ನಮ್ಮ ಜೀವನದಲ್ಲಿ ಉಗುರುಗಳ ಪಾತ್ರ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಉಗುರಿನ ಮೇಲೆ ತಿಳಿ ಹಳದಿ ಬಣ್ಣವಿದ್ದಲ್ಲಿ ಏನು ಅರ್ಥ?
ಜ್ಯೋತಿಷ್ಯಶಾಸ್ತ್ರದಲ್ಲಿ ಉಗುರುಗಳಿಗೆ ಕೂಡಾ ಪ್ರಾಮುಖ್ಯತೆ ಇದೆ. ಶನಿ ದೇವನನ್ನು ಉಗುರಿನ ಅಧಿಪತಿ ಎಂದು ನಂಬಲಾಗಿದೆ. ಉಗುರುಗಳು ಸೌಂದರ್ಯವನ್ನು ಕೂಡಾ ಪ್ರತಿನಿಧಿಸುತ್ತದೆ. ಶುಕ್ರನು, ಸೌಂದರ್ಯದ ದೇವತೆಯಾಗಿದ್ದಾನೆ. ಉಗುರಿನ ಆಕಾರ ನೋಡಿ ಆ ವ್ಯಕ್ತಿಗಳ ಸ್ವಭಾವ ಹೇಗೆ ಎಂದು ಗುರುತಿಸಿಬಹುದು. (ಬರಹ: ಎಚ್. ಸತೀಶ್, ಜ್ಯೋತಿಷಿ)
ಕೆಲವರ ಉಗುರುಗಳಲ್ಲಿ ನೀಲಿ ಬಣ್ಣದ ಚುಕ್ಕಿಗಳು ಅಥವಾ ರೇಖೆಗಳು ಇರುತ್ತವೆ. ಇವರುಗಳು ಸಾಮಾನ್ಯವಾಗಿ ಶಾಂತಶೀಲರು. ಬೇಗನೆ ಕೋಪ ಬರುವುದಿಲ್ಲ. ಒಂದು ವೇಳೆ ಕೋಪ ಬಂದರೂ ಆ ಸ್ಥಳವನ್ನು ಬಿಟ್ಟು ಬೇರಡೆ ತೆರಳುತ್ತಾರೆ. ದಂಪತಿಗ ನಡುವೆ ಪರಸ್ಪರ ಹೊಂದಾಣಿಕೆಯ ಭಾವನೆ ಇರುತ್ತದೆ. ಇವರು ಕಷ್ಟಪಟ್ಟು ಕೆಲಸ ಕಾರ್ಯಗಳನ್ನು ಮಾಡುವುದಲ್ಲದೆ, ಕಷ್ಟಪಟ್ಟು ದುಡಿಯುವವರಿಗೆ ಸಹಾಯ ಮಾಡುತ್ತಾರೆ. ಕೆಲವೊಮ್ಮೆ ರಕ್ತಕ್ಕೆ ಸಂಬಂಧಿಸಿದ ದೋಷ ಇವರನ್ನು ಕಾಡುತ್ತದೆ.
ಯೋಗಾಭ್ಯಾಸದಲ್ಲಿ ಆಸಕ್ತಿ ಇರುವವರು
ಈ ಜನರು ಯೋಗ ಪ್ರಾಣಾಯಾಮ ಅಥವಾ ದೈಹಿಕ ವ್ಯಾಯಾಮಗಳಿಂದ ಆರೋಗ್ಯದ ಮೇಲೆ ಹತೋಟಿ ಸಾಧಿಸುತ್ತಾರೆ. ಇವರಿಗೆ ಹಿರಿಯ ಸೋದರ ಅಥವಾ ಹಿರಿಯ ಸೋದರಿಯ ಮೇಲೆ ವಿಶೇಷ ಗೌರವ ಮತ್ತು ನಂಬಿಕೆ ಇರುತ್ತದೆ. ಅವರೊಂದಿಗೆ ಮಾಡುವ ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುತ್ತಾರೆ. ಇವರ ಕೆಲಸ ಕಾರ್ಯಗಳಿಗೆ ಸೋದರ ಮಾವನ ಸಹಾಯ ಸಹಕಾರ ದೊರೆಯುತ್ತದೆ. ಸಾಮಾನ್ಯವಾಗಿ ಇವರಿಗೆ, ಸಂಬಂಧದಲ್ಲಿ ಮದುವೆಯಾಗುತ್ತದೆ. ಬೆರಳುಗಳಲ್ಲಿ ಚುಕ್ಕೆ ಮತ್ತು ಗೆರೆಯ ನೀಲಿ ಬಣ್ಣವು ಗಾಢವಾದಷ್ಟು ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿ ಪ್ರಗತಿ ಕಂಡು ಬರುತ್ತದೆ. ಮಕ್ಕಳ ವಿದ್ಯಾಭ್ಯಾಸ ಮತ್ತು ಉತ್ತಮ ಜೀವನ ನಿರ್ವಹಣೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧವಾಗುವರು.
