ಕಾಶಿಯನ್ನು ಮೃತ್ಯು ನಗರ ಎನ್ನಲು ಕಾರಣವೇನು, ವಾರಣಾಸಿಗೆ ಹೋದವರು ಮುಮುಕ್ಷು ಭವನದಲ್ಲಿ ಉಳಿದುಕೊಳ್ಳುವುದೇಕೆ?
Varanasi: ಕಾಶಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ, ಇದನ್ನು ವಾರಣಾಸಿ, ಬನಾರಸ್ ಎಂದು ಮಾತ್ರವಲ್ಲದೆ ಮೃತ್ಯು ನಗರ ಎಂದು ಕರೆಯುತ್ತಾರೆ. ವಾರಣಾಸಿಯನ್ನು ಆ ಹೆಸರಿನಿಂದ ಕರೆಯಲು ಕಾರಣವೇನು? ಇಲ್ಲಿಗೆ ಹೋದವರು ಮುಮುಕ್ಷು ಭವನದಲ್ಲಿ ಉಳಿದುಕೊಳ್ಳುವುದೇಕೆ? ಇಲ್ಲಿದೆ ಮಾಹಿತಿ.
ಭಾರತದ ಪ್ರಾಚೀನ ನಗರಗಳಲ್ಲಿ ಕಾಶಿ ಕೂಡಾ ಒಂದು. ಇಲ್ಲಿರುವ ಗಂಗಾನದಿಯಲ್ಲಿ ಸ್ನಾನ ಮಾಡಿದರೆ ಪಾಪಗಳೆಲ್ಲಾ ನಾಶವಾಗುತ್ತದೆ ಎಂಬ ನಂಬಿಕೆ ಮನೆ ಮಾಡಿದೆ. ಅಲ್ಲದೆ ಮನುಷ್ಯರು ಪುನರ್ಜನ್ಮದಿಂದ ಮುಕ್ತಿ ಹೊಂದುತ್ತಾರೆ ಎಂದೂ ನಂಬಲಾಗಿದೆ. ವರುಣ, ಅಸ್ಸಿ ಎಂಬ ಎರಡು ನದಿಗಳು ಗಂಗಾ ನದಿಯನ್ನು ಸೇರುತ್ತವೆ. ಆದ್ದರಿಂದಲೇ ಈ ನಗರಕ್ಕೆ ವಾರಣಾಸಿ ಎಂಬ ಹೆಸರು ಬಂದಿದೆ. ಹಿಂದೂಗಳು ಮಾತ್ರವಲ್ಲದೆ ಈ ಕ್ಷೇತ್ರಕ್ಕೆ ಬೌದ್ಧರು, ಜೈನರಿಗೆ ಕೂಡಾ ಇದು ಪುಣ್ಯಕ್ಷೇತ್ರವಾಗಿದೆ.
ವಿವಿಧ ದೇವಾಲಯಗಳಿಂದ ಕೂಡಿದ ವಾರಣಾಸಿ
ಇಲ್ಲಿ ವಿಶ್ವೇಶರ ಆಲಯದ ಜೊತೆಗೆ ಅನ್ನಪೂರ್ಣ ದೇವಸ್ಥಾನ , ವಿಶಾಲಾಕ್ಷಿ ದೇವಸ್ಥಾನ, ವಾರಾಹಿ ಮಾತಾ ದೇವಸ್ಥಾನ ಕೂಡಾ ಇದೆ. ಇವಿಷ್ಟೇ ಅಲ್ಲದೆ ತುಳಸಿ ಮಾನಸ ಮಂದಿರ, ದುರ್ಗಾಮಾತಾ ದೇವಸ್ಥಾನ, ಕಾಲಭೈರವ ದೇವಸ್ಥಾನ, ಸಂಕಟ ಮೋಚನ ಹನುಮಾನ್ ದೇವಸ್ಥಾನಗಳಿವೆ. ಸುಮಾರು 5 ಸಾವಿರ ವರ್ಷಗಳ ಹಿಂದೆ ಶಿವನು ವಾರಣಾಸಿ ನಗರವನ್ನು ಸ್ಥಾಪಿಸಿದನೆಂದು ಪೌರಾಣಿಕ ಗ್ರಂಥಗಳು ಹೇಳುತ್ತವೆ. ಹಿಂದೂಗಳ 7 ಪವಿತ್ರ ನಗರಗಳಲ್ಲಿ ಇದೂ ಒಂದು ಪವಿತ್ರ ನಗರವಾಗಿದೆ. ಕಾಶಿಯನ್ನು ಶಿವ ಹಾಗೂ ಕಾಲ ಭೈರವ ಇಬ್ಬರೂ ಪೋಷಿಸುತ್ತಾರೆ ಎಂಬ ನಂಬಿಕೆ ಇದೆ.
ಕಾಶಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಕಾಶಿಯನ್ನು ಶಿವನ ನಗರ ಎಂದು ಕರೆಯಲಾಗುತ್ತದೆ. ಇಲ್ಲಿ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವೇಶ್ವರನನ್ನು ಪ್ರತಿಷ್ಠಾಪಿಸಲಾಗಿದೆ. ಪರಮೇಶ್ವರನ ದರ್ಶನ ಪಡೆಯಲು ಪ್ರತಿದಿನ ಸಾವಿರಾರು ಭಕ್ತರು ದೇಶದ ಮೂಲೆ ಮೂಲೆಗಳಿಂದ ಕಾಶಿಗೆ ಹೋಗಿ ಬರುತ್ತಾರೆ. ಇಷ್ಟೊಂದು ಖ್ಯಾತಿ ಪಡೆದಿರುವ ಕಾಶಿಯನ್ನು ವಾರಣಾಸಿ, ಬನಾರಸ್ ಎಂದು ಕರೆಯುತ್ತಾರೆ, ಅಲ್ಲದೆ ಇದಕ್ಕೆ ವಾರಣಾಸಿಯನ್ನು ಸಿಟಿ ಆಫ್ ಡೆತ್ ಎಂದೂ ಕರೆಯುತ್ತಾರೆ. ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.
