ಪತಿಗೆ ದೀರ್ಘಾಯುಷ್ಯ ನೀಡುವ, ಅವಿವಾಹಿತರಿಗೆ ಕಂಕಣ ಭಾಗ್ಯ ಕೊಡುವ ಮಂಗಳ ಗೌರಿ ವ್ರತ ಆಚರಿಸುವುದು ಹೇಗೆ? -ದಿನ ವಿಶೇಷ
ಶ್ರಾವಣ ಮಾಸಗಳಲ್ಲಿ ಆಚರಿಸುವ ಹಬ್ಬಗಳಲ್ಲಿ ಮಂಗಳಗೌರಿ ವ್ರತ ಕೂಡಾ ಒಂದು. ವಿವಾಹಿತರು ಪತಿಯ ದೀರ್ಘಾಯುಷ್ಯಕ್ಕಾಗಿ ಈ ವ್ರತವನ್ನು ಆಚರಿಸಿದರೆ, ಅವಿವಾಹಿತ ಹೆಣ್ಣು ಮಕ್ಕಳು ಮದುವೆ ಭಾಗ್ಯಕ್ಕಾಗಿ ಈ ಪೂಜೆ ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಮಂಗಳಗೌರಿ ವ್ರತದ ಬಗ್ಗೆ ಮಾಹಿತಿ.
ಇಂದು 6 ಆಗಸ್ಟ್ 2024, ಮಂಗಳವಾರ, ಶುಕ್ಲಪಕ್ಷ. ಸಂಜೆ 5:44ವರೆಗೂ ಮಾಘ ನಕ್ಷತ್ರವಿರುತ್ತದೆ. ಸಂಜೆ ನಂತರ ಪೂರ್ವ ಫಲ್ಗುಣಿ ನಕ್ಷತ್ರ ಆರಂಭವಾಗುತ್ತದೆ. ಬೆಳಗ್ಗೆ 04:35 ರಿಂದ 05:21 ವರೆಗೂ ಬ್ರಹ್ಮ ಮುಹೂರ್ತವಿದೆ. ಸಂಜೆ 03:35 ರಿಂದ 05:10 ವರೆಗೂ ರಾಹುಕಾಲವಿರುತ್ತದೆ.
ಆಷಾಢ ಅಮಾವಾಸ್ಯೆ ಕಳೆದು ಶ್ರಾವಣ ಬಂತೆಂದರೆ ಸಾಲು ಸಾಲು ಹಬ್ಬಗಳು ಎದುರಾಗುತ್ತವೆ. ನಾಗರ ಪಂಚಮಿ, ವರಮಹಾಲಕ್ಷ್ಮಿ ವ್ರತ, ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಠಮಿ ಸೇರಿ ಈ ಬಾರಿ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ಪ್ರಮುಖ ಹಬ್ಬಗಳು ಜೊತೆ ಕೆಲವೊಂದು ವ್ರತಗಳನ್ನು ಆಚರಿಸಲಾಗುತ್ತದೆ. ಅದರಲ್ಲಿ ಮಂಗಳ ಗೌರಿ ವ್ರತ ಕೂಡಾ ಒಂದು. ಹೆಸರೇ ಸೂಚಿಸುವಂತೆ ಈ ವ್ರತವನ್ನು ಪ್ರತಿ ಮಂಗಳವಾರ ಆಚರಿಸಲಾಗುತ್ತದೆ. 6 ಆಗಸ್ಟ್ ರಂದು ಆರಂಭವಾಗುವ ಈ 4 ವಾರಗಳ ಮಂಗಳಗೌರಿ ವ್ರತ 27 ಆಗಸ್ಟ್‌ರಂದು ಕೊನೆಯಾಗುತ್ತದೆ.
