ಶುಭ ಮುಹೂರ್ತಗಳು 2024: ಡಿಸೆಂಬರ್ 13ರವರೆಗೆ ಶುಭ ಲಗ್ನಗಳು ಇರುವುದೇ? ಈ 5 ದಿನ ಮಾತ್ರ ಶುಭಕಾರ್ಯಗಳಿಗೆ ಅನುಕೂಲಕರ
ಶುಭ ಮುಹೂರ್ತಗಳು 2024: ನವೆಂಬರ್ 28ರಿಂದ ಡಿಸೆಂಬರ್ 13ರವರೆಗೆ ಶುಭಕಾರ್ಯಗಳಿಗೆ ಶುಭ ಲಗ್ನಗಳು ಯಾವಾಗ ಇದೆ ಎಂಬ ಮಾಹಿತಿಯನ್ನು ಬೆಂಗಳೂರಿನ ಜನಪ್ರಿಯ ಜ್ಯೋತಿಷಿ ಎಚ್. ಸತೀಶ್ ಇಲ್ಲಿ ನೀಡಿದ್ದಾರೆ. ಇದೇ ಸಮಯದಲ್ಲಿ ಯಾವಾಗ ಶುಭಕಾರ್ಯ ಬೇಡ ಎಂಬ ವಿವರವನ್ನೂ ನೀಡಿದ್ದಾರೆ.
ಶುಭ ಮುಹೂರ್ತಗಳು 2024: ನವೆಂಬರ್ 28ರಿಂದ ಡಿಸೆಂಬರ್ ತಿಂಗಳ 13ನೇ ದಿನಾಂಕದವರೆಗೂ ಆಯ್ದ ದಿನಗಳಲ್ಲಿ ಶುಭಮುಹೂರ್ತಗಳು ದೊರೆಯುತ್ತವೆ. ಆದರೆ, ತಾರಾಬಲವನ್ನು ಅವಶ್ಯಕವಾಗಿ ನೋಡಬೇಕಾಗುತ್ತದೆ. ಕೆಲವೊಮ್ಮೆ ನಿರ್ದಿಷ್ಟವಾದ ಪದಾರ್ಥಗಳನ್ನು ದಾನ ನೀಡುವುದರಿಂದ ಲಗ್ನ ಅಥವಾ ಮುಹೂರ್ತಕ್ಕೆ ಸಂಬಂಧಿಸಿದ ದೋಷಗಳು ನಿವಾರಣೆ ಆಗುತ್ತವೆ. ಮುಹೂರ್ತದ ವಿಚಾರದಲ್ಲಿ ಆ ದಿನದ ನಕ್ಷತ್ರ ಮತ್ತು ತಿಥಿಯನ್ನು ಪರಿಗಣಿಸಬೇಕು. ಸಾಮಾನ್ಯವಾಗಿ ಮಂಗಳವಾರ ಮತ್ತು ಶನಿವಾರಗಳಂದು ಯಾವುದೇ ಮುಹೂರ್ತಗಳನ್ನು ಇಡಬಾರದು. ಇದೇ ರೀತಿ ಪಾಡ್ಯ, ಚೌತಿ, ಷಷ್ಠಿ, ಅಷ್ಟಮಿ,ನವಮಿ,ದ್ವಾದಶಿ,ಚತುರ್ದಶಿ,ಹುಣ್ಣಿಮೆ ಮತ್ತು ಅಮಾವಾಸ್ಯೆಗಳ ದಿನಗಳಂದು ಮುಹೂರ್ತಗಳನ್ನು ನಿರ್ಣಯಿಸಬಾರದು. ಹುಣ್ಣಿಮೆಯ ನಂತರ ಅಂದರೆ ಕೃಷ್ಣಪಕ್ಷದಲ್ಲಿ ಪಂಚಮಿಯ ದಿನದವರೆಗೆ ಮಾತ್ರ ಮುಹೂರ್ತಗಳನ್ನು ಇಡಬಹುದು.
ನವಂಬರ್ 28
ಈ ದಿನ ಗುರುವಾರವಾಗಿದ್ದು ತ್ರಯೋದಶಿ ತಿಥಿ ದಿನಪೂರ್ತಿ ಇದೆ. ಚಿತ್ತ ನಕ್ಷತ್ರವು ಬೆಳಿಗ್ಗೆ 7.32ರವರೆಗೂ ಇದೆ. ಇದಾದ ಬಳಿಕ ಸ್ವಾತಿ ನಕ್ಷತ್ರ ಆರಂಭವಾಗುತ್ತದೆ. ಸ್ವಾತಿನಕ್ಷತ್ರವು ಮಹಾನಕ್ಷತ್ರವಾದ ಕಾರಣ ಆ ದಿನದಂದು ಶುಭಕಾರ್ಯಗಳನ್ನು ಮಾಡಬಹುದಾಗಿದೆ. ಆದರೆ, ಮನೆದೇವರಿಗೆ ಸಂಬಂಧಿಸಿದ ಹೋಮವನ್ನು ಅವಶ್ಯವಾಗಿ ಮಾಡಬೇಕು. ಚಂದ್ರಗ್ರಹದ ಶಾಂತಿಯನ್ನು ಮಾಡಬೇಕು. 11.55 ರಿಂದ 12.30ರವೆಗೆ ಉತ್ತಮ ಸಮಯವಾಗಿದೆ.
