ಪ್ರದಕ್ಷಿಣೆಯಲ್ಲಿ ಹಲವು ವಿಧ: ದೇಗುಲಗಳಲ್ಲಿ ಯಾವ ರೀತಿ ಪ್ರದಕ್ಷಿಣೆ ಹಾಕಿದರೆ ಉತ್ತಮ ಫಲ -ಇಲ್ಲಿದೆ ವಿವರ-rituals types and benefits of temple pradakshina how many pradakshina to do in temple arc ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪ್ರದಕ್ಷಿಣೆಯಲ್ಲಿ ಹಲವು ವಿಧ: ದೇಗುಲಗಳಲ್ಲಿ ಯಾವ ರೀತಿ ಪ್ರದಕ್ಷಿಣೆ ಹಾಕಿದರೆ ಉತ್ತಮ ಫಲ -ಇಲ್ಲಿದೆ ವಿವರ

ಪ್ರದಕ್ಷಿಣೆಯಲ್ಲಿ ಹಲವು ವಿಧ: ದೇಗುಲಗಳಲ್ಲಿ ಯಾವ ರೀತಿ ಪ್ರದಕ್ಷಿಣೆ ಹಾಕಿದರೆ ಉತ್ತಮ ಫಲ -ಇಲ್ಲಿದೆ ವಿವರ

Pradakshina In Temple: ದೇವಸ್ಥಾನಕ್ಕೆ ಹೋದವರೆಲ್ಲ ಪ್ರದಕ್ಷಿಣೆ ಹಾಕದೇ ಬರುವುದೇ ಇಲ್ಲ. ಆದರೆ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು? ಎಷ್ಟು ಪ್ರದಕ್ಷಿಣೆ ಹಾಕುವುದರಿಂದ ಯಾವ ರೀತಿಯ ಫಲಿತಾಂಶಗಳನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ. (ಬರಹ: ಅರ್ಚನಾ ವಿ. ಭಟ್‌)

ಪ್ರದಕ್ಷಿಣೆಯಲ್ಲಿ ಹಲವು ವಿಧ: ದೇಗುಲಗಳಲ್ಲಿ ಯಾವ ರೀತಿ ಪ್ರದಕ್ಷಿಣೆ ಹಾಕಿದರೆ ಉತ್ತಮ ಫಲ, ತಿಳಿದುಕೊಳ್ಳಿ. (ಸಾಂದರ್ಭಿಕ ಚಿತ್ರ)
ಪ್ರದಕ್ಷಿಣೆಯಲ್ಲಿ ಹಲವು ವಿಧ: ದೇಗುಲಗಳಲ್ಲಿ ಯಾವ ರೀತಿ ಪ್ರದಕ್ಷಿಣೆ ಹಾಕಿದರೆ ಉತ್ತಮ ಫಲ, ತಿಳಿದುಕೊಳ್ಳಿ. (ಸಾಂದರ್ಭಿಕ ಚಿತ್ರ) (PC: HT File Photo)

ಸಾಮಾನ್ಯವಾಗಿ ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಾರೆ. ಕೆಲವರು ಮನಸ್ಸಿನ ಶಾಂತಿಗಾಗಿ ಹೋದರೆ ಇನ್ನು ಕೆಲವರು ದೇವರ ಅನುಗ್ರಹ ಪಡೆಯಲು ಹೋಗುತ್ತಾರೆ. ಒಟ್ಟಾರೆ ಎಲ್ಲರೂ ತಮ್ಮ ಕಷ್ಟ, ದುಃಖ, ಸುಖ, ಸಂತೋಷ ಎಲ್ಲಾ ಸಂದರ್ಭಗಳಲ್ಲೂ ದೇವರನ್ನು ನೆನೆಯುತ್ತಾರೆ. ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಬೇಡಿಕೊಳ್ಳುತ್ತಾ, ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ಅದೊಂದು ಆಚರಣೆ. ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಸಾಮಾನ್ಯವಾಗಿ ದೇವಸ್ಥಾನದಲ್ಲಿ ಸರಿಯಾಗಿ ಮೂರು ಪ್ರದಕ್ಷಿಣೆ ಹಾಕಲಾಗುತ್ತದೆ. ಕೆಲವರು 108, 101 ಹೀಗೆ ಪ್ರದಕ್ಷಿಣೆ ಹಾಕುತ್ತಾರೆ. ಅದು ಹರಕೆ ಮಾಡಿಕೊಂಡಿದ್ದರೆ ಅದನ್ನು ತೀರಸುವ ಸಮಯದಲ್ಲಿ ಮಾಡಲಾಗುತ್ತದೆ. ಆದರೆ ದೇವಸ್ಥಾನದಲ್ಲಿ ಎಷ್ಟು ಪ್ರದಕ್ಷಿಣೆ ಹಾಕಬೇಕು ಎಂಬುದನ್ನು ಒಬ್ಬೊಬ್ಬರು ಒಂದೊಂದು ರೀತಿಯಾಗಿ ಹೇಳುತ್ತಾರೆ. 3, 5, 11 ಬಾರಿ ಪ್ರದಕ್ಷಿಣೆ ಮಾಡುವಂತೆ ಸಲಹೆ ನೀಡುತ್ತಾರೆ. ಆದರೆ ಎಷ್ಟೇ ಪ್ರದಕ್ಷಿಣೆ ಮಾಡಿದರೂ ಅದು ಬೆಸ ಸಂಖ್ಯೆಯೇ ಇರುತ್ತದೆ. ಯಾವುದೇ ದೇವರ ದೇವಸ್ಥಾನಕ್ಕೆ ಭೇಟಿ ನೀಡಿ ಆ ದೇವರ ಸ್ತೋತ್ರವನ್ನು ಪಠಿಸುತ್ತಾ ಪ್ರದಕ್ಷಿಣೆ ಹಾಕುವುದು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಸಶರೀರ ಬೃಂದಾವನಸ್ಥರಾದ ಕಲಿಯುಗದ ಕಾಮಧೇನು ಗುರು ರಾಘವೇಂದ್ರರ ಆರಾಧನೆ ಯಾವಾಗ? ಇಲ್ಲಿದೆ ವಿವರ