ಮಂಗಳಗೌರಿ ವ್ರತದ ಮಹತ್ವ
ಹಿಂದೂಗಳ ಪವಿತ್ರವಾದ ತಿಂಗಳುಗಳಲ್ಲಿ ಶ್ರಾವಣ ಮಾಸ ಕೂಡಾ ಒಂದಾಗಿದೆ. ಈ ಸಮಯದಲ್ಲಿ ಪ್ರತಿ ಸೋಮವಾರ ಮಹಾದೇವನನ್ನು ಪೂಜಿಸುವುದಲ್ಲದೆ, ಸುಮಂಗಲಿಯರು ಪ್ರತಿ ಮಂಗಳವಾರ ಗೌರಿ ಪೂಜೆ ಮಾಡುತ್ತಾರೆ. ಮುತ್ತೈದೆಯರು ಮಾತ್ರವಲ್ಲ ಮದುವೆ ಆಗದ ಹೆಣ್ಣು ಮಕ್ಕಳು ಕೂಡಾ ಈ ಮಂಗಳಗೌರಿ ವ್ರತವನ್ನು ಆಚರಿಸುತ್ತಾರೆ. ಬೆಳಗ್ಗಿನಿಂದ ಸಂಜೆವರೆಗೂ ಉಪವಾಸವಿದ್ದು, ಪೂಜೆ ಮಾಡಿ, ಗೌರಿಯನ್ನು ಧ್ಯಾನಿಸಿ ಪ್ರಾರ್ಥಿಸುತ್ತಾರೆ. ವಿವಾಹಿತರು ಪತಿಯ ದೀರ್ಘಾಯುಷ್ಯ ಕೋರಿ ಪೂಜೆ ಮಾಡಿದರೆ, ಅವಿವಾಹಿತ ಹೆಣ್ಣು ಮಕ್ಕಳು ಆದಷ್ಟು ಬೇಗ ಮದುವೆ ಆಗಲಿ, ಒಳ್ಳೆಯ ಮನೆ ಸಿಗಲಿ ಎಂದು ಪ್ರಾರ್ಥಿಸಿ ಪೂಜೆ ಮಾಡುತ್ತಾರೆ.
ಯಾವುದೇ ಹೆಣ್ಣು ಮಕ್ಕಳ ಜಾತಕದಲ್ಲಿ ಮಂಗಳ/ಕುಜ ದೋಷ ಇರುವವರು ಪ್ರತಿ ಮಂಗಳವಾರ ಈ ಮಂಗಳಗೌರಿ ವ್ರತವನ್ನು ಮಾಡುವುದರಿಂದ ಅಂಗಾರಕ ದೋಷ ಕಡಿಮೆ ಆಗಿ, ಆದಷ್ಟು ಬೇಗ ಕಂಕಣ ಬಲ ಕೂಡಿ ಬರುತ್ತದೆ ಎಂಬ ನಂಬಿಕೆ ಕೂಡಾ ಇದೆ.
ಮಂಗಳ ಗೌರಿ ವ್ರತಕಥೆ
ಬಹಳ ಹಿಂದೆ ಧರ್ಮಪಾಲ ಎಂಬ ವ್ಯಾಪಾರಿ ಇದ್ದ. ಪತ್ನಿಯೊಂದಿಗೆ ಸಂತೋಷದಿಂದ ವಾಸಿಸುತ್ತಿದ್ದ ಈತನಿಗೆ ಬಹಳ ದಿನಗಳ ನಂತರ ಒಂದು ಗಂಡು ಮಗುವಾಯ್ತು. ಆದರೆ ಜ್ಯೋತಿಷಿಗಳ ಬಳಿ ಆ ಮಗುವಿನ ಜಾತಕ ತೋರಿಸಿದಾಗ, ಆತ ಅಲ್ಪಾಯುಷಿ ಎಂಬ ಸತ್ಯ ತಿಳಿಯಿತು. ಇದೇ ಚಿಂತೆಯಲ್ಲಿ ಧರ್ಮಪಾಲ ದಂಪತಿ ಜೀವನ ಕಳೆಯುತ್ತಿದ್ದರು. ಮಗ ಯೌವನಾವಸ್ಥೆಗೆ ಬಂದ ನಂತರ ಆತನಿಗೆ ಮದುವೆ ಮಾಡುತ್ತಾರೆ. ಆ ಯುವಕನ ಪತ್ನಿ ದೈವಭಕ್ತೆಯಾಗಿದ್ದು ಪ್ರತಿ ಮಂಗಳವಾರ ಶ್ರದ್ಧಾಭಕ್ತಿಯಿಂದ ಮಂಗಳಗೌರಿ ವ್ರತವನ್ನು ಆಚರಿಸುತ್ತಿದ್ದಳು. ಇದರ ಪರಿಣಾಮವಾಗಿ ಆತನ ಪತಿ ದೀರ್ಘಾಯುಷ್ಯ ಪಡೆದನು ಎಂಬ ನಂಬಿಕೆ ಇದೆ. ಅದೇ ಕಾರಣಕ್ಕೆ ಮಹಿಳೆಯರು, ತಮ್ಮ ಪತಿಯ ದೀರ್ಘಾಯುಷ್ಯ ಕೋರಿ ಪ್ರತಿ ಮಂಗಳವಾರ ಮಂಗಳಗೌರಿ ವ್ರತ ಆಚರಿಸುತ್ತಾರೆ.
