ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Numerology: ಪುಸ್ತಕಗಳೇ ಇವರಿಗೆ ನಿಜವಾದ ಗುರು, ದಾನ ಧರ್ಮ ಮಾಡುವಲ್ಲಿ ಮುಂದು; 25ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ

Numerology: ಪುಸ್ತಕಗಳೇ ಇವರಿಗೆ ನಿಜವಾದ ಗುರು, ದಾನ ಧರ್ಮ ಮಾಡುವಲ್ಲಿ ಮುಂದು; 25ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ

Birth Date Astrology: ಯಾವುದೇ ವ್ಯಕ್ತಿಯ ಗ್ರಹಗತಿಗಳನ್ನು ನೋಡುವಾಗ ಜನ್ಮ ದಿನಾಂಕವನ್ನು ಪರಿಗಣಿಸಲಾಗುತ್ತದೆ. ಅದರ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಹೇಗಿರಬಹುದು ಎಂದು ಅಂದಾಜಿಸಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆಯೂ ಅವರ ಗುಣಧರ್ಮ ಹೇಗಿದೆ ಎಂಬುದನ್ನು ಹೇಳಬಹುದು. 25ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ ತಿಳಿಯಿರಿ.

ಪುಸ್ತಕಗಳೇ ಇವರಿಗೆ ನಿಜವಾದ ಗುರು, ದಾನ ಧರ್ಮ ಮಾಡುವಲ್ಲಿ ಮುಂದು; 25ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ
ಪುಸ್ತಕಗಳೇ ಇವರಿಗೆ ನಿಜವಾದ ಗುರು, ದಾನ ಧರ್ಮ ಮಾಡುವಲ್ಲಿ ಮುಂದು; 25ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ (PC: Canva)

ಈ ದಿನಾಂಕದಂದು ಜನಿಸಿದವರಿಗೆ ಹೊಸದಾಗಿ ಯಾವುದಾದರೂ ಒಂದು ವಿಚಾರವನ್ನು ಕಲಿಯಬೇಕೆಂಬ ಆಸೆ ಇರುತ್ತದೆ. ಆಹಾರದ ವಿಚಾರದಲ್ಲಿ ಕಟ್ಟುನಿಟ್ಟು. ಹಾಗೆಯೇ ಅನಾವಶ್ಯಕವಾಗಿ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. ಸಮಯವನ್ನು ವ್ಯರ್ಥ ಮಾಡುವುದೆಂದರೆ ಇವರಿಗೆ ಆಗದು. ಸಮಯವನ್ನು ವ್ಯರ್ಥ ಮಾಡುವವರನ್ನು ಕಂಡರೂ ಆಗದು. ಯಾವುದೇ ವಿಚಾರವಾದರೂ ಅದರ ಆಂತರ್ಯವನ್ನು ಸುಲಭವಾಗಿ ಅರಿಯಬಲ್ಲರು.

ಇವರ ಜೀವನದಲ್ಲಿ ಸದಾ ಕಾಲ ಒಂದಲ್ಲಾ ಒಂದು ರೀತಿಯ ಬದಲಾವಣೆಗಳು ಉಂಟಾಗಲಿವೆ. ಆ ಬದಲಾವಣೆಗಳಿಂದ ಉಂಟಾಗುವ ಪರಿಣಾಮಗಳು ಇವರ ಮಿರುದ್ಧವಾಗಿದ್ದಲ್ಲಿ ಅದರ ಬಗ್ಗೆ ಯೋಚನೆ ಕೂಡಾ ಮಾಡುವುದಿಲ್ಲ. ಎದುರಾಗುವ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಹಿಡಿಯುವುದು ಇವರಿಗೆ ಸುಲಭದ ವಿಚಾರ. ಸಾಮಾನ್ಯವಾಗಿ ಇವರು ಬೇರೆಯವರನ್ನು ಯಾವುದೇ ವಿಚಾರಕ್ಕಾಗಿ ಅವಲಂಬಿಸುವುದಿಲ್ಲ. ಅವಶ್ಯಕತೆ ಇದ್ದಲ್ಲಿ ವಯಸ್ಸನ್ನು ಪರಿಗಣಿಸದೆ ಸಹಾಯವನ್ನು ಅಥವಾ ಸಲಹೆಯನ್ನು ಪಡೆದುಕೊಳ್ಳುವರು.

