Pitru Dosha; ಪಿತೃದೋಷ ಎಂದರೇನು ಅದರ ಪರಿಣಾಮ ಮತ್ತು ಪರಿಹಾರಗಳೇನು, ಪಿತೃಗಳನ್ನು ಸಂತೃಪ್ತಗೊಳಿಸುವುದು ಹೇಗೆ-how to resolve pitru dosha what is it and its effects remedies and practices for ancestral harmony uks ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Pitru Dosha; ಪಿತೃದೋಷ ಎಂದರೇನು ಅದರ ಪರಿಣಾಮ ಮತ್ತು ಪರಿಹಾರಗಳೇನು, ಪಿತೃಗಳನ್ನು ಸಂತೃಪ್ತಗೊಳಿಸುವುದು ಹೇಗೆ

Pitru Dosha; ಪಿತೃದೋಷ ಎಂದರೇನು ಅದರ ಪರಿಣಾಮ ಮತ್ತು ಪರಿಹಾರಗಳೇನು, ಪಿತೃಗಳನ್ನು ಸಂತೃಪ್ತಗೊಳಿಸುವುದು ಹೇಗೆ

How to Resolve Pitru Dosha; ಮನೆಯಲ್ಲಿ ನೆಮ್ಮದಿ ಇಲ್ಲ, ಕೈಯಲ್ಲಿ ಹಣ ನಿಲ್ತಾ ಇಲ್ಲ, ಕುಟುಂಬ ಸದಸ್ಯರ ನಡುವೆ ಸಾಮರಸ್ಯ ಇಲ್ಲ ಹೀಗೆ ಇಲ್ಲಗಳ ಪಟ್ಟಿ ಬೆಳೆದರೆ ಪಿತೃದೋಷದ ಕಡೆಗೆ ಜ್ಯೋತಿಷ್ಯ ಶಾಸ್ತ್ರಜ್ಞರು ಗಮನಹರಿಸುತ್ತಾರೆ. ಪಿತೃದೋಷ ಎಂದರೇನು ಅದರ ಪರಿಣಾಮ ಮತ್ತು ಪರಿಹಾರಗಳೇನು, ಪಿತೃಗಳನ್ನು ಸಂತೃಪ್ತಗೊಳಿಸುವುದು ಹೇಗೆ - ಇಲ್ಲಿದೆ ಕಿರು ವಿವರ.

Pitru Dosha; ಪಿತೃದೋಷ ಎಂದರೇನು ಅದರ ಪರಿಣಾಮ ಮತ್ತು ಪರಿಹಾರಗಳೇನು, ಪಿತೃಗಳನ್ನು ಸಂತೃಪ್ತಗೊಳಿಸುವುದು ಹೇಗೆ ಎಂಬುದರ ವಿವರ. (ಸಾಂಕೇತಿಕ ಚಿತ್ರ)
Pitru Dosha; ಪಿತೃದೋಷ ಎಂದರೇನು ಅದರ ಪರಿಣಾಮ ಮತ್ತು ಪರಿಹಾರಗಳೇನು, ಪಿತೃಗಳನ್ನು ಸಂತೃಪ್ತಗೊಳಿಸುವುದು ಹೇಗೆ ಎಂಬುದರ ವಿವರ. (ಸಾಂಕೇತಿಕ ಚಿತ್ರ) (SM)

ಎಷ್ಟು ದೇವರನ್ನು ಸ್ತುತಿಸಿದರೂ, ಭಜಿಸಿ ಪೂಜಿಸಿದರೂ ಮನೆಯಲ್ಲಿ ನೆಮ್ಮದಿ ವಾತಾವರಣ ಇಲ್ಲ, ಕೈಯಲ್ಲಿ ಹಣ ನಿಲ್ಲುವುದಿಲ್ಲ, ಉದ್ಯೋಗದಲ್ಲಿ ಅಡೆತಡೆ ಹೆಚ್ಚಾದಾಗ ಹೀಗೆ ಹತ್ತು ಹಲವು ಸಂಕಷ್ಟಗಳು ತಲೆದೋರಿದಾಗ ಸಹಜವಾಗಿಯೇ ಜ್ಯೋತಿಷ್ಯಶಾಸ್ತ್ರದ ಮೊರೆ ಹೋಗುತ್ತಾರೆ ಆಸ್ತಿಕರು. ಆಗ ಅಲ್ಲಿ ಅವರು ಸಾಮಾನ್ಯವಾಗಿ ಕೇಳುವ ಪದ ಪಿತೃದೋಷ.

