ಕಾರ್ತಿಕ ಮಾಸದಲ್ಲಿ ಶಿವನ ಪೂಜೆಯಿಂದ ಏನೆಲ್ಲಾ ಲಾಭಗಳಿವೆ? ಕುಜದೋಷ ನಿವಾರಣೆ ಸೇರಿ ಈ ಶುಭ ಫಲಗಳು ನಿಮ್ಮದಾಗುತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕಾರ್ತಿಕ ಮಾಸದಲ್ಲಿ ಶಿವನ ಪೂಜೆಯಿಂದ ಏನೆಲ್ಲಾ ಲಾಭಗಳಿವೆ? ಕುಜದೋಷ ನಿವಾರಣೆ ಸೇರಿ ಈ ಶುಭ ಫಲಗಳು ನಿಮ್ಮದಾಗುತ್ತೆ

ಕಾರ್ತಿಕ ಮಾಸದಲ್ಲಿ ಶಿವನ ಪೂಜೆಯಿಂದ ಏನೆಲ್ಲಾ ಲಾಭಗಳಿವೆ? ಕುಜದೋಷ ನಿವಾರಣೆ ಸೇರಿ ಈ ಶುಭ ಫಲಗಳು ನಿಮ್ಮದಾಗುತ್ತೆ

ಕಾರ್ತಿಕ ಮಾಸ: ಸಾಮಾನ್ಯವಾಗಿ ಕುಜ ದೋಷ ನಿವಾರಣೆಗಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಪೂಜೆಯನ್ನು ಮಾಡುತ್ತೇವೆ. ಇದೇ ರೀತಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಕೃಪೆಯಿಂದಲು ಕುಜ ದೋಷದಿಂದ ಪಾರಾಗಬಹುದು. ಆದರೆ ಮುಖ್ಯವಾಗಿ ಕಾರ್ತಿಕ ಮಾಸದಲ್ಲಿ ಶಿವನ ಪೂಜೆಯನ್ನು ಮಾಡುವುದರಿಂದ ಕುಜ ದೋಷದಿಂದ ಮುಕ್ತರಾಗಬಹುದು. ಈ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ.

ಕಾರ್ತಿಕ ಮಾಸದಲ್ಲಿ ಶಿವನ ಪೂಜೆಯಿಂದ ಏನೆಲ್ಲಾ ಶುಭ ಫಲಗಳಿವೆ ಎಂಬುದನ್ನು ಇಲ್ಲಿ ತಿಳಿಯೋಣ
ಕಾರ್ತಿಕ ಮಾಸದಲ್ಲಿ ಶಿವನ ಪೂಜೆಯಿಂದ ಏನೆಲ್ಲಾ ಶುಭ ಫಲಗಳಿವೆ ಎಂಬುದನ್ನು ಇಲ್ಲಿ ತಿಳಿಯೋಣ

ಕಾರ್ತಿಕ ಮಾಸ: ಜನ್ಮ ಕುಂಡಲಿಯಲ್ಲಿ ಕುಜ ದೋಷವಿದ್ದಲ್ಲಿ ಹೆಚ್ಚಿನ ತೊಂದರೆ ಎಂಬ ತಪ್ಪು ಅಭಿಪ್ರಾಯ ನಮ್ಮಲ್ಲಿದೆ. ಮುಖ್ಯವಾಗಿ ಸ್ತ್ರೀಯರ ಕುಂಡಲಿಯಲ್ಲಿ ಕುಜದೋಷವಿದ್ದಲ್ಲಿ ಪತಿಯ ಆಯಸ್ಸಿಗೆ ತೊಂದರೆ ಎಂಬ ತಪ್ಪುಕಲ್ಪನೆ ಇದೆ. ಕುಜನು ಸೋದರ ಬಗ್ಗೆ ತಿಳಿಸುತ್ತಾನೆ. ಅದರಲ್ಲಿಯೂ ಜನ್ಮ ಕುಂಡಲಿಯಲ್ಲಿ ಕುಜನ ಸ್ಥಿತಿಗತಿಯಿಂದ ಕಿರಿಯ ಸೋದರನ ಬಗ್ಗೆ ಅರಿಯಬಹುದು. ಆದ್ದರಿಂದ ಕುಜದೋಷದಿಂದ ಸೋದರರ ಬಗ್ಗೆಯೂ ತಿಳಿಯಬಹುದು. ಇದಲ್ಲದೆ ಕುಜನಿಂದ ರಕ್ತಕ್ಕೆ ಸಂಬಂಧಪಟ್ಟಂತಹ ದೋಷಗಳನ್ನು ತಿಳಿದುಕೊಳ್ಳಬಹುದು. ಆದ್ದರಿಂದ ಪತಿಯ ಆಯುಷ್ಯಕ್ಕೂ ಸ್ತ್ರೀ ಜಾತಕದ ಕುಜದೋಷಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬಾರದು. ಗ್ರಹಗಳ ಶುಭ ಸಂಯೋಜನೆಯಿಂದ ಮತ್ತು ಗ್ರಹಗಳ ಶುಭದೃಷ್ಟಿಯಿಂದ ಕುಂಡಲಿಯಲ್ಲಿನ ಕುಜ ದೋಷವು ನಿವಾರಣೆ ಯಾಗುತ್ತದೆ. ಕುಜನಿಗೆ ಮಂಗಳ ಎಂಬ ಮತ್ತೊಂದು ಹೆಸರಿದೆ ಆದ್ದರಿಂದ ಮಂಗಳಕರವಾದ ಫಲಗಳನ್ನು ಸಹ ಕುಜನು ನೀಡುತ್ತಾನೆ ಎಂದು ತಿಳಿಯಬಹುದು.

