ಕಾಲ ಮಿಂಚಿಲ್ಲ, ಈಗಲೂ ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಿ, 2025ರ ಜೂನ್ ತನಕ ವಿಸ್ತರಣೆಯಾಗಿದೆ ಡೆಡ್‌ಲೈನ್, ಅಪ್ಡೇಟ್ ಮಾಡೋದು ಹೇಗೆ
Aadhar Card: ಆಧಾರ್ ಕಾರ್ಡ್ ಮಾಹಿತಿಯನ್ನು ಇನ್ನು ಕೂಡ ಉಚಿತವಾಗಿ ಅಪ್ಡೇಟ್ ಮಾಡಬಹುದು. ಯುಐಡಿಎಐ ಆಧಾರ್ ಕಾರ್ಡ್ ಮಾಹಿತಿ ಉಚಿತವಾಗಿ ಅಪ್ಡೇಟ್ ಮಾಡುವ ಅವಧಿಯನ್ನು 2025ರ ಜೂನ್ ತನಕ ವಿಸ್ತರಣೆ ಮಾಡಿದೆ. ಆಧಾರ್ ಮಾಹಿತಿ ಉಚಿತವಾಗಿ ಅಪ್ಡೇಟ್ ಮಾಡುವುದು ಹೀಗೆ..
Aadhar Card; ಆಧಾರ್ ಕಾರ್ಡ್ ಮಾಹಿತಿ ಉಚಿತವಾಗಿ ಅಪ್ಡೇಟ್ ಮಾಡುವ ಅವಧಿ ಮುಗಿಯಿತೆಂದು ಕಳವಳಪಡಬೇಕಾದ ಅವಶ್ಯಕತೆ ಇಲ್ಲ. ಕಾಲ ಮಿಂಚಿಲ್ಲ, ಈಗಲೂ ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಬಹುದು. ಹೌದು, ಆಧಾರ್ ಕಾರ್ಡ್ ಮಾಹಿತಿ ಉಚಿತವಾಗಿ ಅಪ್ಡೇಟ್ ಮಾಡುವ ಅವಧಿ 2025ರ ಜೂನ್ ತನಕ ವಿಸ್ತರಣೆಯಾಗಿದೆ. ಈಗ ಆರು ತಿಂಗಳಿಗೂ ಹೆಚ್ಚು ಸಮಯ ಇದಕ್ಕಾಗಿ ಸಿಕ್ಕಿದ್ದು, ಧಾರಾಳವಾಗಿ ಬಳಸಬಹುದಾಗಿದೆ. ಸರಿಯಾದ ಆಧಾರ್ ಕಾರ್ಡ್ ಇಲ್ಲದೇ ಇದ್ದರೆ ಹಲವು ಪ್ರಯೋಜನಗಳು ಸಿಗಲಾರವು. ಇದೀಗ ನಿಮ್ಮ ಹೆಸರು, ವಿಳಾಸ ಮತ್ತು ಜನ್ಮದಿನಾಂಕ ಸೇರಿದಂತೆ ನಿಮ್ಮ ಮಾಹಿತಿಯನ್ನು ನವೀಕರಿಸುವುದು ಸುಲಭ. ಅಷ್ಟೇ ಅಲ್ಲ, ಈ ಕೆಲಸಕ್ಕಾಗಿ ಹಣ ಅಥವಾ ಶುಲ್ಕ ಪಾವತಿಸಬೇಕಾಗಿಲ್ಲ. ಇದನ್ನು ಉಚಿತವಾಗಿ ನೆರವೇರಿಸಿಕೊಳ್ಳಬಹುದಾಗಿದೆ.
ಆಧಾರ್ ಮಾಹಿತಿ ಯಾವಾಗ ಅಪ್ಡೇಟ್ ಮಾಡಬೇಕು
ಹತ್ತು ವರ್ಷಗಳಿಂದ ನಿಮ್ಮ ಆಧಾರ್ ಡೇಟಾವನ್ನು ನವೀಕರಿಸದಿದ್ದರೆ ಹೊಸ ಗುರುತಿನ ಮತ್ತು ವಿಳಾಸ ಪುರಾವೆಗಳನ್ನು ಒದಗಿಸುವಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸಲಹೆ ನೀಡುತ್ತದೆ. ಆಧಾರ್ ಮಾಹಿತಿಯನ್ನು ಅವುಗಳಲ್ಲಿರುವ ಮಾಹಿತಿ ಬದಲಾವಣೆ ಆದಾಗ ಅಪ್ಡೇಟ್ ಮಾಡಬೇಕಾದ್ದು ಅಗತ್ಯ. ಈ ಕ್ರಮವು ನಿಮ್ಮ ಜನಸಂಖ್ಯಾ ಡೇಟಾ ಸರಿಯಾಗಿದೆ ಎಂಬುದನ್ನು ಖಾತರಿಪಡಿಸುತ್ತದೆ. ಯಾವುದೇ ಸಂದರ್ಭದಲ್ಲಿ ಅಂದರೆ ಯೋಜನೆಗಳು, ಅಥವಾ ಇನ್ಯಾವುದೋ ದಾಖಲೆ ದೃಢೀಕರಣದ ಸಂದರ್ಭದಲ್ಲಿ ಯಶಸ್ಸಿನ ದರಗಳನ್ನು ವರ್ಧಿಸುತ್ತದೆ ಮತ್ತು ಸೇವಾ ಪೂರೈಕೆ, ವಿತರಣೆಯ ಮಟ್ಟವನ್ನು ಸುಧಾರಿಸುತ್ತದೆ. ಉದಾಹರಣೆಗೆ ಮನೆ ಬದಲಾವಣೆ ಮಾಡಿದ್ದು, ವಿಳಾಸ ಅಪ್ಡೇಟ್ ಮಾಡಬೇಕಾದ ಸಂದರ್ಭದಲ್ಲಿ ಮಾಡದೇ ಇದ್ದರೆ ಸಮಸ್ಯೆಯಾಗಬಹುದು.
