ಬಾಗಿನ ಎಂದರೇನು, ಸುಮಂಗಲಿಯರಿಗೆ ನೀಡುವ ಉದ್ದೇಶವೇನು, ಬಾಗಿನದ ಮೊರದಲ್ಲಿ ಏನೆಲ್ಲಾ ಸಾಮಗ್ರಿಗಳಿರಬೇಕು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬಾಗಿನ ಎಂದರೇನು, ಸುಮಂಗಲಿಯರಿಗೆ ನೀಡುವ ಉದ್ದೇಶವೇನು, ಬಾಗಿನದ ಮೊರದಲ್ಲಿ ಏನೆಲ್ಲಾ ಸಾಮಗ್ರಿಗಳಿರಬೇಕು?

ಬಾಗಿನ ಎಂದರೇನು, ಸುಮಂಗಲಿಯರಿಗೆ ನೀಡುವ ಉದ್ದೇಶವೇನು, ಬಾಗಿನದ ಮೊರದಲ್ಲಿ ಏನೆಲ್ಲಾ ಸಾಮಗ್ರಿಗಳಿರಬೇಕು?

ಪ್ರತಿ ಬಾರಿ ನದಿಗಳು ತುಂಬಿ ಹರಿಯುವಾಗ ಬಾಗಿನ ಅರ್ಪಿಸಲಾಗುತ್ತದೆ. ಹಾಗೇ ಗೌರಿ ಹಬ್ಬದಂದು ಮುತ್ತೈದೆಯರಿಗೆ ಬಾಗಿನ ಅರ್ಪಿಸಲಾಗುತ್ತದೆ. ಹಾಗಾದರೆ ಬಾಗಿನ ಎಂದರೇನು? ಬಾಗಿನದಲ್ಲಿ ಏನೆಲ್ಲಾ ವಸ್ತುಗಳನ್ನು ಇಡಲಾಗುತ್ತದೆ? ಬಾಗಿನವನ್ನು ಹೇಗೆ ಕೊಡಬೇಕು? ಇಲ್ಲಿದೆ ಮಾಹಿತಿ.

ಬಾಗಿನ ಎಂದರೇನು, ಸುಮಂಗಲಿಯರಿಗೆ ನೀಡುವ ಉದ್ದೇಶವೇನು, ಬಾಗಿನದ ಮೊರದಲ್ಲಿ ಏನೆಲ್ಲಾ ಸಾಮಗ್ರಿಗಳಿರಬೇಕು?
ಬಾಗಿನ ಎಂದರೇನು, ಸುಮಂಗಲಿಯರಿಗೆ ನೀಡುವ ಉದ್ದೇಶವೇನು, ಬಾಗಿನದ ಮೊರದಲ್ಲಿ ಏನೆಲ್ಲಾ ಸಾಮಗ್ರಿಗಳಿರಬೇಕು? (PC: C.K. Ramamurthy @CKRBJP̧ ಚಂದದ ಛಲಗಾತಿ @dakshidakshi1)

ರಾಜ್ಯದಲ್ಲಿ ಉತ್ತಮ ಮಳೆ ಆಗುತ್ತಿದೆ. ನದಿಗಳು ತುಂಬಿ ಹರಿಯುತ್ತಿವೆ. ತುಂಬಿ ತುಳುಕುತ್ತಿರುವ ನದಿಗಳಿಗೆ ರಾಜ್ಯದ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುತ್ತಿದ್ದಾರೆ. ಜುಲೈ 29 ರಂದು ಮಂಡ್ಯ ಜಿಲ್ಲೆಯ , ಕೃಷ್ಣರಾಜಸಾಗರಕ್ಕೂ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹಾಗೂ ಇತರರು ಜೀವನದಿ ಕಾವೇರಿಗೆ ಬಾಗಿನ ಅರ್ಪಿಸುತ್ತಿದ್ದಾರೆ.

