ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಅದ್ವೈತ ಸಿದ್ಧಾಂತವನ್ನು ಜಗತ್ತಿಗೆ ಸಾರಿದ ಆದಿ ಶಂಕರಾಚಾರ್ಯರ ಜಯಂತಿ ಯಾವಾಗ? ಗುರುಗಳ ಜೀವನ, ಕೊಡುಗೆ ಮತ್ತು ಪೀಠಗಳ ವಿವರ ಇಲ್ಲಿದೆ

ಅದ್ವೈತ ಸಿದ್ಧಾಂತವನ್ನು ಜಗತ್ತಿಗೆ ಸಾರಿದ ಆದಿ ಶಂಕರಾಚಾರ್ಯರ ಜಯಂತಿ ಯಾವಾಗ? ಗುರುಗಳ ಜೀವನ, ಕೊಡುಗೆ ಮತ್ತು ಪೀಠಗಳ ವಿವರ ಇಲ್ಲಿದೆ

Adi Shankaracharya Jayanti 2024: ಆದಿ ಶಂಕರಾಚಾರ್ಯರನ್ನು ಕಲಿಯುಗದ ಯುಗಪುರುಷ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮದ ಪುನರುಜ್ಜೀವನದ ಶ್ರೇಯಸ್ಸನ್ನು ಇವರಿಗೆ ನೀಡಲಾಗುತ್ತದೆ. ಆದಿ ಶಂಕರಾಚಾರ್ಯರ ಜಯಂತಿಯನ್ನು ಈ ವರ್ಷ ಮೇ 12, 2024 ರಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅವರ ಜೀವನ ಚರಿತ್ರೆ ಮತ್ತು ಅವರ ಸಾಧನೆಗಳನ್ನು ತಿಳಿಯಲು ಮುಂದೆ ಓದಿ.

ಅದ್ವೈತ ಸಿದ್ಧಾಂತವನ್ನು ಜಗತ್ತಿಗೆ ಸಾರಿದ ಆದಿ ಶಂಕರಾಚಾರ್ಯರ ಜಯಂತಿ, ಶಂಕರಾಚಾರ್ಯರ ಜೀವನ, ಬೋಧನೆ, ಕೃತಿಗಳು ಭಾರತದ ತತ್ವಶಾಸ್ತ್ರಕ್ಕೆ ಮೌಲಿಕ ಕೊಡುಗೆ ನೀಡಿವೆ.
ಅದ್ವೈತ ಸಿದ್ಧಾಂತವನ್ನು ಜಗತ್ತಿಗೆ ಸಾರಿದ ಆದಿ ಶಂಕರಾಚಾರ್ಯರ ಜಯಂತಿ, ಶಂಕರಾಚಾರ್ಯರ ಜೀವನ, ಬೋಧನೆ, ಕೃತಿಗಳು ಭಾರತದ ತತ್ವಶಾಸ್ತ್ರಕ್ಕೆ ಮೌಲಿಕ ಕೊಡುಗೆ ನೀಡಿವೆ. (wikipedia)