ಆಧಾರ್ ಮಾಹಿತಿ ಅಪ್ಡೇಟ್ ಮಾಡೋದು ಹೇಗೆ
ನಿಮ್ಮ ಆಧಾರ್ ಕಾರ್ಡ್ ಹಳೆಯದಾಗಿದ್ದರೆ ಶುಲ್ಕವಿಲ್ಲದೆ ನಿಮ್ಮ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದು. ಗಡುವು ಹತ್ತಿರವಾಗುತ್ತಿದ್ದಂತೆ ನಿಮ್ಮ ಆಧಾರ್ ವಿವರಗಳು ಸರಿಯಾಗಿವೆ. ಅಪ್ಡೇಟ್ ಆಗಿವೆ ಎಂದು ಖಚಿತಪಡಿಸಿಕೊಳ್ಳಲು ಇದೀಗ ಸೂಕ್ತ ಸಮಯ. ಆಧಾರ್ ಕಾರ್ಡ್ ಇಲ್ಲದೆ ವಿವಿಧ ಸೇವೆಗಳು ಲಭ್ಯವಾಗುವುದಿಲ್ಲ. ಆಧಾರ್‌ನಲ್ಲಿ ನಿಮ್ಮ ಹೆಸರು, ವಿಳಾಸ ಮತ್ತು ಜನ್ಮದಿನಾಂಕ ಸೇರಿ ನಿಮ್ಮ ಮಾಹಿತಿಯನ್ನು ನವೀಕರಿಸಲು ಇದೀಗ ಸುಲಭ ಮತ್ತು ಉಚಿತವಾಗಿದೆ. ಹೆಚ್ಚಿನ ಶುಲ್ಕಗಳನ್ನು ಪಾವತಿಸದೇ ಮಾಹಿತಿ ಅಪ್ಡೇಟ್ ಮಾಡಬಹುದಾಗಿದೆ. ಈ ಉಚಿತ ಅಪ್‌ಡೇಟ್ ಸೇವೆಯ ಅವಧಿ ಮುಗಿಯುವ ಮೊದಲು ಪ್ರಯೋಜನ ಪಡೆಯಬಹುದು. ಈ ಅವಧಿ ವಿಸ್ತರಣೆ ಈಗಾಗಲೇ ಹಲವು ಸಲ ಆಗಿದ್ದು, ಹೊಸ ವಿಸ್ತರಣೆ ಪ್ರಕಾರ 2025ರ ಜೂನ್ 14ರ ತನಕ ಉಚಿತವಾಗಿ ಆಧಾರ್ ಮಾಹಿತಿ ಅಪ್ಡೇಟ್ ಮಾಡಬಹುದಾಗಿದೆ.
ಆಧಾರ್ ಮಾಹಿತಿ ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್ಡೇಟ್ ಮಾಡುವುದು ಹೇಗೆ
1) ಯುಐಡಿಎಐ ವೆಬ್‌ತಾಣಕ್ಕೆ ಹೋಗಿ (https://uidai.gov.in/)
2) ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್ಡೇಟ್ ಸೆಕ್ಷನ್ ಆಯ್ಕೆ ಮಾಡಿ
3) ಮೈ ಆಧಾರ್ ಆಯ್ಕೆ ಮಾಡಿ, ಅಪ್ಡೇಟ್ ಯುವರ್ ಆಧಾರ್ ಅನ್ನು ಕ್ಲಿಕ್ ಮಾಡಿ
4) ಅಪ್ಡೇಟ್ ಪುಟವನ್ನು ತೆರೆಯಿರಿ. ಅಲ್ಲಿ, ಆಧಾರ್ ಮಾಹಿತಿಯನ್ನು ಭರ್ತಿ ಮಾಡಿ
5) ಸೆಂಡ್ ಒಟಿಪಿ ಕ್ಲಿಕ್ ಮಾಡಿ. ಅದಾಗಿ ಕ್ಯಾಪ್ಚಾ ಕೋಡ್ ಮತ್ತು ಆಧಾರ್ ನಂಬರ್ ದಾಖಲಿಸಿ. ಅದಾಗಿ ಒಟಿಪಿ ಬಳಸಿ ಲಾಗಿನ್ ಆಗಿ.