ಪ್ರದಕ್ಷಿಣೆಯಲ್ಲಿ ಎಷ್ಟು ವಿಧ?

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಪಂಚಭೂತಗಳಿಗೆ ಸಮನಾಗಿರುವ ದೇವರುಗಳನ್ನು ಒಂದೊಂದು ರೀತಿಯಲ್ಲಿ ಪೂಜಿಸಲಾಗುತ್ತದೆ. ದೇವಾಲಯಕ್ಕೆ ಭೇಟಿ ನೀಡುವಾಗ ಪ್ರದಕ್ಷಿಣೆ ಮಾಡುವುದರಿಂದ ಪಾಪಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ದೇವಾಲಯವನ್ನು ಪ್ರದಕ್ಷಿಣೆ ಮಾಡುವುದು ಎಂದರೆ ದೇವರನ್ನು ಪ್ರದಕ್ಷಿಣೆ ಮಾಡುವುದು ಎಂದು ಭಕ್ತರು ನಂಬಿದ್ದಾರೆ. ಪ್ರದಕ್ಷಿಣೆಯಲ್ಲಿ ಎರಡು ವಿಧ ಎಂದು ಹೇಳಲಾಗುತ್ತದೆ. ಒಂದು ಆತ್ಮ ಪ್ರದಕ್ಷಿಣೆ ಮತ್ತು ಇನ್ನೊಂದು ದೇವಾಲಯದಲ್ಲಿನ ಗರ್ಭಗುಡಿ ಅಥವಾ ವಿಗ್ರಹದ ಸುತ್ತಲೂ ಮಾಡುವ ಪ್ರದಕ್ಷಿಣೆ. ಶಾಸ್ತ್ರಗಳ ಪ್ರಕಾರ, ದೇವಾಲಯದ ನಾಲ್ಕು ಬದಿಗಳಲ್ಲಿ ವಿವಿಧ ದೇವತೆಗಳು ನೆಲೆಸಿರುತ್ತಾರೆ. ಅವರ ಅನುಗ್ರಹಕ್ಕಾಗಿ ಈ ಪ್ರದಕ್ಷಿಣೆಯನ್ನು ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.

ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ?

ಸಾಮಾನ್ಯವಾಗಿ ದೇವಸ್ಥಾನದಲ್ಲಿ ಮೂರು ಪ್ರದಕ್ಷಿಣೆ ಹಾಕುವುದನ್ನು ಕಾಣಬಹುದು. ಆದರೆ ಶಾಸ್ತ್ರಗಳ ಪ್ರಕಾರ ಗಣೇಶನ ದೇವಸ್ಥಾನದಲ್ಲಿ 3 ಪ್ರದಕ್ಷಿಣೆ ಮಾಡಬೇಕು. ಹನುಮಂತನ ದೇವಸ್ಥಾನದಲ್ಲಿ 5 ಪ್ರದಕ್ಷಿಣೆಗಳನ್ನು ಮಾಡಬೇಕು. ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಐದು ಪ್ರದಕ್ಷಿಣೆಗಳನ್ನು ಮಾಡಬೇಕು. ವಿಷ್ಣುವಿನ ಅವತಾರಗಳಿರುವ ದೇವಾಲಯದಲ್ಲಿ ನಾಲ್ಕು ಪ್ರದಕ್ಷಿಣೆಗಳನ್ನು ಮಾಡುವುದು ಮಂಗಳಕರವೆಂದು ಹೇಳಲಾಗುತ್ತದೆ. ಸೂರ್ಯ ದೇವನಿಗೆ 2 ಪ್ರದಕ್ಷಿಣೆ ಮಾಡಬೇಕು. ಅರಳಿಮರಕ್ಕೆ 108 ಪ್ರದಕ್ಷಿಣೆ ಮಾಡಿದರೆ ಎಲ್ಲಾ ಆರ್ಥಿಕ ಸಮಸ್ಯೆಗಳು ಮತ್ತು ಪಾಪಗಳು ದೂರವಾಗುತ್ತವೆ. ನವಗ್ರಹದ ಸುತ್ತ ಕನಿಷ್ಠ 3 ಬಾರಿ ಪ್ರದಕ್ಷಿಣೆ ಮಾಡಬೇಕು. ಆದರೆ ಜಾತಕದಲ್ಲಿ ನವಗ್ರಹಗಳ ದೋಷವಿದ್ದರೆ 11, 21, 27 ಹೀಗೆ ಪ್ರದಕ್ಷಿಣೆಯನ್ನು ಹಾಕಲು ಹೇಳಲಾಗುತ್ತದೆ. ಗ್ರಾಮ ದೇವರಿಗೆ 9 ಪ್ರದಕ್ಷಿಣೆ ಮಾಡಬೇಕು. ಅದೇ ಶನಿದೇವರಿಗೆ 7 ಪ್ರದಕ್ಷಿಣೆ ಮಾಡಲಾಗುತ್ತದೆ. ಶನಿ ದೇವರಿಗೆ ಪ್ರದಕ್ಷಿಣೆ ಮಾಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ.