ಈ ದಿನದಂದು ನಾಮಕರಣ, ತೊಟ್ಟಿಲು ತೂಗುವುದು, ಅಕ್ಷರಾಭ್ಯಾಸ, ವಿದ್ಯಾರಂಭ, ವಿವಾಹ, ಹೊಸ ಬಟ್ಟೆ ಧರಿಸಲು, ಔಷಧಿ ಸೇವಿಸಲು ಉತ್ತಮ ದಿನವಾಗಿದೆ.
ಅಶ್ವಿನಿ, ಮಖ, ಮೂಲ, ಕೃತ್ತಿಕ, ಉತ್ತರ, ಉತ್ತರಾಷಾಡ, ಮೃಗಶಿರ, ಚಿತ್ತ, ಧನಿಷ್ಠ, ಪುನರ್ವಸು, ವಿಶಾಖ, ಪೂರ್ವಾಭಾದ್ರ, ಪುಷ್ಯ, ಅನುರಾದ, ಉತ್ತರಾಭಾದ್ರ ನಕ್ಷತ್ರಗಳಲ್ಲಿ ಜನಿಸಿರುವವರಿಗೆ ಈ ದಿನ ಪ್ರಸಕ್ತವಾಗಿದೆ.
ಡಿಸೆಂಬರ್ 4
ಈ ದಿನದಂದು ಬುಧವಾರವಾಗಿದ್ದು ತದಿಗೆ ತಿಥಿ ಇರುತ್ತದೆ. ಪೂರ್ವಾಷಾಡ ನಕ್ಷತ್ರವಿದೆ. ಈ ದಿನದಂದು 11.15 ರಿಂದ 11.45 ರವೆಗೆ ಉತ್ತಮ ಸಮಯವಾಗಿದೆ.
ಈ ದಿನ ವಿದ್ಯಾರಂಭಕ್ಕೆ ಹೆಚ್ಚು ಸೂಕ್ತವಾಗಿದೆ. ಅನಿವಾರ್ಯವಾದರೆ ಮಾತ್ರ ಉಳಿದ ಶುಭಕಾರ್ಯಗಳನ್ನು ಮಾಡಬಹುದು. ಆದರೆ, ಶುಕ್ರಶಾಂತಿ ಮಾಡಬೇಕಾಗುತ್ತದೆ.
ಅಶ್ವಿನಿ, ಮಖ, ಮೂಲ, ಕೃತ್ತಿಕ, ಉತ್ತರ, ಉತ್ತರಾಷಾಡ, ರೋಹಿಣಿ, ಹಸ್ತ, ಶ್ರವಣ, ಆರಿದ್ರ, ಸ್ವಾತಿ, ಶತಭಿಷ, ಪುಷ್ಯ, ಅನುರಾದ, ಉತ್ತರಾಭಾದ್ರ ,ನಕ್ಷತ್ರಗಳಲ್ಲಿ ಜನಿಸಿರುವವರಿಗೆ ಈ ದಿನ ಉತ್ತಮವಾಗಿದೆ.
ಡಿಸೆಂಬರ್ 6
ಈ ದಿನದಂದು ಶುಕ್ರವಾರವಾಗಿದ್ದು ಪಂಚಮಿ ತಿಥಿಯು ಬೆಳಿಗ್ಗೆ 10.37 ರವರೆಗೂ ಇರುತ್ತದೆ. ಆದ್ದರಿಂದ, ಈ ದಿನದಂದು ಯಾವುದೇ ಕೆಲಸವಾದರು ಬೆಳಗ್ಗೆ 10.37ರ ಒಳಗೆ ಮಾಡಬೇಕಾಗುತ್ತದೆ. ಆ ನಂತರ ಆರಂಭಿಸಿದ ಕೆಲಸವನ್ನು ಮುಂದುವರೆಸಬಹುದು. ಶ್ರವಣ ನಕ್ಷತ್ರವು ಶುಭನಕ್ಷತ್ರವಾಗಿದೆ.
ಈ ದಿನದಂದು ನಾಮಕರಣ, ಅನ್ನಪ್ರಾಶನ, ಕಿವಿಚುಚ್ಚುವುದು, ಅಕ್ಷರಾಭ್ಯಾಸ, ಪ್ರಯಾಣ, ಬಾವಿ ತೋಡುವುದು, ಔಷಧಿ ಸೇವನೆಗೆ ಉತ್ತಮ ದಿನವಾಗಿದೆ. ಬೆ. 6.30 ರಿಂದ 7.15 ಉತ್ತಮ ಕಾಲವಾಗಿದೆ. ಆದರೆ ಶನಿಯ ಶಾಂತಿಯನ್ನು ಮಾಡಬೇಕು.