6) ಮಾಹಿತಿ ಅಪ್ಡೇಟ್ ಮಾಡಿ. ಇದಕ್ಕಾಗಿ ಯಾವ ಮಾಹಿತಿಯನ್ನು ಅಂದರೆ, ಉದಾಹರಣೆಗೆ ಹೆಸರು, ವಿಳಾಸ ಮತ್ತು ಜನ್ಮದಿನಾಂಕ ಅಪ್ಡೇಟ್ ಮಾಡಬೇಕೋ ಅದರ ಮೇಲೆ ಕ್ಲಿಕ್ ಮಾಡಿ. ಮಾಹಿತಿ ಸರಿ ಮಾಡಿ.
7) ನೀವು ಅಪ್ಡೇಟ್ ಮಾಡಿದ ಮಾಹಿತಿಯನ್ನು ದೃಢೀಕರಿಸಲು ಅಗತ್ಯ ದಾಖಲೆಯನ್ನು ಅಪ್ಲೋಡ್ ಮಾಡಿ, ಸಬ್ ಮಿಟ್ ಮಾಡಿ. ಇದಾದ ಬಳಿಕ ಅಪ್ಡೇಟ್ ಮನವಿ ಸಲ್ಲಿಸಿ.
8) ಮಾನಿಟರ್ ಮೇಲೆ ಅಪ್ಡೇಟ್ ಮಾಹಿತಿ ಕಾಣಲಿದೆ. ಎಸ್‌ಎಂಎಸ್ ಕೂಡ ಬರಲಿದ್ದು, ಅದರಲ್ಲಿ ಅಪ್ಡೇಟ್ ರಿಕ್ವೆಸ್ಟ್ ನಂಬರ್ ಕೂಡ ಇರಲಿದೆ.
9) ಆಧಾರ್ ಸೆಂಟರ್‌ನಲ್ಲಿ ಬೆರಳಚ್ಚು, ಐರಿಸ್ ಸ್ಕ್ಯಾನ್ ಅಥವಾ ಫೋಟೋಗಳನ್ನು ಅಪ್ಡೇಟ್ ಮಾಡಬೇಕಾಗುತ್ತದೆ.
10) ಜನ್ಮ ದಿನಾಂಕ/ ಲಿಂಗದ ಮಾಹಿತಿ ಅಪ್ಡೇಟ್ ಮಾಡಲು ಒಂದು ಸಲ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ.
ಆಫ್‌ಲೈನ್‌ನಲ್ಲಿ ಕೂಡ ಆಧಾರ್ ಮಾಹಿತಿ ಅಪ್ಡೇಟ್ ಮಾಡಬಹುದು ಹೇಗೆ
1) ಆಧಾರ್ ನೋಂದಣಿ ಅರ್ಜಿ ಪಡೆಯಬೆಕು. ಅದನ್ನು ಯುಐಎಡಿಐ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು
2) ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗಬೇಕು. ಅಲ್ಲಿ ಪೇಪರ್ ವರ್ಕ್ ಪೂರ್ತಿಗೊಳಿಸಿ ಸಲ್ಲಿಸಬೇಕು. ಅದಾಗಿ ಬಯೋಮೆಟ್ರಿಕ್ ಆಧಾರಗಳನ್ನು ಒದಗಿಸಬೇಕು. ಇಲ್ಲಿ ಸೇವಾ ಶುಲ್ಕವನ್ನು ಕೇಂದ್ರಕ್ಕೆ ಪಾವತಿಸಬೇಕಾಗಬಹುದು.
3) ಇಷ್ಟಾಗುತ್ತಲೇ ಮಾಹಿತಿ ಅಪ್ಡೇಟ್ ಮಾಡಲು ಸಲ್ಲಿಸಿದ ಅರ್ಜಿಗೆ ಸಂಖ್ಯೆ ಸಿಗುತ್ತದೆ. ಅಪ್ಡೇಟ್ ಆದ ಮಾಹಿತಿಯೂ ಲಭ್ಯವಾಗುತ್ತದೆ.
ಕೊನೇಕ್ಷಣದ ತನಕ ಕಾಯದೇ ಈಗಲೇ ಆಧಾರ್ ಮಾಹಿತಿ ಅಪ್ಢೇಟ್ ಮಾಡಿಸಿಕೊಳ್ಳಿ. ಹೆಚ್ಚಿನ ಮಾಹಿತಿಗೆ ಯುಐಡಿಎಐ ಸಹಾಯವಾಣಿ ಸಂಖ್ಯೆ 1947ಕ್ಕೆ ಕರೆ ಮಾಡಿ