Hindu Culture: ದೇವರ ಮನೆ ದೀಪ ಹಚ್ಚಲು ಸೂಕ್ತ ಸಮಯ ಯಾವುದು? ಯಾವ ದಿಕ್ಕಿಗೆ ದೀಪದ ಜ್ವಾಲೆ ಇಟ್ಟರೆ ಒಳ್ಳೆಯದು?
Hindu Culture: ಹಿಂದೂ ಸಂಪ್ರದಾಯದಲ್ಲಿ ಪೂಜೆಗೆ ಬಹಳ ಪ್ರಾಮುಖ್ಯತೆ ಇದೆ. ದೀಪ ಕೂಡಾ ದೇವರಷ್ಟೇ ಸಮ ಎಂದು ನಂಬಲಾಗಿದೆ. ಆದ್ದರಿಂದ ದೀಪ ಹಚ್ಚಲು ಕೂಡಾ ಕೆಲವೊಂದು ನಿಯಮ ಅನುಸರಿಸಬೇಕು. ದೇವರ ಮನೆ ದೀಪ ಹಚ್ಚಲು ಸೂಕ್ತ ಸಮಯ ಯಾವುದು? ಯಾವ ದಿಕ್ಕಿಗೆ ದೀಪದ ಜ್ವಾಲೆ ಇಟ್ಟರೆ ಒಳ್ಳೆಯದು? ಇಲ್ಲಿದೆ ಮಾಹಿತಿ.
ಪ್ರತಿ ಹಿಂದೂಗಳ ಮನೆಯಲ್ಲಿ ಬೆಳಗ್ಗೆ ಸಂಜೆ ದೇವರ ದೀಪ ಹಚ್ಚುತ್ತಾರೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿನಿಂದ ದೀಪದ ಜ್ವಾಲೆಯು ಚಿಕ್ಕದಾಗಿದ್ದರೂ ಅದು ನೀಡುವ ಫಲ ಬಹಳ ದೊಡ್ಡದು. ದೀಪ ಬೆಳಗಿಸುವುದು ಕತ್ತಲೆಯನ್ನು ಹೋಗಲಾಡಿಸುವ ಸಂಕೇತವಾಗಿದೆ. ಅದೇ ರೀತಿ ದೈವಿಕ ಉಪಸ್ಥಿತಿ ಮತ್ತು ಶುದ್ಧೀಕರಣದ ಶಕ್ತಿಯ ರೂಪವಾಗಿದೆ.
ಜ್ವಾಲೆ ಅಗ್ನಿ ದೇವನಿಗೆ ಸಂಬಂಧಿಸಿದೆ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಮನೆಯ ದೇವರಕೋಣೆಯಲ್ಲಿ ದೀಪ ಹಚ್ಚುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ತೊಲಗಿ ಧನಾತ್ಮಕತೆ ಉಂಟಾಗುತ್ತದೆ. ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಿರುತ್ತಾಳೆ. ಮನೆಯ ಸದಸ್ಯರು ಸುಖ ಸಂತೋಷದಿಂದ ಬದುಕುತ್ತಾರೆ. ಇಷ್ಟೆಲ್ಲಾ ಶಕ್ತಿ ಇರುವ ದೀಪವನ್ನು ಬೆಳಗಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಿದರೆ ಇನ್ನಷ್ಟು ಶುಭ ಫಲಿತಾಂಶಗಳನ್ನು ಪಡೆಯಬಹುದು. ದೀಪದ ಜ್ವಾಲೆ ಯಾವ ದಿಕ್ಕಿಗೆ ಇರಬೇಕು? ದೀಪ ಹಚ್ಚುವಾಗ ಯಾವ ಮಂತ್ರಗಳನ್ನು ಪಠಿಸಬೇಕು? ದೀಪ ಹಚ್ಚುವ ಸೂಕ್ತ ಸಮಯ ಯಾವುದು ಎಲ್ಲದರ ಬಗ್ಗೆ ಇಲ್ಲಿ ಮಾಹಿತಿ ಇದೆ.
ದೀಪ ಹಚ್ಚಲು ಸೂಕ್ತ ಸಮಯ ಯಾವುದು?
ಕೆಲವರು ಬ್ರಹ್ಮ ಮುಹೂರ್ತದಲ್ಲೇ ಎದ್ದು ಎಲ್ಲಾ ಕೆಲಸಗಳನ್ನು ಮುಗಿಸಿ ಬೆಳಗ್ಗೆ ದೀಪ ಹಚ್ಚಿ ದೇವರ ಪೂಜೆ ಮಾಡುತ್ತಾರೆ, ಆದರೆ ಇನ್ನೂ ಕೆಲವರು ಮನೆಯನ್ನು ಸ್ವಚ್ಚ ಮಾಡುವುದರಲ್ಲೇ ಹೆಚ್ಚಿನ ಸಮಯ ಕಳೆದು ಬೆಳಗ್ಗೆ 11 ಗಂಟೆ ನಂತರ ದೀಪ ಹಚ್ಚುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಸೂರ್ಯೋದಯದ ಸಮಯದಲ್ಲಿ ದೀಪ ಹಚ್ಚುವುದು ಹೆಚ್ಚಿನ ಶುಭ ಫಲಗಳನ್ನು ನೀಡುತ್ತದೆ. ಸಾಧ್ಯವಾಗದಿದ್ದರೆ ಬೆಳಗ್ಗೆ 10 ಗಂಟೆಯ ಒಳಗೆ ದೇವರ ಕೋಣೆಯಲ್ಲಿ ದೀಪ ಹಚ್ಚಿ ಪೂಜೆ ಮಾಡಿ. ಆದರೆ ನಂತರ ದೀಪ ಹಚ್ಚಿ ಮಾಡುವ ಪೂಜೆ ಫಲ ನೀಡುವುದಿಲ್ಲ. ಒಟ್ಟಿನಲ್ಲಿ ಬೆಳಗ್ಗೆ 5 ರಿಂದ 10 ಗಂಟೆ ಒಳಗೆ ದೀಪ ಹಚ್ಚಿ, ಪೂಜೆ ಮಾಡಲು ಪ್ರಯತ್ನಿಸಿ.