ಇವರ ವಿದ್ಯೆ ಸಮಾಜಕ್ಕೆ ಅನುಕೂಲ

ಪ್ರತಿದಿನವೂ ಇವರು ಹೊಸ ಜನ್ಮವೆಂದೇ ಭಾವಿಸುತ್ತಾರೆ. ಆದ್ದರಿಂದ ಇವರ ಅನ್ವೇಷಣಾ ಬುದ್ಧಿ ಎಲ್ಲರಿಗೂ ಮೆಚ್ಚುಗೆಯಾಗುತ್ತದೆ. ವಿದ್ಯೆ ಇದ್ದಷ್ಟು ಇವರಿಗೆ ಒಳ್ಳೆಯದು. ಹಾಗೆಯೇ ಸಮಾಜಕ್ಕೂ ಒಳ್ಳೆಯದು. ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲಿ ಯಾರೊಂದಿಗೂ ಬೆರೆಯದೆ ಒಂಟಿಯಾಗಿ ಕಾಲ ಕಳೆಯುವರು. ಆದ್ದರಿಂದ ಜನರು ಇವರ ಬುದ್ಧಿಶಕ್ತಿ ಕಡಿಮೆ ಎಂಬ ತಪ್ಪು ಅಭಿಪ್ರಾಯಕ್ಕೆ ಬರುತ್ತಾರೆ. ಆದರೆ ಉತ್ತಮ ಅವಕಾಶ ದೊರೆತಾಗ ದಿಢೀರನೆ ಜೀವನದಲ್ಲಿ ಮೇಲೆದ್ದು ಬರುತ್ತಾರೆ.

ಇವರ ಮುಖದಲ್ಲಿ ಒಂದು ರೀತಿಯ ತೇಜಸ್ಸು ಮನೆ ಮಾಡಿರುತ್ತದೆ. ಇವರಿಗೆ ಒಳ್ಳೆಯ ಸಾಂಸ್ಕೃತಿಕ ಹಿನ್ನೆಲೆ ಲಭಿಸುತ್ತದೆ. ಕೆಲವರಿಗೆ ಒಳ್ಳೆಯ ಗುರುಗಳೇ ಸಿಗುವುದಿಲ್ಲ. ಆಗ ಇವರಿಗೆ ಪುಸ್ತಕಗಳೇ ನಿಜವಾದ ಗುರು. ಮನಸ್ಸಿಟ್ಟು ಒಮ್ಮೆ ಓದಿದರೆ ಪ್ರತಿಯೊಂದು ಅಂಶವು ಇವರ ತಲೆಯಲ್ಲಿ ಇರುತ್ತದೆ. ಬೇರೆಯವರಿಗೆ ಸುಲಭವಾಗಿ ತಮ್ಮಲ್ಲಿರುವ ಜ್ಞಾನವನ್ನು ಹಂಚುವ ಗುಣ ಹೊಂದಿರುತ್ತಾರೆ. ಗುರುಗಳು ಮೆಚ್ಚುವಂತಹ ಗುಣ ಧರ್ಮ ಇವರಲ್ಲಿರುತ್ತದೆ. ಸ್ತ್ರೀಯರಾಗಲಿ ಅಥವಾ ಪುರುಷರಾಗಲಿ ತಾಯಿ ನೀಡುವಂತಹ ಮಮತೆ ವಾತ್ಸಲ್ಯವನ್ನು ಎಲ್ಲರಿಗೂ ನೀಡುತ್ತಾರೆ. ತಮ್ಮಲ್ಲಿರುವ ಜ್ಞಾನವನ್ನು ಹಲವರಿಗೆ ಹಂಚಿದಾಗಲೇ ಇವರಿಗೆ ಸಂತೃಪ್ತಿ.

ಕುಟುಂಬದ ಹಿರಿಯರೊಂದಿಗೆ ಉತ್ತಮ ಬಾಂಧವ್ಯ

ಕುಟುಂಬದ ಹಿರಿಯರ ಜೊತೆಯಲ್ಲಿ ಉತ್ತಮ ಬಾಂಧವ್ಯ ರೂಪಗೊಳ್ಳುತ್ತದೆ. ಅನಾವಶ್ಯಕವಾಗಿ ಯಾರ ಮನಸನ್ನು ನೋಯಿಸದ ಜನ ಇವರು. ಬೇರೆಯವ ಬಗ್ಗೆ ಕೋಪಗೊಂಡರೂ ಬಳಸುವ ಪದಗಳು ಅತಿ ಸೌಮ್ಯವಾಗಿರುತ್ತದೆ. ತಮ್ಮ ಗೌರವಕ್ಕೆ ಧಕ್ಕೆ ಬರುವ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಹಿರಿಯರ ಆಸ್ತಿ ಅಥವಾ ಹಣದ ಬಗ್ಗೆ ಆಸೆ ಇರುವುದಿಲ್ಲ. ತಮ್ಮಲ್ಲಿರುವ ಪಾಂಡಿತ್ಯದಿಂದ ಜೀವನ ನಡೆಸಲು ಸಾಕಾಗುವಷ್ಟು ಹಣವನ್ನು ಸಂಪಾದಿಸಬಹುದು. ವಿವಾಹವಾದ ನಂತರ ಸಂಗಾತಿಯಿಂದಲೂ ಇವರಿಗೆ ವಿಶೇಷ ಸಹಾಯ ಸಹಕಾರ ದೊರೆಯುತ್ತದೆ. ಈ ದಿನಾಂಕದಲ್ಲಿ ಜನಿಸಿದ ಸ್ತ್ರೀಯರು ವಿಶೇಷ ಫಲಗಳನ್ನು ಪಡೆಯುತ್ತಾರೆ.