ವಿಶ್ವ ತತ್ವಜ್ಞಾನಿಗಳ ದಿನ 2024: ಭಾರತದಲ್ಲಿ ಹಿಂದೂ ಧರ್ಮದ ಜ್ಯೋತಿಯನ್ನು ಜಾಗೃತಗೊಳಿಸುವ ಕೆಲಸವನ್ನು ಮಾಡಿದವರು ಜಗದ್ಗುರು ಆದಿ ಶಂಕಾರಾಚಾರ್ಯರು. ವಿವಿಧ ಜಾತಿ ವ್ಯವಸ್ಥೆಯಲ್ಲಿ ಸಿಲುಕಿ ನರಳುತ್ತಿದ್ದ ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ ಆದಿ ಶಂಕರಾಚಾರ್ಯರನ್ನು ಈಶ್ವರನ ಅವತಾರವೆಂದೇ ಪರಿಗಣಿಸಲಾಗುತ್ತದೆ. ಹಿಂದೂಗಳನ್ನು ಒಗ್ಗೂಡಿಸಲು ಮತ್ತು ಹಿಂದುತ್ವದ ಅರಿವನ್ನು ಜನರಿಗೆ ಮೂಡಿಸುವ ಸಲುವಾಗಿ ಶಂಕರಾಚಾರ್ಯರು ಭಾರತದಾದ್ಯಂತ ಸಂಚರಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಮಹತ್ತರವಾದ ಕೆಲಸಗಳನ್ನು ಮಾಡಿದರು. ಸನಾತನ ಧರ್ಮದ ಏಳ್ಗೆಗಾಗಿ ಶ್ರಮಿಸಿ ಜಗದ್ಗುರುವಿನ ಸ್ಥಾನಕ್ಕೇರಿದವರು ಶಂಕರಾಚಾರ್ಯರು. ಪ್ರತಿ ವರ್ಷದಂತೆ ಈ ವರ್ಷವೂ ಅವರ ಜನ್ಮದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ ಆಚಾರ್ಯರ ಅವತಾರವಾದ ದಿನ. ಈ ತಿಥಿಯು ಈ ವರ್ಷದ ಮೇ 12, 2024 ಕ್ಕೆ ಬರುತ್ತದೆ. ಅಂದು ಅವರ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಈ ವರ್ಷ ಅವರ 1236 ನೇ ಜಯಂತಿಯಾಗಿದೆ. ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಿದ ಮಹಾನ್‌ ವ್ಯಕ್ತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ತಿಳಿಯೋಣ.

ಆದಿ ಶಂಕರಾಚಾರ್ಯರು ಯಾರು?

ಶಂಕರಾಚಾರ್ಯರನ್ನು ಹಿಂದೂ ಧರ್ಮದ ಮಹಾನ್‌ ದಾರ್ಶನಿಕ ಮತ್ತು ಧರ್ಮಗುರು ಎಂದು ನಂಬಲಾಗಿದೆ. ಭಾರತದಲ್ಲಿ ಹಿಂದುತ್ವದ ಕ್ರಾಂತಿಯನ್ನು ಮೊಳಗಿಸಿದವರು ಅವರು. ಸಮಾಜದಲ್ಲಿದ್ದ ಅಂಧಕಾರವನ್ನು ಓಡಿಸಿ, ಆಧ್ಯಾತ್ಮದ ಜ್ಯೋತಿಯನ್ನು ಬೆಳಗಿದರು. ಭರತ ಭೂಮಿಯನ್ನು ಜ್ಞಾನದ ಮೂಲಕ ಪ್ರಕಾಶಿಸುವಂತೆ ಮಾಡಿದವರು ಶಂಕರಾಚಾರ್ಯರು. ಭಾರತದಲ್ಲಿ ಸನಾತನ ಧರ್ಮವನ್ನು ಬಲಪಡಿಸಲು ಅವರು ದೇಶದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು. ಅದನ್ನು ಶಂಕರಾಚಾರ್ಯರ ಪೀಠಗಳು ಎಂದು ಕರೆಯಲಾಗುತ್ತದೆ. ನಾಲ್ಕು ಎನ್ನುವ ಸಂಖ್ಯೆಯ ಹಿಂದೆಯೂ ಮಹತ್ತರ ಅರ್ಥವಿದೆ. ಹಿಂದೂ ಧರ್ಮದ ಏಳ್ಗೆಗಾಗಿ ಭಾರತದ ನಾಲ್ಕು ದಿಕ್ಕುಗಳಲ್ಲಿ, ನಾಲ್ಕು ವೇದವನ್ನು ಸಾರುವ (ಪ್ರತಿಪಾದಿಸುವ) ಒಂದೊಂದು ಮಠವನ್ನು ಸ್ಥಾಪಿಸಿದರು. ಶಂಕರಾಚಾರ್ಯರು ಬೋಧಿಸಿದ ಸಿದ್ಧಾಂತ ಅದ್ವೈತ.