ಹಾಗೇ ಸಂಜೆ ಕೂಡಾ ನೀವು 6 ರಿಂದ 8 ಗಂಟೆವರೆಗೂ ದೀಪ ಹಚ್ಚಬಹುದು. ನಂತರ ದೀಪ ಹಚ್ಚಿದರೆ ಅದಕ್ಕೆ ಅರ್ಥವಿರುವುದಿಲ್ಲ. ಸೂರ್ಯಾಸ್ತದ ನಂತರದ 48 ನಿಮಿಷಗಳ ಸಮಯವನ್ನು ಪ್ರದೋಷ ಕಾಲ ಎನ್ನುತ್ತಾರೆ. ಇದು ದೀಪ ಹಚ್ಚಲು ಬಹಳ ಒಳ್ಳೆಯ ಸಮಯ.
ದೀಪ ಹಚ್ಚುವಾಗ ಯಾವ ಮಂತ್ರವನ್ನು ಪಠಿಸಬೇಕು?
ಪ್ರತಿಯೊಂದು ದೇವರಿಗೆ ಮಂತ್ರಗಳಿವೆ. ಆರತಿ ಬೆಳಗುವಾಗ ಕೂಡಾ ಮಂತ್ರ ಪಠಿಸಲಾಗುತ್ತದೆ. ಹಾಗೇ ದೀಪ ಹಚ್ಚುವಾಗ ಕೂಡಾ ನಿರ್ದಿಷ್ಟ ಮಂತ್ರವನ್ನು ಪಠಿಸಬೇಕು. ದೀಪಜ್ಯೋತಿಃ ಪರಬ್ರಹ್ಮಃ ದೀಪಜ್ಯೋತಿಃ ಜನಾರ್ಧನಃ ದೀಪೋಹರ್ತಿಮೇ ಪಾಪಂ ಸಂಧ್ಯಾದೀಪಂ ನಮೋಸ್ತುತೇ ಶುಭಂ ಕರೋತು ಕಲ್ಯಾಣಮಾರೋಗ್ಯಂ ಸುಖಂ ಸಂಪದಾಂ ಶತ್ರುವೃದ್ಧಿ ವಿನಾಶಂ ದೀಪಜ್ಯೋತಿಃ ನಮೋಸ್ತುತೇ. ಎಂಬ ಮಂತ್ರವನ್ನು ದೀಪ ಹಚ್ಚುವಾಗಿ ಪಠಿಸಿದರೆ ಒಳ್ಳೆಯದು.
ದೀಪದ ಜ್ವಾಲೆ ಯಾವ ದಿಕ್ಕಿಗೆ ಇರಬೇಕು?
ದೇವರ ಮನೆಗೆ ವಾಸ್ತು ಇರುವಂತೆ ದೀಪದ ಜ್ವಾಲೆಯನ್ನೂ ನಿರ್ದಿಷ್ಟ ದಿಕ್ಕಿಗೆ ಇಟ್ಟರೆ ಮನೆಗೆ ಬಹಳ ಒಳ್ಳೆಯದು. ದೀಪದ ಜ್ವಾಲೆ ಪೂರ್ವ ದಿಕ್ಕಿಗೆ ಇದ್ದರೆ ಆಯಸ್ಸು ಹೆಚ್ಚಾಗುತ್ತದೆ. ಮನೆಗೂ ಒಳ್ಳೆಯದು, ಪಶ್ಚಿಮಕ್ಕೆ ಇಟ್ಟರೆ ದುಃಖ ಹೆಚ್ಚುತ್ತದೆ. ಉತ್ತರಕ್ಕೆ ಇಟ್ಟರೆ ಆರ್ಥಿಕ ಲಾಭವಾಗುತ್ತದೆ. ಲಕ್ಷ್ಮೀ ಸದಾ ನಿಮ್ಮನ್ನು ಆಶೀರ್ವದಿಸುತ್ತಾಳೆ. ದಕ್ಷಿಣವನ್ನು ಯಮನ ದಿಕ್ಕು ಎನ್ನಲಾಗುತ್ತದೆ. ದೀಪದ ಜ್ವಾಲೆಯನ್ನು ದಕ್ಷಿಣಕ್ಕೆ ಇಡುವುದರಿಂದ ಮನೆಯಲ್ಲಿ ನಾನಾ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಜ್ವಾಲೆಯನ್ನು ದಕ್ಷಿಣ ದಿಕ್ಕಿಗೆ ಇಡಬಾರದು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.