ದಾನ ಧರ್ಮ ಮಾಡುವಲ್ಲಿ ಇವರು ನಿಸ್ಸೀಮರು. ಹಣದ ವಿಚಾರದಲ್ಲಿ ಏರಿಳಿತಗಳು ಇರುತ್ತವೆ. ಸಾರ್ವಜನಿಕರಿಗೆ ಸೇವೆ ಮಾಡುವ ಸಲುವಾಗಿ ಸಂಘ ಸಂಸ್ಥೆಗಳನ್ನು ಆರಂಭಿಸುತ್ತಾರೆ. ಇವರು ಬಯಸದೇ ಹೋದರೂ ಅಧಿಕಾರ ಬೆನ್ನ ಹಿಂದೆ ಇರುತ್ತದೆ. ಹಣದ ತೊಂದರೆ ಇರುವ ವಿದ್ಯಾರ್ಥಿಗಳಿಗೆ ಹಣ ನೀಡಿ ಪ್ರೋತ್ಸಾಹಿಸುತ್ತಾರೆ. ಸಾಮಾನ್ಯವಾಗಿ ಇವರು ಸ್ವಂತ ಪುಸ್ತಕ ಭಂಡಾರವನ್ನು ಹೊಂದಿರುತ್ತಾರೆ. ಪ್ರಾಚೀನ ಕಲೆಗಳು ಮತ್ತು ಪ್ರಾಚೀನ ವಿದ್ಯೆಯ ಬಗ್ಗೆ ವಿಶೇಷ ಆಸಕ್ತಿ ಉಂಟಾಗುತ್ತದೆ. ದಾಂಪತ್ಯ ಜೀವನದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಎಲ್ಲರ ಜೊತೆ ಸ್ನೇಹದಿಂದ ಇರುತ್ತಾರೆ

ಕ್ಷಮಾ ಗುಣವಿರುವ ಕಾರಣ ಎಲ್ಲರೂ ಇವರಿಗೆ ಸ್ನೇಹಿತರೇ. ಎಂತಹ ಕಷ್ಟದ ಸಂದರ್ಭ ಎದುರಾದರೂ ನ್ಯಾಯದ ಹಾದಿ ಬಿಟ್ಟು ನಡೆಯುವುದಿಲ್ಲ. ತಪ್ಪಾದಾಗ ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳುವ ಮಂದಿ. ದೇವರಲ್ಲಿ ಗುಟ್ಟಾಗಿ ಕ್ಷಮೆಯನ್ನು ಬೇಡುತ್ತಾರೆ. ವಕೀಲರು ವೈದ್ಯರು ಇನ್ನೂ ಮುಂತಾದ ಸಾರ್ವಜನಿಕ ಸೇವೆಯಲ್ಲಿ ಇದ್ದರೆ ವಿಶೇಷ ಸ್ಥಾನಮಾನ ಲಭ್ಯವಾಗುತ್ತದೆ. ದೇವರಲ್ಲಿ ಅಪಾರ ನಂಬಿಕೆ ಇದ್ದರೂ ಸ್ವಂತ ಪ್ರಯತ್ನವನ್ನು ಬಿಡುವುದಿಲ್ಲ. ಒಟ್ಟಾರೆ ಇವರು ಎಲ್ಲರಿಗೂ ಮಾದರಿಯಾಗಿ ಜೀವನ ನಡೆಸುತ್ತಾರೆ. ಆರೋಗ್ಯದ ಬಗ್ಗೆ ಕೊಂಚ ಗಮನ ಕೊಟ್ಟಲ್ಲಿ ಯಾರ ಮೇಲೂ ಅವಲಂಬಿತರಾಗುವುದಿಲ್ಲ. ಸ್ವಂತ ಮಕ್ಕಳಿಂದಲೇ ಯಾವುದೇ ಸಹಾಯವನ್ನು ಕೇಳದೆ ಬಾಳುತ್ತಾರೆ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).