ಕೆಲವರ ಉಗುರುಗಳಲ್ಲಿ ತಿಳಿ ಹಳದಿ ಬಣ್ಣ ಕಾಣುತ್ತದೆ. ಇಂತಹವರು ಯಾವುದೇ ಸನ್ನಿವೇಶಕ್ಕೂ ಹೊಂದಿಕೊಂಡು ಹೋಗುತ್ತಾರೆ. ದುಡುಕದೆ ಎಲ್ಲರ ಮನಸ್ಥಿತಿಗೂ ಸಂತೋಷವೆನಿಸುವ ಮಾತುಕತೆ ಇವರದಾಗುತ್ತದೆ. ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಾರ್ಯ ಯೋಜನೆಯನ್ನು ರೂಪಿಸುವಲ್ಲಿ ಯಶಸ್ವಿಯಾಗುವರು. ಮನೆಯಲ್ಲಿರುವ ವಯೋವೃದ್ಧರನ್ನು ಗೌರವದಿಂದ ಕಾಣುವರು. ಇವರ ಬಳಿ ಎಷ್ಟೇ ಹಣವಿದ್ದರೂ ಐಷಾರಾಮಿ ಜೀವನವನ್ನು ಇಷ್ಟಪಡುವುದಿಲ್ಲ. ದುರಾಸೆ ಇರದ ಇವರು ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ತತ್ವವನ್ನು ಪಾಲಿಸುತ್ತಾರೆ.
ಅತಿಯಾಗಿ ಖರ್ಚು ಮಾಡುವ ಗುಣ
ಎಲ್ಲರ ಮನ ಗೆಲ್ಲುವ ಮಕ್ಕಳಿರುತ್ತಾರೆ. ಉದ್ಯೋಗದಲ್ಲಿ ಎದುರಾಗುವ ಯಾವುದೇ ಬದಲಾವಣೆಯನ್ನು ಇವರಿಗೆ ಅನುಕೂಲವಾಗುವಂತೆ ಪರಿವರ್ತಿಸಿಕೊಳ್ಳಬಲ್ಲರು. ಇವರ ಒಂದೇ ಒಂದು ತಪ್ಪಾದ ಗುಣವೆಂದರೆ ಅತಿಯಾಗಿ ಖರ್ಚು ಮಾಡುವುದು. ಕಷ್ಟದಲ್ಲಿ ಇದ್ದವರಿಗೆ ಅನುಕೂಲತೆ ಕಲ್ಪಿಸುವುದು ಇವರ ಒಂದು ಕನಸು. ಕಲುಷಿತ ನೀರಿನಿಂದ ಮತ್ತು ಕಲುಷಿತ ಆಹಾರದಿಂದ ಉಂಟಾಗುವ ರೋಗಗಳಿಂದ ಸಾಮಾನ್ಯವಾಗಿ ಇವರು ಬಳಲುತ್ತಾರೆ. ಕೇವಲ ಉತ್ತಮ ಆಹಾರ ಪದ್ಧತಿಯಿಂದ ಮಾತ್ರ ಉತ್ತಮ ಆರೋಗ್ಯ ಗಳಿಸಲು ಸಾಧ್ಯ. ವಂಶಕ್ಕೆ ಸಂಬಂಧಿಸಿದ ಆಸ್ತಿಪಾಸ್ತಿಯ ವಿವಾದವನ್ನು ಕಾನೂನಿನ ಮುಖಾಂತರ ಗೆಲ್ಲುತ್ತಾರೆ. ಬಾಳ ಸಂಗಾತಿ ಮತ್ತು ಮಕ್ಕಳಿಗೆ ಎಲ್ಲಾ ರೀತಿಯ ಅನುಕೂಲತೆಗಳನ್ನು ಕಲ್ಪಿಸುತ್ತಾರೆ.