ಸಾಮಾನ್ಯವಾಗಿ ಕುಜ ದೋಷ ನಿವಾರಣೆಗಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಪೂಜೆಯನ್ನು ಮಾಡುತ್ತೇವೆ. ಇದೇ ರೀತಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಕೃಪೆಯಿಂದಲು ಕುಜ ದೋಷದಿಂದ ಪಾರಾಗಬಹುದು. ಆದರೆ ಮುಖ್ಯವಾಗಿ ಕಾರ್ತಿಕ ಮಾಸದಲ್ಲಿ ಶಿವನ ಪೂಜೆಯನ್ನು ಮಾಡುವುದರಿಂದ ಕುಜ ದೋಷದಿಂದ ಮುಕ್ತರಾಗಬಹುದು. ಪುರಾಣ ಗ್ರಂಥಗಳ ಪ್ರಕಾರ ಕುಜನು ಭೂಗರ್ಭದಿಂದ ಜನಿಸಿದವನು ಎಂದು ವೇದಮಂತ್ರದಲ್ಲಿ ಬರುತ್ತದೆ. ಅಂದರೆ ಕುಜನನ್ನು ಭೂದೇವಿಯ ಪುತ್ರ ಎಂದರೂ ತಪ್ಪಿಲ್ಲ. ಅಂದರೆ ಮಂಗಳವು ಭೂಮಿಯಿಂದ ಮಂಗಳವಾಗಿ ಉತ್ಪತ್ತಿಯಾಗುತ್ತದೆ. ಕೆಲವೊಂದು ಪುರಾಣದ ಕಥೆಗಳಲ್ಲಿ ಮಂಗಳನು ಶಿವನ ಅನುಗ್ರಹದಿಂದ ಜನಿಸಿರುವವನು ಎಂದು ತಿಳಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸ್ವಭಾವತಃ ಉಗ್ರ ಎಂದು ಕರೆಯುತ್ತಾರೆ. ಇದಕ್ಕೆ ಸಾಕ್ಷೀಭೂತವಾಗಿ ಭಾರತದಲ್ಲಿ ಮಂಗಳನಿಗೆ ಸಂಬಂಧಿಸಿದ ಶಿವನ ದೇಗುಲವಿದೆ.

ಮತ್ಸ್ಯಪುರಾಣದ ಪ್ರಕಾರ ಕುಜ ಅಥವಾ ಮಂಗಳ ಜನ್ಮವು ಉಜ್ಜಯಿನಿಯಲ್ಲಿ ಆಗಿದೆ. ಇಲ್ಲಿರುವ ದೇವರನ್ನು ಮಂಗಲನಾಥ ಎಂದು ಕರೆಯುತ್ತಾರೆ. ಈ ದೇವಾಲಯವು ಪರಮೇಶ್ವರನಿಗೆ ಸಮರ್ಪಿತವಾಗಿದೆ. ಅಪರೂಪದ ಈ ಮಂಗಳನಾಥ ದೇವಾಲಯವು ಉಜ್ಜಯಿನಿಯಲ್ಲಿರುವ ಅತ್ಯಂತ ಪ್ರಾಚೀನವಾದ ಪವಿತ್ರ ಸ್ಥಳವಾಗಿದೆ. ಶಾಸನಗಳ ಪ್ರಕಾರ ಮಂಗಳನಾಥ ಮಂಗಳನ ಜನ್ಮಸ್ಥಳವೇ ಈ ದೇವಾಲಯ ಎಂದು ತಿಳಿದುಬರುತ್ತದೆ. ಮಂಗಳನಾಥ ದೇವಾಲಯವು ಪ್ರಶಾಂತವಾದ ಪರಿಸರದಲ್ಲಿ ಇದೆ. ಇದು ಭವ್ಯವಾದ ಶಿಪ್ರಾ ನದಿಯ ಬಳಿಯಿದೆ. ಈ ದೇವಾಲಯವನ್ನು ಪ್ರವೇಶಿಸಿದಲ್ಲಿ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಈ ದೇವಾಲಯದ ಪ್ರದಾನವಾದ ದೇವತೆಯೇ ಭಗವಾನ್ ಪರಮೇಶ್ವರ.