ಶಂಕರಾಚಾರ್ಯರು ಜನನ, ಕಾಲ

ಶಂಕರಾಚಾರ್ಯರು ಕ್ರಿಶ 788 ರಲ್ಲಿ ಕೇರಳದ ಕಾಲಡಿಯಲ್ಲಿ ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಶಿವಗುರು, ತಾಯಿ ಆರ್ಯಾಂಬಾ. ಅವರ ಗುರು ಗೋವಿಂದ ಭಗವತ್ಪಾದರು. ತಮ್ಮ ಏಳನೆಯ ವಯಸ್ಸಿನಲ್ಲಿಯೇ ಅವರು ಸಂಸ್ಕೃತವನ್ನು ನಿರರ್ಗಳವಾಗಿ ಮಾತನಾಡಲು ಮತ್ತು ಬರೆಯಲು ಕರಗತ ಮಾಡಿಕೊಂಡಿದ್ದರು. ನಾಲ್ಕು ವರ್ಷದಲ್ಲಿರುವಾಗ ಅವರು ಎಲ್ಲಾ ನಾಲ್ಕು ವೇದಗಳನ್ನು ಪಾರಾಯಣ ಮಾಡಬಲ್ಲವರಾಗಿದ್ದರು. ಆಧ್ಯಾತ್ಮದ ಕಡೆಗೆ ಹೆಚ್ಚು ಒಲವಿದ್ದ ಶಂಕರರು ಆಜನ್ಮ ಬ್ರಹ್ಮಚಾರಿಯಾಗಿದ್ದರು. ಶಂಕರಾಚಾರ್ಯರು ಅವರ 12ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿದರು. ಬದರೀನಾಥಕ್ಕೆ ತೆರಳಿ ಅಲ್ಲಿ ಗುರು ಗೋವಿಂದ ಭಗವತ್ಪಾದರ ಶಿಷ್ಯರಾದರು. ನಂತರ ಕಾಶಿಗೆ ತೆರಳಿ ಅಲ್ಲಿ ಅನೇಕ ಕೃತಿಗಳನ್ನು ರಚಿಸಿದರು. ನಾಲ್ಕು ಮಠಗಳನ್ನು ಸ್ಥಾಪಿಸಿದರು. ತಮ್ಮ 32 ನೇ ವಯಸ್ಸಿನಲ್ಲಿ ಉತ್ತರಾಖಾಂಡದ ಕೇದಾರನಾಥದಲ್ಲಿ ಮರಣವನ್ನು ಹೊಂದಿದರು.