ಪ್ರದಕ್ಷಿಣೆ ಮಾಡುವ ಸರಿಯಾದ ಕ್ರಮ ಯಾವುದು?

ಪ್ರದಕ್ಷಿಣೆ ಹಾಕುವುದು ಎಂದರೆ ತರಾತುರಿಯಲ್ಲಿ ದೇವಸ್ಥಾನವನ್ನು ಸುತ್ತಿ ಬರುವುದಲ್ಲ. ಮನಸ್ಸಿನಲ್ಲಿ ದೇವರ ಹೆಸರನ್ನು ಸ್ಮರಿಸುತ್ತಾ, ದೇವರಿಗೆ ಸಂಬಂಧಿಸಿ ಮಂತ್ರ ಅಥವಾ ಶ್ಲೋಕಗಳನ್ನು ಪಠಿಸುತ್ತಾ ಪ್ರದಕ್ಷಿಣೆ ಮಾಡಬೇಕು. ಎರಡೂ ಕೈಗಳನ್ನು ಜೋಡಿಸಿ ಕೈಮುಗಿದು ಪ್ರದಕ್ಷಿಣೆ ಮಾಡಬೇಕು. ಇದಲ್ಲದೆ, ಇತರರೊಂದಿಗೆ ಮಾತನಾಡುತ್ತಾ, ಫೋನ್ ನೋಡುತ್ತಾ ಪ್ರದಕ್ಷಿಣೆ ಹಾಕುವುದಕ್ಕೆ ಯಾವುದೇ ಅರ್ಥವಿಲ್ಲ. ಪ್ರದಕ್ಷಿಣೆಯನ್ನು ಸಹ ಬಹಳ ಶ್ರದ್ಧೆ–ಭಕ್ತಿಯಿಂದ ಮಾಡಬೇಕು.

ಶಿವನ ದೇವಾಲಯದಲ್ಲಿ ಪ್ರದಕ್ಷಿಣೆ ಭಿನ್ನವಾಗಿದೆ

ಶಿವನ ದೇವಾಲಯದಲ್ಲಿ ಪ್ರದಕ್ಷಿಣೆ ಹಾಕುವ ವಿಧಾನ ಸಂಪೂರ್ಣವಾಗಿ ಭಿನ್ನವಾಗಿದೆ. ಶಿವಾಲಯದಲ್ಲಿ ಸೋಮಸೂತ್ರದ ಆಚೆ ಪ್ರದಕ್ಷಿಣೆ ಮಾಡಬಾರದು. ಸೋಮಸೂತ್ರವೆಂದರೆ ಶಿವನ ದೇವಸ್ಥಾನದ ಧ್ವಜಸ್ತಂಭದ ಬಳಿಯಿಂದ ಗರ್ಭಗುಡಿಯ ಹಿಂದಿರುವ ಶಿವನ ಅಭಿಷೇಕದ ನೀರು ಹರಿದು ಹೋಗುವ ಮಾರ್ಗದವರೆಗಿನ ಜಾಗವಾಗಿದೆ. ಸೋಮಸೂತ್ರವನ್ನು ದಾಟಬಾರದು ಎಂದು ಹೇಳುತ್ತಾರೆ. ಏಕೆಂದರೆ ಅದು ಶಿವನ ಅಭಿಷೇಕದ ನೀರು ಹರಿದು ಹೋಗುವ ಮಾರ್ಗವಾಗಿದೆ. ಅದಕ್ಕಾಗಿಯೇ ಆ ಪವಿತ್ರ ಜಲವನ್ನು ದಾಟಬಾರದು ಎಂದು ಹೇಳಲಾಗುತ್ತದೆ. ನೀವು ಸೋಮಸೂತ್ರವನ್ನು ದಾಟಿ ಎಷ್ಟೇ ಪ್ರದಕ್ಷಿಣೆ ಹಾಕಿದರೂ ಅದ್ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಹೇಳಲಾಗುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.