Saphala Ekadashi 2024: ಸಫಲಾ ಏಕಾದಶಿ ಆಚರಿಸುವುದರಿಂದ 100 ಅಶ್ವಮೇಧ ಯಾಗಗಳನ್ನು ಮಾಡಿದ ಫಲ; ಈ ತಿಂಗಳು ಆಚರಣೆ ಯಾವಾಗ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Saphala Ekadashi 2024: ಸಫಲಾ ಏಕಾದಶಿ ಆಚರಿಸುವುದರಿಂದ 100 ಅಶ್ವಮೇಧ ಯಾಗಗಳನ್ನು ಮಾಡಿದ ಫಲ; ಈ ತಿಂಗಳು ಆಚರಣೆ ಯಾವಾಗ?

Saphala Ekadashi 2024: ಸಫಲಾ ಏಕಾದಶಿ ಆಚರಿಸುವುದರಿಂದ 100 ಅಶ್ವಮೇಧ ಯಾಗಗಳನ್ನು ಮಾಡಿದ ಫಲ; ಈ ತಿಂಗಳು ಆಚರಣೆ ಯಾವಾಗ?

ಸಫಲಾ ಏಕಾದಶಿ: ಮಾರ್ಗಶಿರ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಏಕಾದಶಿಯೇ ಸಫಲ ಏಕಾದಶಿ. ಈ ಏಕಾದಶಿಗೂ ಪ್ರತಿ ತಿಂಗಳು ಬರುವ ಏಕಾದಶಿ ತಿಥಿಗಳಿಗೂ ಏನು ವ್ಯತ್ಯಾಸ? ಸಫಲ ಏಕಾದಶಿ ಹಬ್ಬದಂದು ವಿಷ್ಣುವನ್ನು ಪೂಜಿಸುವುದರಿಂದ 100 ಅಶ್ವಮೇಧ ಯಾಗಗಳನ್ನು ಮಾಡಿದ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಸಫಲಾ ಏಕಾದಶಿ 2024
ಸಫಲಾ ಏಕಾದಶಿ 2024

ಹಿಂದೂ ಧರ್ಮದಲ್ಲಿ ಏಕಾದಶಿ ತಿಥಿಗೆ ವಿಶೇಷ ಮಹತ್ವವಿದೆ. ಈ ದಿನ ವಿಷ್ಣುವನ್ನು ಪೂಜಿಸುವುದರಿಂದ ಜೀವನದಲ್ಲಿ ಸಂತೋಷ, ಸಂಪತ್ತು ಮತ್ತು ಶಾಂತಿ ಸಿಗುತ್ತದೆ ಎಂದು ನಂಬಲಾಗಿದೆ. ಏಕಾದಶಿ ತಿಥಿಗಳಲ್ಲಿ ಮಾರ್ಗಶೀರ್ಷ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಏಕಾದಶಿ ಹೆಚ್ಚು ವಿಶೇಷ. ಇದನ್ನು ಸಫಲಾ ಏಕಾದಶಿ ಎಂದು ಕರೆಯಲಾಗುತ್ತದೆ. ಸಫಲಾ ಎಂದರೆ ಅಭಿವೃದ್ಧಿ, ಫಲ ಎಂದರ್ಥ.