ಕೆಲವರ ಉಗುರುಗಳಲ್ಲಿ ಚುಕ್ಕೆಗಳು ಕಂಡುಬರುತ್ತವೆ. ಇದು ಕಪ್ಪು, ಬಿಳಿ, ಕೆಂಪು ಅಥವಾ ಇನ್ನಾವುದೇ ಬಣ್ಣಗಳು ಇರುತ್ತವೆ. ಕೇವಲ ಬಣ್ಣವಲ್ಲದೆ ಅದರ ಗಾತ್ರವು ಮುಖ್ಯವೆನಿಸುತ್ತದೆ. ಚುಕ್ಕಿಗಳು ಗಾಢವಾಗಿದ್ದರೆ ಒಂದು ರೀತಿಯ ಫಲಗಳು ದೊರೆಯುತ್ತವೆ. ಮಾಸಲು ಬಣ್ಣದ್ದಾಗಿದ್ದರೆ ಮತ್ತೊಂದು ರೀತಿಯ ಫಲಗಳು ದೊರೆಯುತ್ತವೆ. ಸಾಮಾನ್ಯವಾಗಿ ಕಪ್ಪು ಬಣ್ಣದ ಚುಕ್ಕೆಯಿದ್ದಲ್ಲಿ ಅಂತರ ವ್ಯಕ್ತಿಗಳ ಮನಸ್ಸನ್ನು ಅರಿಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಗುಟ್ಟಾಗಿ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಸುಲಭವಾಗಿ ಇವರು ಯಾರನ್ನೂ ನಂಬುವುದಿಲ್ಲ. ಆದರೆ ಬೇರೆಲ್ಲರ ಪ್ರೀತಿ ವಿಶ್ವಾಸ ಮತ್ತು ಸಹಾಯ ಇವರಿಗೆ ದೊರೆಯುತ್ತದೆ. ಇವರಿಗೆ ಯಾವುದಾದರೂ ಒಂದು ರೀತಿಯಲ್ಲಿ ಸೋಂಕು ಉಂಟಾಗುತ್ತವೆ. ಕಣ್ಣಿನ ಉರಿ, ಅಜೀರ್ಣತೆ, ಎದೆಯಲ್ಲಿ ಉರಿತ ಸಾಮಾನ್ಯವಾಗಿರುತ್ತದೆ.
ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ
ಬಿಳಿ ಬಣ್ಣದ ಚುಕ್ಕೆಗಳಿದ್ದಲ್ಲಿ ಪ್ರತಿಯೊಬ್ಬರನ್ನು ಇವರು ಪ್ರೀತಿ ವಿಶ್ವಾಸದಿಂದಲೇ ಕಾಣುತ್ತಾರೆ. ಎಲ್ಲರ ಬಳಿ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಎಲ್ಲರನ್ನೂ ಸಂತೋಷವಾಗಿರಿಸಿಕೊಂಡು ಕುಟುಂಬದ ಹೊಣೆಯನ್ನು ಹೊರುವುದು ಇವರ ಗುಣ. ಕೆಂಪು ಬಣ್ಣದ ಚುಕ್ಕೆಯಾಗಿದ್ದಲ್ಲಿ ಅವರ ಕೋಪದ ಭಾವನೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಜೀವನದಲ್ಲಿ ಸೋಲು ಎಂಬುವುದು ಇವರಿಗೆ ಇಷ್ಟವಾಗದ ವಿಚಾರ. ಗೆಲುವಿಗಾಗಿ ಪರಿತಪಿಸುತ್ತಾ ಬಿಡುವಿಲ್ಲದೆ ದುಡಿಯುತ್ತಾರೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).