ವೈದಿಕ ಜ್ಯೋತಿಷ್ಯದ ಜಗತ್ತಿನಲ್ಲಿ, ಪಿತೃ ದೋಷ ಎಂಬುದು ಪರಿಹಾರವಾಗದೇ ಉಳಿದ ಪಿತೃಗಳ ಅಂದರೆ ಪೂರ್ವಜರ ಸಮಸ್ಯೆಗಳಿಂದ ಬರುವಂಥದ್ದು. ಈ ದೋಷವು ವ್ಯಕ್ತಿಗಳು ಮತ್ತು ಅವರ ಕುಟುಂಬಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾದ ನಿರ್ದಿಷ್ಟ ಸ್ಥಿತಿಯನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸುವ ಪದವಾಗಿದೆ. ಈ ಪರಿಕಲ್ಪನೆಯು ನಮ್ಮ ಪೂರ್ವಜರ ಕರ್ಮವು ನಮ್ಮ ಜೀವನದ ಮೇಲೆ ಪ್ರಭಾವ ಬೀರಬಹುದು ಎಂಬ ಪ್ರಾಚೀನ ನಂಬಿಕೆಯಲ್ಲಿ ಬೇರೂರಿದೆ. ಪಿತೃ ದೋಷ, ಅದರ ಪರಿಣಾಮಗಳು ಮತ್ತು ಅದನ್ನು ಹೇಗೆ ನಿವಾರಿಸುವುದು ಎಂಬುದರ ಕಿರು ವಿವರ ಇಲ್ಲಿದೆ.

ಪಿತೃದೋಷ ಎಂದರೇನು ಮತ್ತು ಅದರ ಪರಿಣಾಮ

ಪಿತೃ ದೋಷವನ್ನು ಸಾಮಾನ್ಯವಾಗಿ "ಪಿತೃಶಾಪ" ಅಥವಾ "ಪೂರ್ವಜರ ಶಾಪ" ಎಂದು ವಿವರಿಸಲಾಗುತ್ತದೆ. ಇದು ತಲೆಮಾರುಗಳಿಂದ ಪರಿಹಾರವಾಗದೇ ಬಾಕಿ ಉಳಿದ ಅವರ ಕರ್ಮಗಳಿಂದ ಉಂಟಾದ ಸಮಸ್ಯೆಯಾಗಿದ್ದು, ಇದು ವಿಪರೀತಿ ಇರುವಂಥ ಕುಟುಂಬಗಳಲ್ಲಿ ಸಮಸ್ಯೆಗಳೂ ಹೆಚ್ಚಾಗಿರುತ್ತವೆ ಎಂಬುದು ನಂಬಿಕೆ.

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪಿತೃಗಳು ಕೆಲವು ಆಚರಣೆಗಳನ್ನು ಮಾಡಿರದೇ ಇದ್ದರೆ ಅಥವಾ ಅವರ ಬದುಕಿದ್ದಾಗ ತೊಂದರೆಗೆ ಒಳಗಾಗಿ ಮರಣಿಸಿದ್ದರೆ ಅಂಥವರ ಆತ್ಮಗಳು, ಅವರ ವಂಶಸ್ಥರ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಈ ದೋಷವು ಜೀವನದ ವಿವಿಧ ಅಂಶಗಳಲ್ಲಿ ಅಡೆತಡೆಗಳನ್ನು ಮತ್ತು ತೊಂದರೆಗಳನ್ನು ಸೃಷ್ಟಿಸುತ್ತದೆ ಎಂದು ಭಾವಿಸಲಾಗಿದೆ.