ಜೀವನದಲ್ಲಿ ಸಂತೋಷ, ಯಶಸ್ಸು ಮತ್ತು ಸಂಪತ್ತನ್ನು ಅಭಿವೃದ್ಧಿಪಡಿಸಲು ಈ ಏಕಾದಶಿ ದಿನ ಅತ್ಯಂತ ಮಂಗಳಕರ ಮತ್ತು ಶಕ್ತಿಯುತ ದಿನವೆಂದು ಪರಿಗಣಿಸಲಾಗಿದೆ. ಹಿಂದೂ ನಂಬಿಕೆಗಳ ಪ್ರಕಾರ, ಈ ದಿನ ಶ್ರೀ ಹರಿಣಿ, ಲಕ್ಷ್ಮಿ ದೇವಿ ಮತ್ತು ಶ್ರೀ ಕೃಷ್ಣನನ್ನು ಪೂಜಿಸುವುದು ಭಕ್ತರಿಗೆ ಶಾಂತಿ, ಆರೋಗ್ಯ, ಸಂಪತ್ತು ಮತ್ತು ಅದೃಷ್ಟವನ್ನು ತರುತ್ತದೆ. ಎಲ್ಲಾ ಪಾಪಗಳು ದೂರವಾಗುತ್ತವೆ. ದೈಹಿಕ ಕಾಯಿಲೆಗಳು ಮತ್ತು ಮಾನಸಿಕ ಒತ್ತಡ ದೂರವಾಗುತ್ತದೆ ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ, ನೀವು ಸಫಲಾ ಏಕಾದಶಿಯಂದು ಉಪವಾಸ ಮಾಡಿದರೆ, ಜೀವನದಲ್ಲಿ ಎಲ್ಲಾ ತೊಂದರೆಗಳಿಂದ ಮುಕ್ತಿ ಪಡೆಯುತ್ತೀರಿ. ಸಫಲಾ ಏಕಾದಶಿ ತಿಥಿ, ಶುಭ ಮುಹೂರ್ತ, ಪೂಜಾ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ.

ಸಫಲಾ ಏಕಾದಶಿ ಯಾವಾಗ?

ಪಂಚಾಂಗದ ಪ್ರಕಾರ ಈ ವರ್ಷದ ಸಫಲಾ ಏಕಾದಶಿ ತಿಥಿ ಡಿಸೆಂಬರ್ 25 ರಂದು ರಾತ್ರಿ 10.29 ಕ್ಕೆ ಪ್ರಾರಂಭವಾಗುತ್ತದೆ. ಮರುದಿನ ಅಂದರೆ ಡಿಸೆಂಬರ್ 27 ಮಧ್ಯಾಹ್ನ 12:43 ಕ್ಕೆ ಕೊನೆಗೊಳ್ಳುತ್ತದೆ. ಡಿಸೆಂಬರ್ 26 ರಂದು ಸೂರ್ಯೋದಯದ ದಿನವನ್ನು ಆಚರಿಸುವುದರಿಂದ ಸಫಲಾ ಏಕಾದಶಿಯನ್ನು ಡಿಸೆಂಬರ್‌ 26 ರಂದು ಆಚರಿಸಲಾಗುತ್ತದೆ. ಏಕಾದಶಿಯಂದು ಉಪವಾಸ ಮಾಡುವವರು ಮರುದಿನ ಅಂದರೆ 27ನೇ ಡಿಸೆಂಬರ್ (ದ್ವಾದಶಿ ದಿನ) ಸೂರ್ಯೋದಯದ ನಂತರ ಬೆಳಗ್ಗೆ 7:12 ಮತ್ತು 9:16ರ ನಡುವೆ ಉಪವಾಸವನ್ನು ಮುರಿಯಬಹುದು.

ಸಫಲಾ ಏಕಾದಶಿಯ ಮಹತ್ವ

ಬ್ರಹ್ಮಾಂಡ ಪುರಾಣದ ಪ್ರಕಾರ, ಸಫಲಾ ಏಕಾದಶಿಯ ಕುರಿತು ಧರ್ಮರಾಜ ಶ್ರೀಕೃಷ್ಣನ ನಡುವೆ ಸಂಭಾಷಣೆ ನಡೆಯಿತು. ಅದರ ಪ್ರಕಾರ ಸಫಲಾ ಏಕಾದಶಿ ದಿನ ಉಪವಾಸ ಮಾಡಿ ಶ್ರೀ ವಿಷ್ಣುವನ್ನು ಭಕ್ತಿಯಿಂದ ಪೂಜಿಸುವುದರಿಂದ 100 ರಾಜಸೂಯ ಯಾಗಗಳು ಮತ್ತು 100 ಅಶ್ವಮೇಧ ಯಾಗಗಳನ್ನು ಮಾಡಿದ ಫಲ ದೊರೆಯುತ್ತದೆ. ಸಫಲಾ ಏಕಾದಶಿಯ ದಿನ ಮಾಡುವ ಪೂಜೆಯು ಜೀವನದಲ್ಲಿ ಎಲ್ಲಾ ತೊಂದರೆಗಳು ಮತ್ತು ದುರದೃಷ್ಟಗಳನ್ನು ತೊಡೆದುಹಾಕುತ್ತದೆ ಮತ್ತು ಸಂತೋಷ ಮತ್ತು ಅದೃಷ್ಟವನ್ನು ತರುತ್ತದೆ. ಭಕ್ತರು ತಮ್ಮ ಆಸೆಗಳನ್ನು ಮತ್ತು ಕನಸುಗಳನ್ನು ಪೂರೈಸಲು ಅಗತ್ಯವಾದ ಶಕ್ತಿಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.

