Akshardham: ಭಾರತದಲ್ಲಲ್ಲ, ಈ ದೇಶದಲ್ಲಿದೆ ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ; ಅಕ್ಷರಧಾಮ ಕುರಿತ ಆಸಕ್ತಿಕರ ವಿಚಾರ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Akshardham: ಭಾರತದಲ್ಲಲ್ಲ, ಈ ದೇಶದಲ್ಲಿದೆ ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ; ಅಕ್ಷರಧಾಮ ಕುರಿತ ಆಸಕ್ತಿಕರ ವಿಚಾರ ಇಲ್ಲಿದೆ

Akshardham: ಭಾರತದಲ್ಲಲ್ಲ, ಈ ದೇಶದಲ್ಲಿದೆ ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ; ಅಕ್ಷರಧಾಮ ಕುರಿತ ಆಸಕ್ತಿಕರ ವಿಚಾರ ಇಲ್ಲಿದೆ

ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯವಿರುವುದು ಖಂಡಿತ ಭಾರತದಲ್ಲಲ್ಲ. ಹಾಗಾದ್ರೆ ಈ ದೇಗುಲ ಇರುವುದು ಎಲ್ಲಿ, ಏನಿದರ ವಿಶೇಷ, ಈ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.

ಅಕ್ಷರಧಾಮದ ನೋಟ
ಅಕ್ಷರಧಾಮದ ನೋಟ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದು ಬಹುಕೋಟಿ ಹಿಂದೂಗಳ ಕನಸು. ಸುಮಾರು 700 ವರ್ಷಗಳ ವಿವಾದಕ್ಕೆ ತೆರೆ ಬಿದ್ದು, ಇದೀಗ 71 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ರಾಮನ ದೇಗುಲ ನಿರ್ಮಾಣವಾಗುತ್ತಿದೆ. ಈ ಹೊತ್ತಿನಲ್ಲಿ ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ ಯಾವುದು, ಅದು ಎಲ್ಲಿದೆ ಎಂದು ಎಲ್ಲರೂ ಯೋಚಿಸಬಹುದು. ಹೌದು ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯವಿರುವುದು, ಭಾರತದಲ್ಲಲ್ಲ. ಇದು ಇರುವುದು ಅಮೆರಿಕದಲ್ಲಿ.

ಅಮೆರಿಕ ನ್ಯೂ ಜೆರ್ಸಿಯಲ್ಲಿ ಕಳೆದ ವರ್ಷ ಅಂದರೆ 2023ರಲ್ಲಿ ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ ಉದ್ಘಾಟನೆಯಾಗಿದೆ. ಸ್ವಾಮಿನಾರಾಯಣ ಅಕ್ಷರಧಾಮ ಎಂದೂ ಇದನ್ನು ಕರೆಯಲಾಗುತ್ತದೆ. ಇದು ಸುಮಾರು 185 ಎಕರೆ ವಿಸ್ತೀರ್ಣದಲ್ಲಿದೆ.

ಭಗವಾನ್‌ ಸ್ವಾಮಿನಾರಾಯಣನಿಗೆ ಸಮರ್ಪಿತವಾದ ದೇವಾಲಯ ಇದಾಗಿದೆ. 2011ರಲ್ಲಿ ಈ ದೇವಾಲಯವನ್ನು ಕಟ್ಟಲು ಆರಂಭಿಸಲಾಗಿತ್ತು. 2023ರಲ್ಲಿ ದೇವಾಲಯ ಸಂಪೂರ್ಣಗೊಂಡಿದೆ. ಜಗತ್ತಿನ ವಿವಿಧ ಭಾಗದ 12,500 ಸ್ವಯಂ ಸೇವಕರು ಈ ದೇಗುಲವನ್ನು ಕಟ್ಟಿಸುವಾಗ ಕೈಜೋಡಿಸಿದ್ದರು. ಇದರಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಎಲ್ಲರೂ ಇದ್ದರು. ತಮ್ಮ ಓದು, ಉದ್ಯೋಗಕ್ಕೆ ವಿರಾಮ ತೆಗೆದುಕೊಂಡು ಕೆಲವು ದಿನಗಳು, ತಿಂಗಳುಗಳ ಕಾಲ ದೇವಾಲಯ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.

ಇದನ್ನೂ ಓದಿ: Ayodhya: ಜ 22 ಕ್ಕೆ ಅಯೋಧ್ಯೆಯಲ್ಲಿ ರಾಮ ವಿಗ್ರಹದ ಪ್ರಾಣಪ್ರತಿಷ್ಠೆ, ಆರಂಭವಾಗಿದೆ ಅಕ್ಷತೆ ಹಂಚಿಕೆ; ಇಲ್ಲಿದೆ ಕಾರ್ಯಕ್ರಮ ವಿವರ