ಅಶ್ವಿನಿ, ಮಖ, ಮೂಲ, ಕೃತ್ತಿಕ, ಉತ್ತರ, ಉತ್ತರಾಷಾಡ, ಮೃಗಶಿರ, ಚಿತ್ತ, ಧನಿಷ್ಠ, ಆರಿದ್ರ, ಸ್ವಾತಿ, ಶತಭಿಷ, ಪುಷ್ಯ, ಅನುರಾದ, ಉತ್ತರಾಭಾದ್ರ ನಕ್ಷತ್ರಗಳಲ್ಲಿ ಜನಿಸಿರುವವರಿಗೆ ಈ ದಿನ ಪ್ರಸಕ್ತವಾಗಿದೆ.
ಡಿಸೆಂಬರ್ 11
ಈ ದಿನದಂದು ಬುಧವಾರವಿದ್ದು ರಾತ್ರಿ 10.32ರವರೆಗೆ ಏಕಾದಶಿ ತಿಥಿ ಇದ್ದು, ರೇವತಿ ನಕ್ಷತ್ರವು ಬೆ. 9.53 ರವರೆಗೂ ಇರುತ್ತದೆ.
ಈ ದಿನದಂದು ಶಿಶುವಿಗೆ ಹೊಸ ಬಟ್ಟೆಯನ್ನು ಧರಿಸಲು, ಹೊಸಬಟ್ಟೆ ಧರಿಸಲು, ಪ್ರಯಾಣಕ್ಕೆ, ಬಾವಿ ತೋಡಲು, ಗೃಹಪ್ರವೇಶಕ್ಕೆ ಸೂಕ್ತವಾಗಿದೆ. ಈ ದಿನದಂದು ಬೆ. 6.30 ರಿಂದ 7.15 ಉತ್ತಮ ಕಾಲವಾಗಿದೆ. ಆದರೆ ಶನಿಯ ಶಾಂತಿಯನ್ನು ಮಾಡಬೇಕು.
ಈ ಅವದಿಯು ಅಶ್ವಿನಿ, ಮಖ, ಮೂಲ, ಭರಣಿ, ಪುಬ್ಬ, ಪೂರ್ವಾಷಾಡ, ರೋಹಿಣಿ, ಹಸ್ತ, ಶ್ರವಣ, ಸ್ವಾತಿ, ಶತಭಿಷ,ಆರಿದ್ರ, ಪುಷ್ಯ, ಅನುರಾದ, ಉತ್ತರಾಭಾದ್ರ ನಕ್ಷತ್ರಗಳಲ್ಲಿ ಜನಿಸಿರುವವರಿಗೆ ಪ್ರಸಕ್ತವಾಗಿದೆ.
ಡಿಸೆಂಬರ್ 11
ಈ ದಿನದಂದು ಬುಧವಾರವಿದ್ದು ರಾತ್ರಿ 10.32ರವರೆಗೆ ಏಕಾದಶಿ ತಿಥಿ ಇದ್ದು, ಬೆ. 9.53 ರ ನಂತರ ಅಶ್ವಿನಿ ನಕ್ಷತ್ರವು ಆರಂಭವಾಗುತ್ತದೆ. ಕೇತುವಿನ ಶಾಂತಿ ಮಾಡಬೇಕು. 10.45 ರಿಂದ 11.30ರವರೆಗೂ ಉತ್ತಮ ವೇಳೆಯಾಗಿದೆ.
ಈ ದಿನದಂದು ನಾಮಕರಣ, ಶಿಶುವಿಗೆ ನೂತನ ವಸ್ತ್ರಧಾರಣೆ, ತೊಟ್ಟಿಲು ತೂಗುವುದು, ಮೊದಲ ಬಾರಿ ಅನ್ನ ತಿನ್ನಿಸುವುದು, ಅಕ್ಷರಾಭ್ಯಾಸ, ಓದಲು ಆರಂಭಿಸುವುದು, ಪ್ರಯಾಣ ಮಾಡುವುದು, ಮನೆಕಟ್ಟಲು ಆರಂಭಿಸುವ ಕೆಲಸಗಳನ್ನು ಮಾಡಬಹುದು.
ಈ ಅವಧಿಯು ಪುಬ್ಬ, ಪೂರ್ವಾಷಾಡ, ಭರಣಿ, ಕೃತ್ತಿಕ, ಉತ್ತರ, ಉತ್ತರಾಷಾಡ, ಮೃಗಶಿರ, ಚಿತ್ತ, ಧನಿಷ್ಠ, ಪುನರ್ವಸು, ವಿಶಾಖ, ಪೂರ್ವಭಾದ್ರ, ಆಶ್ಲೇಷ, ಜೇಷ್ಠ, ರೇವತಿ ನಕ್ಷತ್ರಗಳಲ್ಲಿ ಜನಿಸಿರುವವರಿಗೆ ಹೆಚ್ಚು ಅನುಕೂಲಕರವಾಗಿದೆ.
ಬರಹ: ಎಚ್. ಸತೀಶ್, ಜ್ಯೋತಿಷಿ, ಬೆಂಗಳೂರು
ಡಿಸ್‌ಕ್ಲೈಮರ್/ಹಕ್ಕುತ್ಯಾಗ: ಗಮನಿಸಿ ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.