ಚಳಿಗಾಲದಲ್ಲಿ ತಲೆಗೂದಲು ಉದುರುವಿಕೆಯಿಂದ ಬೇಸತ್ತಿದ್ದರೆ ಇಲ್ಲಿದೆ ಪರಿಹಾರ: ನುಗ್ಗೆಸೊಪ್ಪಿನ ಪುಡಿಯನ್ನು ಈ ರೀತಿ ಬಳಸಿ
ಚಳಿಗಾಲದಲ್ಲಿ ತಲೆಗೂದಲು ಉದುರುವಿಕೆ ಸಮಸ್ಯೆ ತುಸು ಹೆಚ್ಚಿರುತ್ತದೆ. ತಂಪಾದ ಗಾಳಿ, ಮಂಜಿನ ವಾತಾವರಣ ಇರುವುದರಿಂದ ಈ ಸಮಸ್ಯೆ ತಲೆದೋರುವುದು ಸಾಮಾನ್ಯ. ಶೀತದ ತಿಂಗಳುಗಳಲ್ಲಿ ತಲೆಗೂದಲು ಉದುರುವಿಕೆಯಿಂದ ಬೇಸತ್ತಿದ್ದರೆ ಅದಕ್ಕೆ ನೈಸರ್ಗಿಕ ಪರಿಹಾರ ಇಲ್ಲಿದೆ. ನುಗ್ಗೆಸೊಪ್ಪಿನ ಪುಡಿಯನ್ನು ಈ ರೀತಿ ಬಳಸಿದರೆ, ಈ ಸಮಸ್ಯೆಯಿಂದ ಮುಕ್ತಿ ಸಿಗಬಹುದು.
ಚಳಿಗಾಲದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅವುಗಳಲ್ಲಿ ತಲೆಗೂದಲು ಉದುರುವ ಸಮಸ್ಯೆಯೂ ಒಂದು. ತಂಪಾದ ಗಾಳಿ, ಸೂರ್ಯನ ಬೆಳಕಿನ ಕೊರತೆ ಮತ್ತು ಒಳಾಂಗಣ ತಾಪಮಾನ ಇವೆಲ್ಲವೂ ದುರ್ಬಲಗೊಂಡ ಕೂದಲಿನ ಎಳೆಗಳಿಗೆ ಕಾರಣವಾಗಬಹುದು. ಚಳಿಗಾಲದ ತಿಂಗಳುಗಳಲ್ಲಿ ಕೂದಲು ಉದುರುವಿಕೆಯ ಸಮಸ್ಯೆಯಿಂದ ಅನೇಕರು ಹೆಣಗಾಡುತ್ತಾರೆ. ತಲೆಗೂದಲು ಹೆಚ್ಚಿನ ಪ್ರಮಾಣದಲ್ಲಿ ಉದುರುವುದರಿಂದ ಚಿಂತೆಗೀಡಾಗುವುದು ಸಾಮಾನ್ಯ. ಇದಕ್ಕೆ ನೈಸರ್ಗಿಕವಾಗಿ ಪರಿಹಾರವೂ ಇದೆ. ನುಗ್ಗೆಸೊಪ್ಪಿನ ಪುಡಿ ತಲೆಗೂದಲು ಉದುರುವಿಕೆ ತಡೆಗಟ್ಟಲು ರಾಮಬಾಣವಾಗಿದೆ.
ತಲೆಗೂದಲು ಉದುರುವಿಕೆ ತಡೆಗಟ್ಟಲು ನುಗ್ಗೆಸೊಪ್ಪು ಸಹಕಾರಿ
ನುಗ್ಗೆಸೊಪ್ಪಿನಲ್ಲಿ ಪ್ರಭಾವಶಾಲಿ ಪೌಷ್ಟಿಕಾಂಶ ಇರುವುದರಿಂದ ಶತಮಾನಗಳಿಂದ ಇದನ್ನು ಬಳಸಲಾಗುತ್ತಿದೆ. ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿಂದ ಕೂಡಿದ ಈ ಎಲೆಗಳಿಂದ ಮಾಡಿದ ನುಗ್ಗೆಸೊಪ್ಪಿನ ಪುಡಿಯು ಕೂದಲಿನ ಆರೋಗ್ಯವನ್ನು ಹೆಚ್ಚಿಸಲು ಸಹಾಯಕವಾಗಿದೆ. ಅದರ ಉರಿಯೂತದ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಿಂದ ವಿಟಮಿನ್ ಎ, ಸಿ ಮತ್ತು ಸತುವುಗಳ ಸಮೃದ್ಧ ಅಂಶವಿರುವುದರಿಂದ ಇದನ್ನು ಸೂಪರ್‌ಫುಡ್ ಎಂದೂ ಕರೆಯುತ್ತಾರೆ. ಇದು ಕೂದಲನ್ನು ಒಳಗಿನಿಂದ ಪೋಷಿಸಲು ನೈಸರ್ಗಿಕ ಪರಿಹಾರವಾಗಿದೆ.