ಮುಮುಕ್ಷು ಭವನದಲ್ಲಿ ಉಳಿದುಕೊಂಡಿರುವ ಜನರು
ಕಾಶಿಗೆ ಅದರದ್ದೇ ಆದ ವೈಶಿಷ್ಟ್ಯವಿದೆ. ವೇದಗಳು, ಪುರಾಣಗಳು, ರಾಮಾಯಣ ಮತ್ತು ಮಹಾಭಾರತಗಳಲ್ಲಿಯೂ ಇದನ್ನು ವಿವರಿಸಲಾಗಿದೆ. ಇದಲ್ಲದೆ, ಕಾಶಿಯನ್ನು ಮೋಕ್ಷವನ್ನು ನೀಡುವ ನಗರ ಎಂದೂ ಕರೆಯುತ್ತಾರೆ. ಹುಟ್ಟಿದವರೆಲ್ಲರೂ ಸಾಯುತ್ತಾರೆ. ಹುಟ್ಟು ಮತ್ತು ಸಾವು ಎರಡೂ ಬದುಕಿನ ದೊಡ್ಡ ಸತ್ಯಗಳು. ಯಾರಾದರೂ ಸತ್ತರೆ, ಅವರ ಸುತ್ತಲಿರುವ ಪ್ರತಿಯೊಬ್ಬರೂ ತುಂಬಾ ದುಃಖಿತರಾಗುತ್ತಾರೆ. ಆದರೆ ಕಾಶಿಯಲ್ಲಿ ಯಾರಾದರೂ ಸತ್ತರೆ ಅವರು ಖುಷಿಯಾಗುತ್ತಾರೆ. ಕಾಶಿಯ ಮುಮುಕ್ಷು ಭವನದಲ್ಲಿ ಸುಮಾರು 80 ರಿಂದ 100 ಜನ ತಂಗಿದ್ದಾರೆ. ಅವರೆಲ್ಲಾ ತಮ್ಮ ಸಾವಿಗಾಗಿ ಎದುರು ನೋಡುತ್ತಿದ್ದಾರೆ. ಮುಮುಕ್ಷು ಕಟ್ಟಡವನ್ನು 1920 ರಲ್ಲಿ ವಾರಣಾಸಿಯಲ್ಲಿ ನಿರ್ಮಿಸಲಾಯ್ತು. ಶಿವನು ನೆಲೆಸಿರುವ ಈ ವಾರಣಾಸಿಯಲ್ಲಿ ಯಾರು ಸಾಯುತ್ತಾರೋ, ಯಾರ ಅಂತಿಮ ಸಂಸ್ಕಾರವನ್ನು ಇಲ್ಲಿ ನಡೆಸಲಾಗುತ್ತದೆಯೋ ಅವರು ಜನನ ಮತ್ತು ಮರಣದ ಚಕ್ರದಿಂದ ಮುಕ್ತರಾಗಿ ಮೋಕ್ಷ ಪಡೆಯುತ್ತಾರೆ ಎಂಬ ನಂಬಿಕೆ ಮನೆ ಮಾಡಿದೆ.
ಇದೇ ಕಾರಣಕ್ಕೆ ಕಾಶಿಯನ್ನು ಮೃತ್ಯು ನಗರ ಎಂದು ಕರೆಯಲಾಗುತ್ತದೆ. ವಾರಣಾಸಿಯಲ್ಲಿ ಸುಮಾರು 84 ಘಾಟ್‌ಗಳಿವೆ. ಇದರಲ್ಲಿ ಹರಿಶ್ಚಂದ್ರ ಘಾಟ್ ಹಾಗೂ ಮಣಿಕರ್ಣಿಕಾ ಘಾಟ್‌ನಲ್ಲಿ ಪ್ರತಿದಿನ ಶವಸಂಸ್ಕಾರ ಮಾಡಲಾಗುತ್ತದೆ. ಶಿವನು ಸ್ಮಶಾನದಲ್ಲಿ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಇಲ್ಲಿ ಮರಣ ಹೊಂದಿದವರು ಶಿವನ ಕೃಪೆಯಿಂದ ಮೋಕ್ಷ ಪಡೆಯಬಹುದು. ಹಾಗಾಗಿ ಕಾಶಿಯಲ್ಲಿ ಅಂತಿಮ ಸಂಸ್ಕಾರ ಮಾಡುವುದು, ಗಂಗಾ ಸ್ನಾನ ಮಾಡುವುದು ಒಳ್ಳೆಯದು ಎಂಬ ನಂಬಿಕೆ ಇದೆ. ಕಾಶಿಯಲ್ಲಿ ಸತ್ತರೆ ಮೋಕ್ಷ ಸಿಗಬಹುದೆಂಬ ನಂಬಿಕೆಯಿಂದ ಕಾಶಿಯಲ್ಲೇ ದೀರ್ಘ ಕಾಲ ಉಳಿದುಕೊಂಡಿರುವವರು ಬಹಳ ಮಂದಿ ಇದ್ದಾರೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.