ಈ ದೇವಾಲಯವನ್ನು ನಿರ್ಮಿಸಲು 1.9 ಮಿಲಿಯನ್ ಘನ ಅಡಿ ಕಲ್ಲುಗಳನ್ನು ಬಳಸಲಾಗಿತ್ತು. ಇದನ್ನು ಪ್ರಪಂಚದಾದ್ಯಂತ 29ಕ್ಕೂ ಹೆಚ್ಚು ವಿವಿಧ ಸ್ಥಳಗಳಿಂದ ತರಲಾಗಿತ್ತು. ಇದರಲ್ಲಿ ಭಾರತದಿಂದ ಗ್ರಾನೈಟ್, ರಾಜಸ್ಥಾನದಿಂದ ಮರಳುಗಲ್ಲು, ಮ್ಯಾನ್ಮಾರ್‌ನಿಂದ ತೇಗದ ಮರ, ಗ್ರೀಸ್, ಟರ್ಕಿ ಮತ್ತು ಇಟಲಿಯಿಂದ ಅಮೃತಶಿಲೆ, ಬಲ್ಗೇರಿಯಾ ಮತ್ತು ಟರ್ಕಿ ಸುಣ್ಣದ ಕಲ್ಲುಗಳು ಸೇರಿವೆ.

ದೇವಾಲಯದಲ್ಲಿ 10,000 ಪ್ರತಿಮೆಗಳಿವೆ ಮತ್ತು ದೇವಾಲಯವನ್ನು ನಿರ್ಮಿಸಲು ಭಾರತೀಯ ವಾಸ್ತುಶಿಲ್ಪ ಮತ್ತು ಸಂಸ್ಕೃತಿಯ ಅಂಶಗಳನ್ನು ಬಳಸಲಾಗಿದೆ.

ನ್ಯೂ ಜೆರ್ಸಿಯ ರಾಬಿನ್ಸ್‌ವಿಲ್ಲೆಯಲ್ಲಿರುವ ಅಕ್ಷರಧಾಮ ಮಹಾಮಂದಿರ 191 ಅಡಿ ಎತ್ತರದ ದೇವಾಲಯವಾಗಿದೆ. ಇಲ್ಲಿದೆ ಪ್ರತಿದಿನ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿನ ವಿಶೇಷವೆಂದರೆ ದೊಡ್ಡ ಅಂಡಾಕಾರದ ಕಲ್ಲಿನ ಗೊಮ್ಮಟ.

ಈ ದೇವಾಲಯದ ಕುರಿತ ಒಂದಿಷ್ಟು ಆಸಕ್ತಿದಾಯಕ ವಿಚಾರಗಳು

* ಈ ದೇವಾಲಯವನ್ನು 2011ರಲ್ಲಿ ಆರಂಭಿಸಿ 2023ರಲ್ಲಿ ಮುಗಿಸಲಾಯಿತು.

* 183 ಎಕರೆ ವಿಸ್ತೀರ್ಣದಲ್ಲಿರುವ ಅಕ್ಷರಧಾಮವು 255 ಅಡಿ x 345 ಅಡಿ x 191 ಅಡಿ ಅಳತೆಯನ್ನು ಹೊಂದಿದೆ.

* ದೇವಾಲಯವನ್ನು ಪ್ರಾಚೀನ ಹಿಂದೂ ಧರ್ಮಗ್ರಂಥಗಳ ಪ್ರಕಾರ ವಿನ್ಯಾಸಗೊಳಿಸಲಾಗಿದೆ. 10,000 ಪ್ರತಿಮೆಗಳು, ಭಾರತೀಯ ಸಂಗೀತ ವಾದ್ಯಗಳ ಕೆತ್ತನೆಗಳು ಮತ್ತು ನೃತ್ಯ ಪ್ರಕಾರಗಳನ್ನು ಒಳಗೊಂಡಂತೆ ಪ್ರಾಚೀನ ಭಾರತೀಯ ಸಂಸ್ಕೃತಿಯ ವಿನ್ಯಾಸ ಅಂಶಗಳನ್ನು ಒಳಗೊಂಡಿದೆ.

* ಇದು ಕಾಂಬೋಡಿಯಾದ ಅಂಕೋರ್ ವಾಟ್ ನಂತರ ಎರಡನೇ ದೊಡ್ಡ ದೇವಾಲಯವಾಗಿದೆ.

* ಅತಿದೊಡ್ಡ ಅಂಡಾಕಾರದ ಗುಮ್ಮಟವನ್ನು ಹೊಂದಿರುವ ಈ ದೇವಾಲಯವನ್ನು ಸಾವಿರ ವರ್ಷ ಬಾಳಿಕೆ ಬರುವಂತೆ ನಿರ್ಮಿಸಲಾಗಿದೆ.

* ಇಲ್ಲಿರುವ ಬ್ರಹ್ಮಕುಂಡವು ಭಾರತದ ಪವಿತ್ರ ನದಿಗಳೂ ಸೇರಿದಂತೆ ಅಮೆರಿಕದಲ್ಲಿ ಹರಿಯುತ್ತಿರುವ 50 ನದಿಗಳ ನೀರನ್ನು ಒಳಗೊಂಡಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.