ಚಳಿಗಾಲದ ಕೂದಲು ಉದುರುವಿಕೆಗೆ ನುಗ್ಗೆಸೊಪ್ಪಿನ ಪುಡಿ ಹೇಗೆ ಸಹಾಯ ಮಾಡುತ್ತದೆ?
ಚಳಿಗಾಲದಲ್ಲಿ, ಕೂದಲು ಶುಷ್ಕತೆ ಮತ್ತು ಒಡೆಯುವಿಕೆಗೊಂಡಾಗ ದೈನಂದಿನ ದಿನಚರಿಯಲ್ಲಿ ನುಗ್ಗೆಸೊಪ್ಪಿನ ಪುಡಿಯನ್ನು ಸೇರಿಸಬಹುದು. ಇದು ಹಲವು ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ನುಗ್ಗೆಸೊಪ್ಪಿನ ಪೌಡರ್‌ನಲ್ಲಿರುವ ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳು ನೆತ್ತಿಯನ್ನು ರಕ್ಷಿಸುತ್ತವೆ. ಇದರಲ್ಲಿರುವ ಕೊಬ್ಬು ಮತ್ತು ಅಮೈನೋ ಆಮ್ಲಗಳು ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ವಿವಿಧ ರೀತಿಯ ಕೂದಲುಗಳನ್ನು ಪೂರೈಸುವ ಹೇರ್ ಮಾಸ್ಕ್‌ಗಳಿಗಾಗಿ ನುಗ್ಗೆಸೊಪ್ಪಿನ ಪುಡಿಯನ್ನು ವಿವಿಧ ಪದಾರ್ಥಗಳೊಂದಿಗೆ ಬೆರೆಸಬಹುದು. ಎಣ್ಣೆಯುಕ್ತ, ಒಣ ಅಥವಾ ಇತರೆ ಕೂದಲಿನ ಸಮಸ್ಯೆ ಹೊಂದಿದ್ದರೆ, ನುಗ್ಗೆಸೊಪ್ಪಿನ ಪುಡಿಯು ಸಮತೋಲನವನ್ನು ಪುನಃಸ್ಥಾಪಿಸಲು ಮತ್ತು ಚಳಿಗಾಲದಲ್ಲಿ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ನುಗ್ಗೆಸೊಪ್ಪಿನ ಪುಡಿಯನ್ನು ತಲೆಗೂದಲಿಗೆ ಹೇಗೆ ಅನ್ವಯಿಸುವುದು
ಎಣ್ಣೆಯುಕ್ತ ಕೂದಲಿಗೆ ನುಗ್ಗೆಸೊಪ್ಪಿನ ಪುಡಿ ಮತ್ತು ಆಪಲ್ ಸೈಡರ್ ವಿನೆಗರ್ ಪೇಸ್ಟ್ ಮಾಡಬಹುದು. ಈ ಪೇಸ್ಟ್ ಅನ್ನು ರೂಪಿಸಲು 2 ಚಮಚ ನುಗ್ಗೆಸೊಪ್ಪಿನ ಪುಡಿಯನ್ನು 2 ಚಮಚ ಆಪಲ್ ಸೈಡರ್ ವಿನೆಗರ್‌ನೊಂದಿಗೆ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ನೆತ್ತಿ ಮತ್ತು ಕೂದಲಿಗೆ ಅನ್ವಯಿಸಬೇಕು. ಕೂದಲಿನ ಬುಡಕ್ಕೆ ಹಚ್ಚಬೇಕು. ಇದನ್ನು 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಇದು ತೈಲ ಉತ್ಪಾದನೆಯನ್ನು ಸಮತೋಲನಗೊಳಿಸುತ್ತದೆ ಮತ್ತು ತಲೆಹೊಟ್ಟು ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಒಣ ಕೂದಲಿಗೆ ನುಗ್ಗೆಸೊಪ್ಪಿನ ಪುಡಿ ಮತ್ತು ತೆಂಗಿನ ಎಣ್ಣೆಯನ್ನು ಹಾಕುವುದರಿಂದ ತಲೆಗೂದಲನ್ನು ಬುಡದಿಂದ ಹೈಡ್ರೇಟ್ ಮಾಡುತ್ತದೆ. 2 ಟೀ ಚಮಚ ನುಗ್ಗೆಸೊಪ್ಪಿನ ಪುಡಿಗೆ 2 ಟೀ ಚಮಚ ತೆಂಗಿನ ಎಣ್ಣೆಯನ್ನು ಸೇರಿಸಬೇಕು. ಹಚ್ಚುವ ಮೊದಲು ಅದನ್ನು ಸ್ವಲ್ಪ ಬೆಚ್ಚಗಾಗಿಸಬೇಕು. ಎಣ್ಣೆ ಮಿಶ್ರಣವನ್ನು ನೆತ್ತಿಗೆ ಮತ್ತು ಕೂದಲಗೆ ಮಸಾಜ್ ಮಾಡಬೇಕು. ನಂತರ 30 ರಿಂದ 45 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಕೂದಲನ್ನು ತೊಳೆಯಬೇಕು.