ಹಿಂದೂ ಧರ್ಮಕ್ಕೆ ಶಂಕರಾಚಾರ್ಯರ ಕೊಡುಗೆಗಳು

ಶಂಕರಾಚಾರ್ಯರು ಹಿಂದೂ ಧರ್ಮದ ಅತ್ಯಂತ ಪ್ರಭಾವಶಾಲಿ ತತ್ವಜ್ಞಾನಿಗಳು. ಅವರು ಹಿಂದೂ ಧರ್ಮವನ್ನು ವ್ಯವಸ್ಥಿತ ರೂಪದಲ್ಲಿ ಆಚರಣೆಗೆ ತರುವ ವಿಧಿಗಳ ಬಗ್ಗೆ ಚಿಂತಿಸಿದರು. ಜೀವನಕ್ರಮಕ್ಕೆ ಒಂದು ರೂಪ ಕೊಡಲು ಪ್ರಯತ್ನಿಸಿದರು. ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಈ ಸಿದ್ಧಾಂತವೂ ಆತ್ಮ ಮತ್ತು ಪರಮಾತ್ಮ ಒಂದೇ ಆಗಿದೆ ಎನ್ನುವುದನ್ನು ಪ್ರತಿಪಾದಿಸುತ್ತದೆ. ಆಧ್ಯಾತ್ಮದ ಜ್ಞಾನವನ್ನು ಜನರಿಗೆ ನೀಡುವ ಸಲುವಾಗಿ ದೇಶಾದ್ಯಂತ ಸಂಚರಿಸಿದರು. ಎಲ್ಲಕಡೆಯೂ ಶಿಷ್ಯರನ್ನು ಸಂಪಾದಿಸಿದರು. 12 ರಿಂದ 32 ನೇ ವಯಸ್ಸಿನವರೆಗೆ ಅಂದರೆ ಸುಮಾರು 20 ವರ್ಷಗಳಲ್ಲಿ, ಹಿಂದೂ ಧರ್ಮವನ್ನು ರಕ್ಷಿಸಲು ಭಾರತದ ಎಲ್ಲಾ ನಾಲ್ಕು ಮೂಲೆಗಳಿಗೆ ಹಲವಾರು ಬಾರಿ ಪ್ರವಾಸ ಕೈಗೊಂಡರು. ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಸಂಚರಿಸಿ ತಮ್ಮ ಅದ್ವೈತ ಸಿದ್ಧಾಂತವನ್ನು ಸಾರಿದರು. ಶಂಕರಾಚಾರ್ಯರ ಪ್ರತಿಪಾದನೆಯನ್ನು ಒಪ್ಪುವವರು, ಅನುಸರಿಸುವವರು ಇಂದಿಗೂ ಭಾರತದಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿದ್ದಾರೆ. ಶಂಕರಾಚಾರ್ಯರು ಸ್ಥಾಪಿಸಿದ ಪೀಠಗಳಲ್ಲಿನ ಗುರುಗಳ ಸ್ಥಾನವನ್ನು ಇಂದಿಗೂ ಹಿಂದೂ ಧರ್ಮದ ಅತ್ಯನ್ನತ ಸ್ಥಾನ ಎಂದು ಪರಿಗಣಿಸಲಾಗಿದೆ.

ಜಗದ್ಗುರು ಶಂಕರಾಚಾರ್ಯರ ಕೃತಿಗಳು

ಆದಿ ಶಂಕರಾಚಾರ್ಯರು ಅವರ 32 ವರ್ಷಗಳ ಅಲ್ಪಾವಧಿಯಲ್ಲಿ ಅನೇಕ ಕೃತಿಗಳನ್ನು ರಚಿಸಿದರು. ಅವರ ಬಹುಪಾಲು ಕೃತಿಗಳು ಅದ್ವೈತ ಸಿದ್ಧಾಂತದ ಮೇಲೆ ಕೇಂದ್ರೀಕೃತವಾಗಿದ್ದರೂ ಚಿತ್ತ ಶುದ್ಧಿಗಾಗಿ ಭಕ್ತಿಯ ಬೀಜವನ್ನು ಬಿತ್ತಿದರು. ಬ್ರಹ್ಮಸೂತ್ರ ಭಾಷ್ಯ, ಉಪನಿಷತ್‌ ಭಾಷ್ಯ, ಶಿವಾನಂದ ಲಹರಿ, ಸೌಂದರ್ಯ ಲಹರಿ, ಆನಂದ ಲಹರಿ, ಅಷ್ಟಕಗಳು, ಭಕ್ತಿ ಸ್ತೋತ್ರ, ಧ್ಯಾನ, ಪದ್ಯಗಳನ್ನು ರಚಿಸಿದರು. ‘ಭಜ ಗೋವಿಂದಂ, ಭಜ ಗೋವಿಂದ, ಗೋವಿಂದಂ ಭಜ ಮೂಢಮತೆ’ ಇದು ಶಂಕರಾಚಾರ್ಯರು ರಚಿಸಿದ ಜನಪ್ರಿಯ ಭಜನೆಯಾಗಿದೆ.

ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳು ಎಲ್ಲಿವೆ?

