ್ಕೆ ಸಿಲುಕುತ್ತಾಳೆ. ಆನಂತರ ತನ್ನ ತಪ್ಪಿನ ಅರಿವಾಗಿ ಅವಳು ಸಹ ಗೌರಿ ಪೂಜೆಯನ್ನು ಆಚರಿಸುತ್ತಾಳೆ. ಇದರಿಂದ ಕಳೆದುಕೊಂಡ ಸಿರಿಯನ್ನು ಮರಳಿ ಪಡೆಯುತ್ತಾಳೆ. ಈ ರೀತಿ ಮನೆಯಲ್ಲಿರುವ ಹೆಣ್ಣು ಮಕ್ಕಳು ಸ್ವರ್ಣಗೌರಿ ಪೂಜೆಯನ್ನು ಮಾಡಿದರೆ ದಾರಿದ್ಯವು ತೊಲಗಿ ಸುಖ ಸಂತೋಷ ಜೀವನದಲ್ಲಿ ನೆಲೆಸುತ್ತದೆ. ತಮ್ಮ ಇಷ್ಟಾರ್ಥಗಳ ಈಡೇರಿಕೆಗೂ ಸ್ವರ್ಣಗೌರಿ ವ್ರತವನ್ನು ಆಚರಿಸುತ್ತಾರೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.