ಪ್ರತಿ ಬಾರಿ ನದಿಗಳು ತುಂಬಿ ಹರಿದಾಗ ಬಾಗಿನ ಅರ್ಪಿಸಲಾಗುತ್ತದೆ. ಬಾಗಿನ ಅರ್ಪಿಸುವುದು ನದಿಗಳಿಗೆ ಮಾತ್ರವಲ್ಲ, ಗೌರಿ ಹಬ್ಬ, ವರಮಹಾಲಕ್ಷ್ಮೀ ಸೇರಿದಂತೆ ಪ್ರಮುಖ ಹಬ್ಬಗಳಲ್ಲಿ ಕೂಡಾ ಮುತ್ತೈದೆಯರಿಗೆ ಬಾಗಿನ ಕೊಡಲಾಗುತ್ತದೆ. ಈ ಬಾಗಿನ ಅರ್ಪಿಸುವ ರೀತಿಯೇ ಒಂದು ರೀತಿ ನೋಡಲು ಚೆನ್ನಾಗಿರುತ್ತದೆ. ಬಾಗಿನ ಎಂದರೇನು? ಇದರಲ್ಲಿ ಏನೆಲ್ಲಾ ಸಾಮಗ್ರಿಗಳಿರುತ್ತವೆ ನೋಡೋಣ.

ಬಾಗಿನದ ಮಹತ್ವವೇನು?

ಬಾಗಿನ ಎಂದರೆ ಇತರರಿಗೆ ಸಮೃದ್ಧಿ, ನೆಮ್ಮದಿಯನ್ನು ಹಾರೈಸುತ್ತಾ ನೀಡುವ ಪ್ರೀತಿಯ ಉಡುಗೊರೆ ಎಂದು ಹೇಳಬಹುದು. ಪ್ರತಿ ವರ್ಷ ಗೌರಿ ಹಬ್ಬದಲ್ಲಿ ಮುತ್ತೈದೆಯರಿಗೆ ಬಾಗಿನ ನೀಡುವುದು ವಾಡಿಕೆ. ಶಿವನನ್ನು ವರಿಸಿ ಕೈಲಾಸ ಪರ್ವತದಲ್ಲಿ ನೆಲೆಸಿರುವ ಗೌರಿಯು ವರ್ಷಕ್ಕೆ ಒಮ್ಮೆ, ಅಂದರೆ ಬಾಧ್ರಪದ ಮಾಸದ ತದಿಗೆ ದಿನ ತವರು ಮನೆಗೆ (ಭೂಮಿಗೆ) ಬರುತ್ತಾಳೆ. ಹಾಗೆ ಬಂದ ಮನೆ ಮಗಳಿಗೆ ಸತ್ಕಾರ ಮಾಡಿ, ವಾಪಸ್‌ ಗಂಡನ ಮನೆಗೆ ಹೋಗುವಾಗ ದವಸ ಧಾನ್ಯ, ಅರಿಶಿನ, ಕುಂಕುಮ ಸೇರಿದಂತೆ ಇನ್ನಿತರ ವಸ್ತುಗಳನ್ನು ಬಾಗಿನ ಕೊಟ್ಟು ಕಳಿಸಲಾಗುತ್ತದೆ. ಸಂಪತ್ತು, ಉತ್ತಮ ಆರೋಗ್ಯ, ಸುಖ, ಶಾಂತಿ, ನೆಮ್ಮದಿಯಾಗಿ, ಮುತ್ತೈದೆಯಾಗಿ ಬಾಳುವಂತೆ ಹಾರೈಸಲಾಗುತ್ತದೆ. ಬಾಗಿನವನ್ನು ಸಾಮಾನ್ಯವಾಗಿ ಬಿದಿರಿನ ಮೊರದಲ್ಲಿ ನೀಡಲಾಗುತ್ತದೆ.

ಬಾಗಿನದಲ್ಲಿ ಯಾವ ವಸ್ತುಗಳು ಇಡಬೇಕು?

ಬಾಗಿನ ನೀಡಲು ಹೊಸ ಮೊರಗಳನ್ನು ಬಳಸಲಾಗುತ್ತದೆ. ಮೊರವನ್ನು ಲಕ್ಷ್ಮೀಗೆ ಹೋಲಿಸಲಾಗುತ್ತದೆ. ಇದರಲ್ಲಿ ವಿವಿಧ ಸಾಮಗ್ರಿಗಳನ್ನು ಇಟ್ಟು, ಅದರ ಮೇಲೆ ಮತ್ತೊಂದು ಮೊರವನ್ನು ಇಟ್ಟು ಹಳದಿ ದಾರವನ್ನು ಸುತ್ತಿ ಕಟ್ಟಲಾಗುತ್ತದೆ.