ಪಿತೃದೋಷ ಪರಿಣಾಮಗಳು: ಬದುಕಿನಲ್ಲಿ ಹಲವು ರೀತಿಯಲ್ಲಿ ಪಿತೃದೋಷಗಳು ಕಾಣಿಸಿಕೊಳ್ಳುತ್ತವೆ. ಅವುಗಳ ಪೈಕಿ ಕೆಲವು ಹೀಗಿವೆ-

1) ಕೌಟುಂಬಿಕ ಸಮಸ್ಯೆ: ಕುಟುಂಬದೊಳಗೆ ನಿರಂತರ ಸಂಘರ್ಷ ಮತ್ತು ತಪ್ಪು ಗ್ರಹಿಕೆಗಳು ಪಿತೃದೋಷದ ಸಂಕೇತವಾಗಿರಬಹುದು. ಅಸಂಗತ ವಿಷಯಗಳು ಸಾಮಾನ್ಯವಾಗಿ ತಾರ್ಕಿಕ ವಿವರಣೆಯನ್ನು ಮೀರಿ ಗೋಚರಿಸುತ್ತದೆ. ಕುಟುಂಬ ಸದಸ್ಯರ ನಡುವಿನ ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

2) ಹಣಕಾಸು ಮುಗ್ಗಟ್ಟು: ಅನಿರೀಕ್ಷಿತ ನಷ್ಟ ಅಥವಾ ನಿರಂತರ ಆರ್ಥಿಕ ಸಂಕಷ್ಟ ಸೇರಿದಂತೆ ಹಣಕಾಸಿನ ತೊಂದರೆಗಳು ಕಾಣುತ್ತಲೇ ಇರಬಹುದು. ಇದನ್ನೂ ಕೆಲವೊಮ್ಮೆ ಪಿತೃ ದೋಷದ ಫಲ ಎಂದು ಗುರುತಿಸಬಹುದು.

3) ಉದ್ಯೋಗ ಸಮಸ್ಯೆ; ಎಷ್ಟೇ ಪ್ರಯತ್ನಿಸಿದರೂ ಉದ್ಯೋಗದಲ್ಲಿ ಪ್ರಗತಿ ಕಾಣಲು ಸಾಧ್ಯವಾಗದೇ ಇರುವ ಸನ್ನಿವೇಶಗಳನ್ನು ಕೆಲವರು ಎದುರಿಸುತ್ತಿರಬಹುದು. ಉದ್ಯೋಗ, ವ್ಯವಹಾರದಲ್ಲಿ ಸದಾ ಹಿನ್ನಡೆ ಉಂಟಾಗುವುದು ಕೂಡ ಪಿತೃದೋಷದ ಫಲ ಎಂದು ಗುರುತಿಸಬಹುದು.

4) ಆರೋಗ್ಯ ಸಮಸ್ಯೆ: ಕೆಲವರಲ್ಲಿ ವಿವರಿಸಲಾಗದ ಆರೋಗ್ಯ ಸಮಸ್ಯೆ ಉಂಟಾಗಬಹುದು ಅಥವಾ ಸ್ಪಷ್ಟ ಕಾರಣ ಇಲ್ಲದ ಮರುಕಳಿಸುವ ಕಾಯಿಲೆ ಕಾಡಬಹುದು. ಇದನ್ನು ಪರಿಹರಿಸಲಾಗದ ಪೂರ್ವಜರ ಕರ್ಮಕ್ಕೆ ಲಿಂಕ್ ಮಾಡಬಹುದು.

5) ದಂಪತಿ ನಡುವೆ ವಿರಸ; ದಂಪತಿ ನಡುವೆ ವಿರಸ, ತೀವ್ರ ಪ್ರಮಾಣದ ಭಿನ್ನಾಭಿಪ್ರಾಯ ಅಥವಾ ಅರ್ಹ ಸಂಗಾತಿ ಸಿಗದೇ ಇರುವಂತಹ ಸಮಸ್ಯೆ ಕೂಡ ಪಿತೃದೋಷದ ಫಲ ಎಂದು ಕೆಲವೊಮ್ಮೆ ಹೇಳಲಾಗುತ್ತದೆ.

ಪಿತೃದೋಷಕ್ಕೆ ಪರಿಹಾರಗಳು

ಪಿತೃ ದೋಷವು ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಅನುಮಾನ ನಿಮಗಿದ್ದರೆ, ಅದರ ಪರಿಣಾಮವನ್ನು ತಗ್ಗಿಸಲು ಸಹಾಯ ಮಾಡುವ ಹಲವಾರು ಪರಿಹಾರಗಳಿವೆ:

1) ಪಿತೃ ಶ್ರಾದ್ಧವನ್ನು ಮಾಡಿ: ಇದು ಮೃತ ಪೂರ್ವಜರನ್ನು ಗೌರವಿಸಲು ಮತ್ತು ಗೌರವ ಸಲ್ಲಿಸಲು ನಡೆಸುವ ಆಚರಣೆ. ಸಾಮಾನ್ಯವಾಗಿ ಇದನ್ನು ಪಿತೃ ಪಕ್ಷದಲ್ಲಿ ಮಾಡಲಾಗುತ್ತದೆ. ಚಾಂದ್ರಮಾನ ಲೆಕ್ಕಾಚಾರ ಪ್ರಕಾರ ಇದು ಪೂರ್ವಜರಿಗೆ ಮೀಸಲಾಗಿರುವ ನಿರ್ದಿಷ್ಟ ಅವಧಿಯಾಗಿದೆ.

2) ಪಿಂಡ್ ದಾನ ಮಾಡಿ: ಈ ಆಚರಣೆಯು ಪೂರ್ವಜರ ಆತ್ಮಗಳನ್ನು ಸಮಾಧಾನಪಡಿಸಲು, ಸಂತೃಪ್ತಗೊಳಿಸುವ ಕರ್ಮಾಚರಣೆಯಾಗಿದೆ. ಇದು ಅವರ ದುಃಖ ನಿವಾರಿಸಲು ಮತ್ತು ಕರ್ಮದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

3) ದಾನ ಧರ್ಮ ಮಾಡಿ: ಪಿತೃಗಳ ಹೆಸರಿನಲ್ಲಿ ದಾನ ಧರ್ಮಾದಿಗಳನ್ನು ಮಾಡಿ. ಇದರಿಂದಾಗಿ ಅವರ ಕರ್ಮ ದೋಷಗಳು ಕಡಿಮೆಯಾಗಿ, ವಂಶಸ್ಥರ ಸಮಸ್ಯೆಗಳಿಗೂ ಪರಿಹಾರ ಸಿಗುವುದೆಂಬ ನಂಬಿಕೆ ಇದೆ.

4) ಮಂತ್ರ ಪಠಿಸಿ: ಪಿತೃಗಳನ್ನು ಸಂಪ್ರೀತಗೊಳಿಸುವ ಮಂತ್ರ ಪಠಿಸಿ. ವಿಶೇಷವಾಗಿ ಪಿತೃ ಗಾಯತ್ರಿ ಮಂತ್ರ (ಓಂ ಪಿತೃಗಣ ವಿದ್ಮಹೇ ಜಗದ್ಧಾರಿಣಿ ಧೀಮಹಿ ತನ್ನೋ ಪಿತೃ ಪ್ರಯೋಚದಯಾತ್‌) ಪಠಿಸುವುದರಿಂದ ಅವರು ಸಂತುಷ್ಟರಾಗಿ ಪಿತೃದೋಷದ ಕೆಟ್ಟ ಪರಿಣಾಮ ಕಡಿಮೆಯಾಗುತ್ತದೆ. ಈ ಮಂತ್ರ ಪಠಿಸಬೇಕಾದರೆ ಗುರು ಮುಖೇನ ಉಪದೇಶ ಪಡೆಯಬೇಕು ಎನ್ನುತ್ತಾರೆ ತಿಳಿದವರು.

5) ಜ್ಯೋತಿಷ್ಯ ಶಾಸ್ತ್ರಜ್ಞರ ಜೊತೆಗೆ ಸಮಾಲೋಚಿಸಿ: ಯಾವುದಕ್ಕೂ ಇಂತಹ ವಿಷಯಗಳಲ್ಲಿ ಜ್ಯೋತಿಷ ಶಾಸ್ತ್ರಜ್ಞರ ಜೊತೆಗೆ ಸಮಾಲೋಚಿಸಿ ಅವರಿಂದ ವ್ಯಕ್ತಿಗತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆಯುವುದು ಒಳಿತು. ಈ ಪರಿಹಾರಗಳು ಆಯಾ ವ್ಯಕ್ತಿಯ ಜಾತಕವನ್ನು ಹೊಂದಿಕೊಂಡಿರುವ ಕಾರಣ ಜ್ಯೋತಿಷ್ಯಶಾಸ್ತ್ರಜ್ಞರ ಜೊತೆಗೆ ಸಮಾಲೋಚನೆ ಮಾಡುವುದು ಅಗತ್ಯ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.