ಶಂಕರಾಚಾರ್ಯರು ನಾಲ್ಕು ಮಠಗಳನ್ನು ಕ್ರಿಸ್ತಪೂರ್ವ ಎಂಟನೇ ಶತಮಾನದಲ್ಲಿ ಸ್ಥಾಪಿಸಿದರು. ಆ ನಾಲ್ಕೂ ಮಠಗಳು ಇಂದಿಗೂ ಸನಾತನ ಸಂಪ್ರದಾಯವನ್ನು ಪ್ರಚಾರ ಮಾಡುತ್ತಿವೆ.

1) ಗೋವರ್ಧನ ಪೀಠ: ಶಂಕರಾಚಾರ್ಯರು ಪೂರ್ವ ದಿಕ್ಕಿನಲ್ಲಿ, ಓರಿಸ್ಸಾದ ಪುರಿಯಲ್ಲಿ ಗೋವರ್ಧನ ಮಠವನ್ನು ಸ್ಥಾಪಿಸಿದರು.

2) ಶೃಂಗೇರಿ ಪೀಠ: ದಕ್ಷಿಣ ದಿಕ್ಕಿನಲ್ಲಿ ಕರ್ನಾಟಕದ ಶೃಂಗೇರಿಯಲ್ಲಿ ಶೃಂಗೇರಿ ಮಠವನ್ನು ಸ್ಥಾಪಿಸಿದರು.

3) ದ್ವಾರಕಾ ಪೀಠ: ಪಶ್ಚಿಮ ದಿಕ್ಕಿನಲ್ಲಿ, ಗುಜರಾತದ ದ್ವಾರಕೆಯಲ್ಲಿ ದ್ವಾರಕಾ ಮಠವನ್ನು ಸ್ಥಾಪಿಸಿದರು.

4) ಜೋಶಿಮಠ: ಉತ್ತರ ದಿಕ್ಕಿನಲ್ಲಿ, ಉತ್ತರಾಖಾಂಡ್‌ದ ಜೋಶಿಮಠದಲ್ಲಿ ಜ್ಯೋತಿರ್ಮಠವನ್ನು ಸ್ಥಾಪಿಸಿದರು.

ಈಗ ಶಂಕರಾಚಾರ್ಯರ ಪೀಠಕ್ಕೆ ಹೇಗೆ ಆಯ್ಕೆ ಮಾಡಲಾಗುತ್ತದೆ?

ಈ ನಾಲ್ಕೂ ಪೀಠಗಳನ್ನು ಅಲಂಕರಿಸುವವರನ್ನು ಶಂಕರಾಚಾರ್ಯರು ಎಂದೇ ಗೌರವಿಸಲಾಗುತ್ತದೆ. ಶಂಕರಾಚಾರ್ಯ ಪದವಿಯನ್ನು ಅಲಂಕರಿಸುವ ವ್ಯಕ್ತಿಯು ಸುಸಂಸ್ಕೃತ ವೇದಾಂತಿ ಆಗಿರಬೇಕು. ವೇದಗಳ ಬಗ್ಗೆ ಆಳವಾದ ಜ್ಞಾನ ಹೊಂದಿರಬೇಕು. ನಾಲ್ಕು ವೇದ ಮತ್ತು ಆರು ವೇದಾಂಗಗಳನ್ನು ತಿಳಿದಿರಬೇಕು. ಪುರ್ವಾಶ್ರಮದ ಬಂಧವನ್ನು ಕಳೆದಿರಬೇಕು. ಈ ಅರ್ಹತೆಗಳಿರುವ ಓರ್ವ ಶಿಷ್ಯನನ್ನು ಹಾಲಿ ಪೀಠಾಧಿಪತಿಯು ಗುರುತಿಸಿ ತನ್ನ ಉತ್ತರಾಧಿಕಾರಿಯನ್ನಾಗಿ ಘೋಷಿಸುವುದು ವಾಡಿಕೆಯಾಗಿದೆ.

(ಬರಹ: ಅರ್ಚನಾ ವಿ.ಭಟ್)