ಅರಿಶಿನ-ಗೌರಿ

ಕುಂಕುಮ-ಮಹಾ ಲಕ್ಷ್ಮಿ

ಸಿಂಧೂರ- ಸರಸ್ವತಿ

ಕನ್ನಡಿ-ರೂಪ ಲಕ್ಷ್ಮಿ

ತೊಗರಿಬೇಳೆ-ವರ ಲಕ್ಷ್ಮಿ

ಉದ್ದಿನಬೇಳೆ-ಸಿದ್ದ ಲಕ್ಷ್ಮಿ

ಅಡಿಕೆ-ಇಷ್ಟ ಲಕ್ಷ್ಮಿ

ಹಣ್ಣುಗಳು - ಜ್ಞಾನಲಕ್ಷ್ಮಿ

ಬೆಲ್ಲ- ರಸಲಕ್ಷ್ಮಿ

ಹೆಸರು ಬೇಳೆ - ವಿದ್ಯಾಲಕ್ಷ್ಮಿ

ವಸ್ತ್ರ - ವಸ್ತ್ರಲಕ್ಷ್ಮಿ

ತೆಂಗಿನಕಾಯಿ - ಸಂತಾನ ಲಕ್ಷ್ಮಿ

ವೀಳ್ಯದ ಎಲೆ - ಧನ ಲಕ್ಷ್ಮಿ

ಬಾಚಣಿಗೆ - ಶೃಂಗಾರ ಲಕ್ಷ್ಮಿ

ಕಾಡಿಗೆ - ಲಜ್ಜಾ ಲಕ್ಷ್ಮಿ

ಅಕ್ಕಿ - ಶ್ರೀ ಲಕ್ಷ್ಮಿ

ಹೀಗೆ ಮೊರದಲ್ಲಿ ಇಡುವ ಒಂದೊಂದು ವಸ್ತುಗಳನ್ನೂ ಒಂದೊಂದು ದೇವತೆಗಳಿಗೆ ಹೋಲಿಸಲಾಗುತ್ತದೆ.

ಬಾಗಿನ ಕೊಡುವ ವಿಧಾನ ಹೇಗೆ?

ಪೂಜೆಗೂ ಮುನ್ನವೇ ಬಾಗಿನವನ್ನು ಸಿದ್ಧತೆ ಮಾಡಿಕೊಂಡು ಅದನ್ನು ದೇವಿಯ ಮುಂದೆ ಇಟ್ಟು ಹೂ, ಅಕ್ಷತೆ ಹಾಕಿ ಪೂಜೆ ಮಾಡಬೇಕು ಪೂಜೆ ಮುಗಿದ ನಂತರ ಮುತ್ತೈದೆಯರಿಗೆ ಅರಿಶಿನ ಕುಂಕುಮ ಹಚ್ಚಿ, ಹೂ, ತಾಂಬೂಲ ನೀಡಬೇಕು. ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕೂರಿಸಬೇಕು. ನಂತರ ಸೀರೆ ಸೆರಗಿನಿಂದ ಹಿಡಿದು ಬಾಗಿನ ಕೊಡಬೇಕು, ಬಾಗಿನ ಪಡೆಯುವವರು ಕೂಡಾ ಸೀರೆ ಸೆರಗನ್ನು ಹಿಡಿದು ಬಾಗಿನ ಪಡೆಯಬೇಕು.ಈ ಸಮಯದಲ್ಲಿ ರಾಮ ಪತ್ನಿ ಮಹಾಭಾಗೇ ಪುಣ್ಯ ಮೂರ್ತೇ ನಿರಾಮಯೆ, ಮಯಾದತ್ತೌ ಹೀ ತೇ ಶೂರ್ಪೌ ಜಾನಕಿ ಸ್ವೀಕೃತೌ ತ್ವಯಾ‌ ಎಂಬ ಮಂತ್ರವನ್ನು ಹೇಳಿದರೆ ಒಳ್ಳೆಯದು. ಕೆಲವೆಡೆ ಬಾಗಿನ ಕೊಡುವವರು ಮುತ್ತೈದೆ ಮುತ್ತೈದೆ ಬಾಗಿನ ತಗೋ ಎಂದರೆ ಪಡೆಯುವವರು ಸಾವಿತ್ರಿ ಸಾವಿತ್ರಿ ಬಾಗಿನ ಕೊಡು ಎಂದು ಹೇಳುತ್ತಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.