ಕಾಲಸರ್ಪದ ದೋಷಕ್ಕೆ ಯಾವ ಹೋಮ ಮಾಡುತ್ತಾರೆ?

ಕುಟುಂಬದಲ್ಲಿ ಒಮ್ಮತ ಇಲ್ಲದೆ ಹೋದಲ್ಲಿ ಇಲ್ಲಿ ಗಣೇಶ ಗೌರಿ ಪೂಜೆ ಮಾಡುವುದರಿಂದ ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೆ ಬಾಳಬಹುದು. ಉತ್ತಮ ವಧು ಅಥವಾ ವರನಿಗಾಗಿ ಮಂಗಳಕಲಶದ ಪೂಜೆಯನ್ನು ಆಚರಿಸಲಾಗುತ್ತದೆ. ಷೋಡಶ ಮಾತೃಕೆ ಮತ್ತು ಸಪ್ತ ಮಾತೃಕೆಯ ಪೂಜೆಯಿಂದಾಗಿ ಸತ್ಸಂತಾನ ಲಭಿಸುತ್ತದೆ. ಪಿತೃ ಪೂಜೆ ಮತ್ತು ದಂಪತಿ ಪೂಜೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಕಾಲಸರ್ಪದ ದೋಷವಿದ್ದಲ್ಲಿ ನವಗ್ರಹ ಶಾಂತಿ ಅಥವಾ ನವಗ್ರಹ ಹೋಮವನ್ನು ಮಾಡುತ್ತಾರೆ. ರುದ್ರಹೋಮವು ವಿಶೇಷವಾಗಿ ಕಾರ್ತಿಕಮಾಸದಲ್ಲಿ ನಡೆಸಲ್ಪಡುತ್ತದೆ. ವಾಹನಾಘಾತ, ಸಾಲಗಳಿಂದ ಮುಕ್ತಿಹೊಂದಲು ಇದು ಶ್ರೇಷ್ಠವಾದ ಜಾಗವಾಗಿದೆ. ಸಂತಾನ ದೋಷ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಇಲ್ಲಿ ಪೂಜೆ ಮಾಡಿಸುವುದರಿಂದ ಬಲವಾದ ಪ್ರಭಾವ ಬೀರುತ್ತದೆ.

ಕುಜನನ್ನು ಭೂಕಾರಕನೆಂದು ಕರೆಯಲು ಇದೇ ಕಾರಣ

ಈ ಪ್ರದೇಶದಲ್ಲಿ ಶಿವನಿಗೂ ಅಂಧಕಾಸುರ ಎಂಬ ರಾಕ್ಷಸನಿಗೂ ಘೋರ ಯುದ್ಧವೇ ನಡೆಯುತ್ತದೆ. ಆಗ ಶಿವನ ಬೆವರು ಭೂಮಿಯ ಮೇಲೆ ಬೀಳುತ್ತದೆ. ಆಗ ಕುಜ ಅಥವಾ ಮಂಗಳನ ಜನನವಾಯಿತೆಂಬ ಕಥೆಯಿದೆ. ಇದರಿಂದಲೇ ಜೋತಿಷ್ಯ ಶಾಸ್ತ್ರದಲ್ಲಿ ಕುಜನನ್ನು ಭೂಕಾರಕ ಎಂದು ಕರೆಯಲಾಗುತ್ತದೆ. ಭೂಮಿಗೆ ಸಂಬಂಧಿಸಿದ ತೊಂದರೆಯಿಂದ ಪಾರಾಗಲು ಕುಜನ ಶಾಂತಿಯನ್ನು ಮಾಡಬೇಕಾಗುತ್ತದೆ. ಆದ್ದರಿಂದ ಈ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರಿಂದ ಭೂವಿವಾದಗಳು ದೂರವಾಗುತ್ತವೆ. ಆದ್ದರಿಂದಲೇ ಇಲ್ಲಿನ ಶಿವಲಿಂಗವನ್ನು ಮಂಗಳನಾಥ ಎಂದು ಕರೆಯುತ್ತೇವೆ. ಕಾರ್ತಿಕ ಮಾಸ, ಮಂಗಳವಾರ ಮತ್ತು ಕುಜನ ನಕ್ಷತ್ರಗಳಾದ ಮೃಗಶಿರ, ಚಿತ್ತ, ಧನಿಷ್ಠ ಇರುವ ದಿನಗಳಂದು ಮಂಗಳನಾಥನಿಗೆ ಕೆಂಪುಬಟ್ಟೆ, 5 ಅಚ್ಚು ಬೆಲ್ಲ ಮತ್ತು ತೊಗರಿಬೇಳೆ ನೀಡುವ ಸಂಪ್ರದಾಯವಿದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.