ಮಂಗಳ ಗೌರಿ ಪೂಜಾ ವಿಧಿ
- ಸೂರ್ಯೋದಯಕ್ಕೆ ಎದ್ದು ಸ್ನಾನ ಮಾಡಿ ಮಡಿ ಉಟ್ಟು ಪೂಜಾ ಕೊಠಡಿಯನ್ನು ಶುಚಿಗೊಳಿಸಬೇಕು.
- ಮಹಿಳೆಯರು ಕೆಂಪು ಬಣ್ಣದ ಬಟ್ಟೆ ಧರಿಸಬೇಕು.
- ಮಣೆ ಮೇಲೆ ರಂಗೋಲಿ ಬಿಟ್ಟು ಅಕ್ಕಿ ತುಂಬಿದ ಪಾತ್ರೆಯಲ್ಲಿ ದೇವಿಯ ವಿಗ್ರಹವನ್ನು ಇಟ್ಟು ಅಲಂಕಾರ ಮಾಡಬೇಕು.
- ಶುದ್ಧ ತುಪ್ಪದಿಂದ 16 ಬತ್ತಿಗಳ ದೀಪ ಬೆಳಗಿಸಬೇಕು
- ದೇವಿಗೆ ನೈವೇದ್ಯ ಅರ್ಪಿಸಬೇಕು, ಪೂಜೆ ಮಾಡುವವರು ಉಪವಾಸ ಇರಬೇಕು
- ಮಂಗಳಗೌರಿಯ ವಿವಿಧ ಮಂತ್ರಗಳನ್ನು ಪಠಿಸಿ, ವ್ರತ ಕಥೆಯನ್ನು ಓದಬೇಕು
- ಸಂಜೆ ಮತ್ತೆ ದೇವಿಗೆ ಪೂಜೆ ಮಾಡಿ ಮುತ್ತೈದೆಯರನ್ನು ಕರೆದು ಪೂಜೆ ಮಾಡಿ ಅರಿಶಿನ ಕುಂಕುಮ ಕೊಟ್ಟು ಆಶೀರ್ವಾದ ಪಡೆಯಬೇಕು
- ಮನೆಗೆ ಬಂದಿರುವವರಿಗೆ ಊಟ ಬಡಿಸಿ, ತಾವೂ ಉಪವಾಸ ಮುರಿಯಬೇಕು.
- ಪೂಜೆಯ ಸಮಯದಲ್ಲಿ ಸರ್ವ ಮಂಗಳ ಮಾಂಗಲ್ಯಯೇ ಶಿವೇ ಸರ್ವಾರ್ಥ ಸಾಧಿಕೇ, ಶ್ರಣಯಾಯೇ ತ್ರಯಂಬಿಕೆ ಗೌರಿ ನಾರಾಯಣಿ ನಮೋಸ್ತುತೇ ಮಂತ್ರವನ್ನು ಪಠಿಸುವುದು ಒಳ್ಳೆಯದು.
ನಿಯಮಾನುಸಾರ ನೀವು ಈ ವ್ರತವನ್ನು ಮಾಡಬೇಕು ಎಂದಾದದಲ್ಲಿ ಸೂಕ್ತ ಜ್ಯೋತಿಷಿಗಳ ಸಲಹೆ ಪಡೆಯಿರಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.