ಸಫಲಾ ಏಕಾದಶಿಯ ದಿನದಂದು ಅನುಸರಿಸಬೇಕಾದ ಆಚರಣೆಗಳು

  • ಈ ದಿನ ಬೆಳಗಿನ ಜಾವ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿ ವಿಷ್ಣುವಿನ ಆರಾಧನೆಯ ಅಂಗವಾಗಿ ಉಪವಾಸ ದೀಕ್ಷೆಯನ್ನು ಕೈಗೊಳ್ಳಬೇಕು.
  • ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸಲು ಸಾಧ್ಯವಾಗದ ಜನರು ಹಾಲು, ಹಣ್ಣು ಸೇವಿಸಬಹುದು.
  • ಮನೆ ಅಥವಾ ದೇವಸ್ಥಾನದಲ್ಲಿ ಬೆಳಗ್ಗೆ ಮತ್ತು ಸಂಜೆ ವಿಷ್ಣುವನ್ನು ಪೂಜಿಸಬಹುದು. ಎಲ್ಲಿ ಪೂಜಿಸಿದರೂ, ಅವನಿಗೆ ಪ್ರಿಯವಾದ ತುಳಸಿ ಎಲೆಗಳನ್ನು ಅರ್ಪಿಸಲು ಮರೆಯಬೇಡಿ. ಇದರಿಂದ ವ್ಯಕ್ತಿಯು ಮಾಡಿದ ಎಲ್ಲಾ ಪಾಪಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
  • ಬೆಳಗ್ಗೆ ಮತ್ತು ಸಂಜೆ ದೀಪವನ್ನು ಹಚ್ಚಿ ಧೂಪ, ದೀಪ, ನೈವೇದ್ಯ, ವೀಳ್ಯದೆಲೆ ಮತ್ತು ಇತರ ಪರಿಮಳಯುಕ್ತ ವಸ್ತುಗಳನ್ನು ಅರ್ಪಿಸಿ ವಿಷ್ಣುವನ್ನು ಪೂಜಿಸಬೇಕು. ಈ ದಿನ ವಿಷ್ಣುವನ್ನು ಪೂಜಿಸುವುದರಿಂದ ಲಕ್ಷ್ಮಿ ಕಟಾಕ್ಷವೂ ದೊರೆಯುತ್ತದೆ ಎಂಬ ನಂಬಿಕೆ ಇದೆ.
  • ಸಫಲಾ ಏಕಾದಶಿ ವ್ರತವನ್ನು ಆಚರಿಸುವವರು ಇಡೀ ರಾತ್ರಿ ಮಲಗಬಾರದು. ವಿಷ್ಣುವಿನ ಆರಾಧನೆಯ ಭಾಗವಾಗಿ ಪ್ರಸಿದ್ಧ ಕಥೆಗಳು, ಸ್ತೋತ್ರಗಳು ಮತ್ತು ಮಂತ್ರಗಳನ್ನು ಪಠಿಸಬೇಕು. ಭಜನೆ ಮತ್ತು ಕೀರ್ತನೆಗಳನ್ನು ಆಲಿಸಬೇಕು.
  • ಸಫಲಾ ಏಕಾದಶಿಯಂದು ಬ್ರಾಹ್ಮಣರು ಅಥವಾ ಬಡವರಿಗೆ ಆಹಾರ, ಬಟ್ಟೆ, ಹಣದಂತಹ ಮೂಲಭೂತ, ಅಗತ್ಯ ವಸ್ತುಗಳನ್ನು ದಾನ ಮಾಡುವುದು ಹೆಚ್ಚು ಶುಭ ಫಲಿತಾಂಶಗಳನ್ನು ತರುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.