ಗುಂಗುರು ಅಥವಾ ಒರಟಾದ ಕೂದಲಿಗೆ ಇಲ್ಲಿದೆ ಪರಿಹಾರ
ಗುಂಗುರು ಅಥವಾ ಒರಟಾದ ಕೂದಲಿಗೆ ಮೃದುವಾದ ವಿನ್ಯಾಸವನ್ನು ಮಾಡಲು ನುಗ್ಗೆಸೊಪ್ಪಿನ ಪುಡಿ ಮತ್ತು ಅಲೋವೆರಾ ಮಾಸ್ಕ್ ಅನ್ನು ಪ್ರಯತ್ನಿಸಬಹುದು. ನಯವಾದ ಪೇಸ್ಟ್ ಅನ್ನು ರೂಪಿಸಲು 2 ಚಮಚ ಮೊರಿಂಗಾ ಪುಡಿಯನ್ನು 2 ಚಮಚ ಅಲೋವೆರಾ ಜೆಲ್ನೊಂದಿಗೆ ಮಿಶ್ರಣ ಮಾಡಬೇಕು. ಒದ್ದೆಯಾದ ಕೂದಲಿಗೆ ಇದನ್ನು ಅನ್ವಯಿಸಬೇಕು. ತುದಿಗಳ ಮೇಲೆ ಕೇಂದ್ರೀಕರಿಸಿ, ಇದನ್ನು 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ನಂತರ ಮೃದುವಾದ ಶಾಂಪೂ ಬಳಸಿ ತೊಳೆಯಿರಿ.
ಒಟ್ಟಾರೆ ಕೂದಲಿನ ಆರೋಗ್ಯಕ್ಕಾಗಿ, ಮೊರಿಂಗಾ ಸ್ಮೂಥಿ ತಯಾರಿಸಿ ಕುಡಿಯುವುದರಿಂದ ಆಂತರಿಕ ಪೋಷಣೆಯನ್ನು ಒದಗಿಸಬಹುದು. 1 ಚಮಚ ಮೊರಿಂಗಾ ಪುಡಿಗೆ 1 ಕಪ್ ಬಾದಾಮಿ ಹಾಲು, ಅರ್ಧ ಬಾಳೆಹಣ್ಣು ಮತ್ತು 1 ಚಮಚ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಬೇಕು. ಈ ಪೋಷಕಾಂಶಯುಕ್ತ ಪ್ಯಾಕ್ಡ್ ಸ್ಮೂಥಿಯು ನೆತ್ತಿಯ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಅಲ್ಲದೆ ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ತಲುಪಿಸುವ ಮೂಲಕ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.
ಒಟ್ಟಿನಲ್ಲಿ ಚಳಿಗಾಲದಲ್ಲಿ ಕೂದಲು ಉದುರುವಿಕೆ ಸಮಸ್ಯೆಯಿಂದ ಪಾರಾಗಲು ನುಗ್ಗೆಸೊಪ್ಪಿನ ಪುಡಿಯನ್ನು ಬಳಸುವುದರಿಂದ ಪ್ರಯೋಜನ ಪಡೆಯಬಹುದು. ಚಳಿಗಾಲ ಮಾತ್ರವಲ್ಲದೆ ಬೇರೆ ಋತುವಿನಲ್ಲೂ ಈ ರೀತಿ ಕೂದಲಿನ ಕಾಳಜಿ ಮಾಡಬಹುದು.